ಬಂದ್‌: ಬೆಂಗಳೂರಿನ ಜನಜೀವನ ಸ್ಥಗಿತ

7

ಬಂದ್‌: ಬೆಂಗಳೂರಿನ ಜನಜೀವನ ಸ್ಥಗಿತ

Published:
Updated:

ಬೆಂಗಳೂರು: ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್‌ ನೀಡಿದ ಬಂದ್‌ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ನಗರದಲ್ಲಿ ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಅಂಗಡಿ, ಹೋಟೆಲ್‌ಗಳು ಬಂದ್‌ ಆಗಿವೆ. ಕ್ಯಾಬ್‌ ಮತ್ತು ದ್ವಿಚಕ್ರ ವಾಹನ ಸಂಚಾರ ಎಂದಿನಂತೆಯೇ ಇತ್ತು. 

ಗಿಜಿಗುಡುತ್ತಿದ್ದ ಚಿಕ್ಕಪೇಟೆ, ಕೆ.ಆರ್‌.ಪೇಟೆ ಮಾರುಕಟ್ಟೆ ಪ್ರದೇಶ ವ್ಯಾಪಾರ, ಜನಸಂದಣಿ ಇಲ್ಲದೇ ಖಾಲಿಯಾಗಿತ್ತು. ಶಾಪಿಂಗ್‌ ಮಾಲ್‌, ಚಿತ್ರಮಂದಿರಗಳು ಮುಚ್ಚಿದ್ದವು. ಮೆಜೆಸ್ಟಿಕ್‌ ನಿಲ್ದಾಣದಲ್ಲಿ ದೂರದ ಊರುಗಳಿಂದ ಬಂದ ಪ್ರಯಾಣಿಕರು ನಗರದಲ್ಲಿ ತಮಗೆ ಬೇಕಾದಲ್ಲಿಗೆ ಹೋಗಲಾಗದೆ ಅಲ್ಲೇ ಉಳಿದು ಕಾಯುತ್ತಿದ್ದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಜನಸಂದಣಿ ಸ್ವಲ್ಪ ಹೆಚ್ಚು ಇತ್ತು. ಸಮೀಪದ ನಗರಗಳಿಗೆ ಜನರು ರೈಲುಗಳ ಮೂಲಕ ಪ್ರಯಾಣಿಸಿದರು. 

ಆ್ಯಪ್‌ ಆಧರಿತ ಟ್ಯಾಕ್ಸಿ ಕಂಪನಿಗಳು ಬಂದ್‌ಗೆ ಬೆಂಬಲ ಸೂಚಿಸಿದ್ದವು. ಆದರೂ ಅಲ್ಲಲ್ಲಿ ಈ ಟ್ಯಾಕ್ಸಿಗಳು ಸಂಚರಿಸಿದವು. ವಿಮಾನ ನಿಲ್ದಾಣಕ್ಕೆ ಹೋಗುವ ಟ್ಯಾಕ್ಸಿಗಳು ಸಂಚರಿಸಿವೆ. ಆದರೆ, ನಿಲ್ದಾಣದ ರಸ್ತೆಯಲ್ಲಿ ಅವುಗಳನ್ನು ತಡೆಯಲಾಗಿದೆ. ಇಲ್ಲಿ ಕೆಲಕಾಲ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಕೆಲವೆಡೆ ಪೆಟ್ರೋಲ್‌ ಪಂಪ್‌, ಔಷಧ ಅಂಗಡಿಗಳು ತೆರೆದಿವೆ. ಕೆಲವು ದರ್ಶಿನಿಗಳು ಅರ್ಧ ಭಾಗದಷ್ಟು ಷಟರ್‌ ತೆರೆದು ವ್ಯಾಪಾರ ನಡೆಸಿದವು.

ಬೆಲೆ ಏರಿಕೆ ಖಂಡಿಸಿ ಜೆಡಿಎಸ್‌ ಹಾಗೂ ಕನ್ನಡಪರ ಸಂಘಟನೆ ಕಾರ್ಯಕರ್ತರು, ಆಟೊ ರಿಕ್ಷಾ ಮತ್ತು ಟ್ಯಾಕ್ಸಿ ಚಾಲಕರ ಸಂಘದವರು ಪುರಭವನದ ಮುಂದೆ ಪ್ರತಿಭಟನೆ ನಡೆಸಿದರು. ಮೈಸೂರು ಬ್ಯಾಂಕ್‌ ವೃತ್ತದ ಬಳಿ ಕಾಂಗ್ರೆಸ್‌, ಸಿಪಿಐ ಜತೆಗೆ ಕನ್ನಡಪರ ಸಂಘಟನೆಯವರು ಸೇರಿಕೊಂಡು ಎತ್ತಿನ ಬಂಡಿ ಏರಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಆನಂದರಾವ್‌ ವೃತ್ತದ ಬಳಿ ಕಾಂಗ್ರೆಸ್ ಹಾಗೂ ಕನ್ನಡಪರ ಸಂಘಟನೆಯವರು ಒಟ್ಟು ಸೇರಿ ಅಂಗಡಿ ಮುಂಗಟ್ಟುಗಳನ್ನು ಬಂದ್‌ ಮಾಡಿದರು. ಅಲ್ಲಿಂದ ಮೆರವಣಿಗೆ ಮೂಲಕ ಮೆಜೆಸ್ಟಿಕ್‌ ಕಡೆಗೆ ತೆರಳಿದರು. ಆನಂದರಾವ್‌ ವೃತ್ತದ ಬಳಿ ಕನ್ನಡಪರ ಸಂಘಟನೆಯವರು ಟೈರ್‌ಗೆ ಬೆಂಕಿ ಹಚ್ಚಿದರು. ಮೆಜೆಸ್ಟಿಕ್‌ ಬಸ್‌ ನಿಲ್ದಾಣದ ಸಮೀಪ ಬೇರೆ ಬೇರೆ ಸಂಘಟನೆಯವರು ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು.

ಮೆಜೆಸ್ಟಿಕ್‌ ಹಾಗೂ ಚಿಕ್ಕಪೇಟೆ ಬಳಿ ಕೆಲವು ಬೀದಿಬದಿ ವ್ಯಾಪಾರಿಗಳು ಜನರಿಗೆ ರಿಯಾಯಿತಿ ದರದಲ್ಲಿ ಊಟ ನೀಡಿದರು. ₹ 20ಕ್ಕೆ ಮುದ್ದೆ, ಸಾರು ನೀಡಿದರು. ನಿತ್ಯ ನಾವಿಲ್ಲಿ ವ್ಯಾಪಾರ ಮಾಡುತ್ತೇವೆ. ಆದರೆ, ಇಂದು ಬಂದ್‌ ಹಿನ್ನೆಲೆಯಲ್ಲಿ ಬೇರೆ ಹೋಟೆಲ್‌ ತೆರೆದಿರುವುದಿಲ್ಲ. ಮಾನವೀಯತೆ ದೃಷ್ಟಿಯಿಂದ ನಾವು ರಿಯಾಯಿತಿ ದರದಲ್ಲಿ ಊಟ ನೀಡುತ್ತಿದ್ದೇವೆ. ಪ್ರತಿ ಬಾರಿ ಬಂದ್‌ ನಡೆದಾಗ ನಾವು ಈ ಕಾರ್ಯ ಮಾಡುತ್ತೇವೆ ಎಂದು ವ್ಯಾಪಾರಿಗಳು ಹೇಳಿದರು.  ಚಿನ್ನಸ್ವಾಮಿ ಕ್ರೀಡಾಂಗಣ ಸಮೀಪದ ಫಾಸ್ಟ್‌ಫುಡ್‌ ಸೆಂಟರ್‌ವೊಂದರಲ್ಲಿಯೂ ಆಹಾರ ಪದಾರ್ಥಗಳ ಬೆಲೆ ಗಣನೀಯವಾಗಿ ಇಳಿಸಲಾಗಿತ್ತು. ₹ 20ಕ್ಕೆ ಪೊಂಗಲ್‌, ಪಲಾವ್ ನೀಡುತ್ತಿದ್ದರು. 

ಮೆಟ್ರೊ ಎಂದಿನಂತೆ ಸಂಚರಿಸಿದೆ. ಆದರೆ ಪ್ರಯಾಣಿಕರ ದಟ್ಟಣೆ ಕಡಿಮೆ ಇತ್ತು. ಟ್ಯಾಕ್ಸಿ, ಆಟೋ ರಿಕ್ಷಾ ಚಾಲಕರು ನಿಗದಿತ ದರಕ್ಕಿಂತ ಹೆಚ್ಚು ವಸೂಲಿ ಮಾಡುತ್ತಿದ್ದ ಬಗ್ಗೆ ಆರೋಪಗಳು ಕೇಳಿಬಂದಿವೆ. ಇಂದಿರಾ ಕ್ಯಾಂಟೀನ್‌ ಎಂದಿನಂತೆ ತೆರೆದಿತ್ತು. ಇಲ್ಲಿ ಜನಸಂದಣಿ ಹೆಚ್ಚು ಇತ್ತು.


ಮೈಸೂರು ಬ್ಯಾಂಕ್ ವೃತ್ತದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 2

  Happy
 • 3

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !