ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವುದೇ ಸಮುದಾಯ ಕಾನೂನಿಗೆ ಅತೀತವಲ್ಲ, ಪುಂಡರಿಗೆ ಶಿಕ್ಷೆ ಆಗಲಿ: ಎಚ್‌ಡಿಕೆ

Last Updated 12 ಆಗಸ್ಟ್ 2020, 12:02 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮಂಗಳವಾರ ರಾತ್ರಿ ನಡೆದ ಗಲಭೆಯನ್ನು ಜೆಡಿಎಸ್‌ ಮುಖಂಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಖಂಡಿಸಿದ್ದು, 'ಧರ್ಮದ ಹೆಸರಲ್ಲಿ ಯಾರೇ ಗೂಂಡಾಗಿರಿ, ಕಾನೂನು ಕೈಗೆತ್ತಿಕೊಂಡರೂ ಅಂಥವರನ್ನು ಮುಲಾಜಿಲ್ಲದೆ ಮಟ್ಟಹಾಕಬೇಕು' ಎಂದು ಆಗ್ರಹಿಸಿದ್ದಾರೆ.

'ಧರ್ಮದ ಹೆಸರಿನಲ್ಲಿ ಪುಂಡಾಟಿಕೆ ನಡೆಸುವ ಮೂಲಕ ಸಂವಿಧಾನದ ಮೇಲೆ ಸವಾರಿ ಮಾಡುವ ಇಂತಹ ಘಟನೆಗಳಿಂದ ಸಾರ್ವತ್ರಿಕ ತಿರಸ್ಕಾರಕ್ಕೆ ಮತ್ತು ಅವಗಣನೆಗೆ ಸಮುದಾಯವೊಂದು ಪದೇಪದೇ ಗುರಿಯಾಗುತ್ತಿರುವುದು ಸ್ವಯಂಕೃತ ಅಪರಾಧವಲ್ಲದೆ ಬೇರೇನಿಲ್ಲ' ಎಂದು ಬುಧವಾರ ಕುಮಾರಸ್ವಾಮಿ ಟ್ವೀಟಿಸಿದ್ದಾರೆ.

ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆ ಹಾಗೂ ಪೊಲೀಸ್‌ ಠಾಣೆಗಳ ಮೇಲೆ ಕಿಡಿಗೇಡಿಗಳು ಮಂಗಳವಾರ ರಾತ್ರಿ ಬೆಂಕಿ ಹಚ್ಚಿ ದಾಂಧಲೆ ನಡೆಸಿದ್ದರು. ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು, ಗಲಭೆ ಸ್ಥಳಗಳಲ್ಲಿ ಕರ್ಫ್ಯೂ ಜಾರಿಯಾಗಿದೆ.

ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು ಎಂದಿರುವ ಕುಮಾರಸ್ವಾಮಿ ಸರಣಿ ಟ್ವೀಟ್‌ಗಳ ಮೂಲಕ ಗಲಭೆ ನಡೆಸಿದವರ ವಿರುದ್ಧ ಕಿಡಿಕಾರಿದ್ದಾರೆ. 'ಯಾವುದೇ ಧರ್ಮದ ಸಮುದಾಯ ಕಾನೂನಿಗೆ ಅತೀತರಲ್ಲ. ನೆಲದ ಕಾನೂನನ್ನು ಗೌರವಿಸದ ಯಾರೊಬ್ಬರೂ ಶಿಕ್ಷೆಗೆ ಅರ್ಹರು. ಸರ್ಕಾರ ಪುಂಡಾಟ ನಡೆಸಿದವರ ವಿರುದ್ಧ ಕಠಿಣ ಕ್ರಮ‌ಕೈಗೊಳ್ಳಬೇಕು. ಮುಂದೆಂದೂ ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು' ಎಂದಿದ್ದಾರೆ.

ಇದರೊಂದಿಗೆ ಧರ್ಮವನ್ನು ವಿವರಿಸುವ ಕುರಾನ್‌ ಮತ್ತು ವಚನದ ಸಾಲುಗಳನ್ನು ಹಂಚಿಕೊಂಡಿದ್ದಾರೆ.

'ಅಲ್ಲಾಹ್ ನ್ಯಾಯ, ಪರೋಪಕಾರ ಹಾಗೂ ಆಪ್ತೇಷ್ಟರ ಸೌಜನ್ಯದ ಆಜ್ಞೆ ನೀಡುತ್ತಾನೆ. ಮತ್ತು ಅಶ್ಲೀಲಕಾರ್ಯ, ದುಷ್ಕೃತ್ಯ, ಅಕ್ರಮ, ಅತ್ಯಾಚಾರಗಳನ್ನು ನಿಷೇಧಿಸುತ್ತಾನೆ. ನೀವು ಜಾಗೃತರಾಗಲಿಕ್ಕಾಗಿ ಅವನು ನಿಮಗೆ ಉಪದೇಶ ನೀಡುತ್ತಾನೆ.' -ಕುರಾನ್ ಆಲ್ ಹಿಜ್ರ್ 15

ದಯವಿಲ್ಲದ ಧರ್ಮವಾವುದಯ್ಯಾ?
ದಯವೇ ಬೇಕು ಸಕಲ ಪ್ರಾಣಿಗಳಲ್ಲಿಯೂ
ದಯವೇ ಧರ್ಮದ ಮೂಲವಯ್ಯಾ
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ

'ಅವಿವೇಕಿಯೊಬ್ಬ ಪೈಗಂಬರ್ ಅವರ ಬಗ್ಗೆ ಅವಹೇಳನ ಮಾಡಿದ, ಆತನಿಗೆ ಶಿಕ್ಷೆಯಾಗಬೇಕು ನಿಜ, ಆದರೆ ಪೈಗಂಬರ್ ಅನುಯಾಯಿಗಳು ದಾಂಧಲೆಗಿಳಿಯುವ ಮೂಲಕ ಪ್ರವಾದಿಯ ಪವಿತ್ರ ಸಂದೇಶಗಳನ್ನು ಮಣ್ಣುಪಾಲು ಮಾಡುವುದು ಆ ಧರ್ಮಕ್ಕೆ ಮಾಡಿದ ಅಪಚಾರ.'

'ಕಾನೂನು ಪಾಲಕ ಪೊಲೀಸರು ಮತ್ತು ವರದಿಗಾಗಿ ತೆರಳಿದ್ದ ಪತ್ರಕರ್ತರ ಮೇಲೆ ಅಮಾನುಷ ದೌರ್ಜನ್ಯ ನಡೆಸುವ ಮೂಲಕ ನಾಗರಿಕ ಸಮಾಜಕ್ಕೆ ಯಾವ ಸಂದೇಶ ರವಾನಿಸುತ್ತದೆ ಎಂಬ ಕನಿಷ್ಠ ಪ್ರಜ್ಞೆಯೂ ಇಲ್ಲದೆ ವರ್ತಿಸಿರುವುದು ಅತ್ಯಂತ ಖಂಡನೀಯ.'

'ಈ ಘಟನೆ ಪೂರ್ವಯೋಜಿತ ಸಂಚು ಎಂಬ ಅನುಮಾನಕ್ಕೂ ಪುಷ್ಟಿ ನೀಡಿದೆ. ಸ್ಥಳೀಯ ಜನಪ್ರತಿನಿಧಿಗಳ ಸ್ವಜನಪಕ್ಷಪಾತ, ಅಧಿಕಾರ ಲಾಲಸೆಗಳಿಂದಾಗಿ ಇಂಥದೊಂದು ಸಣ್ಣ ಕಿಡಿ ಬೆಂಕಿಯುಂಡೆ ಆಗುವ ಮೂಲಕ ಅಮಾಯಕ ಜನರ ಸಿಟ್ಟು-ಸೆಡವು ಸ್ಫೋಟಗೊಂಡಿದೆ. ನಿರುಪದ್ರವಿಗಳ ರಕ್ತ ಚೆಲ್ಲಾಡಿದೆ. ಕೌಟುಂಬಿಕ ದ್ವೇಷಾಸೂಯೆಗಳು ದುರ್ವರ್ತನೆಗೆ ವೇದಿಕೆಯಾಗಿರುವುದು ಸುಳ್ಳಲ್ಲ' ಎಂದು ಟ್ವೀಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT