ಬೆಂಗಳೂರು: ಸಾಸಿವೆ ಸೇರಿದಂತೆ ಕುಲಾಂತರಿ ಬೆಳೆಗಳ ಪ್ರಯೋಗ ನಿಷೇಧ ಹಾಗೂ ರೈತ ಪರವಾದ ಕಾನೂನು ರೂಪಿಸುವುದನ್ನು ಒಳಗೊಂಡಂತೆ ಹಲವು ನಿರ್ಣಯಗಳನ್ನು ಶುಕ್ರವಾರ ನಗರದಲ್ಲಿ ಮುಕ್ತಾಯವಾದ ಭಾರತೀಯ ರೈತ ಚಳವಳಿಗಳ ಸಮನ್ವಯ ಸಮಿತಿ ಕೈಗೊಂಡಿತು.
ನಗರದಲ್ಲಿ ಗುರುವಾರ ಹಾಗೂ ಶುಕ್ರವಾರ ನಡೆದ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ, ಪಂಜಾಬ್, ರಾಜಸ್ಥಾನದ ರೈತ ಮುಖಂಡರು ಪಾಲ್ಗೊಂಡು ನಿರ್ಣಯ ಕೈಗೊಂಡರು.
ಕೇಂದ್ರ ಸರ್ಕಾರ ಕೃಷಿ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಅನೇಕ ದ್ವಿಪಕ್ಷೀಯ ಮುಕ್ತ ವಾಣಿಜ್ಯ ಒಪ್ಪಂದಗಳಿಗೆ ಏಕಪಕ್ಷೀಯ ಸಹಿ ಮಾಡುತ್ತಿದೆ. ಕೃಷಿ ಸಂವಿಧಾನದ ರಾಜ್ಯಪಟ್ಟಿಯಲ್ಲಿದೆ. ಎಲ್ಲ ಒಪ್ಪಂದಗಳ ಕರಡು ಪ್ರತಿಗಳು ಸಹಿ ಮಾಡುವ ರಾಜ್ಯ ಸರ್ಕಾರಗಳಿಗೆ ಮೊದಲೇ ಲಭ್ಯವಾಗಬೇಕು.
ರೈತ ಮುಖಂಡರಾದ ಉತ್ತರ ಪ್ರದೇಶದ ರಾಕೇಶ್ ಟಿಕಾಯತ್, ದೆಹಲಿಯ ಯುದ್ದವೀರ ಸಿಂಗ್ ಚುಕ್ಕಿ ನಂಜುಂಡಸ್ವಾಮಿ, ಕೆ.ಟಿ.ಗಂಗಾಧರ್ ಇದ್ದರು.
ನಿರ್ಣಯಗಳು:
* ಮುಕ್ತ ವಾಣಿಜ್ಯ ಒಪ್ಪಂದಗಳ ಮೇಲೆ ನಿಗಾ ವಹಿಸಲು ಘಟಕ ಆರಂಭಿಸಬೇಕು. ಜಾಗತಿಕ ತಾಪಮಾನದ ಕುರಿತು ಅಧ್ಯಯನ ನಡೆಸಬೇಕು.
* ಅತಿವೃಷ್ಟಿ–ಅನಾವೃಷ್ಟಿಯಿಂದ ಹತಾಶೆಗೆ ಒಳಗಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆತ್ಮಹತ್ಯೆಗೆ ಕಾರಣ ಪತ್ತೆಹಚ್ಚಲು ಅಧ್ಯಯನ ಸಮಿತಿ ರಚಿಸಬೇಕು. ಶಾಶ್ವತ ಪರಿಹಾರ ಹುಡುಕುವ ಜವಾಬ್ದಾರಿಯನ್ನು ಈ ಸಮಿತಿಗೆ ವಹಿಸಬೇಕು.
* ಈಶಾನ್ಯ ದೇಶಗಳಿಂದ ಕಡಿಮೆ ಸುಂಕದಲ್ಲಿ ತಾಳೆ ಎಣ್ಣೆ ಆಮದಾಗುತ್ತಿದೆ. ಇದರಿಂದ ಕರ್ನಾಟಕ, ತಮಿಳುನಾಡು, ಕೇರಳ, ಗೋವಾದ ತೆಂಗು ಬೆಳೆಗಾರರಿಗೆ ನಷ್ಟವಾಗುತ್ತಿದೆ. ಕೊಬ್ಬರಿಯನ್ನು ಆಹಾರ ಸರಬರಾಜು ಇಲಾಖೆಯು ನೇರವಾಗಿ ಖರೀದಿಸಿ ವಿತರಿಸಬೇಕು.
* ಕೊಬ್ಬರಿ ಖರೀದಿ ಕೇಂದ್ರ ತಕ್ಷಣ ಪ್ರಾರಂಭಿಸಬೇಕು. ನಫೆಡ್‌ನಲ್ಲಿ ಖರೀದಿಯಾದ ಕೊಬ್ಬರಿಯನ್ನು ಎಣ್ಣೆಮಾಡಿ ಮಾತ್ರವೇ ಮಾರುಕಟ್ಟೆಗೆ ಪೂರೈಸಬೇಕು ಅಥವಾ ಪಿಡಿಎಸ್‌ನಲ್ಲಿ ವಿತರಿಸಬೇಕು.
* ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯಲ್ಲಿನ 1,777 ಎಕರೆ ಭೂಮಿಯನ್ನು ಕೂಡಲೇ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಡಬೇಕು.
* ಯಲಹಂಕ ಬಳಿಯ ಶಿವರಾಮ ಕಾರಂತ ಬಡಾವಣೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ 2013ರ ಭೂಸ್ವಾಧೀನ ಕಾಯ್ದೆ ಅನ್ವಯ ಪರಿಹಾರ ವಿತರಿಸಬೇಕು. 2013ರ ಭೂಸ್ವಾಧೀನ ಕಾಯ್ದೆಗೆ 2018-19ರಲ್ಲಿ ತಂದಿರುವ ತಿದ್ದುಪಡಿ ರದ್ದು ಮಾಡಬೇಕು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.