ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉರುಳಿ ಬಿತ್ತು ದೊಡ್ಡ ಆಲದ ಮರದ ಬಿಳಲು

ಪಕ್ಕದ ಬಿಳಲಿಗೆ ತೊಂದರೆ ತಪ್ಪಿಸಲು ಬಿದ್ದಿರುವ ಬಿಳಲು ಕತ್ತರಿಸಲು ತಜ್ಞರ ಶಿಫಾರಸು
Last Updated 13 ಮೇ 2022, 1:16 IST
ಅಕ್ಷರ ಗಾತ್ರ

ಬೆಂಗಳೂರು: 400 ವರ್ಷಗಳಷ್ಟು ಹಳೆಯದಾದ ಹಾಗೂ ದೇಶದ 6ನೇ ಅತೀ ದೊಡ್ಡ ಆಲದ ಮರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದೊಡ್ಡ ಆಲದ ಮರದ ಬಿಳಲು ರೂಪದ ಬೇರಿನ ಸಮೂಹವು ಭಾರಿ ಮಳೆ ಮತ್ತು ಗಾಳಿಯಿಂದಾಗಿ ಭಾನುವಾರ ರಾತ್ರಿ ನೆಲಕ್ಕುರುಳಿದೆ. ಅವುಗಳನ್ನು ಕತ್ತರಿಸಿ ತೆರವುಗೊಳಿಸಲು ದೊಡ್ಡ ಆಲದ ಮರ ಸಂರಕ್ಷಣಾ ಸಮಿತಿ ಶಿಫಾರಸು ಮಾಡಿದೆ.

ಸ್ಥಳಕ್ಕೆ ಗುರುವಾರ ಭೇಟಿ ನೀಡಿದ್ದ ಸಮಿತಿಯ ಅಧ್ಯಕ್ಷ ಡಾ.ಅ.ನ.ಯಲ್ಲಪ್ಪರೆಡ್ಡಿ, ಬೊಟಾನಿಕಲ್ ಸರ್ವೆ ಆಫ್ ಇಂಡಿಯಾದ ನಿರ್ದೇಶಕ ಡಾ.ಸಂಜಪ್ಪ ನೇತೃತ್ವದ ತಜ್ಞರ ತಂಡವು ಅಧಿಕಾರಿಗಳು ಮತ್ತು ಸ್ಥಳೀಯರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿತು. 3 ಎಕರೆಗಳಷ್ಟು ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಆಲದ ಮರದಲ್ಲಿ ಒಟ್ಟು 1,359 ಬಿಳಲು ಬೇರುಗಳಿದ್ದು, ಈ ಪೈಕಿ 811 ಸಂಖ್ಯೆಯ ಬಿಳಲುಗಳು ನೆಲದೊಳಕ್ಕೆ ಬೇರುಬಿಟ್ಟಿವೆ. ಉಳಿದ 548 ಬಿಳಲುಗಳು ನೆಲದಿಂದ 10ರಿಂದ 20 ಅಡಿ ಎತ್ತರದಲ್ಲಿ ತೂಗುತ್ತಿವೆ.

‘ದೊಡ್ಡ ಆಲದ ಮರದ ಮೂಲ ಕಾಂಡವು 60 ವರ್ಷಗಳ ಹಿಂದೆಯೇ ನೈಸರ್ಗಿಕವಾಗಿ ಬಿದ್ದು ನಾಶವಾಗಿದೆ. ಬಿಳಲು ಬೇರುಗಳ ಸಮೂಹ ಭಾನುವಾರ ರಾತ್ರಿ ಬಿದ್ದಿರುವುದು ಕೂಡ ಮಳೆ–ಗಾಳಿಯ ಕಾರಣದಿಂದಲೇ’ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

‘ಮಣ್ಣು ತೆಗೆದಿರುವುದರಿಂದ ಬೇರುಗಳ ಸಮೂಹ ಉರುಳಿದೆ ಎಂಬುದು ಸುಳ್ಳು. ತಜ್ಞರ ಸಮಿತಿ ಶಿಫಾರಸಿನಂತೆ ಕಾಡುಗಿಡಗಳನ್ನು ತೆರವುಗೊಳಿಸಿ ಹೆಚ್ಚುವರಿ 30 ಲೋಡ್‌ ಕೆಂಪು ಮಣ್ಣು ಹರಡಿ, 3 ಟನ್‌ ಸಾವಯವ ಗೊಬ್ಬರ ಮತ್ತು ಸಾವಯವ ಮಿಶ್ರಣ ಹಾಕಿ ಹದಗೊಳಿಸಲಾಗಿದೆ. ಇಡೀ ಆವರಣಕ್ಕೆ ಹುಲ್ಲುಹಾಸು ಹಾಕಿರುವುದನ್ನೂ ಸಮಿತಿ ಗಮನಿಸಿತು’ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ (ಲಾಲ್‌ಬಾಗ್‌) ಎಂ.ಜಗದೀಶ್ ‘ಪ್ರಜಾವಾಣಿ’ಗೆ ವಿವರಿಸಿದರು.

‘ಪಕ್ಕದ ಬೇರುಗಳ ಸಮೂಹಕ್ಕೆ ಹಾನಿ ಆಗುವುದನ್ನು ತಪ್ಪಿಸಲು ಈಗ ಬಿದ್ದಿರುವ ಬಿಳಲು ಬೇರುಗಳನ್ನು ಕತ್ತರಿಸಿ ತೆರವುಗೊಳಿಸುವುದು ಸೂಕ್ತ. ಬಿದ್ದಿರುವ ಬೇರುಗಳಲ್ಲಿ ಆಯ್ದ 2–3 ಕಾಂಡಗಳನ್ನು ಕತ್ತರಿಸಿ ಅದೇ ಸ್ಥಳದಲ್ಲಿ ನೆಡುವುದರಿಂದ ಮುಂದೆ ಅವು ಕೂಡ ಆಲದ ಮರದ ಭಾಗವಾಗುತ್ತವೆ ಎಂದೂ ಸಮಿತಿ ಸಲಹೆ ನೀಡಿದೆ’ ಎಂದು ತಿಳಿಸಿದರು.

‘ಮತ್ತೆರಡು ಬಿಳಲುಗಳ ಸಮೂಹದ ದೃಢತೆ ನೈಸರ್ಗಿಕವಾಗಿ ಕುಗಿದ್ದು, ಅವುಗಳೂ ಮಳೆ ಗಾಳಿಗೆ ಹಾನಿಗೊಳ್ಳುವ ಸಂಭವ ಇದೆ. ಅವುಗಳ ಸುತ್ತ ಕಲ್ಲುಗಳನ್ನು ಜೋಡಿಸಿ ಮಧ್ಯಭಾಗಕ್ಕೆ ಕೆಂಪು ಮಣ್ಣನ್ನು ತುಂಬಿಸಿದರೆ ಅವಘಡ ತಪ್ಪಿಸಬಹುದು. ಭೂಮಿಗೆ ತಾಕಲು ಹತ್ತಿರದಲ್ಲಿರುವ ಕಾಂಡಗಳಿಗೆ ಕಬ್ಬಿಣದ ಸಲಾಕೆಗಳಿಂದ ಆಸರೆ ಒದಗಿಸಬೇಕು. ಬಾಗಿರುವ ಬೇರುಗಳನ್ನು ನಿಧಾನವಾಗಿ ಎಳೆದು ಕಟ್ಟಬೇಕು ಎಂಬ ಸಲಹೆಯನ್ನೂ ಸಮಿತಿ ನೀಡಿದೆ. ಅದರಂತೆ ಕ್ರಮ ವಹಿಸಲಾಗುವುದು’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT