ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಕೋಡಿ ಒಡೆದ ಮಲ್ಲಸಂದ್ರ ಕೆರೆ; ಮನೆಗಳಿಗೆ ನೀರು

ನಗರದಲ್ಲಿ ರಾತ್ರಿಯಿಡೀ ಮಳೆ l ಉರುಳಿಬಿದ್ದ ಮರಗಳು l ಕೆರೆ ಕೋಡಿ ಬಿದ್ದ ಸ್ಥಳಕ್ಕೆ ಬಿಬಿಎಂ‍ಪಿ ಅಧಿಕಾರಿಗಳು, ಶಾಸಕ ಭೇಟಿ
Last Updated 20 ನವೆಂಬರ್ 2021, 4:49 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೆಲ ದಿನಗಳಿಂದ ವರುಣನ ಆರ್ಭಟ ಜೋರಾಗಿದ್ದು, ಬಹುತೇಕ ಕಡೆ ಗುರುವಾರ ರಾತ್ರಿಯಿಡೀ ಧಾರಾಕಾರವಾಗಿ ಮಳೆ ಸುರಿಯಿತು. ಮಲ್ಲಸಂದ್ರ ಕೆರೆಯ ಕೋಡಿ ಒಡೆದಿದ್ದರಿಂದ, ಅಕ್ಕ–ಪಕ್ಕದ ಮನೆಗಳಿಗೆ ನೀರು ನುಗ್ಗಿತು.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದಲ್ಲೂ ಹಲವು ದಿನಗಳಿಂದ ಉತ್ತಮ ಮಳೆ ಸುರಿಯುತ್ತಿದೆ. ರಾಜಧಾನಿಯಲ್ಲಿ ಬಿಸಿಲು ಕಣ್ಮರೆಯಾಗಿದೆ.

ಗುರುವಾರ ಬೆಳಿಗ್ಗೆಯಿಂದಲೇ ಬಿಡುವು ನೀಡದೇ ಮಳೆ ಸುರಿಯಿತು. ರಾತ್ರಿಯೂ ಮಳೆ ಆರ್ಭಟ ಜೋರಾಗಿತ್ತು. ಶುಕ್ರವಾರ ನಸುಕಿನವರೆಗೂ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಹಲವೆಡೆ ಹಾನಿ ಸಂಭವಿಸಿದೆ.

ಟಿ. ದಾಸರಹಳ್ಳಿ ಬಳಿಯ ಮಲ್ಲಸಂದ್ರ ಕೆರೆಯಲ್ಲಿ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದರಿಂದ, ಶುಕ್ರವಾರ ನಸುಕಿನ 3.30ರ ಸುಮಾರಿಗೆ ಕೋಡಿ ಒಡೆಯಿತು. ನೀರು ಹರಿದುಹೋಗಲು ಸೂಕ್ತ ಕಾಲುವೆ ವ್ಯವಸ್ಥೆ ಇಲ್ಲದಿದ್ದರಿಂದ, ಅದೇ ನೀರು ಕೆರೆಯ ಅಕ್ಕ– ಪಕ್ಕದ ಐದು ಮನೆಗಳಿಗೆ ನುಗ್ಗಿತ್ತು.

‘ಪ್ರತಿ ಮನೆಯಲ್ಲೂ ಮೂರು ಅಡಿಯಷ್ಟು ನೀರು ನಿಂತಿತ್ತು. ನಿದ್ದೆಗೆ ಜಾರಿದ್ದ ನಿವಾಸಿಗಳು, ತಂಪಿನ ಅನುಭವವಾಗಿ ಎಚ್ಚರಗೊಂಡಿದ್ದರು. ನೀರು ನೋಡಿ ಗಾಬರಿಗೊಂಡು, ಚೀರಾಡಲಾರಂಭಿಸಿದ್ದರು’ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದರು.

‘ಕೆರೆಗೆ ಹೊಂದಿಕೊಂಡಿರುವ ರಸ್ತೆಗಳು ಹಾಗೂ ಉಪ ರಸ್ತೆಗಳಲ್ಲೂ ನೀರು ಧಾರಾಕಾರವಾಗಿ ಹರಿದು ಹೋಯಿತು. ಒಳಚರಂಡಿ ಮೂಲಕವೂ ನೀರು ಮನೆಯೊಳಗೆ ನುಗ್ಗಿತ್ತು. ನೀರಿನ ಸಂಪುಗಳು ಸಹ ತುಂಬಿ ಹರಿದವು. ಎಲೆಕ್ಟ್ರಾನಿಕ್ ವಸ್ತುಗಳು, ಪೀಠೋಪಕರಣಗಳು ಹಾಗೂ ಕೆಲ ದ್ವಿಚಕ್ರ ವಾಹನಗಳು ನೀರಿನಲ್ಲಿ ತೇಲಿ ಹೋದವು.ನೀರಿನ ಜೊತೆಯಲ್ಲಿ ತ್ಯಾಜ್ಯ ಸಹಮನೆಯೊಳಗೆ ಹೋಗಿದ್ದರಿಂದ ದುರ್ನಾತ ಬರುತ್ತಿತ್ತು’ ಎಂದೂ ಅವರು ತಿಳಿಸಿದರು.

‘ನಿರಂತರವಾಗಿ ನೀರು ಹರಿದಿದ್ದರಿಂದ ಒಳ ಚರಂಡಿ ವ್ಯವಸ್ಥೆಯೇ ಹಾಳಾಗಿದೆ. ರಸ್ತೆ ಹಾಗೂ ಕಾಲುವೆಗಳ ಕಾಂಕ್ರೀಟ್ ಕಿತ್ತು ಹೋಗಿದೆ. ರಸ್ತೆ ಪೊಳ್ಳಾಗಿದ್ದು, ದೊಡ್ಡ ಗಾತ್ರದ ಗುಂಡಿಗಳು ಬಿದ್ದಿವೆ. ರಸ್ತೆಯಲ್ಲಿ ಸಂಚರಿಸಲು ಭಯವಾಗುತ್ತಿದೆ’ ಎಂದೂ ನಿವಾಸಿ ಹೇಳಿದರು.

ಬಿಬಿಎಂಪಿ ಅಧಿಕಾರಿಗಳ ಭೇಟಿ: ಮಲ್ಲಸಂದ್ರ ಕೆರೆ ಕೋಡಿ ಬಿದ್ದ ಸ್ಥಳಕ್ಕೆ ಬಿಬಿಎಂ‍ಪಿ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕ ಆರ್. ಮಂಜುನಾಥ್ ಭೇಟಿ ನೀಡಿ ಪರಿಶೀಲಿಸಿದರು.

‘ಕೆರೆಗೆ ಹೊಂದಿಕೊಂಡಿರುವ ಜಾಗದಲ್ಲಿ ‘ಡಿಆರ್‌ಎಲ್‌ಎಸ್ ಪ್ಯಾಲೇಸ್’ ಕಲ್ಯಾಣ ಮಂಟಪದ ಕಾಂಪೌಂಡ್ ಇದೆ. ಕೆರೆ ಕೋಡಿ ಒಡೆದರೆ,ನೀರು ಹರಿದು ಹೋಗಲು ನೈಸರ್ಗಿಕ ಕಾಲುವೆ ಇತ್ತು. ಅದೇ ಕಾಲುವೆ ಮೂಲಕ ನೀರು ರಾಜಕಾಲುವೆ ಸೇರುತ್ತಿತ್ತು. ಆದರೆ, ಕಾಂಪೌಂಡ್ ನಿರ್ಮಿಸಿ ಕಾಲುವೆಯ ದಿಕ್ಕು ತಪ್ಪಿಸಲಾಗಿದೆ. ಇದೇ ಕಾರಣಕ್ಕೆ ಕೆರೆಯ ನೀರು, ಕಾಂಪೌಂಡ್‌ ಜಾಗದಲ್ಲಿ ಹರಿದು ಮನೆಗಳಿಗೆ ನುಗ್ಗಿದೆ. ಕಾಂಪೌಂಡ್ ಸಹಿತ ಕುಸಿದು ಬಿದ್ದಿದೆ’ ಎಂದು ಬಿಬಿಎಂ‍ಪಿ ಜಂಟಿ ಆಯುಕ್ತ ನರಸಿಂಹ ಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕಲ್ಯಾಣ ಮಂಟಪದವರು, ತಮ್ಮ ಜಾಗದ ಕೊನೆಯಲ್ಲಿ ಕಾಂಪೌಂಡ್ ನಿರ್ಮಿಸಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಕೆರೆ ನೀರು ಹರಿದುಹೋಗುವುದು ನೈಸರ್ಗಿಕ ಪ್ರಕ್ರಿಯೆ. ಇದಕ್ಕೆ ಯಾರೂಬ್ಬರೂ ಅಡ್ಡಿಪಡಿಸಬಾರದು. ಕೆರೆ ನೀರು ಸರಾಗವಾಗಿ ಹರಿದು ಹೋಗಲು ಸದ್ಯಕ್ಕೆ ತಾತ್ಕಾಲಿಕ ಕಾಲುವೆ ನಿರ್ಮಿಸಲಾಗಿದೆ. ಕೆರೆ ಜಾಗವನ್ನು ಸರ್ವೇ ಮಾಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದೂ ಹೇಳಿದರು.

ಕುಸಿಯಿತು 58 ವರ್ಷದ ಕಟ್ಟಡ
ನಿರಂತರ ಮಳೆಯಿಂದ ಶಿಥಿಲಗೊಂಡ 58 ವರ್ಷ ಹಳೇ ಕಟ್ಟಡ ಕುಸಿದು ಬಿದ್ದಿದ್ದು, ಸ್ಥಳಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಭೇಟಿ ನೀಡಿ ಪರಿಶೀಲಿಸಿದರು.

ಹಲಸೂರಿನ ಲಿಡೊ ಮಾಲ್‌ ಬಳಿಯ ಮಿಲ್ಕ್‌ ಮ್ಯಾನ್‌ ಸ್ಟ್ರೀಟ್‌ನಲ್ಲಿದ್ದ ಕಟ್ಟಡದ ಮಣ್ಣು, ಗುರುವಾರ ಬೆಳಿಗ್ಗೆ ಕ್ರಮೇಣ ಕುಸಿಯಲಾರಂಭಿಸಿತ್ತು. ಅದನ್ನು ಗಮನಿಸಿದ್ದ ಮಾಲೀಕ ಶಂಕರ್ ಕುಟುಂಬ, ಕಟ್ಟಡದ ಹಿಂಭಾಗದಲ್ಲಿದ್ದ ಮತ್ತೊಂದು ಮನೆಯಲ್ಲಿ ವಾಸವಿದ್ದರು. ಗುರುವಾರ ರಾತ್ರಿ ಇಡೀ ಕಟ್ಟಡ ಕುಸಿದು ಬಿದ್ದಿದೆ.

ಮನೆಯಲ್ಲಿದ್ದ ಆಹಾರ ಪದಾರ್ಥಗಳು, ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಪೀಠೋಪಕರಣಗಳು ಅವಶೇಷಗಳಡಿ ಸಿಲುಕಿದ್ದವು. ಕಟ್ಟಡದ ಪಕ್ಕದಲ್ಲಿ ನಿಲ್ಲಿಸಿದ್ದ ಮೂರು ದ್ವಿಚಕ್ರ ವಾಹನಗಳು ಜಖಂಗೊಂಡಿವೆ. ಕುಸಿದ ಕಟ್ಟಡದ ಅಕ್ಕ– ಪಕ್ಕದ ಎರಡು ಮನೆಗಳಿಗೂ ಹಾನಿ ಆಗಿದೆ. ಆ ಮನೆಗಳೂ ಕುಸಿಯುವ ಹಂತದಲ್ಲಿದ್ದು, ಅವುಗಳ ತೆರವಿಗೆ ಗೌರವ್ ಗುಪ್ತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಗೌರವ್ ಗುಪ್ತ, ‘ಮಣ್ಣು ಹಾಗೂ ಇಟ್ಟಿಗೆಯಿಂದ ಕಟ್ಟಡ ನಿರ್ಮಿಸಲಾಗಿತ್ತು. ನೆಲ ಮಹಡಿ ಮತ್ತು ಮೊದಲ ಮಹಡಿ ಹೊಂದಿದ್ದ ಕಟ್ಟಡ ಕುಸಿಯುವ ಬಗ್ಗೆ ಈ ಹಿಂದೆಯೇ ಎಚ್ಚರಿಕೆ ನೀಡಿ ಮಾಲೀಕರಿಗೆ ನೋಟಿಸ್ ನೀಡಲಾಗಿತ್ತು’ ಎಂದರು.

ಚೊಕ್ಕಸಂದ್ರದಲ್ಲೂ ಮನೆಯ ಚಾವಣಿ ಕಿತ್ತು ಬಿದ್ದು ಹಾನಿಯಾಗಿರುವುದು ವರದಿಯಾಗಿದೆ.

ಹೊಳೆಯಂತಾದ ರಸ್ತೆಗಳು
ಧಾರಾಕಾರ ಮಳೆಯಿಂದಾಗಿ ನಗರದ ಬಹುತೇಕ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯಿತು. ಆರ್‌.ಟಿ.ನಗರ ಹಾಗೂ ಟ್ರಿನಿಟಿ ವೃತ್ತದಲ್ಲಿ ತಲಾ ಒಂದೊಂದು ಮರಗಳು ಬಿದ್ದಿದ್ದವು.

ಛಲವಾದಿಪಾಳ್ಯದ 4ನೇ ಅಡ್ಡರಸ್ತೆಯಲ್ಲಿ ನೀರು ಧಾರಾಕಾರವಾಗಿ ಹರಿದು, ಅಕ್ಕ–ಪಕ್ಕದ ಮನೆಗಳಿಗೂ ನುಗ್ಗಿತ್ತು. ಒಂದು ಅಡಿಯಷ್ಟು ನೀರು ನಿಂತಿತ್ತು. ನಿವಾಸಿಗಳು, ನೀರು ಹೊರಹಾಕುವುದರಲ್ಲೇ ರಾತ್ರಿ ಕಳೆದರು.

ನಂದಿನಿ ಲೇಔಟ್‌ನ ಕಂಠೀರವ ನಗರದಲ್ಲಿ ಮನೆಯೊಂದರ ಗೋಡೆ ಕುಸಿತು ಬಿದ್ದಿತ್ತು.

ಮಹದೇವಪುರ ವಲಯದಲ್ಲೂ ಉತ್ತಮ ಮಳೆಯಾಗಿದೆ. ಬಸವಪುರ ಮುಖ್ಯರಸ್ತೆಯ 9ನೇ ಅಡ್ಡರಸ್ತೆ, ಸೀಗೇಹಳ್ಳಿ ವೃತ್ತ, ಹೊರಮಾವು ಸಾಯಿಬಾಬಾ ದೇವಸ್ಥಾನ, ಟಿ.ಸಿ.ಪಾಳ್ಯ ಮುಖ್ಯ ರಸ್ತೆಯಿಂದ ಅಯ್ಯಪ್ಪ ವೃತ್ತ, ನ್ಯೂ ಹಾರಿಜನ್ ಕಾಲೇಜು ರಸ್ತೆ, ಕಗ್ಗದಾಸಪುರದ ವಿಜ್ಞಾನನಗರ, ಅನ್ನಸಂದ್ರಪಾಳ್ಯದ ಅಪೇಕ್ಷಾ ಆಸ್ಪತ್ರೆ ರಸ್ತೆ, ಬೆಳ್ಳಂದೂರಿನ ಮಾರುತಿ ಗಾರ್ಡನ್‌ ರಸ್ತೆಯಲ್ಲಿ ನೀರು ಹೊಳೆಯಂತೆ ಹರಿಯಿತು.

ಯಲಹಂಕ ವಲಯ ವ್ಯಾಪ್ತಿಯ ತಿಂಡ್ಲು ಮುಖ್ಯರಸ್ತೆಯ ವಿಎಂಎಸ್‌ ಗಾರ್ಡನ್, ನಂಜಪ್ಪ ವೃತ್ತ, ಹೆಬ್ಬಾಳ ಮಾರಪ್ಪನಪಾಳ್ಯದ ಸೈನಿಕ ಶಾಲೆ, ಸಾರಾಯಿ ಪಾಳ್ಯದ 4ನೇ ಅಡ್ಡರಸ್ತೆಯಲ್ಲೂ ನೀರು ಧಾರಾಕಾರವಾಗಿ ಹರಿಯಿತು. ವಿದ್ಯಾರಣ್ಯಪುರದ ಅಪಾರ್ಟ್‌ಮೆಂಟ್ ಸಮುಚ್ಚಯವೊಂದರ ಪಾರ್ಕಿಂಗ್ ಜಾಗಕ್ಕೂ ನೀರು ನುಗ್ಗಿತ್ತು. ನೀರಿನಲ್ಲೇ ವಾಹನಗಳು ಮುಳುಗಿದ್ದವು.

ಬೊಮ್ಮನಹಳ್ಳಿ ವಲಯದಲ್ಲೂ ಹೆಚ್ಚು ಮಳೆ ಆಗಿದೆ. ಅನುಗ್ರಹ ಲೇಔಟ್‌ನ 3ನೇ ಅಡ್ಡರಸ್ತೆ, ಕುಡ್ಲು ಸೋಮೇಶ್ವರ ದೇವಸ್ಥಾನ ಬಳಿಯ 2ನೇ ಅಡ್ಡರಸ್ತೆ, ಲೇಕ್ ವ್ಹೀವ್ ಸಿಟಿ, ಜನಾರ್ದನ್ ಬೇಕರಿ ರಸ್ತೆ ಹಾಗೂ ಸುತ್ತಮುತ್ತ ಪ್ರದೇಶಗಳ ರಸ್ತೆಗಳಲ್ಲಿ ನೀರು ಹರಿಯಿತು. ಅಕ್ಕ–ಪಕ್ಕದ ಮನೆಗಳಿಗೂ ನೀರು ನುಗ್ಗಿದ್ದ ಘಟನೆಗಳು ವರದಿಯಾಗಿವೆ.

ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್ ಸಮುಚ್ಚಯಕ್ಕೂ ನೀರು ನುಗ್ಗಿತ್ತು. ಪಾರ್ಕಿಂಗ್ ಜಾಗ ಹಾಗೂ ಮೈದಾನ ಪ್ರದೇಶದಲ್ಲಿ ಮೂರು ಅಡಿಯಷ್ಟು ನೀರು ನಿಂತಿದ್ದು, ಅದರಲ್ಲೇ ನಿವಾಸಿಗಳು ಸಂಚರಿಸಿದರು.

ಮಳೆಗೆ ಬಿದ್ದ ಮನೆ
ದಾಬಸ್ ಪೇಟೆ: ಗುರುವಾರ ರಾತ್ರಿ ಸುರಿದ ಜೋರು ಮಳೆಯಿಂದ ಸೋಂಪುರ ಹೋಬಳಿಯ ಇಮಚೇನಹಳ್ಳಿ ಪಾಳ್ಯ ಗ್ರಾಮದ ಸಿದ್ದಯ್ಯ ಅವರ ಮನೆ ಚಾವಣಿ ಕುಸಿದಿದೆ.

ಇದೇ ಮನೆಯಲ್ಲಿ ಸಿದ್ದಯ್ಯ ಅವರ ಹೆಂಡತಿ ಮತ್ತು ಮಗ ವಾಸಿಸುತ್ತಿದ್ದರು. ‘ರಾತ್ರಿ ಮಲಗಿದ್ದ ಸಮಯದಲ್ಲಿ ಒಂದು ಬದಿಯ ಗೋಡೆ ಮತ್ತು ಚಾವಣಿ ಕುಸಿಯಿತು. ಆಗ ಎಚ್ಚರಗೊಂಡು ಮೂವರು ಮನೆಯಿಂದ ಹೊರಬಂದೆವು’ ಎಂದು ಸಿದ್ದಯ್ಯ ತಿಳಿಸಿದರು. ಬೇರೆ ಮನೆ ಇಲ್ಲದ್ದರಿಂದ ಸದ್ಯಕ್ಕೆ ಜೀವ ಭಯದಲ್ಲಿ ಅದೇ ಮನೆಯಲ್ಲಿ ಇರಬೇಕು ಎಂದು ಅಳಲು ತೋಡಿಕೊಂಡರು ಸಿದ್ದಯ್ಯ.

‘14.20 ಸೆಂ.ಮೀಮಳೆ ದಾಖಲು’
‘ಮಹದೇವಪುರ ವಲಯದ ಹಗದೂರು ಸುತ್ತಮುತ್ತ ಗುರುವಾರ ಬೆಳಿಗ್ಗೆಯಿಂದ ಶುಕ್ರವಾರ ನಸುಕಿನವರೆಗೆ 14.20 ಸೆಂ.ಮೀ ಮಳೆಯಾಗಿದ್ದು, ಇದು ನಗರದ ಅತ್ಯಧಿಕ ಮಳೆ ಪ್ರಮಾಣವಾಗಿದೆ’ ಎಂದು ಬಿಬಿಎಂಪಿ ತಿಳಿಸಿದೆ.

‘ವರ್ತೂರು ಹಾಗೂ ದೊಡ್ಡನೆಕ್ಕುಂದಿ ಭಾಗದಲ್ಲಿ 10.40 ಸೆಂ.ಮೀ, ಎಚ್‌ಎಎಲ್‌ ಏರ್‌ಪೋರ್ಟ್‌ನಲ್ಲಿ 9.75 ಸೆಂ.ಮೀ ಮಳೆ ಸುರಿದಿದೆ’ ಎಂದೂ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT