ಭಾನುವಾರ, ಅಕ್ಟೋಬರ್ 25, 2020
28 °C
ಶುಲ್ಕ ಕಟ್ಟಲು ತಾಂತ್ರಿಕ ಅಡಚಣೆ– ಕಟ್ಟದಿದ್ದರೆ ಸಂಪರ್ಕ ಕಡಿತ

ಬೆಸ್ಕಾಂ: ಆನ್‌ಲೈನ್‌ ಬಿಲ್‌ ಪಾವತಿಗೆ ಹರಸಾಹಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿದ್ಯುತ್‌ ಶುಲ್ಕವನ್ನು ಆನ್‌ಲೈನ್‌ ಪಾವತಿಸಲು ಸಾಧ್ಯವಾಗದೆ ಹಲವು ಗ್ರಾಹಕರು ಸಮಸ್ಯೆ ಎದುರಿಸುತ್ತಿದ್ದಾರೆ. ಲೋಪ ಸರಿಪಡಿಸದ ಬೆಸ್ಕಾಂ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

‘ಪ್ರತಿ ತಿಂಗಳ 1ನೇ ತಾರೀಕಿಗೆ ವಿದ್ಯುತ್‌ ಬಿಲ್‌ ನೀಡುತ್ತಾರೆ. 15 ದಿನ ಅವಕಾಶ ಇರುತ್ತದೆ. ಈ ಗಡುವಿನೊಳಗೆ ಕಟ್ಟದಿದ್ದರೆ ದಂಡ ಹಾಕುತ್ತಾರೆ, ಒಂದೆರಡು ದಿನ ತಡವಾದರೆ ವಿದ್ಯುತ್‌ ಸಂಪರ್ಕವನ್ನೇ ಕಡಿತಗೊಳಿಸುತ್ತಾರೆ. ಆದರೆ, ಆನ್‌ಲೈನ್‌ನಲ್ಲಿ ಬಿಲ್‌ ಕಟ್ಟಬೇಕು ಎಂದರೆ ತಾಂತ್ರಿಕ ತೊಂದರೆಗಳು ಎದುರಾಗುತ್ತಿವೆ’ ಎಂದು ಚಿಕ್ಕಪೇಟೆ ನಿವಾಸಿ ಸಿ.ಎ. ಕೃಷ್ಣಮೂರ್ತಿ ದೂರಿದರು. 

‘ಬೆಸ್ಕಾಂನ ತಂತ್ರಾಂಶದಲ್ಲಿ ಶುಲ್ಕದ ಮೊತ್ತವನ್ನು ದಾಖಲಿಸಿರುವುದಿಲ್ಲ ಅಥವಾ ಅಪ್‌ಡೇಟ್‌ ಮಾಡಿರುವುದಿಲ್ಲ. ಸರ್ವರ್‌ನಲ್ಲಿ ಅಪ್‌ಡೇಟ್ ಆಗುವವರೆಗೆ ನಾವು ಆನ್‌ಲೈನ್‌ನಲ್ಲಿ  ಶುಲ್ಕ ಪಾವತಿಸಲು ಸಾಧ್ಯವಾಗುವುದಿಲ್ಲ. ಎಷ್ಟೋ ಜನ ಬಿಲ್‌ ಬಂದ ತಕ್ಷಣ ಪಾವತಿಸಲು ಮುಂದಾಗುತ್ತಾರೆ. ಈ ವೇಳೆ ಅಪ್‌ಡೇಟ್‌ ಆಗಿರಲಿಲ್ಲ ಎಂದರೆ ಮರೆತು ಹೋಗುತ್ತದೆ’ ಎಂದು ಅವರು ಹೇಳಿದರು.

‘ಕೊನೆಯ ದಿನಾಂಕಕ್ಕಿಂತ ಎರಡು ದಿನ ಮೊದಲೇ ಶುಲ್ಕ ಪಾವತಿಸಿದರೆ ಮಾತ್ರ ಆನ್‌ಲೈನ್‌ನಲ್ಲಿ ಅಪ್‌ಡೇಟ್‌ ಆಗುತ್ತದೆ. ಹತ್ತು ದಿನಗಳವರೆಗೂ ಅಪ್‌ಡೇಟ್ ಮಾಡುವುದಿಲ್ಲ. ವಿಳಂಬವಾದರೆ ಮನೆಗೆ ಬಂದು ಸಂಪರ್ಕ ಕಡಿತಗೊಳಿಸುವ ಅಥವಾ ಫ್ಯೂಸ್‌ಗಳನ್ನು ಕಿತ್ತುಕೊಂಡು ಹೋಗುವ ಸಿಬ್ಬಂದಿ, ಮಾನವೀಯತೆಯ ದೃಷ್ಟಿಯಿಂದಲೂ ಮಾಹಿತಿ ನೀಡುವುದಿಲ್ಲ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. 

‘ವಾರದಿಂದ ಬೆಸ್ಕಾಂ ಸಹಾಯವಾಣಿಗೆ ಕರೆ ಮಾಡುತ್ತಿದ್ದೇನೆ. ಸರ್ವರ್‌ ಸಮಸ್ಯೆ ಎಂದು ಹೇಳುತ್ತಾರೆ. ವಾರಗಟ್ಟಲೇ ಯಾವ ಸಮಸ್ಯೆ ಇರುತ್ತದೆ’ ಎಂದು ಮತ್ತೊಬ್ಬ ಗ್ರಾಹಕ ಪ್ರಶ್ನಿಸಿದರು. 

‘ಗ್ರಾಹಕರಿಗೆ ಅನುಕೂಲವಾಗಲಿ ಎಂದೇ ಆನ್‌ಲೈನ್‌ ಪಾವತಿಗೆ ಅವಕಾಶ ನೀಡಲಾಗಿದೆ. ಆದರೆ, ಅದನ್ನು ಸರಿಯಾಗಿ ನಿರ್ವಹಿಸಲಾಗುತ್ತಿಲ್ಲ. ಬೆಂಗಳೂರು ಒನ್‌ ಅಥವಾ ಬೆಸ್ಕಾಂ ಕಚೇರಿಗೆ ಹೋಗಿ ಕಟ್ಟಲು ಎಷ್ಟೋ ಜನರಿಗೆ ಸಾಧ್ಯವಾಗುವುದಿಲ್ಲ. ಹಿರಿಯ ನಾಗರಿಕರಿಗೂ ಕಷ್ಟವಾಗುತ್ತಿದೆ’ ಎಂದರು. 

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರನ್ನು ಸಂಪರ್ಕಿಸಲು ಪ್ರಯತ್ನಿಸಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ. 

‘ಸರ್ವರ್‌ ಸರಿ ಮಾಡಲಾಗಿದೆ. ಈಗ ತೊಂದರೆಯಿಲ್ಲ. ಆನ್‌ಲೈನ್‌ನಲ್ಲಿ ಸುಲಭವಾಗಿ ಶುಲ್ಕ ಪಾವತಿಸಬಹುದು’ ಎಂದು ಬೆಸ್ಕಾಂ ಸಹಾಯವಾಣಿ ಸಿಬ್ಬಂದಿ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು