ಮಂಗಳವಾರ, ಆಗಸ್ಟ್ 9, 2022
20 °C
‘ಸಂಡೆ ವಾಕರ್ಸ್‌’ ವಾಟ್ಸ್‌ಆ್ಯಪ್‌ ಗುಂಪಿನ ಸದಸ್ಯರ ಮಾದರಿ ಕಾರ್ಯ

ನೊಂದವರಿಗೆ ನೆರವಾಗುವ ಹಿರಿಯ ಜೀವಗಳು

ಜಿ.ಶಿವಕುಮಾರ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಅವರೆಲ್ಲಾ 60–65 ವರ್ಷಗಳ ಆಸುಪಾಸಿನವರು. ಆರ್‌.ವಿ ಹಾಗೂ ಬಿ.ಎಂ.ಎಸ್‌. ಕಾಲೇಜುಗಳಲ್ಲಿ 1981ರಲ್ಲಿ ಎಂಜಿನಿಯರಿಂಗ್‌ ಪದವಿ ಪೂರೈಸಿದವರು. ಬಳಿಕ ಬಹುತೇಕರು ಸರ್ಕಾರಿ ಕೆಲಸಕ್ಕೆ ಸೇರಿದರೆ, ಕೆಲವರು ಸ್ವಂತ ಉದ್ದಿಮೆಗಳಲ್ಲಿ ತೊಡಗಿಕೊಂಡರು. ಕೆಲಸದ ಕಾರಣ ಅನಿವಾರ್ಯವಾಗಿ ದೂರವಾಗಿದ್ದ ಈ ಗೆಳೆಯರು ನಿವೃತ್ತಿಯ ನಂತರ ಮತ್ತೆ ಹತ್ತಿರವಾಗಿದ್ದಾರೆ. ‘ಸಂಡೆ ವಾಕರ್ಸ್‌’ ಎಂಬ ವಾಟ್ಸ್‌ಆ್ಯಪ್‌ ಗುಂಪು ರಚಿಸಿಕೊಂಡು ನೊಂದವರ ನೋವಿಗೆ ಮಿಡಿಯುತ್ತಿದ್ದಾರೆ.

ವಾಟ್ಸ್‌ಆ್ಯಪ್‌ ಗುಂಪೊಂದರ ಮೂಲಕ ಮಾನವೀಯ ಕಾರ್ಯಗಳನ್ನೂ ಮಾಡಬಹುದು ಎಂಬುದಕ್ಕೆ ‘ಸಂಡೆ ವಾಕರ್ಸ್‌’ ನಿದರ್ಶನ. ನಾಗರಾಜ್‌ ಹಾಗೂ ಜ್ವಾಲೇಂದ್ರ ಕುಮಾರ್‌ ಅವರು ಏಳು ವರ್ಷಗಳ ಹಿಂದೆ ಶುರುಮಾಡಿದ್ದ ಈ ಗುಂಪಿನಲ್ಲಿ ಸದ್ಯ 32 ಸದಸ್ಯರಿದ್ದಾರೆ. ಈ ಗುಂಪಿನ ಮೂಲಕ ಸಂಕಷ್ಟದಲ್ಲಿರುವವರಿಗೆ ಈವರೆಗೂ ₹10 ಲಕ್ಷಕ್ಕೂ ಅಧಿಕ ನೆರವು ನೀಡಲಾಗಿದೆ.

‘ನಾವೆಲ್ಲಾ ಸಹಪಾಠಿಗಳು. ನಿವೃತ್ತಿಯ ನಂತರ ವಾಯುವಿಹಾರಕ್ಕಾಗಿ ಪ್ರತಿ ಭಾನುವಾರ ಮುಂಜಾನೆ ಲಾಲ್‌ಬಾಗ್‌ನಲ್ಲಿ ಸೇರುತ್ತಿದ್ದೆವು. ಅಲ್ಲೇ ಉಪಹಾರ ಮುಗಿಸಿ ಕೆಲ ಹೊತ್ತು ಹರಟುತ್ತಿದ್ದೆವು. ಸಂಕಷ್ಟದಲ್ಲಿರುವವರಿಗೆ ನೆರವು ನೀಡುವ ಬಗ್ಗೆಯೂ ಚರ್ಚಿಸುತ್ತಿದ್ದೆವು. ಅದಕ್ಕಾಗಿಯೇ ‘ಸಂಡೆ ವಾಕರ್ಸ್‌’ ಗುಂಪು ರಚಿಸಿಕೊಂಡೆವು. ಪ್ರತಿ ವಾರ ಗುಂಪಿನ ಸದಸ್ಯರಿಂದ ತಲಾ ₹500 ಮೊತ್ತ ಕಲೆಹಾಕುತ್ತೇವೆ. ಹಾಗೆ ಸಂಗ್ರಹಿಸಿದ ಹಣವನ್ನು ಕಷ್ಟದಲ್ಲಿರುವವರಿಗೆ ನೀಡುತ್ತಿದ್ದೇವೆ’ ಎಂದು ಗುಂಪಿನ ಸದಸ್ಯ ಚಂದ್ರಶೇಖರ್‌ ವೀರಪ್ಪ ತಿಳಿಸಿದರು.

‘ಕೊಡಗಿನಲ್ಲಿ ಪ್ರವಾಹ ಸಂಭವಿಸಿದ ಸಂದರ್ಭದಲ್ಲಿ ಗುಂಪಿನ ಸದಸ್ಯರಿಂದ ₹1 ಲಕ್ಷ ಹಣ ಸಂಗ್ರಹಿಸಲಾಗಿತ್ತು. ಅದನ್ನು ತೀರಾ ಕಷ್ಟದಲ್ಲಿರುವ ಹತ್ತು ಕುಟುಂಬಗಳಿಗೆ ನಾವೇ ಹಂಚಿದ್ದೆವು. ನೇಪಾಳದಲ್ಲಿ ಭೂಕಂಪ ಸಂಭವಿಸಿದ ಸಂದರ್ಭದಲ್ಲಿ ₹50 ಸಾವಿರ ದೇಣಿಗೆ ನೀಡಿದ್ದೆವು. ಕೋವಿಡ್‌ ಸಮಯದಲ್ಲಿ ಪಿಎಂ ಕೇರ್ಸ್‌ಗೆ ದೇಣಿಗೆ ನೀಡಬೇಕೆಂಬ ಆಲೋಚನೆ ಇತ್ತು. ಅದ್ಯಾಕೊ ಸರಿ ಎನಿಸಲಿಲ್ಲ. ಹೀಗಾಗಿ ನಾವೇ ಕಷ್ಟದಲ್ಲಿರುವವರನ್ನು ಗುರುತಿಸಿ ಹಣ ತಲುಪಿಸುವ ಕೆಲಸ ಮಾಡಿದೆವು’ ಎಂದರು.

‘ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡು ಅನಾಥವಾದ ಮಕ್ಕಳ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಸರಣಿ ವರದಿಗಳು ಪ್ರಕಟವಾಗಿದ್ದನ್ನು ಗಮನಿಸಿದೆವು. ಆ ವರದಿಗಳನ್ನು ಓದಿ ಮನಸ್ಸು ಭಾರವಾಯಿತು. ಈ ಪೈಕಿ ಒಂದು ಮಗುವಿನ ಕಥೆ ಕರುಣಾಜನಕವಾಗಿತ್ತು. ಆ ವರದಿಯ ಫೋಟೊ ತೆಗೆದು ಗುಂಪಿನಲ್ಲಿ ಹಾಕಿದೆ. ಅದನ್ನು ನೋಡಿದ ಕೂಡಲೇ ಎಲ್ಲರೂ ಸಹಾಯ ಮಾಡಲು ಮುಂದಾದರು. ಹಾಗೆ ಕಲೆಹಾಕಿದ ₹50 ಸಾವಿರ ಮೊತ್ತವನ್ನು ಆ ಮಗುವಿನ ಬ್ಯಾಂಕ್‌ ಖಾತೆಗೆ ಜಮೆ ಮಾಡಿದೆವು. ಮತ್ತೊಂದು ಮಗುವಿಗೆ ₹25 ಸಾವಿರ ನೀಡಿದ್ದೇವೆ. ಇನ್ನೂ ₹25 ಸಾವಿರ ಉಳಿದಿದೆ. ಅದನ್ನು ಇನ್ನೊಂದು ಮಗುವಿಗೆ ಕೊಡಲು ನಿರ್ಧರಿಸಿದ್ದೇವೆ’ ಎಂದು ಹೇಳಿದರು.

‘ದೇವರು ನಮಗೆ ಬೇಕಾದಷ್ಟು ಕೊಟ್ಟಿದ್ದಾನೆ. ಅದರಲ್ಲಿ ಒಂದಷ್ಟು ಭಾಗವನ್ನು ನೊಂದವರಿಗೆ ನೀಡಿದರೆ ಅವರ ಬದುಕಿನಲ್ಲೂ ಹೊಸ ಬೆಳಕು ಮೂಡಬಹುದು ಎಂಬುದು ನಮ್ಮೆಲ್ಲರ ಉದ್ದೇಶ. ಹೀಗಾಗಿ ಈ ಕೆಲಸ ಮಾಡುತ್ತಿದ್ದೇವೆ. ಗಿಡ ನೆಟ್ಟು ಬೆಳೆಸುವುದು, ಕೆರೆ ಹಾಗೂ ನದಿ ದಂಡೆ ಸ್ವಚ್ಛಗೊಳಿಸುವ ಕೆಲಸಗಳಲ್ಲೂ ತೊಡಗಿಕೊಳ್ಳಬೇಕು ಎಂದು ತೀರ್ಮಾನಿಸಿದ್ದೇವೆ. ಇದಕ್ಕಾಗಿ ಯೋಜನೆ ರೂಪಿಸುತ್ತಿದ್ದೇವೆ’ ಎಂದರು.

ನೆರವು ಬೇಕಿದ್ದವರು 9844142436ಗೆ ಸಂಪರ್ಕಿಸಬಹುದು.

***

ಇಲ್ಲಿ ಯಾರೂ ಶಾಶ್ವತವಲ್ಲ ಎಂಬ ಪಾಠವನ್ನು ಕೋವಿಡ್‌ ಕಲಿಸಿದೆ. ಇರುವಷ್ಟು ದಿನ ಕಷ್ಟದಲ್ಲಿ ಇರುವವರಿಗೆ ಕೈಲಾದಷ್ಟು ಸಹಾಯ ಮಾಡಬೇಕೆಂಬುದು ನಮ್ಮ ಧ್ಯೇಯ.

- ಚಂದ್ರಶೇಖರ್‌ ವೀರಪ್ಪ, ಸಂಡೆ ವಾಕರ್ಸ್‌ ಗುಂಪಿನ ಸದಸ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು