‘ಇನ್ನೋವೇಟಿವ್‌ ಕರ್ನಾಟಕ’: ಟೆಕ್‌ ಮೇಳಕ್ಕೆ ಸಿದ್ಧತೆ

7

‘ಇನ್ನೋವೇಟಿವ್‌ ಕರ್ನಾಟಕ’: ಟೆಕ್‌ ಮೇಳಕ್ಕೆ ಸಿದ್ಧತೆ

Published:
Updated:

ಬೆಂಗಳೂರು: ನಗರದ ಅರಮನೆಯಲ್ಲಿ ನವೆಂಬರ್‌ 29ರಿಂದ ಡಿ. 1ರವರೆಗೆ ಬೆಂಗಳೂರು ಟೆಕ್‌ ಸಮ್ಮಿಟ್‌ನ 21ನೇ ಆವೃತ್ತಿ ನಡೆಯಲಿದೆ. 

ದೇಶ ವಿದೇಶಗಳ ನವೋದ್ಯಮ, ಮಾಹಿತಿ ತಂತ್ರಜ್ಞಾನ, ಕೈಗಾರಿಕಾ ಕ್ಷೇತ್ರದ ದಿಗ್ಗಜ ಸಂಸ್ಥೆಗಳು ಭಾಗವಹಿಸಲಿವೆ. ರಾಜ್ಯ ಸರ್ಕಾರದ ‘ಇನ್ನೋವೇಟಿವ್‌ ಕರ್ನಾಟಕ’ದ ವತಿಯಿಂದ ಈ ಕಾರ್ಯಕ್ರಮ ನಡೆಯಲಿದೆ. 

ಏನೇನು ಇರಲಿದೆ? 
ಉದ್ಯಮ, ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಿಸಿ ಬಹುವಿಧದ ಸಮಾವೇಶಗಳು, ಉದ್ಯಮದಿಂದ ಉದ್ಯಮ ಸಂಬಂಧಿಸಿದ ಪ್ರದರ್ಶನ, ಐಟಿ ರಫ್ತು ಕ್ಷೇತ್ರ ಸಂಬಂಧಿಸಿ ಪ್ರಶಸ್ತಿ ಪ್ರದಾನ, ತಾಂತ್ರಿಕ ವಿಷಯಗಳ ವಿನಿಮಯ, ಜಾಗತಿಕ ಆವಿಷ್ಕಾರ ವಲಯ, ಹೊಸ ಉತ್ಪನ್ನಗಳ ಬಿಡುಗಡೆ, ನವೋದ್ಯಮ ಸಂಬಂಧಿಸಿದ ಮಾಹಿತಿ ಕಾರ್ಯಕ್ರಮ ನಡೆಯಲಿದೆ. 

‘ಸಮ್ಮೇಳನದಲ್ಲಿ ವಿವಿಧ ದೇಶಗಳ 250ಕ್ಕೂ ಹೆಚ್ಚು ಪರಿಣತರು, 3,500 ಪ್ರತಿನಿಧಿಗಳು, 300ಕ್ಕೂ ಹೆಚ್ಚು ಮಂದಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಲಿದ್ದಾರೆ.  ಸುಮಾರು 11 ಸಾವಿರಕ್ಕೂ ಅಧಿಕ ಜನ ಭೇಟಿ ನೀಡುವ ನಿರೀಕ್ಷೆ ಇದೆ’ ಎಂದು ವಾಣಿಜ್ಯ ಮತ್ತು ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್‌ ಗುಪ್ತಾ ವಿವರಿಸಿದರು.

ಹೊಸ ಉದ್ಯಮಗಳಿಗೆ ರಾಜ್ಯ ಸರ್ಕಾರದ ನೆರವು ಏನು? 
‘ಬೆಂಗಳೂರಿನಿಂದ ಹೊರಗೆ ಹೊಸ ಉದ್ದಿಮೆಗಳನ್ನು ತೆರೆಯಲು ಸಾಕಷ್ಟು ಅವಕಾಶ ಕಲ್ಪಿಸಲಾಗಿದೆ. ಪ್ರಸಕ್ತ ಬಜೆಟ್‌ನಲ್ಲಿ ಇಂಥ ಹಲವು ಕೊಡುಗೆಗಳನ್ನು ಗಮನಿಸಬಹುದು’ ಎಂದು ಕೈಗಾರಿಕೆ ಮತ್ತು ಐಟಿ, ಬಿಟಿ, ವಿಜ್ಞಾನ– ತಂತ್ರಜ್ಞಾನ ಇಲಾಖೆ ಸಚಿವ ಕೆ.ಜೆ. ಜಾರ್ಜ್‌ ಹೇಳಿದರು.

‘ಚಿಕ್ಕಬಳ್ಳಾಪುರದಲ್ಲಿ ಮೊಬೈಲ್‌ ಫೋನ್‌ ಬಿಡಿ ಬಾಗಗಳ ತಯಾರಿಕೆ ಘಟಕ, ಕ್ರೀಡಾ ಸಾಮಗ್ರಿ ಉತ್ಪಾದನೆಗೆ ₹ 2 ಸಾವಿರ ಕೋಟಿ ಮೀಸಲು, ತುಮಕೂರಿನಲ್ಲಿ ಕ್ರೀಡಾ ಸಾಮಗ್ರಿ ಉತ್ಪಾದನಾ ಘಟಕ, ಎಲೆಕ್ಟ್ರಿಕ್‌ ವಾಹನಗಳ ಬಳಕೆಗೆ ಪ್ರೋತ್ಸಾಹ, ಚಿತ್ರದುರ್ಗ ಜಿಲ್ಲೆಯಲ್ಲಿ ಎಲ್‌ಇಡಿ ಬಲ್ಬ್‌ ತಯಾರಿಕೆ, ಕೊಪ್ಪಳದಲ್ಲಿ ಆಟಿಕೆ ತಯಾರಿಕೆ ಘಟಕ, ಬಳ್ಳಾರಿಯಲ್ಲಿ ಉಡುಪು ತಯಾರಿಕಾ ಘಟಕ ಸ್ಥಾಪಿಸುವ ಪ್ರಸ್ತಾವವನ್ನು ಬಜೆಟ್‌ನಲ್ಲಿ ಮಾಡಲಾಗಿದೆ. ಹೂಡಿಕೆದಾರರು ಇಂಥ ಉತ್ಪಾದಕ ಕ್ಷೇತ್ರಗಳತ್ತಲೂ ಗಮನಹರಿಸಬೇಕು’ ಎಂದು ಜಾರ್ಜ್‌ ಅವರು ಟೆಕ್‌ ಸಮ್ಮಿಟ್‌ನ ಪೂರ್ವಭಾವಿ ಸಭೆಯಲ್ಲಿ ಸಲಹೆ ಮಾಡಿದರು.

‘ಬೆಂಗಳೂರು – ಮೈಸೂರು ಕಾರಿಡಾರ್‌ನಲ್ಲಿ 10 ಸಾವಿರ ಭೂಮಿ ಸ್ವಾಧೀನ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಕೇಂದ್ರ ಸರ್ಕಾರ ₹ 3 ಸಾವಿರ ಕೋಟಿ ಅನುದಾನ ನೀಡಲಿದೆ. ಆ ಮೊತ್ತದಲ್ಲಿ ಈ ಪ್ರದೇಶವನ್ನು ಅಭಿವೃದ್ಧಿಪಡಿಸಲಾಗುವುದು. ಇಲ್ಲಿ 400 ಎಕರೆ ಪ್ರದೇಶದಲ್ಲಿ ಜಪಾನ್‌ ಕಂಪೆನಿಯವರು ಟೌನ್‌ಷಿಪ್‌ ನಿರ್ಮಿಸಲಿದ್ದಾರೆ’ ಎಂದರು. 

 ಸಂಪರ್ಕ ಸಾಧ್ಯತೆ? 
ಕರ್ನಾಟಕದ ಬೇರೆಬೇರೆ ಭಾಗಗಳಲ್ಲಿ ಸಂಪರ್ಕ ಸಾಧ್ಯತೆ ಕಡಿಮೆಯಲ್ಲವೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಾರ್ಜ್‌, ‘ಸಂಪರ್ಕ ವ್ಯವಸ್ಥೆ ಕಷ್ಟವೇ ಅಲ್ಲ. ಕಲಬುರ್ಗಿಯಲ್ಲಿ ಸುಸಜ್ಜಿತ ವಿಮಾನ ನಿಲ್ದಾಣ ನಿರ್ಮಾಣ ಆಗುತ್ತಿದೆ. ಹಾಸನದಲ್ಲಿ ಏರ್‌ಸ್ಟ್ರಿಪ್ ನಿರ್ಮಿಸುತ್ತಿದ್ದೇವೆ. ಮೈಸೂರು ವಿಮಾನ ನಿಲ್ದಾಣದ ರನ್‌ವೇಯನ್ನು ವಿಸ್ತರಿಸುತ್ತಿದ್ದೇವೆ. ಹೀಗೆ ಸಂಪರ್ಕ ವ್ಯವಸ್ಥೆ ಸಾಕಷ್ಟು ಸುಧಾರಿಸುತ್ತಿದೆ. ಉದ್ಯಮ ಎಂದರೆ ಕೇವಲ ಮಾಹಿತಿ ತಂತ್ರಜ್ಞಾನ ಅಷ್ಟೇ ಅಲ್ಲ. ಇತರ ಉತ್ಪಾದನಾ ಕ್ಷೇತ್ರಗಳತ್ತಲೂ ಗಮನಹರಿಸಬೇಕು’ ಎಂದು ಜಾರ್ಜ್‌ ಸಲಹೆ ಮಾಡಿದರು.

ಎರಡನೇ ಹಂತದ ನಗರಗಳಲ್ಲಿ ಉದ್ದಿಮೆ ಸ್ಥಾಪಿಸಿ

ಹೂಡಿಕೆದಾರರು ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಉದ್ಯಮಗಳನ್ನು ಸ್ಥಾಪಿಸಲು ಮುಂದಾಗುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

ರಾಜ್ಯ ಸರ್ಕಾರವು ಎರಡು ಹಾಗೂ ಮೂರನೇ ಹಂತದ ನಗರಗಳಲ್ಲಿ ಉದ್ಯಮಗಳ ಸ್ಥಾಪನೆಯ ಮೂಲಕ ಗ್ರಾಮೀಣ ಯುವಕರಿಗೆ ಉದ್ಯೋಗ ಕಲ್ಪಿಸಲು ಉತ್ಸುಕವಾಗಿದೆ. ಆ ನಗರಗಳಲ್ಲಿ ಹೂಡಿಕೆ ಮಾಡುವ ಕಂಪನಿಗಳಿಗೆ ಎಲ್ಲ ರೀತಿಯ ನೆರವು ನೀಡಲು ಸಿದ್ಧವಿದೆ ಎಂದು ಹೇಳಿದರು. 

‘ಕೈಗಾರಿಕೆಗಳ ಸ್ಥಾಪನೆಗೆ ಇರುವ ತೊಡಕುಗಳನ್ನು ನಿವಾರಿಸಲು ಮುಖ್ಯಮಂತ್ರಿ ಕಚೇರಿಯಲ್ಲಿಯೇ ವಿಶೇಷ ಘಟಕ ಸ್ಥಾಪಿಸಲಾಗುವುದು’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !