ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರ ವಿಭಾಗದ ಪೊಲೀಸರು ದುರ್ವರ್ತನೆ ತೋರಿದರೆ ಶಿಸ್ತು ಕ್ರಮ: ಎಚ್ಚರಿಕೆ

Last Updated 17 ಜುಲೈ 2021, 20:12 IST
ಅಕ್ಷರ ಗಾತ್ರ

ಬೆಂಗಳೂರು: ‘ಸಂಚಾರ ವಿಭಾಗದ ಪೊಲೀಸರು ಹಾಗೂ ಟೋಯಿಂಗ್ ವಾಹನಗಳ ಸಿಬ್ಬಂದಿ ಸಾರ್ವಜನಿಕರ ಜೊತೆ ತಾಳ್ಮೆಯಿಂದ ವರ್ತಿಸಬೇಕು. ದುರ್ವರ್ತನೆ ತೋರಿದ ಬಗ್ಗೆ ದೂರುಗಳು ಬಂದರೆ ಅಂಥ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು’ ಎಂದು ಸಂಚಾರ ವಿಭಾಗದ ಜಂಟಿ ಕಮಿಷನರ್ ಬಿ.ಆರ್. ರವಿಕಾಂತೇಗೌಡ ಎಚ್ಚರಿಕೆ ನೀಡಿದರು.

ಸಾಮಾಜಿಕ ಜಾಲತಾಣದಲ್ಲಿ ಶನಿವಾರ ನೇರಪ್ರಸಾರದಲ್ಲಿ ಅವರು ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.

‘ಚಿಕ್ಕಪೇಟೆ ಹಾಗೂ ಇತರೆ ಪ್ರದೇಶಗಳಲ್ಲಿ ಟೋಯಿಂಗ್ ಸಿಬ್ಬಂದಿ ಅನುಚಿತವಾಗಿ ವರ್ತಿಸುತ್ತಾರೆ. ಬಹುತೇಕ ಪೊಲೀಸರು ಸಹ ದುರ್ವರ್ತನೆ ತೋರುತ್ತಿದ್ದಾರೆ’ ಎಂದು ಸಾರ್ವಜನಿಕರು ದೂರಿದರು.

ರವಿಕಾಂತೇಗೌಡ, ‘ಸಾರ್ವಜನಿಕರ ಜೊತೆ ಹೇಗೆ ವರ್ತಿಸಬೇಕೆಂಬ ಬಗ್ಗೆ ಪ್ರತಿಯೊಬ್ಬ ಸಿಬ್ಬಂದಿಗೂ ತರಬೇತಿ ನೀಡಲಾಗುತ್ತಿದೆ. ಆಕಸ್ಮಾತ್ ಯಾರಾದರೂ ದುರ್ವರ್ತನೆ ತೋರಿದರೆ ಸಾರ್ವಜನಿಕರು ದೂರು ನೀಡಬಹುದು’ ಎಂದರು.

‘ರಸ್ತೆಗಳು ಹದಗೆಟ್ಟಿವೆ. ಕೆಲವೆಡೆ ಬೀದಿ ದೀಪಗಳಿಲ್ಲ. ಅಲ್ಲೆಲ್ಲ ಅಪಘಾತಗಳು ಹೆಚ್ಚುತ್ತಿವೆ. ಇದಕ್ಕೆ ಪರಿಹಾರ ಇಲ್ಲವೇ’ ಎಂಬ ಪ್ರಶ್ನೆಗೆ ಉತ್ತರಿಸಿದ ರವಿಕಾಂತೇಗೌಡ, ‘ರಸ್ತೆ ಸುರಕ್ಷತೆ ದೃಷ್ಟಿಯಿಂದ ಎಲ್ಲ ಕ್ರಮ ಕೈಗೊಳ್ಳಲಾಗಿದೆ. ಹದಗೆಟ್ಟ ರಸ್ತೆಗಳು ಹಾಗೂ ಬೀದಿದೀಪ ಅಳವಡಿಕೆ ಬಗ್ಗೆ ಬಿಬಿಎಂಪಿಗೆ ಮಾಹಿತಿ ನೀಡಲಾಗಿದೆ’ ಎಂದರು.

ಭಾರಿ ವಾಹನ ನಿರ್ಬಂಧ: ಸಂಚಾರ ದಟ್ಟಣೆ ಸಮಸ್ಯೆ ಬಗ್ಗೆ ಮಾತನಾಡಿದ ರವಿಕಾಂತೇಗೌಡ, ‘ಕೆಲ ರಸ್ತೆಗಳಲ್ಲಿ ಭಾರಿ ವಾಹನ ಓಡಾಟಕ್ಕೆ ಅನುಮತಿ ನೀಡಲಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ರಸ್ತೆಯಲ್ಲಿ ವಾಹನಗಳ ದಟ್ಟಣೆ ಉಂಟಾಗುತ್ತಿದೆ. ಅಂಥ ರಸ್ತೆಗಳಲ್ಲಿ ಭಾರಿ ವಾಹನಗಳ ಓಡಾಟ ನಿರ್ಬಂಧಿಸಲಾಗಿದೆ’ ಎಂದರು.

‍‍ಪಾದಚಾರಿ ಮಾರ್ಗದಲ್ಲಿ ಅಡ್ಡಿಪಡಿಸಿದರೆ ಕ್ರಮ: ‘ಪಾದಚಾರಿ ಹಾಗೂ ಸೈಕಲ್ ಮಾರ್ಗದಲ್ಲೇ ಕೆಲವರು ಅಂಗಡಿ ಇಟ್ಟುಕೊಳ್ಳುತ್ತಿದ್ದಾರೆ. ಸಾಮಗ್ರಿಗಳನ್ನು ಇಟ್ಟು ಸಾರ್ವಜನಿಕರ ಓಡಾಟಕ್ಕೆ ಅಡ್ಡಿಪಡಿಸುತ್ತಿದ್ದಾರೆ’ ಎಂದು ವ್ಯಕ್ತಿಯೊಬ್ಬರು ದೂರಿದರು. ‘ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗುತ್ತಿದೆ. ನಿಖರ ಸ್ಥಳದ ಮಾಹಿತಿ ನೀಡಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ರವಿಕಾಂತೇಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT