ಬೈಕ್‌ಗೆ ಗುದ್ದಿದ ಟ್ರಕ್; ವೈದ್ಯ ದುರ್ಮರಣ

7

ಬೈಕ್‌ಗೆ ಗುದ್ದಿದ ಟ್ರಕ್; ವೈದ್ಯ ದುರ್ಮರಣ

Published:
Updated:

ಬೆಂಗಳೂರು: ಬಳ್ಳಾರಿ ರಸ್ತೆಯ ಕಾವೇರಿ ಚಿತ್ರಮಂದಿರ ಜಂಕ್ಷನ್‌ ಬಳಿ ಬೈಕ್‌ಗೆ ಸಿಮೆಂಟ್ ಮಿಕ್ಸರ್ ಟ್ರಕ್ ಗುದ್ದಿದ್ದರಿಂದ ಸವಾರ ಬಾಬು (52) ಎಂಬುವರು ಮೃತಪಟ್ಟಿದ್ದಾರೆ.

ಹಲಸೂರಿನ ನಿವಾಸಿಯಾದ ಬಾಬು, ವೈದ್ಯರಾಗಿದ್ದರು. ಬೈಕ್ ಹಿಂಬದಿ ಕುಳಿತಿದ್ದ ರಜನಿ ಎಂಬುವರು ಗಾಯಗೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಸದಾಶಿವನಗರ ಸಂಚಾರ ಪೊಲೀಸರು, ಟ್ರಕ್ ಚಾಲಕ ಅಭಿಜಿತ್ ಪಾಲ್ (46) ಎಂಬಾತನನ್ನು ಬಂಧಿಸಿದ್ದಾರೆ.

‘ಬಾಬು, ಪರಿಚಯಸ್ಥರಾದ ರಜನಿ ಜೊತೆ ಬೈಕ್‌ನಲ್ಲಿ ಸೋಮವಾರ ಬೆಳಿಗ್ಗೆ ಹೆಬ್ಬಾಳಕ್ಕೆ ಹೊರಟಿದ್ದರು. ಕಾವೇರಿ ಚಿತ್ರಮಂದಿರ ಜಂಕ್ಷನ್ ಬಳಿ ತಿರುವು ತೆಗೆದುಕೊಳ್ಳುವಾಗ ಹಿಂದಿನಿಂದ ಬಂದಿದ್ದ ಟ್ರಕ್, ಬೈಕ್‌ಗೆ ಗುದ್ದಿತ್ತು. ಕೆಳಗೆ ಬಿದ್ದ ಬಾಬು ಹಾಗೂ ರಜನಿಯವರ ಕಾಲುಗಳ ಮೇಲೆ ಟ್ರಕ್‌ನ ಚಕ್ರಗಳು ಹರಿದು ಹೋಗಿದ್ದವು. ಅವರಿಬ್ಬರನ್ನೂ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ ಬಾಬು ಅಸುನೀಗಿದ್ದಾರೆ. ರಜನಿಯವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಘಟನೆ ಬಗ್ಗೆ ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆಯಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಅಪಘಾತ ಸಂಭವಿಸಿದ್ದ ರಸ್ತೆ ಮೂಲಕವೇ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹ್ಮದ್ ಅವರು ಕಾರಿನಲ್ಲಿ ಹೊರಟಿದ್ದರು. ಗಾಯಾಳುಗಳನ್ನು ಕಂಡ ಅವರು, ಕಾರಿನಿಂದ ಇಳಿದು ಆಸ್ಪತ್ರೆಗೆ ಕಳುಹಿಸಲು ನೆರವಾದರು. ತಮ್ಮ ಅಂಗರಕ್ಷಕನನ್ನು ಗಾಯಾಳುಗಳ ಜೊತೆಯಲ್ಲೇ ಆಂಬುಲೆನ್ಸ್‌ನಲ್ಲಿ ಕಳುಹಿಸಿಕೊಟ್ಟಿದ್ದರು’ ಎಂದು ಪೊಲೀಸರು ತಿಳಿಸಿದರು.

ಗೃಹ ರಕ್ಷಕಿ ಸಾವು: ಕನಕಪುರ ರಸ್ತೆಯ ಟೋಲ್‌ ಬಳಿ ಬೈಕ್‌ ಗುದ್ದಿದ್ದರಿಂದ ಗಾಯಗೊಂಡಿದ್ದ ಗೃಹ ರಕ್ಷಕಿ ಶಶಿಕಲಾ (25) ಎಂಬುವರು ಚಿಕಿತ್ಸೆಗೆ ಸ್ಪಂದಿಸದೇ ಭಾನುವಾರ ಮೃತಪಟ್ಟಿದ್ದಾರೆ.

ಕಗ್ಗಲೀಪುರ ನಿವಾಸಿಯಾದ ಅವರು, ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಗೃಹರಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. 

‘ಶನಿವಾರ ಸಂಜೆ ಕೆಲಸ ಮುಗಿದ ಬಳಿಕ ಸಹೋದ್ಯೋಗಿ ಮಂಜುಳಾ ಜೊತೆಯಲ್ಲಿ ಶಶಿಕಲಾ ಮನೆಗೆ ಹೊರಟಿದ್ದರು. ಅದೇ ವೇಳೆ ರಸ್ತೆ ದಾಟಲು ಮುಂದಾಗಿದ್ದಾಗ, ಪ್ರಜ್ವಲ್‌ ಎಂಬುವರು ಚಲಾಯಿಸುತ್ತಿದ್ದ ಬೈಕ್ ಗುದ್ದಿತ್ತು. ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವದಿಂದ ಪ್ರಜ್ಞೆ ಕಳೆದುಕೊಂಡಿದ್ದ ಶಶಿಕಲಾ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು’ ಎಂದು ಕುಮಾರಸ್ವಾಮಿ ಲೇಔಟ್ ಸಂಚಾರ ಪೊಲೀಸರು ಹೇಳಿದರು.

‘ಘಟನೆಯಲ್ಲಿ ಬೈಕ್ ಸವಾರ ಪ್ರಜ್ವಲ್‌ ಹಾಗೂ ಮಂಜುಳಾ ಅವರಿಗೂ ಗಾಯವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದರು.   

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !