ಯಲಹಂಕ: ದೊಡ್ಡಬಳ್ಳಾಪುರ ಮುಖ್ಯರಸ್ತೆ, ಮಾರಸಂದ್ರ ಸಮೀಪದ ಪ್ರಾವಿಡೆಂಟ್ ವೆಲ್‌ವರ್ತ್ ಸಿಟಿ ಅಪಾರ್ಟ್‌ಮೆಂಟ್ ಆವರಣದಲ್ಲಿರುವ ಗಣೇಶ ಮಂದಿರ ತೆರವುಗೊಳಿಸಲು ಬಂದಿದ್ದ ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧಿಕಾರಿಗಳನ್ನು ಅಪಾರ್ಟ್‌ಮೆಂಟ್ ನಿವಾಸಿಗಳು ಮತ್ತು ಬಿಜೆಪಿ ಕಾರ್ಯಕರ್ತರು ತಡೆದಿದ್ದಾರೆ.
ಇತ್ತೀಚೆಗೆ ವ್ಯಕ್ತಿಯೊಬ್ಬರು ಗಣೇಶ ಮಂದಿರ ತೆರವುಗೊಳಿಸುವಂತೆ ಪ್ರಾಧಿಕಾರದ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಕಾರಣದಿಂದ ದೇಗುಲ ತೆರವಿಗಾಗಿ ಜೆಸಿಬಿ ಸಮೇತ ಸ್ಥಳಕ್ಕೆ ಬಂದಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಂಡು ಸ್ಥಳೀಯ ನಿವಾಸಿಗಳು ಗಾಬರಿಗೊಂಡು, ಗಣೇಶ ದೇವಾಲಯದ ಬಳಿ ಜಮಾಯಿಸಿದರು. ಸ್ಥಳದಲ್ಲಿ ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ನಂತರ ಪ್ರಾಧಿಕಾರದ ಆಯುಕ್ತೆ ಮೀನಾಕ್ಷಿ ಅವರು, ಸ್ಥಳೀಯ ನಿವಾಸಿಗಳು, ಪಂಚಾಯಿತಿ ಅಧಿಕಾರಿಗಳು, ಬಿಜೆಪಿ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದರು.
ಈ ವೇಳೆ ಮಾತನಾಡಿದ ರಾಜ್ಯ ಬಿಜೆಪಿ ರೈತಮೋರ್ಚಾ ಕಾರ್ಯದರ್ಶಿ ಸತೀಶ್ ಕಡತನಮಲೆ, ‘ಇಲ್ಲಿನ ಗಣೇಶ ಮಂದಿರ, ಮುನೇಶ್ವರ ದೇವಾಲಯಕ್ಕೆ ದಶಕಗಳ ಹಿನ್ನೆಲೆಯಿದೆ. ಬನ್ನಿಮರ, ಅರಳೀಮರ, ಅಶ್ವಥಕಟ್ಟೆ ಮತ್ತು ತುಳಸೀಕಟ್ಟೆಗೆ ನೂರು ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಈ ಜಾಗದ ಮಾಲೀಕರು, ಜಮೀನನ್ನು ಉದ್ಯಾನಕ್ಕಾಗಿ ಮೀಸಲಿಡಬೇಕೆಂಬ ಷರತ್ತಿನ ಮೇಲೆ ಮಾರಾಟ ಮಾಡಿದ್ದರು. ಡೆವಲಪರ್ ಸಹ ಇದನ್ನು ನಾಗರಿಕ ಸೌಲಭ್ಯಕ್ಕಾಗಿ(ಸಿಎ) ಮತ್ತು ಉದ್ಯಾನ ಜಾಗವಾಗಿ ಪರಿವರ್ತನೆ ಮಾಡಿದ್ದಾರೆ’ ಎಂದು ತಿಳಿಸಿದರು.
‘ಈ ಮಧ್ಯೆ ವ್ಯಕ್ತಿಯೊಬ್ಬರು ಅಧಿಕಾರಿಗಳಿಗೆ ಈ ಜಾಗದ ಬಗ್ಗೆ ಸುಳ್ಳು ಮಾಹಿತಿ ನೀಡಿ, ಇಂಥ ಸಂದರ್ಭದ ಸೃಷ್ಟಿಗೆ ಕಾರಣನಾಗಿದ್ದಾರೆ. ಹೀಗಾಗಿ ಸ್ಥಳೀಯರು ಆತಂಕಗೊಂಡಿದ್ದಾರೆ. ನೈಜ ಪರಿಸ್ಥಿತಿಯನ್ನು ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಲಾಗಿದೆ. ಯಾವ ಕಾರಣಕ್ಕೂ ದೇವಾಲಯ ತೆರವುಗೊಳಿಸಲು ಬಿಡುವುದಿಲ್ಲ’ ಎಂದರು.
ಸ್ಥಳೀಯ ನಿವಾಸಿಗಳ ಮನವಿ ಆಲಿಸಿದ ಅಧಿಕಾರಿಗಳು, ‘ಸದ್ಯಕ್ಕೆ ದೇವಾಲಯ ತೆರವು ಕಾರ್ಯ ನಿಲ್ಲಿಸಲಾಗಿದೆ. ಇಲ್ಲಿನ ವಾಸ್ತವ ಪರಿಸ್ಥಿತಿಯ ಕುರಿತು ಮೇಲಧಿಕಾರಿಗಳಿಗೆ ವರದಿ ನೀಡಿ, ಸೂಕ್ತ ಪರಿಹಾರ ಕಂಡುಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಮುನಿದಾಸಪ್ಪ, ಅರಕೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕೆ.ಎಂ.ಅರಸೇಗೌಡ, ಮಾಜಿ ಅಧ್ಯಕ್ಷ ಕೆ.ಆರ್.ತಿಮ್ಮೇಗೌಡ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ, ಬಿಜೆಪಿ ಮುಖಂಡರಾದ ಪರಶುರಾಮ್, ಈಶ್ವರಾಚಾರ್, ಅಶೋಕ್, ಪ್ರಾವಿಡೆಂಟ್ ವೆಲ್‌ವರ್ತ್ ಸಿಟಿ ಅಪಾರ್ಟ್‌ಮೆಂಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ವಿದ್ಯಾಮಿಶ್ರ, ಮಾಜಿ ಅಧ್ಯಕ್ಷ ಸಂಜಯ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.