ಶನಿವಾರ, ಡಿಸೆಂಬರ್ 4, 2021
20 °C
* ಪಾರ್ಟಿ ಹಾಗೂ ಶಾಲಾ– ಕಾಲೇಜು ಬಳಿ ಮಾರಾಟ * ಪೂರ್ವ ವಿಭಾಗದಲ್ಲಿ ₹ 90 ಲಕ್ಷ ಮೌಲ್ಯದ ಮಾದಕ ವಸ್ತು ಜಪ್ತಿ

ಡ್ರಗ್ಸ್ ಚಟದಿಂದ ಪೆಡ್ಲರ್ ಆದ ವಿದ್ಯಾರ್ಥಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಡ್ರಗ್ಸ್ ಸರಬರಾಜು ಹಾಗೂ ಮಾರಾಟದ ವಿರುದ್ಧ ವಿಶೇಷ ಕಾರ್ಯಾಚರಣೆ ನಡೆಸಿ 11 ಆರೋಪಿಗಳನ್ನು ಬಂಧಿಸಿರುವ ಪೂರ್ವ ವಿಭಾಗದ ಪೊಲೀಸರು, ₹ 90 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದ್ದಾರೆ.

‘ವಿದೇಶಗಳಿಂದ ಹಾಗೂ ಹೊರ ರಾಜ್ಯಗಳಿಂದ ಡ್ರಗ್ಸ್‌ ತರಿಸಿಕೊಳ್ಳುತ್ತಿದ್ದ ಆರೋಪಿಗಳು ರಾತ್ರಿ ಪಾರ್ಟಿಗಳಿಗೆ ಸರಬರಾಜು ಮಾಡುತ್ತಿದ್ದರು ಹಾಗೂ ಕೆಲ ಶಾಲಾ–ಕಾಲೇಜು ಬಳಿ ಮಾರಾಟ ಮಾಡುತ್ತಿದ್ದರು. ಹಲಸೂರು ಠಾಣೆ, ರಾಮಮೂರ್ತಿನಗರ, ಬಾಣಸವಾಡಿ ಹಾಗೂ ದೇವರ ಜೀವನಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ’ ಎಂದು ನಗರ ಪೊಲಿಸ್ ಕಮಿಷನರ್ ಕಮಲ್ ಪಂತ್ ಅವರು ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘1,100 ಎಲ್‌ಎಸ್‌ಡಿ ಸ್ಟ್ರಿಪ್ಸ್ , 980 ಎಂಡಿಎಂಎ ಮಾತ್ರೆ, 450 ಗ್ರಾಂ ಎಂಡಿಎಂಎ ಕ್ರಿಸ್ಟಲ್, 25 ಗ್ರಾಂ ಬ್ರೌನ್ ಶುಗರ್, 500 ಮಿಲಿ ಲೀಟರ್ ವೀಡ್ ಆಯಿಲ್ ಹಾಗೂ 48 ಕೆ.ಜಿ ಗಾಂಜಾ ಜಪ್ತಿ ಮಾಡಲಾಗಿದೆ. ಪೊಲೀಸರ ಕಾರ್ಯಾಚರಣೆ ಮೆಚ್ಚಿ ₹ 50,000 ನಗದು ಹಾಗೂ ತಂಡದಲ್ಲಿರುವ ಸಿಬ್ಬಂದಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಲಾಗಿದೆ’ ಎಂದೂ ಅವರು ಹೇಳಿದರು. 

ಬಿಸಿಎ ವಿದ್ಯಾರ್ಥಿ ಬಂಧನ: ಎಲ್‌ಎಸ್‌ಡಿ ಹಾಗೂ ಎಂಡಿಎಂಎ ಮಾತ್ರೆ ಮಾರಾಟ ಮಾಡುತ್ತಿದ್ದ ಆರೋಪದಡಿ ಬಿಸಿಎ ವಿದ್ಯಾರ್ಥಿ ಕೇವಲ್ ಎಂ. ಲೋಹಿತ್ ಎಂಬಾತನನ್ನು ಬಂಧಿಸಲಾಗಿದೆ.

‘ಬೆಂಗಳೂರು ಹಾಗೂ ಗೋವಾದಲ್ಲಿ ನಡೆಯುತ್ತಿದ್ದ ರೇವ್‌ ಪಾರ್ಟಿಗಳಲ್ಲಿ ಭಾಗಿಯಾಗುತ್ತಿದ್ದ ಕೇವಲ್, ಅಲ್ಲಿ ಮಾದಕ ವಸ್ತು ಸೇವಿಸುತ್ತಿದ್ದ. ಪಾರ್ಟಿಗಳಲ್ಲಿ ಆತನಿಗೆ ನೈಜೀರಿಯಾ ಪ್ರಜೆಗಳ ಪರಿಚಯ ಆಗಿತ್ತು. ಡ್ರಗ್ಸ್ ಸೇವನೆಯನ್ನು ಚಟ ಮಾಡಿಕೊಂಡಿದ್ದ ಕೇವಲ್, ಅದರ ಖರೀದಿಗೆ ಹಣ ಹೊಂದಿಸಲು ಪರದಾಡುತ್ತಿದ್ದ. ಅಕ್ರಮ ಹಣ ಗಳಿಕೆಗಾಗಿ ನೈಜೀರಿಯಾ ಪ್ರಜೆಗಳ ಮೂಲಕ ಡ್ರಗ್ಸ್ ಖರೀದಿಸಿ, ಗ್ರಾಹಕರಿಗೆ ಮಾರಾಟ ಮಾಡಲಾರಂಭಿಸಿದ್ದ’ ಎಂದೂ ಕಮಲ್ ಪಂತ್ ಹೇಳಿದರು.

‘ಆನ್‌ಲೈನ್‌ ಮೂಲಕ ಡ್ರಗ್ಸ್ ಖರೀದಿಸುತ್ತಿದ್ದ ಆರೋಪಿ, ಬೈಕ್‌ನಲ್ಲಿ ಕೆಲ ಶಾಲಾ–ಕಾಲೇಜು ಬಳಿ ಸುತ್ತಾಡಿ ಮಾರುತ್ತಿದ್ದ. ಆತನ ಸಹಚರರು ಸಹ ಕೃತ್ಯಕ್ಕೆ ಸಹಕರಿಸುತ್ತಿದ್ದರು’ ಎಂದರು.

ಕಾರ್ಯಕ್ರಮ ಸಂಘಟಕನಾಗಿ ಡ್ರಗ್ಸ್ ಮಾರಾಟ; ‘ಕಂಪನಿಯೊಂದರ ವಸ್ತುಗಳ ಮಾರಾಟ ಪ್ರತಿನಿಧಿಯಾಗಿದ್ದ ಮೊಹಮ್ಮದ್ ಹಿಪ್ಜುಲ್ಲಾ ಅಲಿಯಾಸ್ ಎಂ.ಡಿ ಎಂಬಾತನನ್ನೂ ಬಂಧಿಸಲಾಗಿದೆ. ಕಾರ್ಯಕ್ರಮ ಸಂಘಟನೆಗಾಗಿ ಸ್ವತಃ ಕಂಪನಿ ಆರಂಭಿಸಿದ್ದ ಆತ, ಪಾರ್ಟಿಗಳನ್ನು ಆಯೋಜಿಸಿ ಡ್ರಗ್ಸ್ ಪೂರೈಸುತ್ತಿದ್ದ. ಡಾರ್ಕ್‌ನೆಟ್ ಮೂಲಕವೇ ಪೆಡ್ಲರ್‌ಗಳಿಂದ ಡ್ರಗ್ಸ್ ಖರೀದಿಸುತ್ತಿದ್ದ’ ಎಂದು ಕಮಲ್ ಪಂತ್ ಹೇಳಿದರು.

ಆ್ಯಪ್ ಆಧಾರಿತ ಬೈಕ್‌ ಬಳಕೆ: ‘ಮತ್ತೊಂದು ಪ್ರಕರಣದಲ್ಲಿ ಅಜೀಜ್ ನಿಯಾಜ್ ಹಾಗೂ ಗುರು ಪ್ರಸಾದ್ ಎಂಬುವರನ್ನು ಬಂಧಿಸಲಾಗಿದೆ. ಅವರಿಬ್ಬರು ಮೊಬೈಲ್ ಆ್ಯಪ್ ಆಧಾರಿತ ಬೈಕ್‌ಗಳನ್ನು ಬಳಸಿಕೊಂಡು ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು’ ಎಂದೂ ಅವರು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು