ಮಂಗಳವಾರ, ಸೆಪ್ಟೆಂಬರ್ 21, 2021
21 °C
ಬಳಸುವುದಕ್ಕೆ ಹೆಚ್ಚಿನ ನೀರಿನ ಮರುಪೂರಣ ಮಾಡುತ್ತಿರುವ ಬಿಐಎಎಲ್

ಮಳೆ ನೀರು ಸಂಗ್ರಹ: ಕೆಐಎ ಮಾದರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯು (ಬಿಐಎಎಲ್‌) ನಗರದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) ಆವರಣದಲ್ಲಿ ಮಳೆ ನೀರು ಇಂಗುಗುಂಡಿಗಳನ್ನು ಇಂಗಿಸುವ ಮೂಲಕ, ತಾನು ಬಳಸುವುದಕ್ಕಿಂತ ಹೆಚ್ಚಿನ ನೀರನ್ನು ಮರುಪೂರಣ ಮಾಡುತ್ತಿದೆ. ಅಲ್ಲದೆ, ಸುತ್ತಲಿನ ಐದು ಹಳ್ಳಿಗಳ ನೀರಿನ ದಾಹವನ್ನು ಇಂಗಿಸಿದೆ.

ನಿಲ್ದಾಣದ ಆವರಣದಲ್ಲಿ 300ಕ್ಕೂ ಅಧಿಕ ಮಳೆನೀರು ಮರುಪೂರಣ ಗುಂಡಿಗಳನ್ನು ನಿರ್ಮಿಸಲಾಗಿದೆ. ಜತೆಗೆ ತಾರಸಿಯ ಮೂಲಕವೂ ಮಳೆನೀರು ಸಂಗ್ರಹಿಸುವ ವ್ಯವಸ್ಥೆ ಮಾಡಲಾಗಿದೆ. ಸುತ್ತಲಿನ ಐದು ಹಳ್ಳಿಗಳಲ್ಲೂ ಈ ವ್ಯವಸ್ಥೆಯನ್ನು ವಿಸ್ತರಿಸಿರುವ ಪರಿಣಾಮ ಕೆಐಎ ಕ್ಯಾಂಪಸ್‌ನಲ್ಲಿ ಮಾತ್ರವಲ್ಲದೆ ಸುತ್ತಲಿನ 300ಕ್ಕೂ ಹೆಚ್ಚು ಕುಟುಂಬಗಳಿಗೂ ನೀರಿನ ಸಮಸ್ಯೆ ಬಹುತೇಕ ನಿವಾರಣೆಯಾಗಿದೆ.

‘ಇದು ಬಿಐಎಎಲ್‌ನಲ್ಲಾದ ಗಮನಾರ್ಹ ಸಾಧನೆ. ನೀರು ಬಳಕೆ, ಮರುಬಳಕೆ, ಶುದ್ಧೀಕರಣ ಮತ್ತು ಜಲಮೂಲಗಳ ಮರುಪೂರಣದಿಂದ ಸುಸ್ಥಿರತೆ ಸಾಧಿಸಲು ಸಾಧ್ಯವಾಗಿದೆ. ಈ ಕಾರ್ಯಕ್ರಮಗಳು ವಿಮಾನ ನಿಲ್ದಾಣಕ್ಕೆ ಸೀಮಿತವಾಗಿಲ್ಲ. ಸಮುದಾಯಕ್ಕೂ ವಿಸ್ತರಿಸಲಾಗಿದೆ. ನಮ್ಮ ಕಾರ್ಯಗಳು ಈ ಪ್ರದೇಶದಲ್ಲಿ ಇತರರಿಗೂ ಸ್ಫೂರ್ತಿಯಾಗಿವೆ’ ಎಂದು ಬಿಐಎಎಲ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿ ಮರಾರ್ ಹೇಳಿದರು.

ಎಸ್‌ಟಿಪಿ ಸ್ಥಾಪನೆ: ಬೆಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಗೆ ನಿರ್ವಹಣೆಗೆ ಲಕ್ಷಾಂತರ ಲೀಟರ್‌ಗಳ ನೀರು ಅಗತ್ಯ. ಇದಕ್ಕಾಗಿ ಪುರಸಭೆಯನ್ನು ಅವಲಂಬಿಸುವ ಬದಲಿಗೆ ದಿನಕ್ಕೆ 25 ಲಕ್ಷ ಲೀಟರ್‌ ಸಾಮರ್ಥ್ಯದ ಕೊಳಚೆನೀರು ಶುದ್ಧೀಕರಣ ಘಟಕವನ್ನು (ಎಸ್‌ಟಿಪಿ) ಬಿಐಎಎಲ್‌ ನಿರ್ಮಿಸಿಕೊಂಡಿದೆ. ಈ ಮೂಲಕ ನೀರು ಮರುಬಳಕೆ ಮಾಡಲಾಗುತ್ತಿದೆ.

ಅದೇ ನೀರು ನಿಲ್ದಾಣದ ಆವರಣದಲ್ಲಿರುವ ಭೂದೃಶ್ಯ ಭಾಗಕ್ಕೆ ನೀರಾವರಿ ವ್ಯವಸ್ಥೆ ಒದಗಿಸಲು ಮತ್ತು ಅಗ್ನಿ ಅವಘಡದ ವೇಳೆ ಬೆಂಕಿ ನಂದಿಸುವ ಅಗತ್ಯಗಳಿಗೆ ಬಳಸಲಾಗುತ್ತಿದೆ. ನೀರು ವ್ಯರ್ಥವಾಗುವುದನ್ನು ತಡೆಯಲು ಚರಂಡಿಗಳನ್ನು ನಿರ್ಮಿಸಲಾಗಿದ್ದು ನೀರು ವಿಮಾನ ನಿಲ್ದಾಣಕ್ಕೆ ಹೊಂದಿಕೊಂಡಿರುವ ಬೆಟ್ಟಕೋಟೆ ಕೆರೆಗೆ ಸೇರುವಂತೆ ಮಾಡಲಾಗಿದೆ.

ಈ ಎಲ್ಲ ಕ್ರಮಗಳಿಂದ ಕ್ಯಾಂಪಸ್ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಅಂತರ್ಜಲ ಮಟ್ಟ ಕೂಡ ಸಾಕಷ್ಟು ಏರಿಕೆಯಾಗಿದೆ. ಕೆಲವು ಕೊಳವೆಬಾವಿಗಳಿಗೆ ಕೂಡ ಜೀವಬಂದಿದೆ ಎಂದು ಬಿಐಎಎಲ್ ತಿಳಿಸಿದೆ.

22 ಲಕ್ಷ ಯೂನಿಟ್ ಉಳಿತಾಯ: ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಹಯೋಗದಲ್ಲಿ ಸುತ್ತಲಿನ ಕೆರೆಗಳ ಪ್ರದೇಶ ಒಳಗೊಂಡು ವಿಮಾನ ನಿಲ್ದಾಣ ಮತ್ತು ಸುತ್ತಲೂ ಜಲ ಸುಸ್ಥಿರತೆಯ ಅಧ್ಯಯನವನ್ನು ನಡೆಸಲಾಗಿದೆ. ಸೌರವಿದ್ಯುತ್ ಮತ್ತಿತರ ಕ್ರಮಗಳಿಂದ 2020-21ರಲ್ಲಿ ಸುಮಾರು 22 ಲಕ್ಷ ಯೂನಿಟ್ ಇಂಧನ ಉಳಿತಾಯ ಮಾಡಿದ್ದು, ಇದು ತಿಂಗಳಿಗೆ ಸುಮಾರು ಒಂಬತ್ತು ಸಾವಿರ ಮನೆಗಳಿಗೆ ಪೂರೈಸುವ ವಿದ್ಯುಚ್ಛಕ್ತಿಗೆ ಸಮವಾಗಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು