ಭಾನುವಾರ, ಜೂನ್ 13, 2021
21 °C
ರಾಜ್ಯ, ಕೇಂದ್ರ ಸರ್ಕಾರಗಳ ಕಾರ್ಮಿಕ ವಿರೋಧಿ ನೀತಿಗೆ ಖಂಡನೆ

'ಭಾರತ ರಕ್ಷಿಸಿ’; ಬೃಹತ್ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಕಾರ್ಮಿಕ–ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ ಎಂದು ಆರೋಪಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ನಗರದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನಕಾರರು ’ಭಾರತ ರಕ್ಷಿಸಿ’ ಎಂದು ಒತ್ತಾಯಿಸಿದರು.

ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಕ್ವಿಟ್ ಇಂಡಿಯಾ ಚಳವಳಿ ನೆನಪಿನಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕಾರ್ಮಿಕ ಸಂಘಟನೆಗಳು, ರೈತ ಸಂಘಟನೆಗಳು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಪ್ರತಿಭಟನೆಗೆ ಬೆಂಬಲ ಸೂಚಿಸಿದರು. ‘ನಾವು ಭಾರತೀಯರು’ ಎಂದು ಘೋಷಣಾ ಫಲಕಗಳನ್ನು ಪ್ರದರ್ಶಿಸಿದರು.

‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರಗತಿ ವಿರೋಧಿ, ಕಾರ್ಮಿಕ ವಿರೋಧಿ ಹಾಗೂ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿವೆ. ಇದರ ವಿರುದ್ಧ ನಿರಂತರವಾಗಿ ಹೋರಾಟ ನಡೆಸಬೇಕಿದೆ. ‘ಭಾರತ ರಕ್ಷಿಸಿ’ ಎಂಬ ಆಗ್ರಹವನ್ನು ಆಂದೋಲನವನ್ನಾಗಿ ಇಡೀ ರಾಜ್ಯ ಹಾಗೂ ದೇಶದಾದ್ಯಂತ ನಡೆಸಬೇಕಿದೆ. ಇದಕ್ಕೆ ಕಾರ್ಮಿಕರು, ರೈತರು, ಕೃಷಿ ಕಾರ್ಮಿಕರು, ವಿದ್ಯಾರ್ಥಿಗಳು, ಯುವಜನರು ಹಾಗೂ ಮಹಿಳೆಯರು ಕೈ ಜೋಡಿಸಬೇಕು’ ಎಂದು ಪ್ರತಿಭಟನಕಾರರು ಹೇಳಿದರು.

‘ಎರಡೂ ಸರ್ಕಾರಗಳು ತಮ್ಮಿಷ್ಟದಂತೆ ನೀತಿಗಳನ್ನು ರೂಪಿಸುತ್ತಿವೆ. ಇದರಿಂದ ರೈತರು ಹಾಗೂ ದುಡಿಯುವ ವರ್ಗ ಸಂಕಷ್ಟಕ್ಕೆ ಸಿಲುಕುತ್ತಿದೆ. ಬಂಡವಾಳಶಾಹಿಗಳ ಪರವಾದ ನೀತಿಗಳನ್ನು ಸರ್ಕಾರಗಳು ಕೈ ಬಿಡಬೇಕು. ಇಲ್ಲದಿದ್ದರೆ ಗಂಭೀರ ಸ್ವರೂಪದಲ್ಲಿ ಹೋರಾಟ ಮುಂದುವರಿಸಬೇಕಾಗುತ್ತದೆ’ ಎಂದೂ ಎಚ್ಚರಿಸಿದರು.

ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘ದೇಶವನ್ನು ನಾವೆಲ್ಲರೂ ರಕ್ಷಿಸಬೇಕಿದೆ. ಪ್ರಜಾಪ್ರಭುತ್ವವಿರುವ ನಮ್ಮ ದೇಶದಲ್ಲಿ ಕೊರೊನಾ ವೈರಾಣು ಹರಡುತ್ತಿರುವ ಸಮಯವನ್ನೇ ಮುಂದಿಟ್ಟುಕೊಂಡು ಸರ್ಕಾರಗಳು, ಯಾರ ಗಮನಕ್ಕೂ ಬಾರದಂತೆ ಹೊಸ ಕಾನೂನುಗಳನ್ನು ಜಾರಿಗೊಳಿಸುತ್ತಿವೆ’ ಎಂದು ಆರೋಪಿಸಿದರು.

‘ಬಂಡವಾಳಶಾಹಿಗಳಿಗೆ ನೆರವಾಗುವಂತೆ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ಕಾಯ್ದೆ, ಕಾರ್ಮಿಕ ಕಾನೂನುಗಳನ್ನು ಸರ್ಕಾರ ತಿದ್ದುಪಡಿ ಮಾಡಿದೆ. ರೈತರ ಭೂಮಿ ಕಿತ್ತುಕೊಳ್ಳುವ ಕೆಲಸಕ್ಕೆ ಕೈ ಹಾಕಿದೆ. ಇದರ ವಿರುದ್ಧ ಹೋರಾಟ ನಡೆಸುವವರಿಗೆ ನಮ್ಮ ಬೆಂಬಲ ಸದಾ ಇರುತ್ತದೆ’ ಎಂದೂ ಹೇಳಿದರು. 

ಪ್ರಮುಖ ಬೇಡಿಕೆಗಳು... 

* ಎಪಿಎಂಸಿ ಕಾಯ್ದೆ, ಭೂ ಸಂಬಂಧಿ ಕಾಯ್ದೆ ಹಾಗೂ ಅಗತ್ಯ ಸಾಮಗ್ರಿ ಕಾಯ್ದೆಗಳ ತಿದ್ದುಪಡಿಗೆ ಹೊರಡಿಸಿರುವ ಸುಗ್ರಿವಾಜ್ಞೆಯನ್ನು ಹಿಂಪಡೆಯಬೇಕು.

* ಲಾಕ್‌ಡೌನ್‌ ಸಂದರ್ಭದಲ್ಲಿ ಮೃತಪಟ್ಟ ವಲಸೆ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ನೀಡಬೇಕು

* ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನಕ್ಕೆ ಪ್ರತಿವರ್ಷ ₹10,000 ಕೋಟಿ ನಿಧಿ ಸ್ಥಾಪಿಸಬೇಕು.

* ರಕ್ಷಣಾ ವಲಯ, ಸಾರಿಗೆ, ರೈಲ್ವೆ,  ಜೀವ ವಿಮಾ ನಿಗಮ, ಬ್ಯಾಂಕ್‌ಗಳು, ಬಂದರು, ವಿಮಾನ ನಿಲ್ದಾಣ ಸೇರಿದಂತೆ ಇತರೆ ಸರ್ಕಾರಿ ಉದ್ದಿಮೆಗಳನ್ನು ಖಾಸಗೀಕರಣಗೊಳಿಸುವುದನ್ನು ಕೂಡಲೇ ನಿಲ್ಲಿಸಬೇಕು.

* ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸದ ಅವಧಿಯನ್ನು ವರ್ಷಕ್ಕೆ 200ಕ್ಕೆ ಏರಿಸಬೇಕು. ಕೂಲಿ ದರವನ್ನು ದಿನಕ್ಕೆ ₹500ಕ್ಕೆ ಹೆಚ್ಚಿಸಬೇಕು.

* ನೂತನ ಶಿಕ್ಷಣ ನೀತಿ, ಗ್ರಾಮೀಣ ಉದ್ಯೋಗ ಖಾತರಿ ಯೋಜನೆ, ಸಾರ್ವತ್ರಿಕ ಮೂಲ ವರಮಾನ, ನಿರುದ್ಯೋಗ ಭತ್ಯೆ ಸೇರಿದಂತೆ ಕಾರ್ಮಿಕರು ಹಾಗೂ ರೈತ ಸಂಬಂಧಿ ವಿಷಯಗಳ ಬಗ್ಗೆ ಚರ್ಚಿಸಲು ವಿಶೇಷ ಅಧಿವೇಶನ ಕರೆಯಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು