ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್ ಪ್ರಕರಣ: ಮೊಬೈಲ್, ಕಾರ್ಡ್‌ ಬಳಕೆ ಬಂದ್, ಖರ್ಚಿಗೆ ₹ 5 ಲಕ್ಷ

ಆದಿತ್ಯನ ತಲೆಕೂದಲು ಮಾದರಿ ಸಂಗ್ರಹ
Last Updated 14 ಜನವರಿ 2021, 19:37 IST
ಅಕ್ಷರ ಗಾತ್ರ

ಬೆಂಗಳೂರು: ಅಂತರರಾಷ್ಟ್ರೀಯ ಡ್ರಗ್ಸ್ ಜಾಲದ ಬಗ್ಗೆ ಕಾಟನ್‌ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಮೊಬೈಲ್ ಹಾಗೂ ಡೆಬಿಟ್/ಕ್ರೆಡಿಟ್ ಕಾರ್ಡ್‌ ಬಳಸುವುದನ್ನು ಬಂದ್ ಮಾಡಿದ್ದ ಆರೋಪಿ ಆದಿತ್ಯ ಆಳ್ವ, ಖರ್ಚಿಗೆಂದು ₹ 5 ಲಕ್ಷ ತೆಗೆದುಕೊಂಡು ಮನೆ ಬಿಟ್ಟಿದ್ದ ಎಂಬ ಸಂಗತಿ ತನಿಖೆಯಿಂದ ಗೊತ್ತಾಗಿದೆ.

ಬಂಧನದ ಭೀತಿಯಲ್ಲಿ ತಲೆಮರೆಸಿಕೊಂಡು ಓಡಾಡುತ್ತಿದ್ದ ಆದಿತ್ಯ, ಚೆನ್ನೈನಲ್ಲಿರುವ ಹೋಮ್ ಸ್ಟೇನಲ್ಲಿ ಇತ್ತೀಚೆಗಷ್ಟೇ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಆತನನ್ನು ಕಸ್ಟಡಿಗೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಸಿದ್ಧ ಉತ್ತರಗಳನ್ನಷ್ಟೇ ನೀಡುತ್ತಿದ್ದು, ಡ್ರಗ್ಸ್ ಜಾಲದ ಸುಳಿವು ಬಿಟ್ಟುಕೊಡುತ್ತಿಲ್ಲ.

‘ಪೊಲೀಸರ ತನಿಖಾ ಕ್ರಮದ ಬಗ್ಗೆ ಮಾಹಿತಿ ಹೊಂದಿರುವ ಆರೋಪಿ, ಪ್ರಕರಣದಲ್ಲಿ ಪೊಲೀಸರ ದಿಕ್ಕು ತಪ್ಪಿಸಲು ಯತ್ನಿಸಿದ್ದಾನೆ. ತನ್ನ ಸುಳಿವು ಸಿಗಬಾರದೆಂದು ಆತ, ಮೊದಲಿಗೆ ಮೊಬೈಲ್ ಬಳಸುವುದನ್ನು ಬಿಟ್ಟಿದ್ದ’ ಎಂದು ಮೂಲಗಳು ಹೇಳಿವೆ.

‘ಹಣದ ವ್ಯವಹಾರ ನಡೆಸಿದರೆ ಸುಳಿವು ಸಿಗಬಹುದೆಂದು ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್‌ಗಳನ್ನೂ ಬಳಸಿರಲಿಲ್ಲ. ಮನೆ ಬಿಟ್ಟು ಹೋಗುವಾಗ ಜೊತೆಯಲ್ಲಿ ₹5 ಲಕ್ಷ ನಗದು ತೆಗೆದುಕೊಂಡು ಹೋಗಿದ್ದ. ಅದನ್ನೇ ಖರ್ಚಿಗೆ ಬಳಸುತ್ತಿದ್ದ. ಪರಿಚಯಸ್ಥರ ಹಾಗೂ ಸಂಬಂಧಿಕರ ಮನೆಗಳಿಗೆ ಹೋಗಿ ಕೆಲದಿನ ಉಳಿದುಕೊಂಡಿದ್ದ. ಕಳೆದ ತಿಂಗಳು ಚೆನ್ನೈಗೆ ಹೋಗಿ ಹೋಮ್ ಸ್ಟೇನಲ್ಲಿ ವಾಸ್ತವ್ಯ ಹೂಡಿದ್ದ. ಅಲ್ಲಿಯೇ ಕೊಠಡಿ ಕಾಯ್ದಿರಿಸಲು ನಗದು ನೀಡಿದ್ದ’ ಎಂದೂ ಮೂಲಗಳು ತಿಳಿಸಿವೆ.

ಅಡುಗೆ ಕೆಲಸಗಾರನ ಹೇಳಿಕೆ ಸಂಗ್ರಹ: ‘ಆದಿತ್ಯನ ಬೆಂಗಳೂರಿನ ಮನೆಯಲ್ಲಿ ಚೆನ್ನೈನ ವ್ಯಕ್ತಿಯೊಬ್ಬರು ಅಡುಗೆ ಕೆಲಸ ಮಾಡುತ್ತಿದ್ದರು. ಲಾಕ್‌ಡೌನ್‌ಗೂ ಮುಂಚೆಯೇ ಅವರು ಚೆನ್ನೈಗೆ ವಾಪಸು ಹೋಗಿದ್ದರು. ಅವರ ಸಹಾಯದಿಂದಲೇ ಆದಿತ್ಯ, ಹೋಮ್ ಸ್ಟೇನಲ್ಲಿ ಉಳಿದುಕೊಂಡಿದ್ದ’ ಎಂದೂ ಮೂಲಗಳು ಹೇಳಿವೆ.

‘ಆದಿತ್ಯನ ಬಂಧನವಾಗುತ್ತಿದ್ದಂತೆ ಅಡುಗೆ ಕೆಲಸಗಾರನನ್ನು ವಶಕ್ಕೆ ಪಡೆದು ಹೇಳಿಕೆ ಪಡೆಯಲಾಗಿದೆ. ಸದ್ಯಕ್ಕೆ ಆತನನ್ನು ಬಿಟ್ಟು ಕಳುಹಿಸಲಾಗಿದ್ದು, ವಿಚಾರಣೆ ಅಗತ್ಯವಿದ್ದರೆ ಪುನಃ ಬರುವಂತೆ ಸೂಚಿಸಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ತಲೆಕೂದಲು ಮಾದರಿ ಸಂಗ್ರಹ: ‘ಆರೋಪಿ ಆದಿತ್ಯ, ಡ್ರಗ್ಸ್ ವ್ಯಸನಿ ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಇದೇ ಕಾರಣಕ್ಕೆ ನ್ಯಾಯಾಲಯದಿಂದ ಅನುಮತಿ ಪಡೆದು ಆತನ ತಲೆಕೂದಲು ಮಾದರಿಯನ್ನು ಗುರುವಾರ ಸಂಗ್ರಹಿಸಲಾಗಿದೆ. ಅದನ್ನು ಪರೀಕ್ಷೆಗಾಗಿ ಹೈದರಾಬಾದ್‌ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು’ ಎಂದು ಸಿಸಿಬಿ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT