ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಮನೆಗಳಿಗೆ ನುಗ್ಗಿದ ನೀರು; ಮಹದೇವಪುರ, ಕೆ.ಆರ್.ಪುರ ಜಲಾವೃತ

Last Updated 18 ಜೂನ್ 2022, 20:29 IST
ಅಕ್ಷರ ಗಾತ್ರ

ಬೆಂಗಳೂರು: ರಾತ್ರಿಯಿಡೀ ಅಬ್ಬರಿಸಿ ಸುರಿದ ಮಳೆ. ತುಂಬಿ ಹರಿದ ರಾಜಕಾಲುವೆಗಳು. ಹೊಳೆಯಂತಾದ ರಸ್ತೆಗಳು. ಕೋಡಿ ಬಿದ್ದ ಕೆರೆಗಳು, 500ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು. ತೇಲಿಹೋದ ಗೃಹೋಪಯೋಗಿ ಹಾಗೂ ಅಗತ್ಯ ವಸ್ತುಗಳು. ನೀರು ಹೊರಹಾಕುವುದಲ್ಲಿ ಹೈರಾಣಾದ ನಿವಾಸಿಗಳು...

ಶುಕ್ರವಾರ ತಡರಾತ್ರಿಯವರೆಗೆ ಸುರಿದ ಮಳೆಯಿಂದಾಗಿ ಮಹದೇವಪುರ, ಕೆ.ಆರ್. ಪುರ, ಹೊರಮಾವು ಹಾಗೂ ಯಲಹಂಕ ಸುತ್ತಮುತ್ತಲಿನ ಪ್ರದೇಶಗಳು ಜಲಾವೃತಗೊಂಡಿದ್ದವು. ಮನೆಗಳಿಗೆ ನೀರು ನುಗ್ಗಿದ್ದರಿಂದ, ನಿವಾಸಿಗಳು ಯಾತನೆ ಅನುಭವಿಸಿದರು.

ಮಳೆಗಾಲ ಆರಂಭವಾದ ದಿನದಿಂದ ಬಿಡುವು ಕೊಡುತ್ತಲೇ ಸುರಿಯುತ್ತಿದ್ದ ಮಳೆಯ ಅಬ್ಬರ ಶುಕ್ರವಾರ ರಾತ್ರಿ ಜೋರಾಗಿತ್ತು. ಸಂಜೆ ಅಲ್ಲಲ್ಲಿ ತುಂತುರು ರೀತಿಯಲ್ಲಿ ಆರಂಭವಾದ ಮಳೆ ಕ್ರಮೇಣ ಜೋರಾಯಿತು. ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿದು, ವಾಹನಗಳ ಸಂಚಾರ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆ ಉಂಟಾಯಿತು.

ನಲುಗಿದ ಮಹದೇವಪುರ: ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಮಳೆ ಜೋರಾಗಿತ್ತು. ಕಾಲುವೆಗಳು ತುಂಬಿ, ರಸ್ತೆಯಲ್ಲಿ ಹರಿದ ನೀರು ಮನೆಗಳಿಗೆ ನುಗ್ಗಿತ್ತು. ಏಕಾಏಕಿ ಮನೆಯೊಳಗೆ ನುಗ್ಗಿದ್ದ ನೀರು ಕಂಡು ಕಂಗಾಲಾದ ಜನ ಎತ್ತರದ ಸ್ಥಳಗಳಿಗೆ ಹೋಗಿ ನಿಂತುಕೊಂಡಿದ್ದರು. ಮಕ್ಕಳು, ವೃದ್ಧರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವುದೇ ಸವಾಲಾಗಿತ್ತು.

ಗರುಡಾಚಾರ್ ಪಾಳ್ಯ, ಗಾಯಿತ್ರಿ ಬಡಾವಣೆ, ಸಾಯಿ ಲೇಔಟ್, ಹೊರಮಾವು, ಗುರು ಲೇಔಟ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಸುಮಾರು 400 ಮನೆಗಳಿಗೆ ನೀರು ನುಗ್ಗಿತ್ತು. ಪ್ರತಿ ಬಾರಿಯೂ ಮಳೆ ಬಂದರೆ ಈ ಭಾಗದಲ್ಲಿ 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗುವುದು ಸಾಮಾನ್ಯವಾಗಿಬಿಟ್ಟಿದೆ. ಶುಕ್ರವಾರ ರಾತ್ರಿ ಮಳೆ ಪ್ರಮಾಣ ಹೆಚ್ಚಿದ್ದರಿಂದ, 400 ಮನೆಗಳಿಗೆ ನೀರು ನುಗ್ಗಿ ನಿವಾಸಿಗಳನ್ನು ಹೈರಾಣು ಮಾಡಿತು.

ಅಗ್ನಿಶಾಮಕ ದಳ, ಎನ್‌ಡಿಆರ್‌ಎಫ್‌, ಎಸ್‌ಡಿಆರ್‌ಎಫ್‌ ಸಿಬ್ಬಂದಿ ಹಾಗೂ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ನೀರಿನಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸಿದರು. ಜನವಸತಿ ಪ್ರದೇಶದಲ್ಲಿ ನಿಂತಿದ್ದ ನೀರು ಹರಿದು ಹೋಗಲು ಜಾಗ ಮಾಡಿದರು. ಶನಿವಾರ ಸಂಜೆ ವೇಳೆಗೆ ಬಹುತೇಕ ಕಡೆ ನೀರು ಹರಿದುಹೋಗಿತ್ತು.

‘ಊಟ ಮಾಡಿ ಮಲಗಲು ಸಿದ್ಧರಾಗಿದ್ದೆವು. ಜೋರು ಮಳೆ ಜೊತೆಯಲ್ಲೇ ಮನೆಯೊಳಗೆ ನೀರು ನುಗ್ಗಿದ್ದನ್ನು ನೋಡಿ ಗಾಬರಿಯಾಯಿತು. ಹೊರಗೆ ಹೋಗಲು ಸಹ ಆಗಲಿಲ್ಲ. ವೃದ್ಧರನ್ನು ಮೊದಲ ಮಹಡಿಗೆ ಕಳುಹಿಸಿ, ನಾವು ನೀರನ್ನು ಹೊರಹಾಕುವುದರಲ್ಲಿ ನಿರತರಾಗಿದ್ದೆವು’ ಎಂದು ಗಾಯಿತ್ರಿ ಬಡಾವಣೆ ನಿವಾಸಿ ಸೋಮಶೇಖರ್ ಹೇಳಿದರು.

‘ನೀರು ಧಾರಾಕಾರವಾಗಿ ಹರಿಯುತ್ತಿತ್ತು. ಮನೆಯ ಪೀಠೋಪಕರಣ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳು ನೀರಿನಲ್ಲಿ ತೇಲುತ್ತಿದ್ದವು. ಕೆಲ ವಸ್ತುಗಳು ನೀರಿನೊಂದಿಗೆ ತೇಲಿಹೋದವು’ ಎಂದೂ ತಿಳಿಸಿದರು.

ಸಾಯಿ ಲೇಔಟ್‌ ನಿವಾಸಿ ಜಾನ್, ‘ಮಳೆ ಬಂದಾಗಲೆಲ್ಲ ನೀರು ಮನೆಗೆ ನುಗ್ಗುವುದು ಸಾಮಾನ್ಯವಾಗಿದೆ. ಮನೆಯಲ್ಲಿನ ಎಲ್ಲ ವಸ್ತುಗಳು ನೀರು ಪಾಲಾಗಿವೆ. ರಾತ್ರಿ ನಿದ್ರೆಯಿಲ್ಲದೆ ನೀರು ಹೊರಹಾಕಲು ಪರದಾಡಿದೆವು’ ಎಂದರು.

‘ಮೇ ತಿಂಗಳಲ್ಲಿ ಮಳೆ ಸುರಿದಾಗಲೂ ಇಡೀ ಬಡಾವಣೆ ಜಲಾವೃತ ಗೊಂಡಿತ್ತು. ರಾಜಕಾಲುವೆಗೆ ಅಡ್ಡವಾಗಿರುವ ರೈಲ್ವೆ ಸೇತುವೆ ಕಿರಿದಾಗಿರುವುದರಿಂದ ಈ ಸಮಸ್ಯೆಯಾಗುತ್ತಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಕಳೆದ ತಿಂಗಳು ಸ್ಥಳಕ್ಕೆ ಬಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು’ ಎಂದು ಹೇಳಿದರು.

ಯಲಹಂಕದಲ್ಲೂ 30 ಮನೆ ಜಲಾವೃತ: ಯಲಹಂಕ ವಲಯದ ಮದರ್ ಹುಡ್ ರಸ್ತೆ, ಸಹಕಾರ ನಗರ ಮುಖ್ಯ ರಸ್ತೆ,ಜಕ್ಕೂರು ರಸ್ತೆ, ನೇತಾಜಿ ನಗರ, ದೊಡ್ಡಬೊಮ್ಮಸಂದ್ರದ ಬಸವ ಸಮಿತಿ ರಸ್ತೆ, ವಿದ್ಯಾರಣ್ಯಪುರ ಹಾಗೂಫಾತಿಮಾ ಲೇಔಟ್‌ನಲ್ಲಿ ಸುಮಾರು 30 ಮನೆಗಳಿಗೆ ನೀರು ನುಗ್ಗಿತ್ತು.

ಕಾಲುವೆಗಳು ತುಂಬಿ ಹರಿದ ನೀರು ರಸ್ತೆ ಮೂಲಕ ಮನೆಗಳಿಗೆ ನುಗ್ಗಿತ್ತು. ನೇತಾಜಿ ನಗರ ಹಾಗೂ ವಿದ್ಯಾರಣ್ಯಪುರ ಬಳಿಯ ಮನೆಗಳಲ್ಲಿ ನೀರು ಹೆಚ್ಚು ನಿಂತಿದ್ದು ಕಂಡುಬಂತು.

ರಾಮಮೂರ್ತಿನಗರದ ಚರ್ಚ್‌ ರಸ್ತೆಯ ಅಂಬೇಡ್ಕರ್ ನಗರದಲ್ಲಿ ರಾಜಕಾಲುವೆ ತುಂಬಿ ಹರಿದು 10 ಮನೆಗಳಿಗೆ ನೀರು ನುಗ್ಗಿತ್ತು.

ನೆಲಕ್ಕುರುಳಿದ್ದ ಮರದ ಕೊಂಬೆಗಳು

ಮಳೆಗೂ ಮುನ್ನ ಜೋರಾದ ಗಾಳಿ ಬೀಸಿದ್ದರಿಂದ ನಗರದ ಹಲವೆಡೆ ಮರದ ಕೊಂಬೆಗಳು ನೆಲಕ್ಕುರುಳಿದ್ದವು.

‘ಮೆಜೆಸ್ಟಿಕ್, ಕಾಟನ್‌ಪೇಟೆ, ವಿದ್ಯಾರಣ್ಯಪುರ, ಯಲಹಂಕ, ಮಹದೇವಪುರ, ಕೆ.ಆರ್. ಪುರ, ರಾಜಾಜಿನಗರ, ವಿಜಯನಗರ, ನಾಯಂಡಹಳ್ಳಿ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ಕೊಂಬೆಗಳು ಬಿದ್ದಿದ್ದವು. ಕೆಲವೆಡೆ ರಸ್ತೆ ಸಂಚಾರ ಬಂದ್ ಆಗಿತ್ತು. ಪರ್ಯಾಯ ರಸ್ತೆಯಲ್ಲಿ ವಾಹನಗಳು ಸಂಚರಿಸಿದವು’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

ಹೆಬ್ಬಾಳ ಕೆಳ ಸೇತುವೆ ಬಳಿ ನೀರು ನಿಂತುಕೊಂಡು ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸ್ ಸಿಬ್ಬಂದಿ ಜಗದೀಶ ರೆಡ್ಡಿ, ಮಳೆಯಲ್ಲಿ ನೆನೆದು ನೀರು ಸರಾಗವಾಗಿ ಹರಿಯಲು ಕಾಲುವೆಯಲ್ಲಿ ಜಾಗ ಮಾಡಿದರು. ನಂತರವೇ ನೀರು ಕಡಿಮೆಯಾಯಿತು.

ಗೋಡೆ ಕುಸಿದು ಬೈಕ್‌ಗಳು ಜಖಂ

ಕೆ.ಆರ್.ಪುರ ಬಳಿ ಶ್ರೀಕೃಷ್ಣ ಚಿತ್ರಮಂದಿರದ ಗೋಡೆ ಕುಸಿದು, ಅದರ ಅವಶೇಷಗಳಡಿ ಸಿಲುಕಿ 10ಕ್ಕೂ ಹೆಚ್ಚು ಬೈಕ್‍ಗಳು ಜಖಂಗೊಂಡಿವೆ.

‘ಚಾರ್ಲಿ’ ಸಿನಿಮಾ ವೀಕ್ಷಣೆಗೆಂದು ಬಂದಿದ್ದ ಜನ, ಗೋಡೆ ಪಕ್ಕದಲ್ಲಿ ಬೈಕ್‌ಗಳನ್ನು ನಿಲ್ಲಿಸಿ ಚಿತ್ರಮಂದಿರ ಒಳಗೆ ಹೋಗಿದ್ದರು. ರಾತ್ರಿ ಧಾರಾಕಾರವಾಗಿ ಮಳೆ ಸುರಿದಿದ್ದರಿಂದ ಗೋಡೆ ಕುಸಿದು ಬಿದ್ದಿತ್ತು’ ಎಂದು ಸ್ಥಳೀಯರು ಹೇಳಿದರು.

ತಡರಾತ್ರಿಯಿಂದ ಕಾರ್ಯಾಚರಣೆ

ಮಹಾಮಳೆಯಿಂದ ಹೆಚ್ಚು ಹಾನಿಯಾದ ಮಹದೇವಪುರ ಹಾಗೂ ಕೆ.ಆರ್‌.ಪುರ ಪ್ರದೇಶಗಳಲ್ಲಿ ಶುಕ್ರವಾರ ತಡರಾತ್ರಿಯಿಂದಲೇ ಅಗ್ನಿಶಾಮಕ, ಎಸ್‌ಡಿಆರ್‌ಎಫ್‌, ಬಿಬಿಎಂಪಿ ಹಾಗೂ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರು.

ಗಾಯತ್ರಿ ಬಡಾವಣೆಯಲ್ಲಿ ರಾಜಕಾಲುವೆಯಲ್ಲಿ ಕೊಚ್ಚಿಹೋದ ಮಿಥುನ್ ಅವರ ಪತ್ತೆಗಾಗಿ ರಕ್ಷಣಾ ಪಡೆ ಸಿಬ್ಬಂದಿಯು ದೋಣಿ ಸಹಾಯ ಪಡೆದರು. ರಾಜಕಾಲುವೆಯಲ್ಲಿ ದೋಣಿಯಲ್ಲಿ ಸಾಗಿ, ಮಿಥುನ್ ಅವರಿಗಾಗಿ ಹುಡುಕಾಟ ನಡೆಸಿದರು. ಸಂಜೆಯಾದರೂ ಅವರ ಸುಳಿವು ಸಿಗಲಿಲ್ಲ.

ಶನಿವಾರ ಮಧ್ಯಾಹ್ನವೂ ರಾಜಕಾಲುವೆಯಲ್ಲಿ ನೀರಿನ ಹರಿವು ಹೆಚ್ಚಿತ್ತು. ನೀರಿನಲ್ಲಿ ಕೊಚ್ಚಿಕೊಂಡು ಬಂದಿದ್ದ ಬೈಕ್‌ಗಳು, ಪೀಠೋಪಕರಣ, ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ ಇತರೆ ವಸ್ತುಗಳನ್ನು ರಕ್ಷಣಾ ಸಿಬ್ಬಂದಿ ಹೊರಗೆ ತೆಗೆದರು.

ಮನೆಗಳಿಗೆ ನುಗ್ಗಿದ ಕೆರೆ ನೀರು

ವಿದ್ಯಾರಣ್ಯಪುರ ಬಳಿಯ ಸಿಂಗಾಪುರ ಕೆರೆ ನೀರು ಅಕ್ಕ–ಪಕ್ಕದ ಪ್ರದೇಶಕ್ಕೆ ನುಗ್ಗಿತ್ತು.

ಸಿಂಗಾಪುರದ ಮನೆಗಳಲ್ಲಿ ಮೂರು ಅಡಿಗಳಷ್ಟು ನೀರು ಹರಿಯಿತು. ಮಳೆ ಶುರುವಾದಾಗಿನಿಂದಲೂ ಆತಂಕದಲ್ಲಿದ್ದ ನಿವಾಸಿಗಳು, ಮನೆಗೆ ನೀರು ನುಗ್ಗುತ್ತಿದ್ದಂತೆ ಆತಂಕಗೊಂಡರು. ರಾತ್ರಿಯಿಡೀ ನೀರು ಹೊರಹಾಕಲು ಹರಸಾಹಸಪಟ್ಟರು. ಮನೆಗಳು, ಅಪಾರ್ಟ್‌ಮೆಂಟ್ ಸಮುಚ್ಚಯದ ನೆಲ ಮಹಡಿ ಹಾಗೂ ಇತರೆಡೆ ನೀರು ನಿಂತಿತ್ತು. ನೀರಿನ ಜೊತೆಯಲ್ಲಿ ತ್ಯಾಜ್ಯ ಹಾಗೂ ಹಾವು–ಚೇಳುಗಳೂ ಮನೆಯೊಳಗೆ ಬಂದಿದ್ದು ಕಂಡುಬಂತು.

‘ಸಿಂಗಾಪುರ ಕೆರೆಗೆ ಹೊಂದಿಕೊಂಡಿರುವ ರಾಜಕಾಲುವೆ ಒತ್ತುವರಿ ಮಾಡಿಕೊಂಡು, ರಸ್ತೆ ನಿರ್ಮಿಸಲಾಗಿದೆ. ಮಳೆ ಬಂದಾಗಲೆಲ್ಲ ರಸ್ತೆಯಲ್ಲಿ ನೀರು ಹರಿದು ಮನೆಗಳಿಗೆ ನುಗ್ಗುತ್ತಿದೆ. ಈ ಬಗ್ಗೆ ಹಲವು ಬಾರಿ ಮನವಿ ನೀಡಿದರೂ ಸಮಸ್ಯೆ ಬಗೆಹರಿದಿಲ್ಲ’ ಎಂದು ನಿವಾಸಿಗಳು ದೂರಿದರು.

ಶಿಕ್ಷಣಾಧಿಕಾರಿ ಕಚೇರಿಗೂ ನೀರು

ಕೆ.ಆರ್.ಪುರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೂ ನೀರು ನುಗ್ಗಿತ್ತು. ಪಿಠೋಪಕರಣ, ಹಲವು ದಾಖಲೆಗಳು ಹಾಗೂ ಕಂಪ್ಯೂಟರ್‌ಗಳು ಇದ್ದ ಕೊಠಡಿಯಲ್ಲಿ ನೀರು ನಿಂತುಕೊಂಡಿತ್ತು. ನೀರು ಹೊರಹಾಕುವುದಲ್ಲಿ ಸಿಬ್ಬಂದಿ ಹಾಗೂ ರಕ್ಷಣಾ ಪಡೆಗಳು ನಿರತರಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT