ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿರುವ ಹಾಗೂ ಕೊಳೆಗೇರಿಗಳಲ್ಲಿರುವ ಸುಮಾರು 750 ಮನೆಗಳಿಗೆ ನೀರು ನುಗ್ಗಿದೆ. ‘ಬಂಗಿ ಕಾಲೊನಿಯಲ್ಲಿ ಸುಮಾರು 180 ಮನೆಗಳಿಗೆ ನೀರು ನುಗ್ಗಿದ್ದು, ಮನೆಯಲ್ಲಿರುವ ಎಲ್ಲ ಸಾಮಗ್ರಿಗಳು ಹಾಳಾಗಿವೆ. ಅಧಿಕಾರಿಗಳಿಂದ ಯಾವುದೇ ನೆರವು ಸಿಕ್ಕಿಲ್ಲ. ಗುರುವಾರ ಬೆಳಿಗ್ಗೆ ವೇಳೆಗೆ ಪರಿಸ್ಥಿತಿ ಸುಧಾರಿಸಬಹುದು ಎಂದು ನಿರೀಕ್ಷಿಸಿದ್ದೇವೆ’ ಎಂದು ಸ್ಥಳೀಯ ನಿವಾಸಿ ರಾಣಿ ತಿಳಿಸಿದರು. ವಿನೋಬಾ ನಗರದಲ್ಲಿರುವ 300 ಮನೆಗಳಿಗೆ ಹಾಗೂ ಮೈಸೂರು ರಸ್ತೆಯ ಸಮೀಪವಿರುವ ನರಸಿಂಹ ಕಾಲೊನಿಯ 130 ಮನೆಗಳಿಗೆ ನೀರು ನುಗ್ಗಿದೆ ಎಂದು ಸ್ವಯಂಸೇವಕರು ಹೇಳಿದರು.
ಬುಕ್‌ವರ್ಮ್‌ಗೆ ನೀರು
‘ಚರ್ಚ್ ಸ್ಟ್ರೀಟ್‌ನಲ್ಲಿರುವ ಬುಕ್‌ವರ್ಮ್ ಪುಸ್ತಕ ಮಳಿಗೆಗೆ ಮಳೆ ನೀರು ನುಗ್ಗಿ ಸುಮಾರು ಐದು ಸಾವಿರ ಪುಸ್ತಕಗಳಿಗೆ ಹಾನಿಯಾಗಿದೆ. ಎಂ.ಜಿ. ರಸ್ತೆ ಹಾಗೂ ಚರ್ಚ್ ಸ್ಟ್ರೀಟ್‌ನ ಮಳೆ ನೀರು ತಗ್ಗು ಪ್ರದೇಶದಲ್ಲಿರುವ ಬುಕ್‌ವರ್ಮ್ ಮಳಿಗೆಗೆ ನುಗ್ಗಿದೆ’ ಎಂದು ಮಾಲೀಕ ಕೃಷ್ಣ ತಿಳಿಸಿದರು.
ದಾಖಲೆ ಮಳೆ
ಬೆಂಗಳೂರಿನಲ್ಲಿ ಬುಧವಾರ ಬೆಳಿಗ್ಗೆ 8.30ರಿಂದ ರಾತ್ರಿ 8.30ರವರೆಗೆ 11 ಸೆಂ.ಮೀ ಮಳೆಯಾಗಿದ್ದು, ಏಪ್ರಿಲ್‌ನಲ್ಲಿ ಇದು ಹೊಸ ದಾಖಲೆಯಾಗಿದೆ. 2001ರ ಏಪ್ರಿಲ್ 19ರಂದು 10.8 ಸೆಂ.ಮೀ ಮಳೆ ಸುರಿದ್ದು ಈವರೆಗಿನ ಏಪ್ರಿಲ್‌ನಲ್ಲಿ ಬಿದ್ದ ಅತ್ಯಧಿಕ ಮಳೆಯಾಗಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹೊತ್ತಿ ಉರಿದ ತೆಂಗಿನ ಮರ
ದಾಬಸ್ ಪೇಟೆ: ನೆಲಮಂಗಲ ತಾಲ್ಲೂಕಿನ ಪಾಪಭೋವಿಪಾಳ್ಯದಲ್ಲಿ ಬುಧವಾರ ಸಂಜೆ ಸಿಡಿಲು ಬಡಿದು ತೆಂಗಿನ ಮರವೊಂದು ಹೊತ್ತು ಉರಿದಿದೆ.
ಸೋಂಪುರ ಹೋಬಳಿಯ ಚನ್ನೋಹಳ್ಳಿ ಗ್ರಾಮದ ಧನಂಜಯ ಅವರಿಗೆ ಸೇರಿದ ಬೇವಿನ ಮರದ ದೊಡ್ಡ ಕೊಂಬೆ ಬಿರುಗಾಳಿಗೆ ಸಿಲುಕಿ ರಸ್ತೆಗೆ ಉರುಳಿದೆ.
ಸಿಡಿಲಿಗೆ ಹಸು ಸಾವು: ಸೋಂಪುರ ಹೋಬಳಿ ಮರಳಕುಂಟೆ ವೀರಣ್ಣ ಅವರ ಹಸು ಹಾಗೂ ದಾಸೇನಹಳ್ಳಿ ಗ್ರಾಮದ ಮಾವಿನ ಮರದಡಿ ಕಟ್ಟಿದ್ದ ರೈತರೊಬ್ಬರ ಹಸುಗಳು ಮಂಗಳವಾರ ಸಂಜೆ ಸಿಡಿಲು ಬಡಿದು ಸತ್ತಿವೆ.