ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video: ಬೆಂಗಳೂರಲ್ಲಿ ಬಿಷಪ್ ಕಾಟನ್ ಶಾಲೆ ಬಾಲಕಿಯರ ಬೀದಿ ಕಾಳಗ ವೈರಲ್

ಅಕ್ಷರ ಗಾತ್ರ

ಬೆಂಗಳೂರು: ನಗರದ ಬಿಷಪ್‌ ಕಾಟನ್‌ ಬಾಲಕಿಯರ ಶಾಲೆಯ ವಿದ್ಯಾರ್ಥಿನಿಯರು ಸೆಂಟ್‍ ಮಾರ್ಕ್ಸ್‌ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ಮಾರಾಮಾರಿ ನಡೆಸಿದ್ದಾರೆ.

ವಿದ್ಯಾರ್ಥಿನಿಯರು ಪರಸ್ಪರ ಹಲ್ಲೆ ಮಾಡಿ ಎಳೆದಾಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಸಮವಸ್ತ್ರ ಧರಿಸಿದ್ದ ‌ಸುಮಾರು 20 ವಿದ್ಯಾರ್ಥಿನಿಯರಿದ್ದ ಎರಡು ಗುಂಪುಗಳು ಕೈ–ಕೈಮಿಲಾಯಿಸಿ ಜಡೆ ಎಳೆದು ಹೊಡೆದಾಡಿದ್ದಾರೆ. ಇವರ ಜತೆ, ಸಮವಸ್ತ್ರದಲ್ಲಿ ಇಲ್ಲದ ವಿದ್ಯಾರ್ಥಿನಿಯರು ಸಹ ಸೇರಿಕೊಂಡಿದ್ದಾರೆ.

ಪರಸ್ಪರರ ಮೇಲೆ ಹಲ್ಲೆ ಮಾಡಲು ಬೇಸ್‌ಬಾಲ್‌ ಬ್ಯಾಟ್‌ ಅನ್ನು ಒಬ್ಬರಿಂದ ಇನ್ನೊಬ್ಬರಿಗೆ ನೀಡುವ ದೃಶ್ಯವೂ ಇದೆ. ವಿದ್ಯಾರ್ಥಿನಿಯೊಬ್ಬರು ಎಳೆದಾಡಿ ಮೆಟ್ಟಿಲುಗಳ ಕೆಳಗೆ ಎಳೆದುಕೊಂಡು ಹೋಗುತ್ತಿರುವುದು ವಿಡಿಯೊದಲ್ಲಿದೆ. ಕೆಲ ವಿದ್ಯಾರ್ಥಿಗಳು ಮಧ್ಯಪ್ರವೇಶಿಸಿ ಶಮನಗೊಳಿಸುವ ಪ್ರಯತ್ನ ಮಾಡಿದ್ದರೂ ವಿಫಲವಾಗಿದೆ. 9 ಮತ್ತು 10ನೇ ತರಗತಿಯ ವಿದ್ಯಾರ್ಥಿನಿಯರು ಶಾಲಾ ಅವಧಿ ಮುಗಿದ ನಂತರ ಹೊಡೆದಾಟಕ್ಕಿಳಿದಿದ್ದಾರೆ.

ಬಾಲಕಿಯರು ಕೈಯಲ್ಲಿ ಹಾಕಿ ಸ್ಟಿಕ್‌ಗಳನ್ನೂ ಕೂಡ ಹೊಡೆದಾಟಕ್ಕೆ ಬಳಸಿದ್ದಾರೆ. ಬೀದಿ ಬದಿ ಈ ಪರಿ ವಿದ್ಯಾರ್ಥಿನಿಯರು ಹೊಡೆದಾಡಿಕೊಂಡಿದ್ದಕ್ಕೆ ನೆಟ್ಟಿಗರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಮಾರಾಮಾರಿಗೆ ಖಚಿತ ಕಾರಣಗಳು ತಿಳಿದು ಬಂದಿಲ್ಲ. ಘಟನೆ ಬಗ್ಗೆ ಶಾಲೆಯಿಂದ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

ಆದರೆ, ವಿವಿಧ ರೀತಿಯ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ. ಯುವಕನೊಬ್ಬನ ಪ್ರೇಮದ ವಿಷಯದಲ್ಲಿ ಇಬ್ಬರು ವಿದ್ಯಾರ್ಥಿನಿಯರಲ್ಲಿ ಬೆಳೆದ ದ್ವೇಷವೇ ಈ ಘಟನೆಗೆ ಕಾರಣ ಎನ್ನುವ ಸುದ್ದಿಗಳು ಹರಿದಾಡಿವೆ. ಜಟಾಪಟಿಯಲ್ಲಿ ಕೆಲ ವಿದ್ಯಾರ್ಥಿಗಳು ಗಾಯಗೊಂಡಿದ್ದು, ಕೆಲವರ ಮೂಗಿನಲ್ಲಿ ರಕ್ತಸ್ರಾವವಾಗಿದೆ.

ವಿದ್ಯಾರ್ಥಿಗಳ ಜತೆ ಸಮಾಲೋಚನೆ: ಬಿಷಪ್‌ ಕಾಟನ್‌ ಬಾಲಕಿಯರ ಶಾಲೆಯ ಆಡಳಿತ ಮಂಡಳಿಯು ವಿದ್ಯಾರ್ಥಿನಿಯರ ಜತೆ ಬುಧವಾರ ಸಮಾಲೋಚನೆ ನಡೆಸಿದೆ.

ಜತೆಗೆ, ವಿದ್ಯಾರ್ಥಿನಿಯರ ಹಿತಾಸಕ್ತಿ ದೃಷ್ಟಿಯಿಂದ ಶಿಕ್ಷಣ ಹಕ್ಕುಗಳ ಕಾರ್ಯಪಡೆ ಸದಸ್ಯರು ಮತ್ತು ಪೊಲೀಸ್‌ ಅಧಿಕಾರಿಗಳು ವಿದ್ಯಾರ್ಥಿನಿಯರು ಮತ್ತು ಪೋಷಕರ ಜತೆ ಮಾತುಕತೆ ನಡೆಸಿದರು.

‘ವಿದ್ಯಾರ್ಥಿನಿಯರಿಗೆ ಮತ್ತು ಪೋಷಕರ ಜತೆ ಸಮಾಲೋಚನೆ ನಡೆಸಿ ತಿಳಿವಳಿಕೆ ನೀಡಲಾಗಿದೆ. ಬಾಲ ನ್ಯಾಯ ಕಾಯ್ದೆ ಬಗ್ಗೆಯೂ ಮಾಹಿತಿ ನೀಡಲಾಗಿದೆ. ಈ ಕಾಯ್ದೆ ಅಡಿಯಲ್ಲಿ ಕ್ರಮಕೈಗೊಳ್ಳಲು ಅವಕಾಶ ಇದೆ ಎನ್ನುವ ಎಚ್ಚರಿಕೆ ನೀಡಲಾಗಿದೆ’ ಎಂದು ಕಾರ್ಯಪಡೆಯ ಸದಸ್ಯರಾದ ಸುಜಾತಾ ತಿಳಿಸಿದ್ದಾರೆ.

‘ಎರಡು ವರ್ಷಗಳ ಕೋವಿಡ್‌ನಿಂದಾಗಿ ವಿದ್ಯಾರ್ಥಿಗಳ ನಡವಳಿಕೆಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹೀಗಾಗಿ, ಪೋಷಕರು ಮಕ್ಕಳ ಬಗ್ಗೆ ನಿಗಾವಹಿಸಬೇಕು. ಮಕ್ಕಳನ್ನು ಸಹ ಸ್ನೇಹಿತರನ್ನಾಗಿ ಕಾಣಬೇಕು’ ಎಂದು ಸಲಹೆ ನೀಡಿದ್ದಾರೆ.

ಮಕ್ಕಳ ಹಕ್ಕುಗಳ ಕಾರ್ಯಕರ್ತ ನಾಗಸಿಂಗ ಜಿ ರಾವ್‌, ‘ಹದಿಹರೆಯದ ವಯಸ್ಸಿನಲ್ಲಿ ಇಂತಹ ಪ್ರಕರಣಗಳು ನಡೆಯುತ್ತವೆ. ಶಿಕ್ಷಕರು ಮತ್ತು ಪೋಷಕರು ವಿದ್ಯಾರ್ಥಿಗಳನ್ನು ಸೂಕ್ಷ್ಮವಾಗಿ ನಿಭಾಯಿಸಬೇಕು. ಹೀಗಾಗಿಯೇ ನಾವು, ಮಕ್ಕಳ ಹಕ್ಕುಗಳ ನೀತಿಯನ್ನು ಪ್ರತಿ ಶಾಲೆಯಲ್ಲಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದೇವೆ. ಜತೆಗೆ, ಪೊಕ್ಸೊ ಮತ್ತು ಬಾಲ ನ್ಯಾಯ ಕಾಯ್ದೆಯ ಬಗ್ಗೆಯೂ ಅರಿವು ಮೂಡಿಸಬೇಕಾಗಿದೆ’ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT