ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಪ್ರತಿ ಸಿಗ್ನಲ್‌ನಲ್ಲೂ ನಿಗಾ: ತಗ್ಗಿದ ದಟ್ಟಣೆ

ವಿಶೇಷ ಕಮಿಷನರ್‌ ಸಲೀಂ ಸೂಚನೆ l ದಟ್ಟಣೆ ಅವಧಿಯಲ್ಲಿ ಭಾರಿ ವಾಹನಗಳ ಸಂಚಾರ ನಿರ್ಬಂಧ
Last Updated 7 ಡಿಸೆಂಬರ್ 2022, 21:13 IST
ಅಕ್ಷರ ಗಾತ್ರ

ಬೆಂಗಳೂರು: ‘ಮೋಟಾರು ವಾಹನಗಳ ಕಾಯ್ದೆ ಜಾರಿಗೆ ತರುವುದರ ಜೊತೆಗೆ, ಸಾರ್ವಜನಿಕರ→ಸುಗಮ ಸಂಚಾರಕ್ಕೆ→ಹೆಚ್ಚಿನ ಒತ್ತು ನೀಡಬೇಕು’ ಎಂದು ವಿಶೇಷ ಕಮಿಷನರ್ (ಸಂಚಾರ) ಎಂ.ಎ. ಸಲೀಂ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಡಿಸಿಪಿ, ಎಸಿಪಿ, ಇನ್‌ಸ್ಪೆಕ್ಟರ್‌ಗಳು ರಸ್ತೆಗೆ ಇಳಿದು ಕೆಲಸ ಮಾಡುತ್ತಿದ್ದು, ನಗರದ ಹಲವು ಸಿಗ್ನಲ್‌ ಹಾಗೂ ಪ್ರಮುಖ ರಸ್ತೆಗಳಲ್ಲಿ ದಟ್ಟಣೆ ತಗ್ಗಿದೆ.

ನಗರದಲ್ಲಿ ಹೆಚ್ಚಿರುವ ದಟ್ಟಣೆ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ, ಬೆಂಗಳೂರಿನ ಸಂಚಾರ ವಿಭಾಗಕ್ಕೆ ವಿಶೇಷ ಕಮಿಷನರ್ ಆಗಿ ಎಂ.ಎ. ಸಲೀಂ ಅವರನ್ನು ನೇಮಿಸಿದೆ. ಅಧಿಕಾರ ವಹಿಸಿಕೊಂಡ ದಿನದಿಂದ ನಿತ್ಯವೂ ಬೆಳಿಗ್ಗೆ 8 ಗಂಟೆಯಿಂದ ನಗರ ಸುತ್ತುವ ಸಲೀಂ, ಪ್ರತಿಯೊಂದು ಸಿಗ್ನಲ್‌ಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.ಅತೀ ಹೆಚ್ಚು, ಹೆಚ್ಚು ದಟ್ಟಣೆ ಉಂಟಾಗುವ ಸ್ಥಳಗಳನ್ನು ಗುರುತಿಸಿ, ಅಂಥ ಸ್ಥಳಗಳ ಮೇಲೆ ನಿಗಾ ವಹಿಸುವಂತೆ ಪೊಲೀಸರಿಗೆ ಸೂಚನೆ ನೀಡುತ್ತಿದ್ದಾರೆ.

ಕೆಳ ಹಂತದ ಸಿಬ್ಬಂದಿ ಅಭಿಪ್ರಾಯಕ್ಕೆ ಆದ್ಯತೆ: ಕೇಂದ್ರ ವಾಣಿಜ್ಯ ಪ್ರದೇಶ (ಸಿಬಿಡಿ), ಹೊರವರ್ತುಲ ರಸ್ತೆಗಳಲ್ಲಿ ಬೆಳಿಗ್ಗೆ ಹಾಗೂ ಸಂಜೆ ದಟ್ಟಣೆ ಹೆಚ್ಚಿರು
ತ್ತದೆ. ಇಂಥ ಸ್ಥಳಗಳ ಸಿಗ್ನಲ್‌ಗಳಲ್ಲಿ ಕೆಲಸ ಮಾಡುವ ಕಾನ್‌ಸ್ಟೆಬಲ್ ಹಾಗೂ ಹೆಡ್‌ ಕಾನ್‌ಸ್ಟೆಬಲ್‌ ಅಭಿಪ್ರಾಯಗಳಿಗೆ ಆದ್ಯತೆ ನೀಡುತ್ತಿರುವ ಸಲೀಂ, ಆಯಾ ಸಿಗ್ನಲ್‌ಗಳಲ್ಲಿ ದಟ್ಟಣೆ ನಿಯಂತ್ರಿಸಲು ಕ್ರಮ ಕೈಗೊಳ್ಳುತ್ತಿದ್ದಾರೆ.

‘ಸಿಗ್ನಲ್‌ಗಳಲ್ಲಿರುವ ಸಮಸ್ಯೆ ಹೇಳಿದರೂ ಇನ್‌ಸ್ಪೆಕ್ಟರ್‌ಗಳು, ಎಸಿಪಿ ಹಾಗೂ ಡಿಸಿಪಿಗಳು ಸ್ಪಂದಿಸುತ್ತಿಲ್ಲ’ ಎಂಬುದಾಗಿ ಕೆಲ ಕಾನ್‌ಸ್ಟೆಬಲ್‌ಗಳು ದೂರಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಸಲೀಂ, ‘ಎಎಸ್‌ಐ, ಪಿಎಸ್‌ಐ ಹಾಗೂ ಇನ್‌ಸ್ಪೆಕ್ಟರ್‌ಗಳು ಬೆಳಿಗ್ಗೆ 8 ಗಂಟೆಯಿಂದ ತಮ್ಮ ವ್ಯಾಪ್ತಿಯ ಸಿಗ್ನಲ್‌ಗಳಲ್ಲಿ ಕೆಲಸ ಮಾಡಬೇಕು. ಎಸಿಪಿಹಾಗೂ ಡಿಸಿಪಿ ಉಸ್ತುವಾರಿ ವಹಿಸಿ
ಕೊಳ್ಳಬೇಕು’ ಎಂದು ಸೂಚಿಸಿದ್ದಾರೆ.

‘ಯಾವುದಾದರೂ ಸಿಗ್ನಲ್‌ನಲ್ಲಿ ಲೋಪವಾದರೆ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ’ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಹೀಗಾಗಿ, ಹಿರಿಯ ಅಧಿಕಾರಿಗಳು ಬೆಳಿಗ್ಗೆ
ಯೇ ಸಿಗ್ನಲ್‌ಗಳಲ್ಲಿ ಹಾಜರಾಗುತ್ತಿದ್ದಾರೆ. ವಾಹನಗಳು ತ್ವರಿತವಾಗಿ ಸಿಗ್ನಲ್‌ ದಾಟಿ ಹೋಗಲು ಅನುಕೂಲ ಕಲ್ಪಿಸುತ್ತಿದ್ದಾರೆ.

‘ಇಷ್ಟುದಿನ ಸಿಗ್ನಲ್‌ಗಳನ್ನೇ ನೋಡದಕೆಲ ಪಿಎಸ್‌ಐ, ಇನ್‌ಸ್ಪೆಕ್ಟರ್ ಹಾಗೂ ಎಸಿಪಿಗಳು, ಶಿಸ್ತುಕ್ರಮದ ಭಯದಲ್ಲಿ ರಸ್ತೆಗೆ ಇಳಿದು ಕೆಲಸ ಮಾಡುತ್ತಿದ್ದಾರೆ. ಮೊದಲಿಗಿಂತಲೂ ದಟ್ಟಣೆ ಸ್ವಲ್ಪ ಕಡಿಮೆಯಾಗಿದೆ’ ಎಂದು ಸಂಚಾರ ಕಾನ್‌ಸ್ಟೆಬಲ್‌ ಒಬ್ಬರು ಹೇಳಿದರು.

ಭಾರಿ ವಾಹನಗಳ ನಿರ್ಬಂಧ: ಭಾರಿವಾಹನಗಳ ಸಂಚಾರವನ್ನು ನಗರದಲ್ಲಿ
ನಿಗದಿತ ಸಮಯದಲ್ಲಿ ನಿರ್ಬಂಧಿಸಲಾಗಿತ್ತು. ಆದರೆ, ಆದೇಶ ಪಾಲನೆಯಾಗದೇ ವಾಹನಗಳು ನಗರದೊಳಗೆ ಬರುತ್ತಿದ್ದವು. ಇದರಿಂದ ಅಪಘಾತ ಹಾಗೂ ದಟ್ಟಣೆ ಸಮಸ್ಯೆ ಹೆಚ್ಚಾಗಿತ್ತು.

ಸಲೀಂ ಅವರು ಅಧಿಕಾರ ವಹಿಸಿಕೊಳ್ಳುತ್ತಿದ್ದಂತೆ, ಭಾರಿ ವಾಹನಗಳ ಸಂಚಾರ ನಿರ್ಬಂಧ ಆದೇಶ ಜಾರಿಗೆ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಇದು ಮಲ್ಟಿ ಆಕ್ಸಲ್, ಆರ್ಟಿಕ್ಯುಲೇಟೆಡ್, ಟ್ರಕ್‌, ಲಾರಿಗಳು ನಾಲ್ಕು ಚಕ್ರ ಹಾಗೂ ಮೂರು ಚಕ್ರ ಗೂಡ್ಸ್ ವಾಹನಗಳಿಗೆ ಅನ್ವಯವಾಗಲಿದೆ. ನಿಗದಿತ ಸಮಯದಲ್ಲಿ ಭಾರಿ ವಾಹನಗಳನ್ನು ನಗರದ ಹೊರಗೆಯೇ ಪೊಲೀಸರು ತಡೆದು ನಿಲ್ಲಿಸುತ್ತಿದ್ದು, ಇದರಿಂದ ದಟ್ಟಣೆ ಕಡಿಮೆಯಾಗಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

ದಂಡ ವಸೂಲಿಗಿಂತ ಸುಗಮ ಸಂಚಾರ ಮುಖ್ಯ: ‘ಜನರು ಬೆಳಿಗ್ಗೆ ಮನೆಯಿಂದ ಕೆಲಸಕ್ಕೆ ಹೋಗಿ, ಸಂಜೆ ವಾಪಸ್ ಮನೆಗೆ ಬರುತ್ತಾರೆ. ಅವರ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವುದು ಪೊಲೀಸರ ಕರ್ತವ್ಯ. ಹೀಗಾಗಿ, ಸುಗಮ ಸಂಚಾರಕ್ಕೆ ಹೆಚ್ಚಿನ ಒತ್ತು ನೀಡಿ’ ಎಂದು ಸಲೀಂ ಅವರು ಪೊಲೀಸರಿಗೆ ಸೂಚನೆ ನೀಡಿದ್ದಾರೆ.

ಪ್ರತಿ ಠಾಣೆ ವ್ಯಾಪ್ತಿಯಲ್ಲಿ ಇಬ್ಬರು ಎಎಸ್‌ಐ ನೇತೃತ್ವದ ತಂಡಗಳು, ನಿತ್ಯವೂ ದಂಡ ವಸೂಲಿಗಾಗಿ ರಸ್ತೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದವು. ಆದರೆ, ಇದೀಗ ಬೆಳಿಗ್ಗೆ ಹಾಗೂ ಸಂಜೆ ದಂಡ ವಸೂಲಿಯೇ ಬಂದ್ ಆಗಿದೆ. ಅತೀ ದಟ್ಟಣೆ ಇರುವ ಅವಧಿಯಲ್ಲಿ ಸುಗಮ ಸಂಚಾರ ಕರ್ತವ್ಯಕ್ಕಾಗಿ ಎಲ್ಲ ಪೊಲೀಸರನ್ನು ಬಳಸಿಕೊಳ್ಳಲಾಗುತ್ತಿದೆ. ಅವಶ್ಯಕತೆ ಇರುವ ಕಡೆಗಳಲ್ಲಿ ಮಾತ್ರ ದಂಡ ವಸೂಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಕಾಮಗಾರಿಯಿಂದ ದಟ್ಟಣೆ: ನಗರದ ಹಲವು ಸ್ಥಳಗಳಲ್ಲಿ ಕಾಮಗಾರಿ ನಡೆಯುತ್ತಿದ್ದು, ಇದರಿಂದಾಗಿ ದಟ್ಟಣೆ ಉಂಟಾಗುತ್ತಿದೆ. ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆಯೂ ಬಿಬಿಎಂಪಿ ಅಧಿಕಾರಿಗಳಿಗೆ ಸಲೀಂ ಪತ್ರ ಬರೆದಿದ್ದಾರೆ.

ಹೆಬ್ಬಾಳ ದಟ್ಟಣೆಗೂ ಪರಿಹಾರ: ಬಳ್ಳಾರಿ ರಸ್ತೆಯ ಹೆಬ್ಬಾಳ ಬಳಿ ಉಂಟಾಗುವ ದಟ್ಟಣೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಂಚಾರ ಪೊಲೀಸರು ಹಲವು ಬಾರಿ ಸಭೆ ನಡೆಸಿದ್ದಾರೆ. ತಾತ್ಕಾಲಿಕ ಕ್ರಮ ಕೈಗೊಂಡರೂ ದಟ್ಟಣೆ ನಿಯಂತ್ರಣಕ್ಕೆ ಬರುತ್ತಿಲ್ಲ. ಹೀಗಾಗಿ, ಸಲೀಂ ಅವರು ತಜ್ಞರ ಜೊತೆ ಚರ್ಚಿಸಿ ಹೊಸದೊಂದು ಯೋಜನೆ ರೂಪಿಸಲು ಸಿದ್ಧತೆ ನಡೆಸುತ್ತಿದ್ದಾರೆ.

----

‘ಪೊಲೀಸರು ರಸ್ತೆಯಲ್ಲಿದ್ದರೆ ದಟ್ಟಣೆ ನಿಯಂತ್ರಣ’

‘ಜನರ ಸುಗಮ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವುದು ಪೊಲೀಸರ ಕರ್ತವ್ಯ. ಪ್ರಮುಖ ರಸ್ತೆ ಹಾಗೂ ಸಿಗ್ನಲ್‌ಗಳಲ್ಲಿ ಪೊಲೀಸರು ಕರ್ತವ್ಯ ನಿರ್ವಹಿಸಿದರೆ ದಟ್ಟಣೆ ನಿಯಂತ್ರಣ ಮಾಡಬಹುದು. ಯಾವುದಾದರೂ ವಾಹನ ರಸ್ತೆ ಮಧ್ಯೆಯೇ ಕೆಟ್ಟು ನಿಂತರೆ, ತ್ವರಿತವಾಗಿ ತೆರವು ಮಾಡಿ ಇತರೆ ವಾಹನಗಳ ಸಂಚಾರಕ್ಕೆ ಅನುಕೂಲ ಕಲ್ಪಿಸಬಹುದು’ ಎಂದು ಎಂ.ಎ. ಸಲೀಂ ಹೇಳಿದರು.

ದಟ್ಟಣೆ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳ ಬಗ್ಗೆ ‘ಪ್ರಜಾವಾಣಿ’ ಜೊತೆ ಮಾತನಾಡಿದ ಸಲೀಂ, ‘ಸುಗಮ ಸಂಚಾರಕ್ಕೆ ಅಗತ್ಯವಿರುವ ಎಲ್ಲ ನಿಯಮಗಳು ನಮ್ಮಲ್ಲಿವೆ. ಆದರೆ, ಅವು ಜಾರಿಯಾಗುತ್ತಿರಲಿಲ್ಲ. ಜವಾಬ್ದಾರಿ ಅರಿತು ಕೆಲಸ ಮಾಡುವಂತೆ ಪೊಲೀಸರಿಗೆ ಹೇಳಿದ್ದೇನೆ’ ಎಂದರು.

ಸಂಚಾರ ನಿಯಮ: 50 ಸಿಗ್ನಲ್‌ಗಳಲ್ಲಿ ಎಎನ್‌ಪಿಆರ್ ಕ್ಯಾಮೆರಾ

ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸುವವರನ್ನು ಫೋಟೊ ಸಮೇತ ಪತ್ತೆ ಹಚ್ಚಿ ದಂಡ ವಿಧಿಸಲು ನಗರದ 50 ಜಂಕ್ಷನ್‌ಗಳಲ್ಲಿ 250 ಎಎನ್‌ಪಿಆರ್ (ಸ್ವಯಂಪ್ರೇರಿತ ವಾಹನಗಳ ನೋಂದಣಿ ಸಂಖ್ಯೆ ಗುರುತಿಸುವ) ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದ್ದು, ಈ ಕ್ಯಾಮೆರಾಗಳು ಸದ್ಯದಲ್ಲೇ ಕಾರ್ಯಾಚರಣೆ ಆರಂಭಿಸಲಿವೆ.

ಈ ಬಗ್ಗೆ ಟ್ವೀಟ್ ಮಾಡಿರುವ ನಗರ ಪೊಲೀಸ್ ಕಮಿಷನರ್ ಪ್ರತಾಪ್ ರೆಡ್ಡಿ, ‘ಸಂಚಾರ ಸಿಗ್ನಲ್‌
ಗಳಲ್ಲಿ ಕ್ಯಾಮೆರಾ ಕಣ್ಣಿರಲಿದೆ. ನಿಯಮ ಉಲ್ಲಂಘಿಸುವವರ ಫೋಟೊ ಕ್ಯಾಮೆರಾದಲ್ಲಿ ಸೆರೆಯಾಗಿ, ಸಂಚಾರ ನಿಯಂತ್ರಣ ಕೊಠಡಿಗೆ ಮಾಹಿತಿ ಬರಲಿದೆ. ನಂತರ, ಸಂಬಂಧಪಟ್ಟ ವಾಹನಗಳ ಮಾಲೀಕರ ಮೊಬೈಲ್‌ಗೆ ದಂಡದ ನೋಟಿಸ್ ಸಂದೇಶ ಹೋಗಲಿದೆ’ ಎಂದಿದ್ದಾರೆ.

‘ಸಂಪರ್ಕ ರಹಿತವಾಗಿ ಉಲ್ಲಂಘನೆ ಪತ್ತೆ ಮಾಡಲು ಈ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ, ದಂಡ ಸಂಗ್ರಹಿಸುವ ಉದ್ದೇಶ ನಮ್ಮದಲ್ಲ. ಸಾರ್ವಜನಿಕರು, ನಿಯಮ ಉಲ್ಲಂಘಿಸದೇ ಎಚ್ಚರಿಕೆಯಿಂದ ಸಂಚರಿಸಬೇಕು’ ಎಂದು ತಿಳಿಸಿದ್ದಾರೆ.

ಯಾವೆಲ್ಲ ಉಲ್ಲಂಘನೆ ಕ್ಯಾಮೆರಾದಲ್ಲಿ ಸೆರೆ: ಅತೀ ವೇಗ, ಸಿಗ್ನಲ್ ಜಂಪ್, ಜಿಬ್ರಾ ಕ್ರಾಸಿಂಗ್, ಹೆಲ್ಮೆಟ್ ರಹಿತ ಬೈಕ್ ಚಾಲನೆ, ತ್ರಿಬಲ್ ರೈಡಿಂಗ್, ಚಾಲನೆ ವೇಳೆ ಮೊಬೈಲ್ ಬಳಕೆ, ಸೀಟ್ ಬೆಲ್ಟ್ ಧರಿಸದಿರುವುದು ಸೇರಿದಂತೆ ಹಲವು ಉಲ್ಲಂಘನೆಗಳು ಕ್ಯಾಮೆರಾದಲ್ಲಿ ಸೆರೆಯಾಗುವ ವ್ಯವಸ್ಥೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT