ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಳಿಗೂ ಮುನ್ನವೇ ಸೈಬರ್‌ ಸುರಕ್ಷತೆ

ಗ್ರಾಹಕರ ಮಾಹಿತಿ ಸಂರಕ್ಷಣೆಗೆ ಆದ್ಯತೆ ನೀಡುತ್ತಿರುವ ಕಂಪನಿಗಳು
Last Updated 20 ನವೆಂಬರ್ 2019, 5:31 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಎಟಿಎಂ ಕಾರ್ಡ್‌, ಬ್ಯಾಂಕ್‌ ವಿವರ ಎಲ್ಲ ನಿಮ್ಮ ಬಳಿ ಇದೆ. ಆ ಮಾಹಿತಿ ಸುರಕ್ಷತೆಗೆ ಏನು ಕ್ರಮ ಕೈಗೊಂಡಿದ್ದೀರಿ? ನಿಮ್ಮಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇವೆ. ನಮ್ಮ ಆರೋಗ್ಯ ಮಾಹಿತಿ ಸೋರಿಕೆಯಾಗದಿರಲು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದೀರಾ? ಸೈಬರ್‌ ದಾಳಿ ನಡೆದರೆ ಕಂಪನಿಗೆ ಬಿಲಿಯನ್‌ ಡಾಲರ್‌ ಹಾನಿಯಾಗುತ್ತದೆ. ಇದನ್ನು ತಡೆಯುವ ಬಗ್ಗೆ ಯೋಚಿಸಿದ್ದೀರಾ ?

ಐಟಿ ಕಂಪನಿ, ಬ್ಯಾಂಕುಗಳು ಮತ್ತು ಆಸ್ಪತ್ರೆಗಳಿಗೆ ಗ್ರಾಹಕರು ಕೇಳುತ್ತಿರುವ ಪ್ರಶ್ನೆ ಇದು. ಎಲ್ಲ ಮಾಹಿತಿಯೂ ಕಂಪ್ಯೂಟರ್‌ನಲ್ಲಿ ದಾಖಲಾಗುತ್ತಿರುವ ಈ ಸಂದರ್ಭದಲ್ಲಿ ಸೈಬರ್‌ ದಾಳಿ ವಿರುದ್ಧ ಕೈಗೊಂಡಿರುವ ಕ್ರಮಗಳ ಕುರಿತು ಗ್ರಾಹಕರು ಕಂಪನಿಗಳನ್ನು ಪ್ರಶ್ನಿಸುತ್ತಿದ್ದಾರೆ. ಸೈಬರ್‌ ದಾಳಿ ವಿಶ್ವದಾದ್ಯಂತ ಎಲ್ಲ ದೇಶಗಳ ನಿದ್ದೆಗೆಡಿಸಿದೆ. ಇಂತಹ ದಾಳಿ ನಡೆಯುವ ಸೂಚನೆಯನ್ನು ಸಾಕಷ್ಟು ಮೊದಲೇ ನೀಡುವ ‘ಸೆಕೊನೈಝ್‌’ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲಾಗಿದೆ.

‘ಸೆಕೊನೈಝ್‌ ಸೈಬರ್‌ ದಾಳಿಯ ಮಾಹಿತಿ ನೀಡುವ ಮತ್ತು ಪರಿಹಾರ ಸೂಚಿಸುವ ವ್ಯವಸ್ಥೆಯಾಗಿದೆ. ಐಟಿ ಕಂಪನಿಗಳಿಗೆ ಅಥವಾ ಸರ್ವರ್‌ ಆಧಾರಿತ ವ್ಯವಸ್ಥೆಯಡಿ ಕೆಲಸ ಮಾಡುವ ಯಾವುದೇ ಕಂಪನಿಗೆ ಸೈಬರ್‌ ಭೀತಿ ಅಥವಾ ದಾಳಿಯ ಬಗ್ಗೆ ಸಾಕಷ್ಟು ಮೊದಲೇ ಸ್ವಯಂಚಾಲಿತವಾಗಿ ಸಮಸ್ಯೆಯನ್ನು ಪತ್ತೆ ಹಚ್ಚಲಾಗುತ್ತದೆ. ಅಲ್ಲದೆ, ಭವಿಷ್ಯದಲ್ಲಿ ಇಂತಹ ದಾಳಿಯಿಂದಾಗುವ ತೊಂದರೆಗಳ ಕುರಿತೂ ತಿಳಿಸಲಾಗುತ್ತದೆ’ ಎಂದು ಸೆಕೊನೈಝ್‌ ಕಂಪನಿಯ ಸಹ ಸ್ಥಾಪಕ ಶಶಾಂಕ್‌ ದರಾ ತಿಳಿಸಿದರು.

‘ಸೆಕೊನೈಝ್‌’ ವ್ಯವಸ್ಥೆಯಡಿ ಹಲವು ಸ್ಕ್ಯಾನರ್‌ಗಳನ್ನು ಅಳವಡಿಸಲಾಗಿರುತ್ತದೆ. ಈ ಪೈಕಿ ವಲ್ನರಬಿಲಿಟಿ ಸ್ಕ್ಯಾನರ್‌ಗಳನ್ನು ಅಳವಡಿಸಲಾಗಿದ್ದು, ಹಾನಿಯಾದ ಅಂಶ ಸ್ಕ್ಯಾನರ್‌ನಲ್ಲಿ ಪತ್ತೆಯಾಗುತ್ತದೆ. ಯಾರು ಹ್ಯಾಕ್‌ ಮಾಡಲು ಯತ್ನಿಸುತ್ತಿದ್ದಾರೆ ಎಂಬುದು ತಿಳಿಯುತ್ತದೆ. ಬ್ಯಾಂಕ್‌ಗೆ, ಐಟಿ ಕಂಪನಿಗೆ ಮತ್ತು ಪೊಲೀಸ್‌ ಇಲಾಖೆಗೆ ಬೇರೆ ರೀತಿಯ ವ್ಯವಸ್ಥೆಯನ್ನು ರೂಪಿಸಲಾಗಿರುತ್ತದೆ’ ಎಂದು ಅವರು ಹೇಳಿದರು.

‘ತಾಂತ್ರಿಕ ಶಿಕ್ಷಣ, ಆರೋಗ್ಯ, ಐಟಿ ಕಂಪನಿಗಳು ನಮ್ಮ ಗ್ರಾಹಕರ ಪಟ್ಟಿಯಲ್ಲಿವೆ. ಬೆಂಗಳೂರಿನಲ್ಲಿಯೂ ಕೆಲವು ಕಂಪನಿಗಳು ನಮ್ಮ ಗ್ರಾಹಕರಾಗಿದ್ದು, ಸುರಕ್ಷತೆಯ ದೃಷ್ಟಿಯಿಂದ ಅವರ ಹೆಸರು ಬಹಿರಂಗಪಡಿಸಲು ಆಗುವುದಿಲ್ಲ’ ಎಂದರು.

‘ಕಂಪನಿ ಹೊಂದಿರುವ ವೆಬ್‌ಸೈಟ್‌ ಅಥವಾ ಸರ್ವರ್‌ಗಳ ಆಧಾರದ ಮೇಲೆ ಶುಲ್ಕ ನಿಗದಿ ಮಾಡಲಾಗುತ್ತದೆ. ಎರಡು–ಮೂರು ಸರ್ವರ್‌ ಇದ್ದರೆ ತಿಂಗಳಿಗೆ ₹1.5 ಲಕ್ಷದಿಂದ ₹2 ಲಕ್ಷ ನೀಡಬೇಕಾಗುತ್ತದೆ’ ಎಂದು ಅವರು ಹೇಳಿದರು.

ಮಾಹಿತಿಗೆ: 98450–54920.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT