ಬೆಂಗಳೂರು: ಬೈಕ್ ಕೀ ವಿಚಾರವಾಗಿ ತಿಲಕ್ ಎನ್ನುವವರನ್ನು ಕೊಲೆ ಮಾಡಲಾಗಿದ್ದು, ಕೃತ್ಯ ಎಸಗಿರುವ ಆರೋಪಿ ಸಿದ್ದರಾಜು ಗಿರಿನಗರ ಠಾಣೆಗೆ ಶರಣಾಗಿದ್ದಾರೆ.
‘ನೇಪಾಳದ ತಿಲಕ್, ಹೊಸಕೆರೆಹಳ್ಳಿಯಲ್ಲಿರುವ ಕೋಳಿ ಮಾಂಸ ಮಾರಾಟ ಮಳಿಗೆಯಲ್ಲಿ ಕೆಲಸ ಮಾಡುತ್ತಿದ್ದರು. ಮಂಡ್ಯದ ಸಿದ್ದರಾಜು ಸಹ ಅದೇ ಮಳಿಗೆಯಲ್ಲಿ ಕೆಲಸಕ್ಕಿದ್ದ. ಇಬ್ಬರೂ ಒಂದೇ ಕೊಠಡಿಯಲ್ಲಿ ವಾಸವಿದ್ದರು’ ಎಂದು ಪೊಲೀಸರು ಹೇಳಿದರು.
‘ಮಳಿಗೆ ಕೆಲಸಕ್ಕೆ ಸುತ್ತಾಡಲು ಒಂದೇ ಬೈಕ್ ಇತ್ತು. ತಿಲಕ್ ಹಾಗೂ ಸಿದ್ದರಾಜು, ಪ್ರತ್ಯೇಕವಾಗಿ ಆಗಾಗ ಬೈಕ್ ತೆಗೆದುಕೊಂಡು ಓಡಾಡುತ್ತಿದ್ದರು. ಬೈಕ್ ವಿಚಾರವಾಗಿ ಆಗಾಗ ಜಗಳವಾಡುತ್ತಿದ್ದರು’ ಎಂದರು.
ಮದ್ಯದ ಅಮಲಿನಲ್ಲಿ ಜಗಳ: ‘ತಿಲಕ್ ಹಾಗೂ ಸಿದ್ದರಾಜು ನಡುವೆ ಬೈಕ್ ಕೀ ವಿಚಾರವಾಗಿ ಭಾನುವಾರ ಮಳಿಗೆಯಲ್ಲಿ ಗಲಾಟೆ ಆಗಿತ್ತು. ಮಳಿಗೆಯಲ್ಲಿದ್ದ ಇತರರು, ಜಗಳ ಬಿಡಿಸಿದ್ದರು. ಇಬ್ಬರೂ ರಾತ್ರಿ ಕೊಠಡಿಗೆ ಬಂದು ಮದ್ಯ ಕುಡಿದಿದ್ದರು’ ಎಂದು ಪೊಲೀಸರು ಹೇಳಿದರು.
‘ಮದ್ಯದ ಅಮಲಿನಲ್ಲಿದ್ದ ಇಬ್ಬರೂ ಬೈಕ್ ಕೀ ವಿಚಾರವಾಗಿ ಪರಸ್ಪರ ಬೈದಾಡಿಕೊಂಡಿದ್ದರು. ಮಾತಿನ ಚಕಮಕಿ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಅದೇ ಸಂದರ್ಭದಲ್ಲಿ ಆರೋಪಿ ಸಿದ್ದರಾಜು, ಚಾಕುವಿನಿಂದ ತಿಲಕ್‌ಗೆ ಇರಿದಿದ್ದ. ತೀವ್ರ ರಕ್ತಸ್ರಾವದಿಂದ ತಿಲಕ್ ಸ್ಥಳದಲ್ಲೇ ಮೃತಪಟ್ಟಿದ್ದರು’ ಎಂದರು.
‘ಕೃತ್ಯದ ಬಳಿಕ ಠಾಣೆಗೆ ಬಂದಿದ್ದ ಸಿದ್ದರಾಜು, ‘ನನ್ನ ಸ್ನೇಹಿತನನ್ನು ಕೊಂದಿದ್ದೇನೆ. ಬಂಧಿಸಿ’ ಎಂದಿದ್ದ. ಸ್ಥಳಕ್ಕೆ ಹೋದ ಸಿಬ್ಬಂದಿ, ಮೃತದೇಹವನ್ನು ಆಸ್ಪತ್ರೆಗೆ ಸಾಗಿಸಿದ್ದರು. ನಂತರ, ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಆರೋಪಿಯನ್ನು ಬಂಧಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.