ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

200 ಯೂನಿಟ್‌ ಉಚಿತ ವಿದ್ಯುತ್‌ ಹುಸಿ ಘೋಷಣೆ: ಬಸವರಾಜ ಬೊಮ್ಮಾಯಿ

ಬೆಸ್ಕಾಂ ವ್ಯಾಪ್ತಿಯಲ್ಲಿನ ಹೊಸ ಕಚೇರಿ ಕಟ್ಟಡಗಳ ಉದ್ಘಾಟನೆ
Last Updated 6 ಮಾರ್ಚ್ 2023, 20:57 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರತಿ ಮನೆಗೂ 200 ಯೂನಿಟ್‌ ಉಚಿತ ವಿದ್ಯುತ್‌ ನೀಡಲಾಗುವುದು ಎನ್ನುವುದು ಹುಸಿ ಭರವಸೆ. ಇದು ಜನರನ್ನು ಮೋಸಗೊಳಿಸುವ ಯತ್ನ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿಡಿಕಾರಿದರು.

ಸೋಮವಾರ ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳಲ್ಲಿ ನಿರ್ಮಿಸಿರುವ ಹೊಸ ಕಚೇರಿ ಕಟ್ಟಡಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಘೋಷಿಸಿರುವ ‘ಗೃಹ ಜ್ಯೋತಿ’ ಯೋಜನೆಯನ್ನು ಟೀಕಿಸಿದರು.

‘ಸಾಮಾನ್ಯವಾಗಿ 50 ರಿಂದ 70 ಯೂನಿಟ್‌ ಮಾತ್ರ ಗೃಹ ಬಳಕೆಗೆ ಉಪಯೋಗಿಸಲಾಗುತ್ತದೆ. ಸರ್ಕಾರ ಈಗಾಗಲೇ ಕುಟೀರ ಜ್ಯೋತಿ, ಭಾಗ್ಯ ಜ್ಯೋತಿ ಯೋಜನೆಯಡಿ ಬಡಜನರಿಗೆ 40 ಯೂನಿಟ್ ಉಚಿತವಾಗಿ ನೀಡುತ್ತಿದೆ. ಹೀಗಾಗಿ, 200 ಯೂನಿಟ್ ಉಚಿತ ವಿದ್ಯುತ್‌ ಎನ್ನುವುದು ಅರ್ಥಹೀನ’ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

‘ವಿದ್ಯುತ್‌ ಉತ್ಪಾದನೆ ಜತೆಗೆ ಹೆಚ್ಚುವರಿಯಾಗಿ ಉತ್ಪಾದಿಸಿದ ವಿದ್ಯುತ್‌ ಮಾರಾಟ ಮಾಡಿ ರಾಜ್ಯ ಸರ್ಕಾರ ₹2000 ಕೋಟಿ ವಹಿವಾಟು ನಡೆಸಿದೆ. ಈ ಹಿಂದೆ ಕಲ್ಲಿದ್ದಲು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಇದನ್ನು ಸ್ಥಳೀಯ ಕಲ್ಲಿದ್ದಲು ಜತೆ ಮಿಶ್ರಣ ಮಾಡಲು ಸಾಧ್ಯವಾಗುತ್ತಿರಲಿಲ್ಲ. ದುಬಾರಿ ದರಕ್ಕೆ ಕಲ್ಲಿದ್ದಲು ಖರೀದಿಸಿದ್ದರಿಂದ ನಷ್ಟ ಉಂಟಾಗುತ್ತಿತ್ತು. ಹಾಗೆಯೇ ಕಲ್ಲಿದ್ದಲು ತೊಳೆಯಲು ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತಿತ್ತು. ಸ್ಪಷ್ಟ ನೀತಿ ರೂಪಿಸದ ಕಾರಣವೇ ಇಂತಹ ನಿರ್ಧಾರಗಳಿಗೆ ಕಾರಣ’ ಎಂದು ಅಭಿಪ್ರಾಯಪಟ್ಟರು.

‘ಸ್ಕಾಡಾ ಯೋಜನೆಯನ್ನು ಇಂಧನ ಇಲಾಖೆ ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಇದೀಗ ಸ್ಕಾಡಾ–2 ಯೋಜನೆಗೆ ಅನುಮತಿ ನೀಡಲಾಗಿದೆ. ಇದರಿಂದ ವಿದ್ಯುತ್‌ ವಿತರಣೆಯ ದಕ್ಷತೆ ಹೆಚ್ಚಾಗುತ್ತದೆ. ಜತೆಗೆ, ನವೀಕರಿಸಬಹುದಾದ ಇಂಧನ ಬಳಸಿ ಪಂಪ್‌ ಸ್ಟೊರೇಜ್‌ ವ್ಯವಸ್ಥೆಗೆ ಯೋಜನೆ ರೂಪಿಸಲಾಗಿದೆ. ಶರಾವತಿಯಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗಿದೆ’ ಎಂದರು.

ಇದೇ ಸಂದರ್ಭದಲ್ಲಿ ಸಲಕರಣೆಗಳ ಸಾಗಾಣಿಕೆಗೆ ಬೆಸ್ಕಾಂ ಖರೀದಿಸಿರುವ 25 ಹೊಸ ಲಾರಿಗಳಿಗೆ ಮುಖ್ಯಮಂತ್ರಿ ಅವರು ಹಸಿರು ನಿಶಾನೆ ತೋರಿದರು.

ನೌಕರರ ವೇತನ ಪರಿಷ್ಕರಣೆ ಭರವಸೆ
’ಎಸ್ಕಾಂಗಳ ನೌಕರರ ವೇತನ ಪರಿಷ್ಕರಣೆಯನ್ನು ಕುರಿತು ಆರ್ಥಿಕ ಇಲಾಖೆ ಮತ್ತು ಇಂಧನ ಸಚಿವರ ಜೊತೆ ಚರ್ಚಿಸಲಾಗಿದೆ. ಶೀಘ್ರ ಪರಿಷ್ಕರಿಸಿ ಬಹು ವರ್ಷದ ಬೇಡಿಕೆಯನ್ನು ಸರ್ಕಾರ ಈಡೇರಿಸಲಿದೆ’ ಎಂದು ಮುಖ್ಯಮಂತ್ರಿ ಭರವಸೆ ನೀಡಿದರು.

’ಎಸ್ಕಾಂಗಳ ಖಾಸಗೀಕರಣಗೊಳಿಸುವ ಹುನ್ನಾರ’
‘ಅಧಿಕಾರದಲ್ಲಿದ್ದಾಗ ರಾಜ್ಯದ ಎಲ್ಲ ಎಸ್ಕಾಂಗಳನ್ನು ದಿವಾಳಿ ಅಂಚಿಗೆ ತಳ್ಳಿದವರು ಇದೀಗ 200 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಡಂಗುರ ಸಾರುತ್ತಿದ್ದಾರೆ’ ಎಂದು ಇಂಧನ ಸಚಿವ ವಿ. ಸುನಿಲ್ ಕುಮಾರ್ ಆರೋಪಿಸಿದರು.

‘ಉಚಿತ ವಿದ್ಯುತ್‌ ಭರವಸೆ ನೀಡಿ ಎಸ್ಕಾಂಗಳನ್ನು ನಷ್ಟದ ಅಂಚಿಗೆ ತಳ್ಳಿ ಖಾಸಗೀಕರಣ ಮಾಡುವ ಉದ್ದೇಶ ಇದರಲ್ಲಿ ಅಡಗಿದೆ’ ಎಂದು ದೂರಿದರು.

‘ನಷ್ಟದಲ್ಲಿದ್ದ ಎಸ್ಕಾಂಗಳನ್ನು ನಾವು ಸಬಲೀಕರಣಗೊಳಿಸಿದ್ದೇವೆ ಮತ್ತು ಗುಣಮಟ್ಟದ ವಿದ್ಯುತ್‌ ಅನ್ನು ಗ್ರಾಹಕರಿಗೆ ಪೂರೈಸಲಾಗುತ್ತಿದೆ’ ಎಂದು ಪ್ರತಿಪಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT