ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ: ಅಪಾರ್ಟ್‌ಮೆಂಟ್‌ಗೆ ನುಗ್ಗಿದ ನೀರು; ಶಾಶ್ವತ ಪರಿಹಾರಕ್ಕೆ ಒತ್ತಾಯ

Last Updated 4 ಆಗಸ್ಟ್ 2022, 20:50 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಕೆಲ ದಿನಗಳಿಂದ ಉತ್ತಮವಾಗಿ ಮಳೆ ಸುರಿ ಯುತ್ತಿದೆ. ಗುರುವಾರವೂ ಬೆಳಿಗ್ಗೆಯಿಂದ ರಾತ್ರಿಯವರೆಗೂ ಮಳೆ ಅಬ್ಬರವಿತ್ತು.

ಹಲವು ದಿನಗಳಿಂದ ನಗರದಲ್ಲಿ ಮೋಡ ಕವಿದ ವಾತಾವರಣವಿದ್ದು,ನಿರಂತರವಾಗಿ ತುಂತುರು ಮಳೆ ಸುರಿಯುತ್ತಿದೆ.

ಗುರುವಾರ ನಸುಕಿನಲ್ಲಿ ಬಿಡುವು ನೀಡಿದ್ದ ಮಳೆ, ಬೆಳಿಗ್ಗೆ 10 ಗಂಟೆ ಬಳಿಕ ತನ್ನ ಅಬ್ಬರ ಮುಂದುವರಿಸಿತು. ನಿರಂತರ ಮಳೆಯಿಂದಾಗಿ, ನಗರದ ಬಹುತೇಕ ಪ್ರದೇಶಗಳ ಕಾಲುವೆ ಹಾಗೂ ರಸ್ತೆಗಳಲ್ಲಿ ನೀರು ಹರಿಯಿತು.

ಕೆಂಗೇರಿ, ರಾಜರಾಜೇಶ್ವರಿನಗರ, ರಾಜಾಜಿನಗರ, ವಿಜಯನಗರ, ಬಸವೇಶ್ವರನಗರ, ಗಿರಿನಗರ, ಬಸವನಗುಡಿ, ಬನಶಂಕರಿ, ಕುಮಾರಸ್ವಾಮಿ ಲೇಔಟ್, ಹನುಮಂತನಗರ, ಜಯನಗರ, ಜೆ.ಪಿ.ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತುಂತುರು ಮಳೆಯ ಸಿಂಚನವಾಯಿತು.

ಯಶವಂತಪುರ, ಮಲ್ಲೇಶ್ವರ, ಹೆಬ್ಬಾಳ, ಆರ್‌.ಟಿ.ನಗರ, ಸಂಜಯನಗರ, ವಸಂತನಗರ, ಶಿವಾಜಿ ನಗರ, ಕಮರ್ಷಿಯಲ್ ಸ್ಟ್ರೀಟ್, ಎಂ.ಜಿ.ರಸ್ತೆ, ಅಶೋಕನಗರ, ಎಚ್‌ಎಎಲ್‌, ವಿವೇಕನಗರ, ಕೋರಮಂಗಲ, ಮಡಿವಾಳ, ಎಚ್‌ಎಸ್‌ಆರ್ ಲೇಔಟ್, ಗಾಂಧಿನಗರ, ಮೆಜೆಸ್ಟಿಕ್, ಶೇಷಾದ್ರಿಪುರ, ಮಲ್ಲೇಶ್ವರ ಹಾಗೂ ಸುತ್ತಮುತ್ತ ಮಳೆ ಸುರಿಯಿತು.

ಸಂಜೆಯವರೆಗೂ ಬಹುತೇಕ ಕಡೆ ಸೂರ್ಯನ ದರ್ಶನವೇ ಆಗಲಿಲ್ಲ. ಮಳೆ ನಿಲ್ಲುವ ಲಕ್ಷಣವೂ ಕಾಣಿಸಲಿಲ್ಲ. ರೇನ್‌ಕೋಟ್, ಜರ್ಕಿನ್, ಕೊಡೆ ಆಶ್ರಯದಲ್ಲೇ ಜನರು ಓಡಾಡಿದರು. ಕೆಲವರು ಸುರಿವ ಮಳೆಯಲ್ಲೇ ಹೆಜ್ಜೆ ಹಾಕಿದರು.

ಕುಸಿದ ಮುಚ್ಚಳ, ಭಯದಲ್ಲೇ ಸಂಚಾರ: ಮಳೆ ಸುರಿಯುತ್ತಿದ್ದ ಸಂದರ್ಭದಲ್ಲೇ, ಕಸ್ತೂರ್‌ಬಾ ರಸ್ತೆಯ ಮಧ್ಯದಲ್ಲಿರುವ ಒಳಚರಂಡಿ ಮುಚ್ಚಳ ಕುಸಿದಿತ್ತು. ಅಪಾಯಕ್ಕೆ ಆಹ್ವಾನ ನೀಡುವ ರೀತಿಯಲ್ಲಿದ್ದ ಒಳಚರಂಡಿ ತೆರೆದುಕೊಂಡಿತ್ತು. ಇದರಿಂದಾಗಿ ವಾಹನ ಸವಾರರು ಭಯದಲ್ಲೇ ಸಂಚರಿಸಿದರು.

ಕೆರೆಯಂತಾದ ರಸ್ತೆಗಳು: ನಿರಂತರವಾಗಿ ಮಳೆ ಸುರಿದಿದ್ದರಿಂದಾಗಿ ಬಹುತೇಕ ರಸ್ತೆ ಹಾಗೂ ಆವರಣಗಳಲ್ಲಿ ನೀರು ನಿಂತುಕೊಂಡಿತ್ತು. ಅದೇ ನೀರಿನಲ್ಲೇ ವಾಹನಗಳು ಸಂಚರಿಸಿದವು. ಕೆಲ ವಾಹನಗಳು ಕೆಟ್ಟು ನಿಂತಿದ್ದವು.

ಮೈಸೂರು ರಸ್ತೆ, ತುಮಕೂರು ರಸ್ತೆ, ಓಕಳಿಪುರ, ಮೆಜೆಸ್ಟಿಕ್ ಹಾಗೂ ಇತರೆ ರಸ್ತೆಗಳಲ್ಲಿ ವಾಹನಗಳ ದಟ್ಟಣೆಯೂ ವಿಪರೀತವಾಗಿತ್ತು.

ಶಾಶ್ವತ ಪರಿಹಾರಕ್ಕೆ ನಿವಾಸಿಗಳಿಂದ ಒತ್ತಾಯ

ಸರ್ಜಾಪುರ ಮುಖ್ಯರಸ್ತೆಯ ವಿಪ್ರೊ ಗೇಟ್ ಬಳಿಯ ರೈನ್ ಬೋ ಅಪಾರ್ಟ್‌ಮೆಂಟ್ ಸಮುಚ್ಚಯದ ಆವರಣಕ್ಕೆ ನೀರು ನುಗ್ಗಿತ್ತು. ಅಗ್ನಿಶಾಮಕ ದಳ ಹಾಗೂ ಪೊಲೀಸ್ ಸಿಬ್ಬಂದಿ, ಕಾರ್ಯಾಚರಣೆ ನಡೆಸಿ ನೀರು ತೆರವುಗೊಳಿಸಿದರು.

‘ಪ್ರತಿ ಬಾರಿ ಮಳೆ ಬಂದಾಗಲೆಲ್ಲ ಅಪಾರ್ಟ್‌ಮೆಂಟ್ ಸಮುಚ್ಚಯದೊಳಗೆ ನೀರು ನುಗ್ಗುತ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಬೇಕು’ ಎಂದು ಆಗ್ರಹಿಸಿ ನಿವಾಸಿಗಳು ‍ಪ್ರತಿಭಟನೆ ನಡೆಸಿದರು.

ಅಪಾರ್ಟ್‌ಮೆಂಟ್ ಸಮುಚ್ಚಯದ ಎದುರಿನ ರಸ್ತೆಯಲ್ಲಿ ವಾಹನಗಳ ಸಂಚಾರ ತಡೆದು ಪ್ರತಿಭಟಿಸಿದ ನಿವಾಸಿಗಳು, ಬೇಡಿಕೆ ಈಡೇರಿಕೆಗಾಗಿ ಘೋಷಣೆ ಕೂಗಿದರು.

ರಾಜಕಾಲುವೆ ಒತ್ತುವರಿ: ‘ರೈನ್‌ ಬೋ ಅಪಾರ್ಟ್‌ಮೆಂಟ್‌ ಮೇಲ್ಭಾಗದಲ್ಲಿ ಮಾಲನಾಯಕನಹಳ್ಳಿ ಕೆರೆ ಹಾಗೂ ಜುನ್ನಾಲಸಂದ್ರ ಕೆರೆಗಳಿವೆ. ಅವು ತುಂಬಿವೆ. ಅದರಿಂದ ಹೊರ ಹೋಗುವ ನೀರಿನ ಕಾಲುವೆಗಳು ಮುಚ್ಚಿಹೋಗಿವೆ. ಕೆಲವು ಕಡೆ ಒತ್ತುವರಿಯೂ ಆಗಿದೆ. ಅದನ್ನು ತೆರವುಗೊಳಿಸಿ ಕಾಲುವೆಯಲ್ಲಿ ನೀರು ಹರಿಯುವಂತೆ ಮಾಡಿದರೆ ಶಾಶ್ವತ ಪರಿಹಾರ ಸಿಗುತ್ತದೆ’ ಎಂದು ಬಿಬಿಎಂಪಿ ಮಹದೇವಪುರ ವಲಯದ ಮುಖ್ಯ ಎಂಜಿನಿಯರ್‌ ಬಸವರಾಜ ಕಬಾಡೆ ತಿಳಿಸಿದರು.

‘ಇನ್ನು ಸಣ್ಣ ಮಳೆಯಾದರೂ ಕೆರೆಗಳಿಂದ ನೀರು ಹೊರಬರುತ್ತದೆ. ನೀರು ಹೋಗಲು ಕಾಲುವೆ ಇಲ್ಲ. ಹೀಗಾಗಿ ಅಪಾರ್ಟ್‌ಮೆಂಟ್‌ಗೆ ನುಗ್ಗುತ್ತದೆ. ಕಾಲುವೆಯಲ್ಲಿನ ಒತ್ತುವರಿ ತೆರಿವಿಗೆ ರಾಜಕಾಲುವೆ ವಿಭಾಗಕ್ಕೆ ತಿಳಿಸಲಾಗಿದೆ. ಎಲ್ಲ ರೀತಿಯ ಸರ್ವೆ ಮಾಡಿಸಿ, ಒತ್ತುವರಿಯನ್ನು ತೆರವು ಮಾಡಿಸಿ, ರಾಜಕಾಲುವೆಯನ್ನು ಅಭಿವೃದ್ಧಿ ಮಾಡಲಾಗುತ್ತದೆ. ಇದಕ್ಕೆ ಸ್ಥಳೀಯರ ಸಹಕಾರವೂ ಅಗತ್ಯ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT