ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಧಾನಿ ಒಡಲದನಿ | ರಾಜಕಾಲುವೆ; ಬಿಡುಗಡೆ ಆಗಲೇ ಇಲ್ಲ ಅನುದಾನ

ರಾಜಧಾನಿ ಒಡಲದನಿ
Last Updated 5 ಏಪ್ರಿಲ್ 2022, 20:25 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ₹1,560 ಕೋಟಿ ಮೊತ್ತದಲ್ಲಿ ರಾಜಕಾಲುವೆಗಳ ಅಭಿವೃದ್ಧಿ ಮಾಡುವ ಪ್ರಸ್ತಾವನೆ ನನೆಗುದಿಗೆ ಬಿದ್ದಿದ್ದು, ಮತ್ತೆ ಮಳೆ ಶುರುವಾದರೆ ಮನೆಗಳಿಗೆ ನೀರು ನುಗ್ಗುವ ಆತಂಕ ನಗರದ ಜನರನ್ನು ಕಾಡುತ್ತಿದೆ.

ನಗರದಲ್ಲಿ 842 ಕಿ.ಮೀ. ಉದ್ದದ ನಾಲ್ಕು ಪ್ರಮುಖ ರಾಜಕಾಲುವೆಗಳು ಮತ್ತು ದ್ವಿತೀಯ ಹಂತದ 97 ಕಿ.ಮೀ ರಾಜಕಾಲುವೆಗಳು ಇವೆ. 2021ರ ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಸುರಿದ ಮಳೆಯಿಂದಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡು ಪ್ರವಾಹ ಉಂಟಾಗಿತ್ತು. ಹಲವೆಡೆ ರಾಜಕಾಲುವೆಗಳ ತಡೆಗೋಡೆಗಳು ಶಿಥಿಲಗೊಂಡಿದ್ದವು.

ಆ ಸಂದರ್ಭದಲ್ಲಿ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜಕಾಲುವೆಗಳ ಅಭಿವೃದ್ಧಿಗೆ ₹1,500 ಕೋಟಿ ಬಿಡುಗಡೆ ಮಾಡುವ ಭರವಸೆ ನೀಡಿದ್ದರು. ಪ್ರಥಮ ಹಂತದ ರಾಜಕಾಲುವೆಗಳು (60.82 ಕಿ.ಮೀ) ಹಾಗೂ ದ್ವಿತೀಯ ಹಂತದ ರಾಜಕಾಲುವೆಗಳನ್ನು ( 97.10 ಕಿ.ಮೀ) ಅಭಿವೃದ್ಧಿಪಡಿಸಲು ಒಟ್ಟು 292 ಕಾಮಗಾರಿಗಳನ್ನು ಕೈಗೊಳ್ಳಬೇಕಾಗಿದೆ ಎಂದು ಬಿಬಿಎಂಪಿ ಕ್ರಿಯಾ ಯೋಜನೆ ಸಿದ್ದಪಡಿದೆ. ಆದರೆ, ಈವರೆಗೆ ಬಿಡಿಗಾಸು ಕೂಡ ಸರ್ಕಾರ ಬಿಡುಗಡೆಯಾಗಿಲ್ಲ. ಈ ಕುರಿತು ನಗರದ ಶಾಸಕರು ‘ಪ್ರಜಾವಾಣಿ’ ಜತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ.‌‌

‘ಮಳೆ ಬಂದರೆ ಮತ್ತೆ ಸಮಸ್ಯೆ’

ಪ್ರವಾಹ ಸಂದರ್ಭದಲ್ಲಿ ನಗರ ಸುತ್ತಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜಕಾಲುವೆ ಅಭಿವೃದ್ಧಿ ಬಗ್ಗೆ ಪ್ರಸ್ತಾಪಿಸಿ ಹಣ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಈವರೆಗೆ ಅನುದಾನ ಬಿಡುಗಡೆ ಮಾಡಿಯೇ ಇಲ್ಲ. ಈಗ ಮತ್ತೆ ಮಳೆ ಆರಂಭವಾಗುತ್ತಿದ್ದು, ಜೋರು ಮಳೆ ಬಂದರೆ ಸಮಸ್ಯೆ ಎದುರಿಸಬೇಕಾಗುತ್ತದೆ. ಈ ಬಗ್ಗೆ ಸದನದಲ್ಲೂ ಪ್ರಸ್ತಾಪಿಸಿದ್ದೆ. ಎಷ್ಟೇ ಮಾತನಾಡಿದರೂ ಜನಪರ ಕೆಲಸಗಳ ಬಗ್ಗೆ ಬಿಜೆಪಿ ಆಸಕ್ತಿ ವಹಿಸುವುದಿಲ್ಲ. ವಿಷಯಾಂತರ ಮಾಡಿ ರಾಜಕೀಯ ಮಾಡಿಕೊಂಡೇ ಕಾಲಹರಣ ಮಾಡುತ್ತಿದ್ದಾರೆ. ಈ ರೀತಿಯ ರಾಜಕಾರಣ ಹೆಚ್ಚು ದಿನ ನಡೆಯುವುದಿಲ್ಲ.

– ರಾಮಲಿಂಗಾರೆಡ್ಡಿ, ಶಾಸಕ(ಬಿಟಿಎಂ ಲೇಔಟ್)

‘ಇಡೀ ಬೆಂಗಳೂರು ಸಮಸ್ಯೆಗೆ ಸಿಲುಕಲಿದೆ’

ರಾಜಕಾಲುವೆ ಅಭಿವೃದ್ಧಿ ಬಗ್ಗೆ ಮೂರು ವರ್ಷಗಳಿಂದ ಮನವಿ ಮಾಡಿದ್ದರೂ, ಸರ್ಕಾರ ತಲೆಕೆಡಿಸಿಕೊಂಡಿಲ್ಲ. ಮಳೆ ಬಂದರೆ ಬಡವರ ಮನೆಗಳಿಗೆ ನೀರು ನುಗ್ಗುತ್ತದೆ. ಮನೆ ಬಿದ್ದಾಗ ಜೆಸಿಬಿ ಸಮೇತ ಅಧಿಕಾರಿಗಳು ಬಂದು ನಿಲ್ಲುತ್ತಾರೆ. ಬೇಸಿಗೆ ಸಮಯದಲ್ಲಿ ರಾಜಕಾಲುವೆ ಸರಿಪಡಿಸಿದರೆ ಮಳೆಗಾಲದಲ್ಲಿ ಜನ ನೆಮ್ಮದಿಯಿಂದ ನಿದ್ರೆ ಮಾಡಬಹುದು. ಬೆಂಗಳೂರಿನಲ್ಲಿ ಇಷ್ಟು ಹಾನಿಯಾಗಿದ್ದರೂ ಸರ್ಕಾರ ಕಣ್ತೆರೆದುಕೊಂಡಿಲ್ಲ. ದಾಸರಹಳ್ಳಿ ಕ್ಷೇತ್ರ ಮಾತ್ರವಲ್ಲ, ಇಡೀ ಬೆಂಗಳೂರಿನಲ್ಲೇ ಸಮಸ್ಯೆ ಇದೆ. ವಾತಾವರಣ ಗಮನಿಸಿದರೆ ಯಾವಾಗ ಮಳೆ ಸುರಿಯುತ್ತದೋ ಗೊತ್ತಿಲ್ಲ. ಮಳೆ ಬರಲಿದೆ ಎಂಬುದನ್ನು ನೆನಪಿಸಿಕೊಂಡರೇ ಭಯವಾಗುತ್ತಿದೆ. ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಿ ರಾಜಕಾಲುವೆ ಅಭಿವೃದ್ಧಿಪಡಿಸಬೇಕು.

– ಆರ್.ಮಂಜುನಾಥ್, ಶಾಸಕ(ದಾಸರಹಳ್ಳಿ)

‘ಮಳೆ ಹಾನಿಯಾದರೆ ಸರ್ಕಾರವೇ ಹೊಣೆ’

ಹಿಂದಿನ ಮಳೆಗಾಲದಲ್ಲಿ ಮಾಡಿದ ಘೋಷಣೆ ಮಾತಿನಲ್ಲೇ ಉಳಿದಿದೆ. ಬೆಂಗಳೂರಿಗೆ ಬಿಜೆಪಿ ವಿಶೇಷ ಕೊಡುಗೆ ಏನಾದರೂ ನೀಡಿದೆಯೇ ಎಂದು ನೋಡಿದರೆ ಏನು ಇಲ್ಲ. ‘ಹಳೇ ಕಲ್ಲು ಹೊಸ ಬಿಲ್ಲು’ ಎಂಬುದನ್ನು ಬಿಟ್ಟರೆ ಯಾವ ಸಮಸ್ಯೆಗೂ ಪರಿಹಾರ ಸಿಕ್ಕಿಲ್ಲ. ಬೆಂಗಳೂರಿಗೆ ಹೊಸ ರೂಪ ಕೊಡುವ ಪ್ರಯತ್ನವೂ ಇಲ್ಲ. ರಾಜಕಾಲುವೆ ಅಷ್ಟೆಲ್ಲಾ ಹಾಳಾಗಿತ್ತು. ದುರಸ್ತಿ ಬಗ್ಗೆ ಮಾತನಾಡಿದವರು ಈವರೆಗೆ ಕಿಂಚಿತ್ತು ಕೆಲಸವನ್ನೂ ಶುರು ಮಾಡಿಲ್ಲ. ಮಾತಿನಲ್ಲಿ ಮರುಳು ಮಾಡುವುದನ್ನು ಬಿಜೆಪಿಯವರು ಚೆನ್ನಾಗಿ ಕಲಿತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಸರ್ಕಾರ ಏನೇನೂ ಕೆಲಸ ಮಾಡಿಲ್ಲ. ಈ ವರ್ಷ ಮತ್ತೆ ಅತಿವೃಷ್ಟಿಯಿಂದ ಹಾನಿಯಾದರೆ ಅದಕ್ಕೆ ಸರ್ಕಾರವೇ ಹೊಣೆಯಾಗಬೇಕಾಗುತ್ತದೆ.

– ಕೃಷ್ಣ ಬೈರೇಗೌಡ, ಶಾಸಕ(ಬ್ಯಾಟರಾಯನಪುರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT