ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನವೇ ಸಂಚಾರ ಅಯೋಮಯ

ಬಾಲಗಂಗಾಧರನಾಥ ಮೇಲ್ಸೇತುವೆ ರಸ್ತೆ ಡಾಂಬರೀಕರಣ
Last Updated 16 ಡಿಸೆಂಬರ್ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ಬಾಲಗಂಗಾಧರನಾಥ ಮೇಲ್ಸೇತುವೆಯ ಡಾಂಬರೀಕರಣ ಕಾಮಗಾರಿ ಸೋಮವಾರ ಆರಂಭವಾಗಿದೆ. ಕಾಮಗಾರಿ ಸಂದರ್ಭದಲ್ಲಿ ದಟ್ಟಣೆ ಉಂಟಾಗುವುದನ್ನು ತಪ್ಪಿಸಲು ಪರ್ಯಾಯ ಮಾರ್ಗಗಳನ್ನು ಸೂಚಿಸದ ಕಾರಣ ಮೊದಲ ದಿನವೇ ಮೇಲ್ಸೇತುವೆಯಲ್ಲಿ ಹಾಗೂ ಕೆ.ಆರ್‌. ಮಾರುಕಟ್ಟೆ ಪರಿಸರದಲ್ಲಿ ವಾಹನ ಸಂಚಾರ ಅಯೋಮಯವಾಗಿತ್ತು.

ಮೇಲ್ಸೇತುವೆಯಲ್ಲಿ, ಅದರ ಕೆಳಗಿನ ರಸ್ತೆಗಳಲ್ಲಿ ಹಾಗೂ ಕೆ.ಆರ್‌.ಮಾರುಕಟ್ಟೆ ಆಸುಪಾಸಿನ ರಸ್ತೆಗಳಲ್ಲಿ ದಿನವಿಡೀ ವಾಹನ ದಟ್ಟಣೆ ಉಂಟಾಗಿತ್ತು.

ಮೇಲ್ಸೇತುವೆಯಲ್ಲಿ ಪುರಭವನ ಕಡೆಯಿಂದ ಮೈಸೂರು ರಸ್ತೆಯನ್ನು ಸಂಪರ್ಕಿಸುವ ರಸ್ತೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಟ್ವೀಟ್‌ ಮಾಡಿದ್ದರು. ಆದರೆ ಮೇಲ್ಸೇತುವೆಯಲ್ಲಿ ಎರಡೂ (ಮೈಸೂರು ರಸ್ತೆ ಹಾಗೂ ಪುರಭವನ) ಕಡೆಗಳಿಂದಲೂ ವಾಹನಗಳು ಸಂಚರಿಸಿದವು.

ಮೈಸೂರು ರಸ್ತೆ ಕಡೆಯಿಂದ ಪುರಭವನದ ಕಡೆಗಿನ ರಸ್ತೆ ಆರಂಭವಾಗುವಲ್ಲಿ ಸೋಮವಾರ ರಸ್ತೆಯ ಡಾಂಬರು ಕಿತ್ತು ತೆಗೆಯುವ ಕಾಮಗಾರಿ ನಡೆದಿದೆ. ಈ ರಸ್ತೆಯಲ್ಲಿ ಭಾರತ್‌ ಪೆಟ್ರೋಲಿಯಂ ಬಳಿಯಿಂದ ಮುಂದಕ್ಕೆ ಕಾಮಗಾರಿ ಇನ್ನೂ ಶುರುವಾಗಿಲ್ಲ. ಹಾಗಾಗಿ ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳು ಭಾರತ್‌ ಪೆಟ್ರೋಲಿಯಂ ಬಳಿಯಿಂದ ಎಡ ರಸ್ತೆಯಲ್ಲಿ ಸಂಚರಿಸಲು ಅವಕಾಶ ಕಲ್ಪಿಸಲಾಗಿತ್ತು. ಪುರಭವನ ಕಡೆಯಿಂದ ಮೈಸೂರು ರಸ್ತೆ ಕಡೆಗೆ ಹೋಗುವ ವಾಹನಗಳು ಭಾರತ್‌ ಪೆಟ್ರೋಲಿಯಂ ಬಳಿ ಎಡಭಾಗದ (ಸೇಂಟ್‌ ಜೋಸೆಫ್ಸ್‌ ಪ್ರೌಢಶಾಲೆ ಕಡೆಗೆ) ರ‍್ಯಾಂಪ್‌ನಲ್ಲಿ ಇಳಿದು ಮುಂದಕ್ಕೆ ಸಾಗಿದವು.

ಮೇಲ್ಸೇತುವೆಯಲ್ಲಿ ಎರಡು ಕಡೆಯಿಂದಲೂ ವಾಹನ ಸಂಚಾರಕ್ಕ ಅನುವು ಮಾಡಿಕೊಟ್ಟರೂ ದಟ್ಟಣೆ ತಪ್ಪಿಸಲು ಸಾಧ್ಯವಾಗಲಿಲ್ಲ. ಬಹುತೇಕ ವಾಹನಗಳು ಮೇಲ್ಸೇತುವೆಯ ಕೆಳಗಿನ ರಸ್ತೆಗಳಲ್ಲಿ ಸಾಗಿದವು. ಹಾಗಾಗಿ ಈ ರಸ್ತೆಗಳಲ್ಲಿ ಕಿ.ಮೀ. ಉದ್ದಕ್ಕೆ ವಾಹನಗಳ ಸಾಲು ಕಂಡು ಬಂತು.

‘ಈ ಪ್ರದೇಶದ ರಸ್ತೆಗಳೂ ಕಿರಿದಾಗಿವೆ. ಪರ್ಯಾಯ ರಸ್ತೆಗಳನ್ನೂ ಗುರುತಿಸಿಲ್ಲ. ಈ ಕಾಮಗಾರಿ ಪೂರ್ಣಗೊಳ್ಳುವವರೆಗೆ ನಮಗೆ ಗೋಳು ತಪ್ಪಿದ್ದಲ್ಲ’ ಎಂದು ಬೈಕ್‌ ಸವಾರ ಸುಧೀಂದ್ರ ತಿಳಿಸಿದರು.

ತಿಂಗಳ ಗಡುವು: ‘ಈ ಮೇಲ್ಸೇತುವೆಯಲ್ಲಿ ಸದಾ ವಾಹನ ದಟ್ಟಣೆ ಇರುತ್ತದೆ. ಹಾಗಾಗಿ ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸವಂತೆ ಸಂಚಾರ ಪೊಲೀಸರು ಸೂಚಿಸಿದ್ದಾರೆ. ಒಂದು ತಿಂಗಳ ಒಳಗೆ ಕಾಮಗಾರಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದೇವೆ’ ಎಂದು ಪಾಲಿಕೆಯ ಎಂಜಿನಿಯರ್‌ ಒಬ್ಬರು ಮಾಹಿತಿ ನೀಡಿದರು.

‘ಮೇಲ್ಸೇತುವೆಯಲ್ಲಿ ಆಸ್‌ ಫಾಲ್ಟಿಕೊ ಸೀಲ್‌ನ ಶೀಟನ್ನು 140 ಡಿಗ್ರಿ ಉಷ್ಣಾಂಶದಲ್ಲಿ ಬಿಸಿಗೊಳಿಸಿ ರಸ್ತೆಗೆ ಅಳವಡಿಸಲಾಗುತ್ತದೆ. ಬಳಿಕ ಅದರ ಮೇಲೆ ಜಲ್ಲಿ ಮಿಶ್ರಿತ ಡಾಂಬರು ಹಾಕಲಾಗುತ್ತದೆ. ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಈ ತಂತ್ರಜ್ಞಾನ ನೆರವಾಗುತ್ತದೆ. ಡಾಂಬರು ಕೂಡ ಹೆಚ್ಚು ಕಾಲ ಬಾಳಿಕೆ ಬರಲಿದೆ’ ಎಂದರು.

‘ಬಿಬಿಎಂಪಿಯು ಈ ಮೇಲ್ಸೇತುವೆಯ ಒಂದು ಪಾರ್ಶ್ವದ ರಸ್ತೆಯನ್ನು 2018ರ ಡಿಸೆಂಬರ್‌ನಲ್ಲಿ ದುರಸ್ತಿಪಡಿಸಿತ್ತು. ತೃಷಾ ಎಂಜಿನಿಯರಿಂಗ್‌ ಕನ್‌ಸ್ಟ್ರಕ್ಷನ್ಸ್‌ ಸಂಸ್ಥೆಯು ₹4.30 ಕೋಟಿ ವೆಚ್ಚದಲ್ಲಿ ಡಾಂಬರೀಕರಣ ಕಾಮಗಾರಿ ನಡೆಸಿತ್ತು. ಇನ್ನೊಂದು ಪಾರ್ಶ್ವದ ರಸ್ತೆ ದುರಸ್ತಿ ಕಾಮಗಾರಿಯನ್ನೂ ಅದೇ ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ. ಈ ಬಾರಿ ಕಾಮಗಾರಿ ವೆಚ್ಚ ಏರಿಕೆ ಆಗಿದೆ’ ಎಂದು ಅವರು ತಿಳಿಸಿದರು.

ಅಂಕಿ ಅಂಶ

2.65 ಕಿ.ಮೀ ಮೇಲ್ಸೇತುವೆಯ ಉದ್ದ

₹ 5.90 ಕೋಟಿಕಾಮಗಾರಿಯ ಅಂದಾಜು ವೆಚ್ಚ

ವಾಹನ ದಟ್ಟಣೆ ನೋಡಿಕೊಂಡು ಕ್ರಮ

‘ಕಾಮಗಾರಿ ವೇಳೆ ಮೈಸೂರು ರಸ್ತೆ ಕಡೆಯಿಂದ ಪುರಭವನದ ಕಡೆಗೆ ಬರುವ ವಾಹನಗಳ ಸಂಖ್ಯೆ ಹೆಚ್ಚು ಇದ್ದರೆ, ಆ ಕಡೆಯಿಂದ ಸಂಚಾರಕ್ಕೆ ಅವಕಾಶ ಕಲ್ಪಿಸುತ್ತೇವೆ. ಒಂದು ವೇಳೆ ಪುರಭವನ ಕಡೆಯಿಂದ ಮೈಸೂರು ರಸ್ತೆಗೆ ಸಾಗುವ ವಾಹನಗಳ ಸಂಖ್ಯೆ ಹೆಚ್ಚು ಇದ್ದರೆ ಪುರಭವನ ಕಡೆಯಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತದೆ’ ಎಂದು ಬಿಬಿಎಂಪಿಯ ಎಂಜಿನಿಯರ್‌ ಒಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT