ಬೆಂಗಳೂರು: ಖಾಸಗಿ ಸಾರಿಗೆಯನ್ನು ಸೆ.11ರಂದು ಬಂದ್ ಮಾಡಲು ಖಾಸಗಿ ಸಾರಿಗೆ ಸಂಸ್ಥೆಗಳ ಒಕ್ಕೂಟ ನಿರ್ಧರಿಸಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಹೀಗಾಗಿ, ಹೆಚ್ಚುವರಿಯಾಗಿ ಬಸ್‌ಗಳನ್ನು ನಿಯೋಜಿಸಿ, ಜನದಟ್ಟಣೆ ಸಮಸ್ಯೆ ಕಡಿಮೆ ಮಾಡಲು ಬಿಎಂಟಿಸಿ ನಿರ್ಧರಿಸಿದೆ.
ಟ್ಯಾಕ್ಸಿ, ಆಟೊ, ಮ್ಯಾಕ್ಸಿಕ್ಯಾಬ್, ಖಾಸಗಿ ಬಸ್‌ಗಳ ಚಾಲಕರು ಮತ್ತು ಮಾಲೀಕರು 30 ಬೇಡಿಕೆಗಳನ್ನು ಈಡೇ ರಿಸುವಂತೆ ಆಗ್ರಹಿಸಿ ಬಂದ್‌ಗೆ ಕರೆ ನೀಡಿ ದ್ದಾರೆ.
‘ನಮ್ಮ ಬೇಡಿಕೆಗಳಿಗೆ ಸಾರಿಗೆ ಸಚಿವರು, ಇಲಾಖೆಯ ಅಧಿಕಾರಿ ಗಳು ಸ್ಪಂದಿಸಿಲ್ಲ. ಹಾಗಾಗಿ ಬಂದ್‌ಗೆ ಅನಿವಾರ್ಯವಾಗಿ ಕರೆ ನೀಡ ಲಾಗಿದೆ. ಇದರಿಂದ ಜನರಿಗೆ ತೊಂದರೆ ಯಾಗುವುದು ನಿಜ. ಹಲವಾರು ದಿನ ಗಳಿಂದ ನಾವು ಅನುಭವಿಸುತ್ತಿರುವ ಸಮಸ್ಯೆಗಳನ್ನು ನೀಗಿಸಲು ಒಂದು ದಿನದ ಮಟ್ಟಿಗೆ ಸಾರ್ವಜನಿಕರು ಸಹಕರಿಸ ಬೇಕು’ ಎಂದು ಒಕ್ಕೂಟದ ಅಧ್ಯಕ್ಷ ಎಸ್. ನಟರಾಜ್ ಶರ್ಮ ತಿಳಿಸಿದ್ದಾರೆ.
‘ಟ್ಯಾಕ್ಸಿ, ಆಟೊ, ಮ್ಯಾಕ್ಸಿಕ್ಯಾಬ್, ಖಾಸಗಿ ಬಸ್ ಮಾಲೀಕರ ಸಂಘಟನೆ ಸೇರಿದಂತೆ ಒಟ್ಟು 32 ಸಂಘಟನೆಗಳು ಸೇರಿ ಸೆ.10ರ ರಾತ್ರಿ 12ರಿಂದ ಸೆ.11ರ ರಾತ್ರಿ 12ರವರೆಗೆ ಮುಷ್ಕರಕ್ಕೆ ಕರೆ ನೀಡಿವೆ. ನಮಗೆ ಬೆಂಬಲ ನೀಡದೇ ಸಂಚರಿಸುವ ವಾಹನಗಳಿಗೆ ನಾವೇನು ಮಾಡುವುದಿಲ್ಲ. ಏನಾದರೂ ಹಾನಿ ಯಾದರೆ ನಾವು ಜವಾಬ್ದಾರರಲ್ಲ’ ಎಂದು ಹೇಳಿದ್ದಾರೆ.
‘ಶಾಲಾ ವಾಹನಗಳು ಸಹ ಇರುವು ದಿಲ್ಲ. ಹೆಬ್ಬಾಳದ ವಿದ್ಯಾನಿಕೇತನ, ಬಸವೇಶ್ವರ ನಗರದ ಕಡಂಬಿ ಸ್ಕೂಲ್‌ಗಳಿಗೆ ಆಡಳಿತ ಮಂಡಳಿಯವರು ಸೋಮವಾರ ರಜೆ ನೀಡಿದ್ದಾರೆ. ಇನ್ನಷ್ಟು ಶಾಲೆಗಳು ರಜೆ ನೀಡುವ ಸಾಧ್ಯತೆ ಇದೆ’ ಎಂದು ರಾಜ್ಯ ಶಾಲಾ ವಾಹನಗಳ ಮಾಲೀಕರ ಯೂನಿಯನ್ ಅಧ್ಯಕ್ಷ ಜಿ. ರವಿಕುಮಾರ್ ತಿಳಿಸಿದ್ದಾರೆ.
‘ಖಾಸಗಿ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವ ವಾಹನಗಳು ಅನಿವಾರ್ಯವಾಗಿ ಸಂಚರಿಸಬೇಕಾಗುತ್ತದೆ. ಇವಲ್ಲದೇ ಬೆಂಬಲ ನೀಡದವರ ವಾಹನಗಳು ಕೆಲವು ಸಂಚರಿಸಲಿವೆ. ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದಿತ್ತು. ಆದರೆ, ಪ್ರತಿಷ್ಠೆಗೆ ಬಿದ್ದಿದ್ದರಿಂದ ಇಂಥ ಪರಿಸ್ಥಿತಿ ಬಂದಿದೆ’ ಎಂದು ವಾಹನ ಮಾಲೀಕರೊಬ್ಬರು ಹೇಳಿಕೊಂಡಿದ್ದಾರೆ.
ಹಳೇ ಸಮಸ್ಯೆಗಳು: ‘ಶಕ್ತಿ ಯೋಜನೆ ಮತ್ತು ಕೆಲವು ರಸ್ತೆ ತೆರಿಗೆ ಹೊರತುಪಡಿಸಿ ಉಳಿದೆಲ್ಲವೂ ಹಳೇ ಸಮಸ್ಯೆಗಳು. ಪರಿಹಾರ ಮಾಡಲು ಸಾಧ್ಯ ಇರುವ ಬೇಡಿಕೆಗಳನ್ನು ಈಡೇರಿಸ ಬಹುದು. ಆದರೆ, ಬಸ್, ಆಟೊ ಸಹಿತ ಎಲ್ಲ ಖಾಸಗಿ ಸಾರಿಗೆ ವಾಹನ ಚಾಲಕರಿಗೆ ತಿಂಗಳಿಗೆ ₹ 10 ಸಾವಿರ ಪರಿಹಾರ ನೀಡಬೇಕು ಎಂದೆಲ್ಲ ಬೇಡಿಕೆ ಇಟ್ಟರೆ ಈಡೇರಿಸುವುದು ಹೇಗೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ. ‘ಬಂದ್ ಮಾಡಬೇಕು ಎಂದು ಮಾಡುತ್ತಿದ್ದಾರೆ. ಬಂದ್ ಮಾಡಲು ಎಲ್ಲರಿಗೂ ಹಕ್ಕಿದೆ. ಆದರೆ, ಬೇರೆಯವರಿಗೆ ತೊಂದರೆ ನೀಡಬಾರದು. ಜನರಿಗೆ ತೊಂದರೆ ಯಾಗದಂತೆ ನೋಡಿಕೊಳ್ಳಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರ ಜೊತೆಗೂ ಈ ಬಗ್ಗೆ ಮಾತನಾಡಿದ್ದೇನೆ. ಹೆಚ್ಚುವರಿ ಬಸ್‌ಗಳು ನಾಳೆ ರಸ್ತೆಗೆ ಇಳಿಯಲಿವೆ. ರಜೆ ಇದ್ದ ಸಿಬ್ಬಂದಿಯನ್ನೆಲ್ಲ ಕರೆಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
‘ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಶಾಂತಿ ಕಾಪಾಡುವ ಕಾರ್ಯವನ್ನು ಅವರು ಮಾಡಲಿದ್ದಾರೆ’ ಎಂದು ತಿಳಿಸಿದರು.
‘ಬೆಂಗಳೂರು ಬಂದ್‌ಗೆ ಬೆಂಬಲ ಇಲ್ಲ’
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ಕರೆದು ಸಮಸ್ಯೆ ಆಲಿಸಿದ್ದರು. ಬೇಡಿಕೆಗಳನ್ನು ಪರಿಶೀಲಿಸಿ ಸ್ಪಂದಿಸುವುದಾಗಿ ಭರವಸೆಯನ್ನೂ ನೀಡಿದ್ದರು. ಹಾಗಾಗಿ ಬೆಂಗಳೂರು ಬಂದ್‌ಗೆ ನಮ್ಮ ಬೆಂಬಲ ಇಲ್ಲ’ ಎಂದು ರಾಜ್ಯ ಬಸ್ ಮಾಲೀಕರ ಒಕ್ಕೂಟದ ಅಧ್ಯಕ್ಷ ಕೆ. ರಾಜವರ್ಮ ಬಲ್ಲಾಳ್ ತಿಳಿಸಿದ್ದಾರೆ.
‘ಬಂದ್‌ಗೆ ಕರೆ ನೀಡಿರುವ ಸಂಘಟನೆಗಳು ಮುಖ್ಯಮಂತ್ರಿ ಕರೆದಿದ್ದ ಸಭೆಯನ್ನೇ ಬಹಿಷ್ಕರಿಸಿದ್ದವು’ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.