ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾಹ ಸಂಭ್ರಮಕ್ಕೆ ದಿಕ್ಸೂಚಿಯಾದ ‘ಭೂಮಿಕಾ ಕ್ಲಬ್‌’

ಮದುವೆಯ ಸಿದ್ಧತೆ ಬಗ್ಗೆ ಮಾಹಿತಿ ಒದಗಿಸಿದ ಪರಿಣತರು
Last Updated 25 ಫೆಬ್ರುವರಿ 2023, 19:31 IST
ಅಕ್ಷರ ಗಾತ್ರ

ಬೆಂಗಳೂರು: ಪ್ರತಿ ವ್ಯಕ್ತಿಗೂ ವಿವಾಹವು ಜೀವನದ ಪ್ರಮುಖ ಘಟ್ಟ. ಇದನ್ನು ಸ್ಮರಣೀಯಗೊಳಿಸಲು ಯಾವ ರೀತಿಯ ಸೆಟ್ ರೂಪಿಸಬೇಕು?, ನಿಶ್ಚಿತಾರ್ಥ ಸೇರಿ ವಿವಿಧ ಶಾಸ್ತ್ರಗಳ ಸಂದರ್ಭದಲ್ಲಿ ಧರಿಸಬೇಕಾದ ಉಡುಪು ಯಾವ ಬಗೆಯದ್ದಾಗಿರಬೇಕು? ಚರ್ಮದ ಬಣ್ಣಕ್ಕೆ ಸರಿ ಹೊಂದುವಂತೆ ಮೇಕಪ್ ಮಾಡಿಕೊಳ್ಳುವ ಬಗೆ ಹೇಗೆ...

ಹೀಗೆ ವಿವಾಹ ನಿಶ್ಚಯವಾದಾಗ ಕಾಡುವ ಹತ್ತಾರು ಪ್ರಶ್ನೆಗಳಿಗೆ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ನ ‘ಭೂಮಿಕಾ ಕ್ಲಬ್’ ವೇದಿಕೆಯ ವಿವಾಹ ಆವೃತ್ತಿಯ ವಿಶೇಷ ಕಾರ್ಯಕ್ರಮ ಉತ್ತರ ಒದಗಿಸಿತು. ಮಲಬಾರ್ ಗೋಲ್ಡ್‌ ಆ್ಯಂಡ್ ಡೈಮಂಡ್ಸ್, ಹಟ್ಟಿ ಕಾಪಿ ಹಾಗೂ ಸ್ಟೈಲ್‌ ಸ್ಟ್ರಾಡಾ ಸಹಯೋಗದಲ್ಲಿ ಇಲ್ಲಿನ ಸೇಂಟ್ ಜೋಸೆಫ್ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಶನಿವಾರ ನಡೆದ ಕಾರ್ಯಕ್ರಮಕ್ಕೆ ಚಲನಚಿತ್ರ ನಟಿ ಭವಾನಿ ಪ್ರಕಾಶ್ ಚಾಲನೆ ನೀಡಿದರು.

ಉತ್ಸಾಹದಿಂದ ಪಾಲ್ಗೊಂಡಿದ್ದ ಮಹಿಳೆಯರು, ಇತ್ತೀಚಿನ ಫ್ಯಾಷನ್, ಮೇಕಪ್ ಟ್ರೆಂಡ್‌ಗಳ ಬಗ್ಗೆ ತಿಳಿದುಕೊಂಡರು. ಕಾರ್ಯಕ್ರಮದ ಮಧ್ಯೆ ನಡೆದ ರಸಪ್ರಶ್ನೆ ಪ್ರೇಕ್ಷಕರ ಸಕ್ರಿಯ ತೊಡಗಿಸಿಕೊಳ್ಳುವಿಕೆಗೆ ನೆರವಾಯಿತು. ಸರಿ ಉತ್ತರ ಹೇಳಿದವರಿಗೆ ಆಕರ್ಷಕ ಉಡುಗೊರೆಗಳನ್ನೂ ನೀಡಲಾಯಿತು. ಇಡೀ ಕಾರ್ಯಕ್ರಮ ಮಾಹಿತಿ, ಮನರಂಜನೆ ಒದಗಿಸಿತು.

‘ವಿವಾಹ ಆಯೋಜನೆ’ಯ ಬಗ್ಗೆ ಮಾತನಾಡಿದ ಅಡೋರೆಬ್ಲಿಸ್ ಸಂಸ್ಥೆಯ ಸ್ಥಾಪಕಿ ಗೀತಾ ನಾಯ್ಡು, ‘2017ರಿಂದ ವಿವಾಹ ಆಯೋಜನೆ ಮಾಡುತ್ತಾ ಬಂದಿದ್ದೇವೆ. ನಿಶ್ಚಿತಾರ್ಥ, ಅರಶಿನ ಶಾಸ್ತ್ರ, ವಿವಾಹ, ಆರತಕ್ಷತೆ ಸೇರಿ ವಿವಾಹಕ್ಕೆ ಸಂಬಂಧಿಸಿದಂತೆ ಸೆಟ್‌ಗಳನ್ನು ನಿರ್ಮಿಸಿಕೊಡುತ್ತಿದ್ದೇವೆ. ಬಜೆಟ್ ಮತ್ತು ಸಮಯ ಲಭ್ಯತೆಯ ಆಧಾರದಲ್ಲಿ ಸೆಟ್ ವಿನ್ಯಾಸ ಮಾಡಲಾಗುವುದು. ಈವರೆಗೆ 971 ಕಾರ್ಯಕ್ರಮಗಳನ್ನು ನಡೆಸಿದ್ದೇವೆ. ವಿವಾಹಕ್ಕೆ ಒಂದು ದಿನವಿದ್ದಾಗಲೂ ಅದ್ದೂರಿ ಸೆಟ್ ರೂಪಿಸಿದ ಉದಾಹರಣೆಯಿದೆ. ಎಲ್ಲ ರೀತಿಯ ಶುಭ ಸಮಾರಂಭಗಳನ್ನು ಆಯೋಜಿಸುತ್ತೇವೆ’ ಎಂದು ಹೇಳಿದರು.

‘ಮೇಕಪ್’ ಬಗ್ಗೆ ಮಾತನಾಡಿದ ಸುಷ್ಮಾ ನಾಣಯ್ಯ, ‘ವಧುವಿನ ಚರ್ಮಕ್ಕೆ ಅನುಗುಣವಾಗಿ ಮೇಕಪ್ ಮಾಡಬೇಕಾಗುತ್ತದೆ. ಆದ್ದರಿಂದ ಬ್ಯೂಟಿಷಿಯನ್ ಸಂಪರ್ಕಿಸಿ, ಅಗತ್ಯ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬೇಕು. ಮದುವೆ ಹತ್ತಿರ ಇರುವಾಗ ಉತ್ತಮವಾಗಿ ನಿದ್ದೆ ಮಾಡಬೇಕು. ದೈನಂದಿನ ಸಾಮಾನ್ಯ ಮೇಕಪ್‌ ಅನ್ನು 15ರಿಂದ 20 ನಿಮಿಷಗಳಲ್ಲಿ ಮಾಡಬಹುದು. ವಧುವಿಗೆ ಮಾಡುವ ಮೇಕಪ್‌ಗೆ 2 ಗಂಟೆ ಬೇಕಾಗುತ್ತದೆ’ ಎಂದು ತಿಳಿಸಿ, ಯುವತಿಯೊಬ್ಬರಿಗೆ ಮೇಕಪ್ ಪ್ರಾತ್ಯಕ್ಷಿಕೆ ನೀಡಿದರು.

ಭವಾನಿ ಪ್ರಕಾಶ್ ಅವರ ನೇತೃತ್ವದಲ್ಲಿ ಸ್ಟೈಲ್‌ ಸ್ಟ್ರಾಡಾ ವಿವಾಹಕ್ಕೆ ಸಂಬಂಧಿಸಿದ ಫ್ಯಾಷನ್ ಶೋ ನಡೆಸಿತು.

‘ಹಳೆ ಬಟ್ಟೆಗೆ ಹೊಸ ವಿನ್ಯಾಸ’

‘ವಿವಾಹದ ವೇಳೆ ಗಾಗ್ರಾ, ಲೆಹೆಂಗಾ, ಗೌನ್ ಹಾಗೂ ಸೀರೆ ಧರಿಸಬಹುದು. ವಿವಾಹಕ್ಕೆ ಮೂರು ತಿಂಗಳು ಮೊದಲು ಸಂಪರ್ಕಿಸಿದಲ್ಲಿ ಸರಿಹೊಂದುವ ವಿನ್ಯಾಸ ಮಾಡಲು ಸಾಧ್ಯ. ವಿವಾಹಕ್ಕೆ ಹೋಗುವವರು ಒಂದು ವಾರ ಇದ್ದಾಗ ಸಂಪರ್ಕಿಸಿದರೆ ಬಟ್ಟೆಯನ್ನು ಸಿದ್ಧಪಡಿಸಿಕೊಡಲಾಗುವುದು. ಆಭರಣಕ್ಕೆ ಅನುಗುಣವಾಗಿ ಕೇಶವಿನ್ಯಾಸವನ್ನೂ ಮಾಡಿಕೊಳ್ಳಬೇಕಾಗುತ್ತದೆ’ ಎಂದು ಫ್ಯಾಷನ್ ಡಿಸೈನರ್ ಶೈನಿ ಅಲೆಕ್ಸಾಂಡರ್ ತಿಳಿಸಿದರು.

‘ಮದುವೆಗೆ ಬಟ್ಟೆ ಖರೀದಿಸುವ ಮೊದಲು ವಿನ್ಯಾಸಗಾರರನ್ನು ಸಂಪರ್ಕಿಸುವುದು ಉತ್ತಮ. ಹಲವು ಬಾರಿ ಸೀರೆ ಧರಿಸಿದ ಮೇಲೆ ಬೇಸರ ಬಂದಲ್ಲಿ, ಆ ಸೀರೆಯನ್ನೇ ಲೆಹೆಂಗಾ ಅಥವಾ ಹೊಸ ವಿನ್ಯಾಸದ ಉಡುಪಾಗಿ ಸಿದ್ಧಪಡಿಸಿಕೊಡುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT