ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗೆ ಕಲುಷಿತ ನೀರು: ಜಲಚರ ಸಾವು

ರಾಜರಾಜೇಶ್ವರಿನಗರದ ಭೀಮನಕಟ್ಟೆ ಕೆರೆ
Last Updated 26 ಜುಲೈ 2020, 16:51 IST
ಅಕ್ಷರ ಗಾತ್ರ

ಬೆಂಗಳೂರು: ಜಲಮಂಡಳಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಾಜರಾಜೇಶ್ವರಿನಗರದ ಭೀಮನಕಟ್ಟೆ ಕೆರೆಗೆ ಕಲುಷಿತ ನೀರು ಹರಿಯುತ್ತಿದ್ದು, ಜಲಚರಗಳು ಸಾವಿಗೀಡಾಗುತ್ತಿವೆ ಎಂದು ಸ್ಥಳೀಯರು ದೂರಿದ್ದಾರೆ.

ಪಕ್ಕದ ನೈಸ್‌ ರಸ್ತೆಯಲ್ಲಿರುವ ವಸತಿ ಸಂಕೀರ್ಣಗಳಿಂದ ಕಲುಷಿತ ನೀರು ಕೆರೆಯನ್ನು ಸೇರುತ್ತಿದೆ. ಕೆರೆಯ ಉತ್ತರ ಭಾಗದಲ್ಲಿ ಸ್ಥಳೀಯರು ಮಳೆ ನೀರು ಸಂಗ್ರಹಕ್ಕೆ ಉತ್ತಮ ವ್ಯವಸ್ಥೆ ಕಲ್ಪಿಸಿದರೆ, ಕೆರೆಯ ಪೂರ್ವ ಭಾಗದಿಂದ ಕಲುಷಿತ ನೀರನ್ನು ಹರಿಬಿಡಲಾಗುತ್ತಿದೆ. ಪರಿಣಾಮ, ನೂರಾರು ಮೀನುಗಳು ಸಾವಿಗೀಡಾಗುತ್ತಿವೆ. ಕಳೆದ 23ರಿಂದಲೂ ಮೀನುಗಳು ಒಂದೊಂದಾಗಿ ಮರಣ ಹೊಂದುತ್ತಿವೆ.

‘ಕೆರೆಯ ನೀರು ಆಗಲೇ ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. ಎಚ್ಚೆತ್ತುಕೊಳ್ಳದಿದ್ದರೆ ಮತ್ತಷ್ಟು ಜಲಚರಗಳು ಸಾವಿಗೀಡಾಗಬೇಕಾಗುತ್ತವೆ. ಕೊಳಚೆ ನೀರು ಕೆರೆಗೆ ಸೇರದಂತೆ ಬಿಬಿಎಂಪಿ ಮತ್ತು ಜಲಮಂಡಳಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಪರಿಸರ ಹೋರಾಟಗಾರ ಜೋಸೆಫ್‌ ಹೂವರ್‌ ಒತ್ತಾಯಿಸಿದ್ದಾರೆ.

‘ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕೆರೆಯನ್ನು ಅಭಿವೃದ್ಧಿ ಮಾಡಲಾಗಿದೆ ಎಂದು ಬಿಬಿಎಂಪಿ ಹೇಳುತ್ತದೆ. ಸುತ್ತ–ಮುತ್ತಲಿನ ಮನೆಗಳಿಂದ ಕೊಳಚೆ ನೀರು ಕೆರೆಗೆ ಬರುತ್ತಿದೆ. ಜಲಮಂಡಳಿಯು ಈ ಮನೆಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು’ ಎಂದು ಹೇಳಿದರು.

‘ಈ ಹಿಂದೆ ಆಕರ್ಷಕ ತಾಣದಂತೆ ಭೀಮನಕಟ್ಟೆ ಕೆರೆ ಕಂಗೊಳಿಸುತ್ತಿತ್ತು. ಜಲಚರಗಳು– ಪಕ್ಷಿಗಳು ಸೇರುತ್ತಿದ್ದು, ಉತ್ತಮ ವಾತಾವರಣ ಸೃಷ್ಟಿಯಾಗುತ್ತಿತ್ತು. ಈಗ ಕಲುಷಿತವಾಗಿರುವುದರಿಂದ ದುರ್ವಾಸನೆ ಬರುತ್ತಿದೆ’ ಎಂದು ನಾಣಯ್ಯ ಪಟ್ಟದ ಎಂಬುವರು ಹೇಳುತ್ತಾರೆ.

‘110 ಹಳ್ಳಿಗಳಿಗೆ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಯಡಿ ಈ ಭಾಗದ ಸುಮಾರು 200 ಮನೆಗಳು ಒಳಪಡುತ್ತಿವೆ. ಈ ಮನೆಗಳಿಗೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಕಾರ್ಯ ಪ್ರಗತಿಯಲ್ಲಿದೆ. ಅಲ್ಲದೆ, ಕಾರ್ಯನಿರ್ವಾಹಕ ಎಂಜಿನಿಯರ್‌ ಸೋಮವಾರ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ’ ಎಂದು ಜಲಮಂಡಳಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಗಂಗಲಕ್ಷ್ಮಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT