ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 12 ಕೋಟಿ ಡಿಮ್ಯಾಂಡ್‌ ನೋಟಿಸ್‌ ರದ್ದು

ವಿದ್ಯುತ್‌ ಬಿಲ್‌ ಪಾವತಿಗೆ ಬೆಸ್ಕಾಂ ನೀಡಿದ್ದ ನೋಟಿಸ್‌
Last Updated 30 ಜುಲೈ 2019, 19:02 IST
ಅಕ್ಷರ ಗಾತ್ರ

ಬೆಂಗಳೂರು: ಬಾಕಿ ಇರುವ ₹ 12 ಕೋಟಿ ಮೊತ್ತದ ವಿದ್ಯುತ್‌ ಬಿಲ್‌ ಪಾವತಿ ಮಾಡುವಂತೆ ಯುರೇಕಾ ಫೋಬ್ಸ್‌ ಕಂಪನಿಗೆ ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ (ಬೆಸ್ಕಾಂ) ನೀಡಿದ್ದ ಡಿಮ್ಯಾಂಡ್‌ ನೋಟಿಸ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ.

ಈ ಕುರಿತಂತೆ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಸ್‌.ಸುಜಾತ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರಕಟಿಸಿದ್ದು, ‘ಒಂದು ನಿರ್ದಿಷ್ಟ ಕಂಪನಿಗೆ ನೀಡಲಾದ ಅಧಿಕೃತ ವಿದ್ಯುತ್‌ ಸಂಪರ್ಕವನ್ನು ಆ ಕಂಪನಿಯು ತನ್ನ ಆವರಣದಲ್ಲಿನ ಮತ್ತೊಂದು ಘಟಕಕ್ಕೆ ವರ್ಗಾಯಿಸಿಕೊಂಡರೆ ಅನಧಿಕೃತ ಎನ್ನಿಸಿಕೊಳ್ಳುವುದಿಲ್ಲ’ ಎಂದು ಆದೇಶದಲ್ಲಿ ತಿಳಿಸಿದೆ.

ಪ್ರಕರಣವೇನು?: ಯುರೇಕಾ ಫೋಬ್ಸ್‌ ಹೊಸೂರು ರಸ್ತೆಯಲ್ಲಿರುವ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ 19,002 ಚದರ ಮೀಟರ್‌ಗಳಷ್ಟು ವಿಸ್ತಾರದಲ್ಲಿ ತನ್ನ ಕಂಪನಿಯನ್ನು ಹೊಂದಿದೆ. 2007ರಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಶೆಲ್‌ ಇಂಡಿಯಾ ಮಾರ್ಕೆಟ್ ಜೊತೆ ಒಪ್ಪಂದ ಮಾಡಿಕೊಂಡಿತು. ಇದರ ಅನುಸಾರ ಕಂಪನಿಯ ಆವರಣದಲ್ಲೇ 85,920 ಚದರ ಅಡಿಗಳಷ್ಟು ಜಾಗವನ್ನು ಶೆಲ್‌ ಇಂಡಿಯಾಗೆ ಬಿಟ್ಟುಕೊಟ್ಟಿತು.

ಶೆಲ್‌ ಇಂಡಿಯಾ ವಿಭಾಗಕ್ಕೂ ವಿದ್ಯುತ್‌ ಸಂಪರ್ಕ ವಿಸ್ತರಿಸಿದ ಫೋಬ್ಸ್‌2015ರಲ್ಲಿ, ‘ಪ್ರತ್ಯೇಕ ಮೀಟರ್‌ ಬೇಕು’ ಎಂದು ಬೆಸ್ಕಾಂಗೆ ಮನವಿ ಮಾಡಿತು. ಈ ಕುರಿತಂತೆ ಸ್ಥಳ ಪರಿಶೀಲನೆ ನಡೆಸಿದ ಬೆಸ್ಕಾಂ, 2007–08ರ ಸಾಲಿನಿಂದ 2014–15ರ ಸಾಲಿನ ಬಾಕಿಗೆ ಸಂಬಂಧಿಸಿದಂತೆ ಬಾಕಿ ಮೊತ್ತ ₹ 12, 55,47,954 ಪಾವತಿಸಬೇಕು ಎಂದು ಡಿಮ್ಯಾಂಡ್‌ ನೋಟಿಸ್ ಜಾರಿಗೊಳಿಸಿ, ವಿದ್ಯುತ್ ಸಂಪರ್ಕ ಕಡಿತಗೊಳಿಸಿತು.

ಬೆಸ್ಕಾಂ ಈ ಕ್ರಮವನ್ನು ಪ್ರಶ್ನಿಸಿದ ಫೋಬ್ಸ್‌ ಹೈಕೋರ್ಟ್‌ ಮೆಟ್ಟಿಲೇರಿತು. ಈಗ ಪ್ರಕರಣ ವಿಲೇವಾರಿ ಮಾಡಿರುವ ನ್ಯಾಯಪೀಠ, ‘ಫೋಬ್ಸ್‌ ಕಂಪನಿ ಹೆಚ್ಚುವರಿ ವಿದ್ಯುತ್‌ ಬಳಸಿಲ್ಲ. ವಿದ್ಯುತ್‌ ಪ್ರಸರಣದ ಷರತ್ತುಗಳನ್ನು ಉಲ್ಲಂಘಿಸಿಲ್ಲ. ಮತ್ತೊಂದು ಘಟಕಕ್ಕೆ ವಿದ್ಯುತ್‌ ಸಂಪರ್ಕ ವಿಸ್ತರಿಸಿದ ದಿನದಿಂದಲೇ ಪ್ರತ್ಯೇಕ ಮೀಟರ್‌ಗಳನ್ನು ಹೊಂದಿದ್ದರೆ ಬಿಲ್‌ ಕಡಿಮೆಯಾಗುತ್ತಿತ್ತು’ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

‘ನಾಲ್ಕು ವಾರಗಳಲ್ಲಿ ಇತ್ಯರ್ಥಗೊಳಿಸಿ’
‘ಬೆಸ್ಕಾಂನ ಚಂದಾಪುರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರಕರಣವನ್ನು ನಾಲ್ಕು ವಾರಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳದೆ ಕಾನೂನು ಪ್ರಕಾರ ಅರ್ಜಿದಾರ ಫೋಬ್ಸ್‌ ಕಂಪನಿಯ ಅಹವಾಲು ಆಲಿಸಿ ಇತ್ಯರ್ಥಗೊಳಿಸಬೇಕು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT