ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಯಮ ಮರೆತ ಯೋಗ ಶಿಕ್ಷಕನ ವಿರುದ್ಧ #MeToo ಆರೋಪ

ಅನಗತ್ಯವಾಗಿ ಮೈಮುಟ್ಟುತ್ತಿದ್ದ ‘ದಿ ಪ್ರಾಕ್ಟೀಸ್‌ ರೂಮ್‌’ನ ಯೋಗ ಶಿಕ್ಷಕ
Last Updated 7 ನವೆಂಬರ್ 2018, 9:45 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್‌ನಲ್ಲಿ ಸದ್ದು ಮಾಡಿದ್ದ #MeToo ಅಭಿಯಾನ ನಿಧಾನಕ್ಕೆ ಸ್ಯಾಂಡಲ್‌ವುಡ್‌ ತಲುಪಿತು. ಅದಾದ ನಂತರ ಸ್ಥಳೀಯವಾಗಿವಿವಿಧ ಕ್ಷೇತ್ರಗಳ ಮಹಿಳೆಯರು ತಮಗಾದ ಲೈಂಗಿಕ ಕಿರುಕುಳ ಬಗ್ಗೆ ಹೇಳಿಕೊಳ್ಳುತ್ತಿದ್ದಾರೆ. ಈಗ ಬೆಂಗಳೂರಿನ ‘ದಿ ಪ್ರಾಕ್ಟೀಸ್‌ ರೂಮ್‌’ನಯೋಗ ತರಬೇತುದಾರರೊಬ್ಬರ ವಿರುದ್ಧ #MeTooದೂರು ಕೇಳಿ ಬಂದಿದೆ.

ಇಲ್ಲಿಗೆ ಯೋಗ ಕಲಿಯಲು ಬರುತ್ತಿದ್ದ ಸುಮಾರು 10 ಮಹಿಳೆಯರು ತರಬೇತುದಾರ ಮೋಹನ್‌ ನೀಡಿದಲೈಂಗಿಕ ಕಿರುಕುಳದ ವಿಚಾರವನ್ನು ಕಾಮಿಕ್‌ ಚಿತ್ರಗಳಲ್ಲಿ ಹೇಳುವ ಮೂಲಕಭಿನ್ನವಾಗಿ ಅಭಿವ್ಯಕ್ತಿಸಿದ್ದಾರೆ. ಈ ಕುರಿತು ಸುದ್ದಿತಾಣ ‘ದಿ ನ್ಯೂಸ್‌ ಮಿನಟ್’ ವರದಿಯೊಂದನ್ನು ಪ್ರಕಟಿಸಿದೆ. ಯೋಗ ಕ್ಲಾಸ್‌ಗೆ ಹೋಗುತ್ತಿದ್ದ ಮಹಿಳೆಯರೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಕಹಿ ಅನುಭವಗಳನ್ನು ದಾಖಲಿಸಿದ್ದಾರೆ.

‘ಯೋಗ ಮ್ಯಾಟ್‌ ಮೇಲೆ ನಾನು ಶವಾಸನದಲ್ಲಿದ್ದೆ ಮತ್ತು ಹಗ್ಗದ ಸಹಾಯದಿಂದ ಕಾಲುಗಳನ್ನು ಮೇಲೆತ್ತುವ ಆಸನವನ್ನು ಮಾಡುತ್ತಿದ್ದೆ. ಯೋಗವನ್ನು ಹೇಳಿಕೊಡುತ್ತಿದ್ದ ಆತ, ಆಸನವನ್ನು ವಿವರಿಸಲು ನನ್ನ ಎದುರು ಬಂದು ನಿಂತುಕೊಂಡ. ನನ್ನ ಪಾದಗಳನ್ನು ಹಿಡಿದುಕೊಂಡು ತನ್ನ ತೊಡೆಯ ಸಂದಿಗೆ ಒತ್ತಿಕೊಂಡ’ – ಹೀಗೆಂದು ಬೆಂಗಳೂರಿನಲ್ಲಿನ ಯೋಗ ತರಗತಿ ನಡೆಸುತ್ತಿದ್ದ ಮೋಹನ್‌ ಪೊಲಾಮರ್‌ ಎಂಬುವವರ ವಿರುದ್ಧ ಕಾವ್ಯಾ (ಹೆಸರು ಬದಲಿಸಲಾಗಿದೆ) ಆರೋಪ ಮಾಡಿದ್ದಾರೆ.

ಮೊದಮೊದಲು ಯೋಗ ತರಗತಿ ಶಾಂತವಾಗಿದೆ ಮತ್ತು ಸುರಕ್ಷಿತವಾಗಿದೆ ಎಂದು ಅನ್ನಿಸಿತ್ತು. ನಂತರ ಯೋಗ ಟೀಚರ್‌ ಆಸನವನ್ನು ಹೇಳಿಕೊಡುವ ನೆಪದಲ್ಲಿ ಎಲ್ಲೆಂದರಲ್ಲಿ ಮುಟ್ಟಲು ಪ್ರಾರಂಭಿಸಿದರು ಎನ್ನುವುದನ್ನು ಅವರು ಚಿತ್ರಗಳನ್ನು ವ್ಯಕ್ತಪಡಿಸಿದ್ದಾರೆ.

‘ಶುರುವಿನಲ್ಲಿ ಅವರು ನನಗೆ ಹೆಚ್ಚು ಗಮನ ಕೊಡುತ್ತಿದ್ದಾರೆ ಎಂದು ಅನಿಸುತ್ತಿತ್ತು. ಆಸನಗಳನ್ನು ಹೇಳಿಕೊಡಲು ಓಡಾಡುತ್ತಿದ್ದಾಗ ನನ್ನನ್ನು ಮುಟ್ಟುತ್ತಿದ್ದ, ಕೈಗಳನ್ನು ಹಿಡುಕೊಳ್ಳುತ್ತಿದ್ದ, ತರಗತಿಯನ್ನು ತೆಗೆದುಕೊಂಡಾಗ ಎಲ್ಲೋ ನೋಡುತ್ತಾ ನನ್ನ ಮೇಲೆ ಒರಗುತ್ತಿದ್ದ. ಉದಾಹರಣೆಗೆ, ಒಮ್ಮೆ ಉಪವಿಷ್ಠಕೋನಾಸನ ಮಾಡುವಾಗ ಭಂಗಿಯನ್ನು ಸರಿಪಡಿಸಲು ನನ್ನ ತೊಡೆಗಳನ್ನು ಅಗತ್ಯಕ್ಕಿಂತ ಹೆಚ್ಚಾಗಿಯೇ ಹಿಡಿದುಕೊಂಡಿದ್ದ’ ಎಂದು ಯೋಗ ತರಗತಿಗೆ ಹೋಗುತ್ತಿದ್ದ ಸಬಾ ಹೇಳಿಕೊಂಡಿದ್ದಾರೆ.

‘ಪ್ರತಿಯೊಂದು ಆಸನ ಮಾಡುವಾಗಲೂ ಲೈಂಗಿಕವಾಗಿ ಬಳಸಿಕೊಳ್ಳಲು ಯೋಚಿಸುತ್ತಿದ್ದ. ಮಲಗಿಕೊಂಡು ಮಂಡಿಯನ್ನು ಮಡಿಸುವ ಆಸನ ಮಾಡುತ್ತಿದ್ದಾಗ, ಆತನ ನನ್ನ ಮೇಲೆಯೇ ಮಲಗಿಯೇ ಬಿಟ್ಟ. ನನ್ನ ಮುಖಕ್ಕೆ ಸಮೀ‍ಪವಾಗಿ ಅವನ ಮುಖವಿತ್ತು’ ಎಂದು ಕಾವ್ಯಾ ಚಿತ್ರಗಳಲ್ಲಿವಿವರಿಸಿದ್ದಾರೆ. ಇಷ್ಟೇ ಅಲ್ಲದೆ, ತರಗತಿಯ ನಂತರವೂ ತನಗೆ ಸಂದೇಶ ಕಳುಹಿಸುತ್ತಿದ್ದ ಎಂದಿದ್ದಾರೆ.

‘ಕೆಟ್ಟ ವಾತಾವರಣ ಅಲ್ಲಿತ್ತು’

ಮೋಹನ್‌ ಮತ್ತು ಆತನ ಪತ್ನಿ ಜಯ ಯೋಗ ತರಗತಿ ನಡೆಸುತ್ತಿದ್ದರು. ಇಬ್ಬರು ಭಿನ್ನ ತರಗತಿಗಳ ಉಸ್ತುವರಿ ವಹಿಸಿದ್ದರು. ಆ ತರಗತಿಗೆ ಹೋಗುತ್ತಿದ್ದ ಕೆಲವು ಮಹಿಳೆಯರು ಅವರಿಬ್ಬರ ನಡವಳಿಕೆಗಳ ಬಗ್ಗೆ ಹೇಳಿಕೊಂಡಿದ್ದಾರೆ.

‘ಜಯಾ ಸ್ವಲ್ಪ ಆಕ್ರಮಶೀಲ ವ್ಯಕ್ತಿಯಾಗಿದ್ದರು. ಅವಮಾನಿಸುತ್ತಿದ್ದರು ಮತ್ತು ಆಗಾಗ್ಗೆ ಅಶ್ಲೀಲ ಮಾತುಗಳನ್ನು ಆಡುತ್ತಿದ್ದರು ಹಾಗೂ ಅದನ್ನು ಹೇಳದಂತೆ ಬೆದರಿಸುತ್ತಿದ್ದರು. ಆದರೆ, ಮೋಹನ್‌ ಶಾಂತ ಹಾಗೂ ಸ್ನೇಹ ಸ್ವಭಾವದವರು. ಜಯಾ ಅವರಿಗಿಂತ ಮೋಹನ ಉತ್ತಮ ಎಂದು ಅನೇಕರು ಭಾವಿಸಿದ್ದರು’ ಎಂದು 2016ರಿಂದ 2018ರವರೆಗೆ ಯೋಗ ತರಗತಿಗೆ ಹೋಗಿದ್ದ ಸುಪ್ರೀಯಾ ತಿಳಿಸಿದರು.

ಮೋಹನ್‌ ಅವರ ಅನುಚಿತ ವರ್ತನೆಯಿಂದ ಮಹಿಳೆಯರು ಯೋಗಕ್ಕೆ ಬರುವುದನ್ನು ನಿಲ್ಲಿಸಿದರು. ಯಾವಾಗ ದೂರುಗಳು ಬರಲು ಶುರುವಾದವೊ ಆಗ ತರಬೇತಿ ಕೇಂದ್ರದಲ್ಲಿ ತನಿಖಾ ಸಮಿತಿಯೊಂದನ್ನು ರಚಿಸಲಾಯಿತು. ಈ ಸಮಿತಿಯಲ್ಲಿ ಜಯಾ ಸಹ ಒಬ್ಬ ಸದಸ್ಯರಾಗಿದ್ದರು.

‘ಕೆಲ ಕಾಲ ತರಬೇತಿಯಿಂದ ಮೋಹನ್ ದೂರ ಉಳಿದರು. ತನಿಖೆ ನಡೆಯಿತು. ನಮಗೆ ಏನನ್ನು ತಿಳಿಸಲಿಲ್ಲ, ನಮಗೆ ಅವರು ಕ್ಷಮೆಯನ್ನೂ ಕೇಳಲಿಲ್ಲ.ಮತ್ತೆ ಕೆಲ ತಿಂಗಳ ನಂತರ ಮೋಹನ್‌ ತರಬೇತಿ ನೀಡಲು ಬಂದರು’ ಎಂದು ಸಬಾ ಹೇಳಿದರು.

ಜಯಾ ಅವರು ತಮ್ಮ ಪತಿ ಮೋಹನ್‌ ವಿರುದ್ಧ ಬಂದ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದರು. ‘ಅವರೊಂದಿಗೆ ಮಾತನಾಡಿದಾಗಲೆಲ್ಲ, ಕೆಟ್ಟದಾಗಿ ನಡೆದುಕೊಳ್ಳುತ್ತಿದ್ದರು. ಏನಾದರೂ ಹೇಳಲು ಹೋದರೆ ತರಗತಿಯಿಂದ ಹೊರಗೆ ಹೋಗಿ ಮತ್ತೆ ಬರಬೇಡಿ ಎಂದು ಅರಚುತ್ತಿದ್ದರು. ಅಲ್ಲಿ ಕೆಟ್ಟ ವಾತಾವರಣವಾಗಿತ್ತು’ ಎಂದು ಸಬಾ ಹೇಳಿದರು.

ತಮ್ಮ ಸಂಸ್ಥೆಯ ವಿರುದ್ಧ ಕೇಳಿ ಬಂದಿರುವ ಆರೋಪಗಳ ಕುರಿತು ‘ದಿ ನ್ಯೂಸ್‌ ಮಿನಟ್‌’ ಜಾಲತಾಣಕ್ಕೆ ಪ್ರತಿಕ್ರಿಯಿಸಿರುವಜಯ ಚಕ್ರವರ್ತಿ,‘ಸಮಿತಿಯೊಂದನ್ನು ಸ್ಥಾಪಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಸಮಿತಿಯಲ್ಲಿ ಒಳಗಿನ ಮತ್ತು ಹೊರಗಿನ ಸದಸ್ಯರು ಇದ್ದಾರೆ. ನಮ್ಮಲ್ಲಿ ತರಬೇತಿ ಪಡೆದವರು ಹಾಗೂ ಹೊರಗಿನ ಸದಸ್ಯರಾಗಿ ಎನ್‌ಫೋಲ್ಡ್‌ ಇಂಡಿಯಾದ ಸದಸ್ಯರು ಇದ್ದಾರೆ’ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT