ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಸ್ಕಾಂ ಲೈನ್‌ಮೆನ್ ಸಾವು: ಎಂಜಿನಿಯರ್‌ಗಳ ವಿರುದ್ಧ ಎಫ್‌ಐಆರ್

ಫೀಡರ್ ದುರಸ್ತಿ ವೇಳೆ ವಿದ್ಯುತ್ ತಗುಲಿ ಅವಘಡ
Last Updated 23 ಜನವರಿ 2023, 19:15 IST
ಅಕ್ಷರ ಗಾತ್ರ

ಬೆಂಗಳೂರು: ಫೀಡರ್ ದುರಸ್ತಿ ವೇಳೆ ವಿದ್ಯುತ್ ತಗುಲಿ ಬೆಸ್ಕಾಂ ಲೈನ್‌ಮೆನ್ ಗೌತಮ್‌ (28) ಎಂಬುವರು ಭಾನುವಾರ ಮೃತಪಟ್ಟಿದ್ದು, ನಿರ್ಲಕ್ಷ್ಯ ವಹಿಸಿದ್ದ ಆರೋಪದಡಿ ಎಂಜಿನಿಯರ್‌ಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

‘ಸುಂಕದಕಟ್ಟೆ ನಿವಾಸಿ ಗೌತಮ್, ಹಲವು ವರ್ಷಗಳಿಂದ ಬೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದರು. ಗೋಪಾಲಪುರ ಪೊಲೀಸ್ ಚೌಕಿ ಬಳಿಯ ಎಫ್-29 ಫೀಡರ್‌ ದುರಸ್ತಿ ಕೆಲಸದಲ್ಲಿ ನಿರತರಾಗಿದ್ದ ವೇಳೆ ಈ ಅವಘಡ ಸಂಭವಿಸಿದೆ’ ಎಂದು ಮಾಗಡಿ ರಸ್ತೆ ಠಾಣೆ ಪೊಲೀಸರು ತಿಳಿಸಿದರು.

‘ಗೌತಮ್‌ ಸಾವಿನ ಸಂಬಂಧ ತಂದೆ ರಂಗನಾಥ್ ದೂರು ನೀಡಿದ್ದಾರೆ. ಬೆಸ್ಕಾಂ ಸಹಾಯಕ ಎಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಕಿರಿಯ ಎಂಜಿನಿಯರ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎಲ್ಲರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು’ ಎಂದು ಹೇಳಿದರು.

ಸಹೋದ್ಯೋಗಿ ಜತೆ ಹೋಗಿದ್ದ ಗೌತಮ್: ‘ಟ್ರಾನ್ಸ್‌ಫಾರ್ಮರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಫೀಡರ್‌ ಹಾಳಾದ ಬಗ್ಗೆ ಸಾರ್ವಜನಿಕರಿಂದ ದೂರು ಬಂದಿತ್ತು. ಕರ್ತವ್ಯದಲ್ಲಿದ್ದ ಲೈನ್‌ಮೆನ್‌ ಗೌತಮ್, ಸಹೋದ್ಯೋಗಿ ಸಿದ್ಧರಾಮ್ ಜೊತೆ ಭಾನುವಾರ ಬೆಳಿಗ್ಗೆ ಸ್ಥಳಕ್ಕೆ ಹೋಗಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಟ್ರಾನ್ಸ್‌ಫಾರ್ಮರ್ ಏರಿದ್ದ ಗೌತಮ್, ಫೀಡರ್‌ ಬಳಿ ನಿಂತು ದುರಸ್ತಿ ಕೆಲಸದಲ್ಲಿ ತೊಡಗಿದ್ದರು. ಒಂದು ಮಾರ್ಗ ತಂತಿಯಲ್ಲಿ ವಿದ್ಯುತ್ ಸಂಪರ್ಕ ಮಾತ್ರ ಕಡಿತಗೊಳಿಸಲಾಗಿತ್ತು. ಇನ್ನೊಂದು ಮಾರ್ಗದ ತಂತಿಯಲ್ಲಿ ವಿದ್ಯುತ್ ಹರಿಯುತ್ತಿತ್ತು. ಅದೇ ತಂತಿಯಿಂದ ಗೌತಮ್ ಅವರಿಗೆ ವಿದ್ಯುತ್ ತಗುಲಿತ್ತು. ಅಸ್ವಸ್ಥಗೊಂಡಿದ್ದ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಮಾರ್ಗಮಧ್ಯೆಯೇ ಅವರು ಮೃತಪಟ್ಟಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT