ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರದಲ್ಲಿ ಜೋರು ಮಳೆ: ಮನೆಗಳಿಗೆ ನೀರು

ಬೆಳಿಗ್ಗೆ ಬಿಸಿಲು, ಮಧ್ಯಾಹ್ನ ಮೋಡ ಕವಿದ ವಾತಾವರಣ
Last Updated 15 ನವೆಂಬರ್ 2021, 21:41 IST
ಅಕ್ಷರ ಗಾತ್ರ

ಬೆಂಗಳೂರು: ಕೆಲದಿನಗಳಿಂದ ನಿರಂತರವಾಗಿ ಸುರಿದು ಸೋಮವಾರ ಬೆಳಿಗ್ಗೆ ಬಿಡುವು ಪಡೆದಿದ್ದ ಮಳೆ, ಮಧ್ಯಾಹ್ನದ ನಂತರ ಜೋರಾಗಿ ಸುರಿಯಿತು. ಕಾವಲ್‌ಭೈರಸಂದ್ರದಲ್ಲಿ 10 ಮನೆಗಳಿಗೆ ನೀರು ನುಗ್ಗಿತು. ನಗರದ ಅನೇಕ ಕಡೆ ಕಾಲುವೆಗಳು ತುಂಬಿಹರಿದವು. ರಸ್ತೆಗಳು ನೀರಿನಿಂದ ಆವೃತವಾದವು.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ರಾಜ್ಯದಲ್ಲೂ ಉತ್ತಮ ಮಳೆ ಸುರಿಯುತ್ತಿದೆ. ನಗರದಲ್ಲೂ ಮೋಡ ಕವಿದ ವಾತಾವರಣ ಕಾಣಿಸಿಕೊಂಡು, ಜೋರು ಮಳೆ ಆಗುತ್ತಿದೆ. ಸೋಮವಾರ ಬೆಳಿಗ್ಗೆ ಹಲವೆಡೆ ಬಿಸಿಲು ಇತ್ತು. ಅಲ್ಲಲ್ಲಿ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ನಂತರ ಬಹುತೇಕ ಕಡೆ ಮೋಡಗಳ ಛಾಯೆ ಇತ್ತು. ದೊಡ್ಡ ದೊಡ್ಡ ಹನಿಗಳ ಮೂಲಕವೇ ಮಳೆ ಆರಂಭವಾಯಿತು. ಹನಿಗಳ ಸದ್ದು ಜೋರಾಗಿತ್ತು. ಸಂಜೆ ಹಾಗೂ ರಾತ್ರಿಯೂ ಮಳೆ ಅಬ್ಬರ ಹೆಚ್ಚಾಗಿತ್ತು.

ಕಾವಲ್‌ಭೈರಸಂದ್ರದ ಕಾವೇರಿ ನಗರದ ಎ ಹಂತದಲ್ಲಿ 10 ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ತೊಂದರೆ ಅನುಭವಿಸಿದರು. ಮನೆಗೆ ನುಗ್ಗಿದ್ದ ನೀರು ಹೊರ ಹಾಕುವುದರಲ್ಲೇ ನಿವಾಸಿಗಳು ರಾತ್ರಿ ಕಳೆದರು. ನೀರಿನ ಜೊತೆಯಲ್ಲಿ ಕೊಳಚೆಯೂ ಮನೆಗೆ ನುಗ್ಗಿದ್ದರಿಂದ ದುರ್ನಾತ ಹೆಚ್ಚಿತ್ತು. ಪೀಠೋಪಕರಣ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳು ನೀರಿನಲ್ಲೇ ಮುಳುಗಿದ್ದವು. ಅವುಗಳನ್ನು ತೆರವು ಮಾಡಲು ನಿವಾಸಿಗಳು ಪರದಾಡಿದರು.

‘ಕಾವೇರಿ ನಗರದಲ್ಲಿ ಬಿಬಿಎಂಪಿ ಹಾಗೂ ಜಲಮಂಡಳಿ ವತಿಯಿಂದ ಕಾಮಗಾರಿಗಳು ನಡೆಯುತ್ತಿದೆ. ಇದಕ್ಕಾಗಿ ರಸ್ತೆ ಅಗೆಯಲಾಗಿದ್ದು, ನೀರು ಹರಿಯುವಿಕೆ ದಿಕ್ಕನೇ ಬದಲಿಸಲಾಗಿದೆ. ಇದೇ ಕಾರಣಕ್ಕೆ ಮನೆಗಳಿಗೆ ನೀರು ನುಗ್ಗಿದೆ’ ಎಂದು ಸ್ಥಳೀಯ ನಿವಾಸಿಯೊಬ್ಬರು ದೂರಿದರು.

ಬಹುತೇಕ ಕಡೆ ಅಬ್ಬರದ ಮಳೆ: ಮಡಿವಾಳ, ಎಚ್‌ಎಸ್‌ಆರ್ ಲೇಔಟ್, ಕೋರಮಂಗಲ, ವಿವೇಕನಗರ, ಎಚ್‌ಎಎಲ್, ಹೆಬ್ಬಾಳ, ಆರ್‌.ಟಿ.ನಗರ, ಸಂಜಯನಗರ, ವಸಂತನಗರ, ಶಿವಾಜಿನಗರ, ಕಮರ್ಷಿಯಲ್ ಸ್ಟ್ರೀಟ್, ಅಶೋಕನಗರ, ಎಂ.ಜಿ.ರಸ್ತೆ, ಹಲಸೂರು, ಇಂದಿರಾನಗರ, ನಾಗವಾರ, ಹೆಣ್ಣೂರು, ಬಾಣಸವಾಡಿ, ಈಜಿಪುರ, ಚಿಕ್ಕಜಾಲ, ಪೀಣ್ಯ, ಬಾಗಲಗುಂಟೆ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆ ಹೆಚ್ಚು ಸುರಿಯಿತು.

ಮೆಜೆಸ್ಟಿಕ್, ಗಾಂಧಿನಗರ, ಮಲ್ಲೇಶ್ವರ, ಶೇಷಾದ್ರಿಪುರ, ಯಶವಂತ ಪುರ, ರಾಜಾಜಿನಗರ, ವಿಜಯನಗರ, ಬಸವೇಶ್ವರನಗರ, ಗಿರಿನಗರ, ಬಸವನ ಗುಡಿ, ಬನಶಂಕರಿ, ಕೆಂಗೇರಿ, ರಾಜರಾಜೇ ಶ್ವರಿನಗರ, ಕುಮಾರಸ್ವಾಮಿ ಲೇಔಟ್, ಹನುಮಂತನಗರ, ಕುಮಾರ ಸ್ವಾಮಿ ಲೇಔಟ್, ಜೆ.ಪಿ.ನಗರ, ಜಯ ನಗರ ಪ್ರದೇಶದಲ್ಲೂ ಜೋರು ಮಳೆ ಇತ್ತು. ಜಿಕೆವಿಕೆ, ಯಲಹಂಕ, ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆ ಹೆಚ್ಚಿತ್ತು. ರಸ್ತೆಯಲ್ಲಿ ಹರಿಯುತ್ತಿದ್ದ ನೀರಿನಲ್ಲಿ ಸಂಚರಿಸುತ್ತಿದ್ದ ಕೆಲ ವಾಹನಗಳು ಕೆಟ್ಟು ನಿಂತಿದ್ದವು.

ಕಚೇರಿ ಹಾಗೂ ಇತರೆ ಕೆಲಸ ಮುಗಿಸಿ ಮನೆಗೆ ಹೊರಟಿದ್ದ ಜನ, ಮಳೆಯಲ್ಲಿ ಸಿಲುಕಿದರು.

ಮಳೆ ಕಡಿಮೆಯಾಗಬಹುದೆಂಬ ನಿರೀಕ್ಷೆಯಲ್ಲಿ ಸುರಕ್ಷಿತ ಸ್ಥಳಗಳಲ್ಲಿ ಕಾಯುತ್ತ ನಿಂತಿದ್ದರು. ದ್ವಿಚಕ್ರ ವಾಹನಗಳನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಜನ, ಕೆಳ ಸೇತುವೆ ಹಾಗೂ ಅಂಗಡಿಗಳಲ್ಲಿ ಆಶ್ರಯ ಪಡೆದಿದ್ದ ದೃಶ್ಯಗಳು ಕಂಡವು.

ಹೆಚ್ಚು ಜನರು ಬಂದು ಹೋಗುವ ಕೆ.ಆರ್. ಮಾರುಕಟ್ಟೆ, ಗಾಂಧಿನಗರ ಹಾಗೂ ಮೆಜೆಸ್ಟಿಕ್‌ ಪ್ರದೇಶಗಳಲ್ಲೂ ಮಳೆ ಜೋರಾಗಿತ್ತು. ಅಲ್ಲೆಲ್ಲ ವಸ್ತುಗಳ ಖರೀದಿಗೆ ಬಂದಿದ್ದ ಜನರಿಗೂ ತೊಂದರೆ ಆಯಿತು. ಪೆಟ್ರೋಲ್ ಬಂಕ್‌ ಹಾಗೂ ಮಾಲ್‌ಗಳ ಒಳಗೂ ಜನ ಗುಂಪು ಗುಂಪಾಗಿ ನಿಂತಿದ್ದು ಕಾಣಿಸಿತು. ಶಾಲಾ–ಕಾಲೇಜು ವಿದ್ಯಾರ್ಥಿಗಳು ಸುರಿವ ಮಳೆಯಲ್ಲೇ ಕೊಡೆ ಹಿಡಿದು ಹಾಗೂ ರೇನ್‌ಕೋಟ್ ಧರಿಸಿ ಮನೆಯತ್ತ ಹೆಜ್ಜೆ ಹಾಕಿದರು. ಮೆಜೆಸ್ಟಿಕ್ ಕೆಳ ಸೇತುವೆ, ಶಿವಾನಂದ ವೃತ್ತ, ಕಸ್ತೂರಬಾ ನಗರ ಹಾಗೂ ಬಳ್ಳಾರಿ ರಸ್ತೆಯಲ್ಲಿ ವಾಹನಗಳ ಸಂಚಾರ ನಿಧಾನಗತಿಯಲ್ಲಿತ್ತು. ಇದರಿಂದಾಗಿ ಸಂಚಾರ ದಟ್ಟಣೆ ಉಂಟಾಯಿತು.

‘ಕೆಲದಿನಗಳಿಂದ ನಗರದಲ್ಲಿ ಮಳೆ ಆಗುತ್ತಿದೆ. ರಸ್ತೆಯಲ್ಲಿ ಹೆಚ್ಚು ನೀರು ಹರಿಯುತ್ತಿದ್ದು, ಆ ಬಗ್ಗೆ ದೂರುಗಳು ಬರುತ್ತಿವೆ. ಸಿಬ್ಬಂದಿ, ಸ್ಥಳಕ್ಕೆ ಹೋಗುವಷ್ಟರಲ್ಲೇ ಹಲವೆಡೆ ನೀರು ಹರಿದು ಹೋಗುತ್ತಿದೆ. ಕೆಲವೆಡೆ ಮಾತ್ರ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ನೀರು ತೆರವು ಮಾಡುತ್ತಿದ್ದಾರೆ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

ನೀರು ಹೊರಹಾಕಿದ ಶಾಸಕ

ಬಸವನಗುಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ಅವರು ಗಿರಿನಗರದ ರೈಟರ್ಸ್ ಕಾಲೊನಿಯಲ್ಲಿ ಹೊಂದಿರುವ ಕಚೇರಿಗೂ ಸೋಮವಾರ ರಾತ್ರಿ ನೀರು ನುಗ್ಗಿತ್ತು. ನೀರನ್ನು ರವಿಸುಬ್ರಹ್ಮಣ್ಯ ಅವರೇ ಖುದ್ದು ಹೊರಗೆ ಹಾಕಿ ಕಚೇರಿ ಸ್ವಚ್ಛಗೊಳಿಸಿದರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT