ಆರೋಪಿಗಳು ನಂದಿನಿ ಲೇಔಟ್ ಪೊಲೀಸ್ ಠಾಣೆಯ ರೌಡಿ ಪಟ್ಟಿಯಲ್ಲಿರುವ ನರೇಂದ್ರ ಅಲಿಯಾಸ್ ದಾಸ್ ಅವರ ಮನೆಗೆ ನುಗ್ಗಿ ಚಾಕುವಿನಿಂದ ಹಲ್ಲೆ ನಡೆಸಿದ್ದರು. ಈ ಸಂಬಂಧ ನರೇಂದ್ರ ದೂರು ದಾಖಲಿಸಿದ್ದರು.
‘ನರೇಂದ್ರ ಹಾಗೂ ಆರೋಪಿ ರಮೇಶ್ ಸ್ನೇಹಿತರು. ಆದರೆ, ಇಬ್ಬರ ಸಹಚರರ ಮಧ್ಯೆ ಹಳೇ ದ್ವೇಷವಿತ್ತು. ಎರಡೂ ಕಡೆಯವರು ಹಲವು ಬಾರಿ ಗಲಾಟೆ ಮಾಡಿಕೊಂಡಿದ್ದರು. ಸೆ.26ರ ರಾತ್ರಿ 11.15ರ ವೇಳೆ ಲಗ್ಗೆರೆಯ ಕಪಿಲಾನಗರದಲ್ಲಿರುವ ತನ್ನ ಮನೆಯಲ್ಲಿ ಸ್ಮೇಹಿತರಾದ ಭೈರ, ವಿಕ್ರಮ, ಶಿವು, ದರ್ಶನ್ ಮತ್ತಿತರರೊಂದಿಗೆ ನರೇಂದ್ರ ಮದ್ಯದ ಪಾರ್ಟಿ ಮಾಡುತ್ತಿದ್ದ. ಅದೇ ಸಂದರ್ಭದಲ್ಲಿ ಮನೆಗೆ ನುಗ್ಗಿದ್ದ ಆರೋಪಿಗಳು, ನರೇಂದ್ರ ಹಾಗೂ ಆತನ ಸ್ನೇಹಿತರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಹಲ್ಲೆಯಿಂದಾಗಿ ತೀವ್ರವಾಗಿ ಗಾಯಗೊಂಡಿರುವ ನರೇಂದ್ರ ಹಾಗೂ ಆತನ ಸ್ನೇಹಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಲಗ್ಗೆರೆ ಹಳೇ ಬಸ್ ನಿಲ್ದಾಣ ಬಳಿ ಆರು ಮಂದಿಯನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಯಿತು. ಹಳೆ ವೈಷಮ್ಯದಿಂದ ಹಲ್ಲೆ ನಡೆಸಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ’ ಎಂದು ಹೇಳಿದರು.