ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡಿಯಲ್ಲಿ ಬಿದ್ದು ದ್ವಿಚಕ್ರ ವಾಹನ ಸವಾರ ಸಾವು

ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಅವಘಡ * ಜಲಮಂಡಳಿ ಎಂಜಿನಿಯರ್, ಗುತ್ತಿಗೆದಾರರ ನಿರ್ಲಕ್ಷ್ಯ?
Last Updated 18 ಸೆಪ್ಟೆಂಬರ್ 2021, 19:25 IST
ಅಕ್ಷರ ಗಾತ್ರ

ಬೆಂಗಳೂರು: ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಜಲಮಂಡಳಿಯ ಕಾಮಗಾರಿ ಸಲುವಾಗಿ ತೋಡಿದ್ದ ಗುಂಡಿಯಲ್ಲಿ ಬಿದ್ದು ದ್ವಿಚಕ್ರ ವಾಹನ ಸವಾರ ಆನಂದಪ್ಪ (47) ಎಂಬುವರು ಮೃತಪಟ್ಟಿದ್ದು, ಈ ಬಗ್ಗೆ ಪೀಣ್ಯ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಬಾಗಲಗುಂಟೆ ನಿವಾಸಿ ಆನಂದಪ್ಪ, ಬಟ್ಟೆ ತೊಳೆಯುವ ಯಂತ್ರ ದುರಸ್ತಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು ಶುಕ್ರವಾರ ರಾತ್ರಿ 1 ಗಂಟೆ ಸುಮಾರಿಗೆ ಕೆಲಸ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ಮರಳುತ್ತಿದ್ದ ವೇಳೆ ಈ ಅವಘಡ ಸಂಭವಿಸಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘8ನೇ ಮೈಲಿಯಿಂದ ಹೆಸರಘಟ್ಟಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯ ಹಲವೆಡೆ ಜಲಮಂಡಳಿಯ ಕಾಮಗಾರಿಗಾಗಿ ಗುಂಡಿಗಳನ್ನು ತೋಡಲಾಗಿತ್ತು. ಇಲ್ಲಿನ ದೊಡ್ಡ ಗಾತ್ರದ ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುವಂತಿದ್ದವು. ಗುಂಡಿ ಸುತ್ತಮುತ್ತ ಬ್ಯಾರಿಕೇಡ್ ಸಹ ನಿಲ್ಲಿಸಲಾಗಿತ್ತು. ಆದರೆ, ವಾಹನ ಸವಾರರು ಗುಂಡಿಗೆ ಬೀಳುವುದನ್ನು ತಪ್ಪಿಸಲು ಇದು ಸಾಲುತ್ತಿರಲಿಲ್ಲ’ ಎಂದೂ ಮೂಲಗಳು ತಿಳಿಸಿವೆ.

ಗುಂಡಿಗೆ ಬಿದ್ದು ತಲೆಗೆ ಪೆಟ್ಟು; ‘ಆನಂದಪ್ಪ ಅವರು ಸಾಗುತ್ತಿದ್ದ ದ್ವಿಚಕ್ರ ವಾಹನವು ಗುಂಡಿ ಬಳಿ ಉರುಳಿ ಬಿದ್ದ ಪರಿಣಾಮ, ಅವರು ವಾಹನದಿಂದ ಗುಂಡಿಯೊಳಗೆ ಬಿದ್ದಿದ್ದರು. ಅವರ ಮೇಲೆಯೇ ವಾಹನವೂ ಬಿದ್ದಿತ್ತು’ ಎಂದೂ ಪೊಲೀಸ್ ಮೂಲಗಳು ಹೇಳಿವೆ.

‘ವಾಹನ ಹಾಗೂ ಆನಂದಪ್ಪ ಅವರನ್ನು ಕಂಡ ಸ್ಥಳೀಯರು ಠಾಣೆಗೆ ಮಾಹಿತಿ ನೀಡಿದ್ದರು. ಪ್ರಜ್ಞೆ ತಪ್ಪಿದ್ದ ಆನಂದಪ್ಪ ಅವರನ್ನು ಸಪ್ತಗಿರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಲೆಗೆ ತೀವ್ರ ಪೆಟ್ಟು ಬಿದ್ದು ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದರು. ಘಟನೆ ಬಗ್ಗೆ ಕುಟುಂಬದವರು ದೂರು ನೀಡಿದ್ದು, ಅದರನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ಮೂಲಗಳು ತಿಳಿಸಿವೆ.

ಕರೆ ಸ್ವೀಕರಿಸದ ಆನಂದಪ್ಪ: ‘ಆನಂದಪ್ಪ ಅವರಿಗೆ ಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆನಂದಪ್ಪ ಅವರು ಮನೆಗೆ ಬಾರದಿದ್ದರಿಂದ ಗಾಬರಿಗೊಂಡ ಕುಟುಂಬದವರು, ಅವರ ಮೊಬೈಲ್‌ಗೆ ಕರೆ ಮಾಡಿದ್ದರು. ಯಾವುದೇ ಸ್ಪಂದನೆ ಸಿಕ್ಕಿರಲಿಲ್ಲ’ ಎಂದೂ ಸಂಬಂಧಿಕರೊಬ್ಬರು ಹೇಳಿದರು.

‘ಬೆಳಿಗ್ಗೆ ಪುನಃ ಕರೆ ಮಾಡಿದಾಗ ಪೊಲೀಸರು ಮಾತನಾಡಿದರು. ಆನಂದಪ್ಪ ಮೃತಪಟ್ಟಿದ್ದು, ಸಪ್ತಗಿರಿ ಆಸ್ಪತ್ರೆಗೆ ಬರುವಂತೆ ಹೇಳಿದ್ದರು. ಮರಣೋತ್ತರ ಪರೀಕ್ಷೆ ಮುಗಿಸಿ ಶನಿವಾರ ಮೃತದೇಹ ಹಸ್ತಾಂತರಿಸಿದ್ದಾರೆ’ ಎಂದೂ ತಿಳಿಸಿದರು.

'ಆನಂದಪ್ಪ ಅವರ ಸಾವಿಗೆ ಜಲಮಂಡಳಿ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯವೇ ಕಾರಣ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದೂ ಸಂಬಂಧಿಕರು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT