ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸ್‌ ಇಲಾಖೆ ಸ್ವಚ್ಛಗೊಳಿಸಬೇಕಿದೆ: ಪೊಲೀಸ್‌ ಕಮಿಷನರ್ ಭಾಸ್ಕರ್ ರಾವ್‌

Last Updated 9 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

1990ರ ತಂಡದ ಐಪಿಎಸ್ ಅಧಿಕಾರಿ ಭಾಸ್ಕರ್‌ ರಾವ್‌ ಸೋಮವಾರ ನಗರ ಪೊಲೀಸ್‌ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಬೆಂಗಳೂರಿನಲ್ಲಿಯೇ ಹುಟ್ಟಿ, ಬೆಳೆದ ಅವರಿಗೆ ನಗರದ ಇಂಚಿಂಚೂ ಪರಿಚಯವಿದೆ. ನ್ಯಾಷನಲ್‌ ಕಾಲೇಜಿನಲ್ಲಿ ಪದವಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದಿಂದ ಆರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ರಾವ್‌, ಪೊಲೀಸ್‌ ಇಲಾಖೆ ಸೇರುವ ಮುನ್ನ ಎನ್‌ಎಂಕೆಆರ್‌ವಿ ಮಹಿಳಾ ಕಾಲೇಜಿನಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಮತ್ತು ಸೇನೆಯಲ್ಲಿ ಕೆಲಸ ಮಾಡಿದ್ದಾರೆ. ಪೊಲೀಸ್‌ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ನಂತರ ‘ಮೆಟ್ರೊ’ ಜೊತೆ ಅವರು ಅಪರಾಧಮುಕ್ತ ಬೆಂಗಳೂರು ಮತ್ತು ಪೊಲೀಸ್‌ ವ್ಯವಸ್ಥೆ ಕುರಿತು ಮಾತನಾಡಿದ್ದಾರೆ.

ಬಿಡುವಿಲ್ಲದ ಮೀಟಿಂಗ್‌, ಕೆಲಸದ ಒತ್ತಡ, ಅಭಿನಂದಿಸಲು ಬಂದ ಹಿತೈಷಿಗಳ ನಡುವೆ ಕಮಿಷನರ್‌ ಬ್ಯುಸಿ ಆಗಿದ್ದರು. ನಗರದ ಕಮಿಷನರ್‌ ಅವರನ್ನು ಮೊದಲ ಸಲ ಭೇಟಿ ಮಾಡಿ ಮಾತನಾಡಲು ‘ಮೆಟ್ರೊ’ ಐದಾರು ತಾಸು ಕಾಯಬೇಕಾಯಿತು. ಅಂತೂ ಅವರು ಮಾತಿಗೆ ಸಿಕ್ಕರು.

ಸರ್‌, ನಗರ ಪೊಲೀಸ್‌ ವ್ಯವಸ್ಥೆ ಸುಧಾರಣೆಗೆ ತಮ್ಮ ಆದ್ಯತೆಗಳು ಏನು?

ಮೊದಲು ಮನೆ ಸರಿಪಡಿಸಿ ನಂತರ ಊರು ಉದ್ಧಾರ ಮಾಡು ಎಂಬ ಮಾತಿದೆ. ಅದರಂತೆ ನಮ್ಮ ಪೊಲೀಸ್‌ ಇಲಾಖೆ ವ್ಯವಸ್ಥೆ ಸರಿಪಡಿಸುವುದು ನನ್ನ ಮೊದಲ ಆದ್ಯತೆಯಾಗಿದೆ.ಪೊಲೀಸ್‌ ಸಿಬ್ಬಂದಿಯನ್ನು ಕುಟುಂಬದ ಸದಸ್ಯರಂತೆ ಗೌರವದಿಂದ ಕಾಣುವುದು ಮತ್ತು ಅವರ ನೈತಿಕಸ್ಥೈರ್ಯ ಹೆಚ್ಚಿಸುವುದು ನನ್ನ ಮೊದಲ ಗುರಿ.

ಎಲ್ಲ ಕೆಲಸನ್ನೂ ನಾನೊಬ್ಬನೇ ಮಾಡಲು ಸಾಧ್ಯವಿಲ್ಲ. ನಾನಿಲ್ಲಿ ನೆಪ ಮಾತ್ರ. ಅಧಿಕಾರ ವಿಕೇಂದ್ರೀಕರಣದಿಂದ ಮಾತ್ರ ಇದು ಸಾಧ್ಯ. ಕೆಲಸ ಮತ್ತು ಜವಾಬ್ದಾರಿಯನ್ನು ಎಲ್ಲರಿಗೂ ಸಮನಾಗಿ ಹಂಚುತ್ತೇನೆ.ಪೊಲೀಸ್‌ ಸಿಬ್ಬಂದಿ ಒಳ್ಳೆಯ ಕೆಲಸ ಮಾಡಿದರೆ ಅಧಿಕಾರಿಗಳಿಗೆ ಹೆಸರು ಬರುತ್ತದೆ. ಸಲಹೆ, ಸೂಚನೆ ಮತ್ತು ಮಾರ್ಗದರ್ಶನ ನೀಡುವುದು ಅಧಿಕಾರಿಗಳ ಕೆಲಸ. ಅನುಷ್ಠಾನ ಮಾಡುವುದು ಪೊಲೀಸರ ಕೆಲಸ.

ಪೊಲೀಸರು ಹೇಗಿರಬೇಕು ಎಂದು ಬಯಸುತ್ತೀರಿ?

ಸಾರ್ವಜನಿಕರ ಎದುರು ಪ್ರತಿಯೊಬ್ಬ ಪೊಲೀಸ್‌ ಕೂಡ ಪೊಲೀಸ್‌ ಆಯುಕ್ತರಂತೆ ವರ್ತಿಸಬೇಕು. ನಗರ ಪೊಲೀಸ್‌ ಆಯುಕ್ತರಿಗೆ ಇರುವಷ್ಟೇ ಹೊಣೆಗಾರಿಕೆ, ಉತ್ತರದಾಯಿತ್ವ, ಜವಾಬ್ದಾರಿ ಮತ್ತು ಗೌರವ ಒಬ್ಬ ಪೊಲೀಸ್‌ ಪೇದೆಗೂ ಇರಬೇಕು ಎನ್ನುವುದು ನನ್ನ ಆಶಯ. ಸಾರ್ವಜನಿಕರು ಕೂಡ ನನಗೆ ಕೊಟ್ಟಷ್ಟೇ ಗೌರವವನ್ನು ನನ್ನ ಪೇದೆಗಳಿಗೂ ನೀಡಬೇಕು. ಏಕೆಂದರೆ ಆತ ನನ್ನ ಪ್ರತಿನಿಧಿ. ನಾನು ಸದಾ ಸಹೋದ್ಯೋಗಿ ಪೊಲೀಸ್‌ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಗೆಳೆಯರಂತೆ ಕಾಣುತ್ತೇನೆ. ನಗರದಲ್ಲಿರುವ 19 ಸಾವಿರ ಪೊಲೀಸ್‌ ಸಿಬ್ಬಂದಿ ನನ್ನ ಮಕ್ಕಳಿದ್ದಂತೆ.

ಪೊಲೀಸರ ವೈಯಕ್ತಿಕ ಜೀವನ ಮತ್ತು ವೃತ್ತಿ ಜೀವನ ನೆಮ್ಮದಿಯಿಂದ ಇರಬೇಕು. ಅಂದಾಗ ಮಾತ್ರ ಅವರು ಜನರೊಂದಿಗೂ ಒಳ್ಳೆಯ ರೀತಿಯಲ್ಲಿ ವರ್ತಿಸುತ್ತಾರೆ. ನೀವು ನಿಮ್ಮ ಕುಟುಂಬದೊಂದಿಗೆ ಸಂತೋಷ, ಸ್ವಸ್ಥವಾಗಿರಿ ಜತೆಗೆ ಜನರನ್ನೂ ಸಂತೋಷವಾಗಿಡಿ ಎಂದು ನಾನು ನನ್ನ ಸಿಬ್ಬಂದಿಗೆ ಮೊದಲ ದಿನವೇ ಹೇಳಿದ್ದೇನೆ.30 ವರ್ಷಗಳ ಸೇವೆಯಲ್ಲಿ ಕನಿಷ್ಠ ಮುಂಬಡ್ತಿಯಾದರೂ ಸಿಗಬೇಕು. ಅಂದಾಗ ಪೊಲೀಸರ ಮನೋಬಲ ಹೆಚ್ಚಾಗುತ್ತದೆ. ಇಲ್ಲದಿದ್ದರೆ ಅವರ ನೈತಿಕ ಸ್ಥೈರ್ಯ ಕುಗ್ಗುತ್ತದೆ.

ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ನಿರೀಕ್ಷಿಸಬಹುದೇ?

ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ಎಂಬ ಘೋಷಣೆ ಮಾಡಲಾರೆ. ಅದರಲ್ಲಿ ನಂಬಿಕೆ ಇಲ್ಲ. ನಾನು ಮೊದಲು ಜನಸ್ನೇಹಿಯಾಗಿರಬೇಕು. ಆಗ ನಮ್ಮ ಸಿಬ್ಬಂದಿ ತಾವಾಗಿಯೇ ಆ ಮಾರ್ಗ ಅನುಸರಿಸುತ್ತಾರೆ. ನಾನೇ ಜನರೊಂದಿಗೆ ಒರಟೊರಟಾಗಿ ವರ್ತಿಸಿ, ಜನಸ್ನೇಹಿಯಾಗಿರುವಂತೆ ಸಿಬ್ಬಂದಿಗೆ ಹೇಳಿದರೆ ಅದಕ್ಕೆ ಅರ್ಥ ಇರುವುದಿಲ್ಲ. ಪೊಲೀಸರು ‘ಟಫ್‌ ಕಾಪ್‌’ ಆಗಿರಬೇಕು. ಹಾಗಂತ ಜನರ ಮೇಲೆ ದರ್ಪ ತೋರುವುದು, ಬಡಿಯುವುದು, ಬೈಯ್ಯುವುದು ಅಥವಾ ಅನಾಗರಿಕರಂತೆ ವರ್ತಿಸುವುದು ಎಂದು ಅರ್ಥವಲ್ಲ.

ಜನರು ಪೊಲೀಸರನ್ನು ಕಂಡರೆ ಭಯ ಬೀಳುತ್ತಾರಲ್ಲ?

ಸಮಾಜದ ಸಜ್ಜನರು, ಗಣ್ಯರ ಒಡನಾಟದಿಂದ ಉನ್ನತಪೊಲೀಸ್‌ ಅಧಿಕಾರಿಗಳ ವ್ಯಕ್ತಿತ್ವ ವಿಭಿನ್ನವಾಗಿರುತ್ತದೆ. ಕೆಳ ಹಂತದ ಪೊಲೀಸ್ ಸಿಬ್ಬಂದಿ ಸದಾ ರೌಡಿಗಳು, ಕಳ್ಳಕಾಕರು, ವಿಧ್ವಂಸಕ ಶಕ್ತಿಗಳ ಜತೆ ನಿತ್ಯ ವ್ಯವಹರಿಸಬೇಕಾಗುತ್ತದೆ. ಹೀಗಾಗಿ ಅವರ ಮನಸ್ಥಿತಿ ಕೊಂಚ ಭಿನ್ನವಾಗಿರುತ್ತದೆ.ನಕಾರಾತ್ಮಕ ಶಕ್ತಿಗಳ ಜತೆಗಿನ ಸಂಪರ್ಕದಿಂದ ಪೊಲೀಸರಲ್ಲಿಯೂ ನಕಾರಾತ್ಮಕ ಮನೋಭಾವ ಬೆಳೆದಿರುತ್ತದೆ. ಇದರಿಂದ ಸಾರ್ವಜನಿಕರಿಗೆ ಅವರ ವರ್ತನೆ ಸ್ವಲ್ಪ ಕಟುವಾಗಿ ಕಾಣಬಹುದು. ಸಿಬ್ಬಂದಿ ಕೊರತೆಯಿಂದ ಹೆಚ್ಚಿದ ಕೆಲಸದ ಒತ್ತಡ ಕೂಡ ಇದಕ್ಕೆ ಕಾರಣ.ಮೊದಲು ಪೊಲೀಸ್‌ ಸಿಬ್ಬಂದಿಯಲ್ಲಿಯ ನಕಾರಾತ್ಮಕತೆ ತೊಡೆದು ಹಾಕಬೇಕಾಗಿದೆ. ಆಗ ಸಹಜವಾಗಿ ಸಾರ್ವಜನಿಕರಿಗೆ ಪೊಲೀಸರ ಬಗ್ಗೆ ಇರುವ ನಕಾರಾತ್ಮಕ ಅಭಿಪ್ರಾಯವೂ ಬದಲಾಗುತ್ತದೆ.

ಹುಟ್ಟಿ ಬೆಳೆದ ನಗರದ ಪೊಲೀಸ್‌ ಕಮಿಷನರ್‌ ಆಗುವ ಕನಸಿತ್ತಾ?

ಕನ್ನಡದವನಾಗಿ ಕರ್ನಾಟಕದಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ. ಬೆಂಗಳೂರಿನ ಮೂಲೆ, ಮೂಲೆ ಗೊತ್ತಿರುವುದರಿಂದ ಕೆಲಸ ಮಾಡುವುದು ಸುಲಭ. ಆದರೆ, ಬೆಂಗಳೂರು ಮೊದಲಿನಂತಿಲ್ಲ. ಸಾಕಷ್ಟು ಬದಲಾಗಿದೆ. ಸಂಬಂಧಗಳು ಮುಖ್ಯವಾಗಿದ್ದ ಜೀವನವನ್ನು ಇಂದು ಪೈಪೋಟಿ, ಯಾಂತ್ರಿಕತೆ ಮತ್ತು ಕೃತ್ರಿಮತೆ ನಿಯಂತ್ರಿಸುತ್ತಿವೆ. ಸಾಕಷ್ಟು ವೇಗದಲ್ಲಿರುವಜನರು ಒತ್ತಡದಲ್ಲಿದ್ದಾರೆ. ಹೀಗಾಗಿ ಅಪರಾಧ ಮತ್ತು ಅಪಘಾತಗಳ ಸಂಖ್ಯೆ ಹೆಚ್ಚುತ್ತಿವೆ.

ಪೊಲೀಸರಿಗೆ ಬಡ್ತಿ ಜತೆ ಯೋಗ

ಕೆಎಸ್‌ಆರ್‌ಪಿ ಎಡಿಜಿಪಿ ಭಾಸ್ಕರ್‌ ರಾವ್‌, ನಿವೃತ್ತಿಗೆ 2ಗಂಟೆ ಮೊದಲು 40 ಮಂದಿಗೆ ಬಡ್ತಿ ನೀಡಿದ್ದರು. ನಗರ ಪೊಲೀಸ್‌ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡ ಮೇಲೂ ಈ ಮುಂಬಡ್ತಿ ನೀತಿಯನ್ನು ಮುಂದುವರಿಸಿದ್ದಾರೆ. ಒಂದೇ ದಿನ 68 ಹೆಡ್‌ ಕಾನ್‌ಸ್ಟೇಬಲ್‌ಗಳಿಗೆ ಎಎಸ್‌ಐ ಹುದ್ದೆಗೆ ಮುಂಬಡ್ತಿ ನೀಡಿದ್ದಾರೆ. ಇನ್ನೂ ನೂರು ಸಿಬ್ಬಂದಿ ಮುಂಬಡ್ತಿ ಪಟ್ಟಿ ಸಿದ್ಧಪಡಿಸಿದ್ದಾರೆ.

ಯಾವ ಕೆಲಸವೂ ಸಣ್ಣದಲ್ಲ ಮತ್ತು ದೊಡ್ಡದೂ ಅಲ್ಲ. ಪೊಲೀಸ್‌ ಪೇದೆಯ ಕೆಲಸ ಸಣ್ಣದು ಎಂಬ ಸಿಬ್ಬಂದಿಯಲ್ಲಿರುವ ಕೀಳರಿಮೆ ಮತ್ತು ನಕಾರಾತ್ಮಕ ಮನೋಭಾವವ ತೊಡೆದು ಹಾಕುವ ಜತೆಗೆ ಪೊಲೀಸರಲ್ಲಿ ನಾಯಕತ್ವ ಗುಣ ಮತ್ತು ಸಾರ್ವಜನಿಕರೊಂದಿಗೆ ಹೇಗೆ ವರ್ತಿಸಬೇಕು ಎಂಬ ಬಗ್ಗೆ ಪುನಶ್ಚೇತನ ತರಬೇತಿ ಶಿಬಿರ ಆಯೋಜಿಸಲು ಸೂಚಿಸಿದ್ದಾರೆ.

ಪೊಲೀಸರ ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯ ಹೆಚ್ಚಿಸಲು ಪ್ರತಿನಿತ್ಯ 20 ನಿಮಿಷ ಯೋಗವನ್ನು ಕಡ್ಡಾಯ ಮಾಡಲಾಗಿದೆ. ಮನೆಯಲ್ಲಿ ಯೋಗಾಭ್ಯಾಸ ಮಾಡಲು ಯೋಗ ಚಾರ್ಟ್‌ ನೀಡಲಾಗುವುದು. ಪೊಲೀಸರಿಗೆ ಯೋಗ ಕಲಿಸಲು ಯೋಗಪಟುಗಳ ಜತೆ ಈಗಾಗಲೇ ಚರ್ಚಿಸಿದ್ದಾರೆ.

ಶಾಸ್ತ್ರೀಯ ಸಂಗೀತ ಇಷ್ಟ

ನಿತ್ಯ ವಾಯು ವಿಹಾರ, ಜಾಗಿಂಗ್, ವ್ಯಾಯಾಮ, ಸೈಕ್ಲಿಂಗ್‌ ತಪ್ಪಿಸುವುದಿಲ್ಲ. ಇವು ದಿನವಿಡಿ ಉಲ್ಲಾಸದಿಂದ ಇಟ್ಟಿರುತ್ತವೆ. ಕೆಲಸದ ಒತ್ತಡ ನಿಭಾಯಿಸಲು ನೆರವಾಗುತ್ತವೆ. ಬಿಡುವು ಸಿಕ್ಕಾಗ ಪುಸ್ತಕ ಓದುವುದು, ಸಂಗೀತ ಕೇಳುವ ಹವ್ಯಾಸವಿದೆ. ರಾತ್ರಿ ಎಷ್ಟೇ ಹೊತ್ತಿಗೆ ಮಲಗಲಿ, ಬೆಳಗಿನ ಜಾವ 4 ಗಂಟೆಗೆ ಏಳುವುದನ್ನು ಮತ್ತು ಧ್ಯಾನವನ್ನು ತಪ್ಪಿಸಿಲ್ಲ ಎನ್ನುತ್ತಾರೆ ಭಾಸ್ಕರ್‌ ರಾವ್‌.

ಶಾಸ್ತ್ರೀಯ ಸಂಗೀತ ಕೇಳುವುದು ಅತ್ಯಂತ ಇಷ್ಟದ ಹವ್ಯಾಸ. ಗಾಯನ ಸಮಾಜದಲ್ಲಿ ನಡೆಯುವ ಸಂಗೀತ ಕಚೇರಿಗಳಿಗೆ ತಪ್ಪದೇ ಹಾಜರಾಗುತ್ತಿದೆ. ಕೆಲಸದ ಒತ್ತಡದಿಂದ ಈಗ ಸಂಗೀತ ಕಛೇರಿಗಳಿಗೆ ಹೋಗಲು ಸಮಯ ಸಿಗುತ್ತಿಲ್ಲ. ಮನೆಯಲ್ಲಿಯೇ ಸಂಗೀತ ಕೇಳುತ್ತೇನೆ. ಧಾರವಾಡದಲ್ಲಿದ್ದಾಗ ಗಂಗೂಬಾಯಿ ಹಾನಗಲ್‌ ಮತ್ತು ಭೀಮಸೇನ್‌ ಜೋಶಿ ಅವರ ಸಂಗೀತ ಕಚೇರಿ ಕೇಳಿದ್ದೇನೆ ಎಂದು ಹವ್ಯಾಸಗಳನ್ನು ಹಂಚಿಕೊಂಡರು.

ಡ್ರಗ್ಸ್‌ ಹಾವಳಿ ನಿಜ

ನಗರದ ದೊಡ್ಡ ಬಾರ್‌, ಹೋಟೆಲ್‌, ಕೆಲವು ಕಾಲೇಜ್‌ ಕ್ಯಾಂಪಸ್‌ ಮತ್ತು ಹಾಸ್ಟೇಲ್‌ಗಳಲ್ಲಿ ಮಾದಕ ವಸ್ತುಗಳ ಹಾವಳಿ ಗುಟ್ಟಾಗಿ ಉಳಿದಿಲ್ಲ. ದೊಡ್ಡ ಹೋಟೆಲ್‌ ಪಾರ್ಟಿಗಳಲ್ಲಿ ತಂಪು ಪಾನೀಯಕ್ಕೆ ಕೋಕೇನ್‌ನಂತಹ ಡ್ರಗ್ಸ್‌ ಬೆರಸಿ ಕೊಡಲಾಗುತ್ತಿದೆ ಎಂಬ ದೂರುಗಳು ಬಂದಿವೆ. ಅದು ನಿಜ ಕೂಡ ಎನ್ನುತ್ತಾರೆ ಭಾಸ್ಕರ್‌ ರಾವ್‌. ಆ ಬಗ್ಗೆ ಅವರು ಏನು ಹೇಳುತ್ತಾರೆ ಎನ್ನುವುದನ್ನು ಅವರ ಮಾತಲ್ಲೇ ಕೇಳಿ.

ಮಾದಕ ವಸ್ತುಗಳ ಹಾವಳಿಗೆ ಕಡಿವಾಣ ಹಾಕುವಂತೆ ಬಾರ್‌, ರೆಸ್ಟೋರೆಂಟ್‌ ಮಾಲೀಕರು, ಕಾಲೇಜ್‌ ಪ್ರಾಂಶುಪಾಲರಿಗೆ, ಹಾಸ್ಟೇಲ್‌ ವಾರ್ಡನ್‌ಗಳಿಗೆ ಸೂಚಿಸಲಾಗಿದೆ. ಮಾದಕ ವಸ್ತುಗಳ ಮಾರಾಟ ಜಾಲ ಪತ್ತೆ ಹಚ್ಚುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಈ ವಿಷಯದಲ್ಲಿ ನಮ್ಮದು ‘ಜಿರೋ ಟಾಲರೆನ್ಸ್‌’ ನೀತಿ. ಯಾವುದೇ ರಾಜಿ ಇಲ್ಲ.

ಕಮ್ಮನಹಳ್ಳಿ, ಬಾಣಸವಾಡಿ, ಬ್ರಿಗೇಡ್‌ ರೋಡ್‌ ಸೇರಿದಂತೆ ಹಲವೆಡೆ ವಿದೇಶಿ ವಿದ್ಯಾರ್ಥಿಗಳು ಮಾದಕ ವಸ್ತು ಮಾರಾಟ, ಸೇವನೆಯಲ್ಲಿ ತೊಡಗಿರುವ ಮಾಹಿತಿ ಇದೆ. ಸ್ಥಳೀಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಬಲಿ ಆಗುತ್ತಿರುವುದು ಆತಂಕ ಮೂಡಿಸಿದೆ. ಮಾದಕ ವ್ಯಸನಕ್ಕಾಗಿ ದರೋಡೆ ಪ್ರಕರಣ ನಡೆದಿವೆ.

ಸ್ಟೂಡೆಂಟ್‌ ವೀಸಾ ಮೇಲೆ ನಗರಕ್ಕೆ ಬಂದಿರುವ ಆಫ್ರಿಕಾದ ವಿದ್ಯಾರ್ಥಿಗಳು ಅವಧಿ ಮುಗಿದರೂ ಇಲ್ಲಿ ಉಳಿದ್ದಾರೆ. ಡ್ರಗ್ಸ್‌ ಮತ್ತು ವೇಶ್ಯಾವಾಟಿಕೆಯಲ್ಲಿ ತೊಡಗಿರುವ ವಿದೇಶಿ ವಿದ್ಯಾರ್ಥಿಗಳನ್ನು ಹಿಡಿದು ಸಮಾಜ ಕಲ್ಯಾಣ ಇಲಾಖೆಯ ವಲಸಿಗರ ಕೇಂದ್ರಗಳಿಗೆ ಕಳಿಸಲಾಗುವುದು. ಸಂಬಂಧಿಸಿದ ರಾಯಭಾರಿ ಕಚೇರಿಗಳ ಜತೆ ಮಾತನಾಡಿ ಅವರನ್ನು ವಾಪಸ್‌ ಕಳಿಸಲಾಗುವುದು ಇಲ್ಲವೇ ಗಡೀಪಾರು ಮಾಡಲಾಗುವುದು.

ಸಾರ್ವಜನಿಕರಿಗೆ ತೊಂದರೆಯಾಗದಂತೆ ತಡರಾತ್ರಿ ಪಾರ್ಟಿ ಅಭ್ಯಂತರ ಇಲ್ಲ. ಹಾಗಂತ ನಿರ್ಲಕ್ಷಿಸುವುದಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ತಡರಾತ್ರಿ ಪಾರ್ಟಿಗಳ ಮೇಲೆ ಕಣ್ಣಿಡಲಾಗುವುದು.

* ಪೊಲೀಸರಿಗೆ ಜಾತಿ, ಧರ್ಮಗಳಿಲ್ಲ. ಪೊಲೀಸರಿಗಿರುವುದು ಒಂದೇ ಜಾತಿ. ಅದು ಖಾಕಿ ಜಾತಿ.ವೃತ್ತಿಯಲ್ಲಿ ನಾನು ಸಾಕಷ್ಟು ಸೋಲು, ಗೆಲುವು ಕಂಡಿದ್ದೇನೆ. ಸೋಲುಗಳು ನನಗೆ ಸಾಕಷ್ಟು ಪಾಠ ಕಲಿಸಿವೆ. ಮಾನಸಿಕವಾಗಿ ಮೊದಲಿಗಿಂತ ಹೆಚ್ಚು ಗಟ್ಟಿಯಾಗಿದ್ದೇನೆ.

-ಭಾಸ್ಕರ್‌ ರಾವ್‌, ಪೊಲೀಸ್‌ ಕಮಿಷನರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT