ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೈಕ್ ಸೈಡ್‌ ಸ್ಟ್ಯಾಂಡ್‌ನಿಂದ ಅಪಘಾತ: ಇಬ್ಬರ ಸಾವು

ನಂದಿಬೆಟ್ಟದಿಂದ ನಗರಕ್ಕೆ ಬರುವಾಗ ಅವಘಡ: ಮೇಲ್ಸೇತುವೆಯಿಂದ ಬಿದ್ದು ಮೃತಪಟ್ಟ ವಿದ್ಯಾರ್ಥಿಗಳು
Last Updated 29 ಅಕ್ಟೋಬರ್ 2022, 20:45 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಬೈಕ್ ಉರುಳಿಬಿದ್ದು ಅಪಘಾತ ಸಂಭವಿಸಿದ್ದು, ಬೈಕ್‌ನಲ್ಲಿ ಹೊರಟಿದ್ದ ಇಬ್ಬರು ಸ್ನಾತಕೋತ್ತರ ವಿದ್ಯಾರ್ಥಿಗಳು ಮೇಲ್ಸೇತುವೆಯಿಂದ ಬಿದ್ದು ಮೃತಪಟ್ಟಿದ್ದಾರೆ.

‘ದೆಹಲಿಯ ಅಮಿತ್ ಸಿಂಗ್ (29) ಹಾಗೂ ಮಹಾರಾಷ್ಟ್ರದ ಅಮೋಲ್ ಪ್ರವೋದ್ ಆಮ್ಟೆ (29) ಮೃತರು. ಘಟನೆಯಲ್ಲಿ ಬೈಕ್ ಸವಾರ ರಾಜಸ್ಥಾನ್‌ದ ಸೌರವ್ ದೇವ್ (27) ತೀವ್ರ ಗಾಯಗೊಂಡಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಯಲಹಂಕ ಸಂಚಾರ ಠಾಣೆ ಪೊಲೀಸರ ಹೇಳಿದರು.

‘ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಫ್ಯಾಶನ್ ಟೆಕ್ನಾಲಜಿ ಕಾಲೇಜೊಂದರಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದ ಮೂವರೂ ಸ್ನೇಹಿತರು ಒಂದೇ ಬೈಕ್‌ನಲ್ಲಿ ಶನಿವಾರ ಬೆಳಿಗ್ಗೆ ನಂದಿಬೆಟ್ಟಕ್ಕೆ ಹೋಗಿದ್ದರು. ಅಲ್ಲಿಂದ ಮಧ್ಯಾಹ್ನ ವಾಪಸು ಬರುವಾಗ ಈ ಅವಘಡ ಸಂಭವಿಸಿದೆ’ ಎಂದು ತಿಳಿಸಿದರು.

‘ಅಮಿತ್‌ ಸಿಂಗ್ ಅವರ ಅಣ್ಣನ ಹೆಸರಿನಲ್ಲಿ ನೋಂದಣಿ ಆಗಿರುವ ಬೈಕ್‌ನಲ್ಲಿ ಮೂವರು ಸ್ನೇಹಿತರು ಹೊರಟಿದ್ದರು. ಸೌರವ್, ಬೈಕ್ ಚಲಾಯಿಸುತ್ತಿದ್ದರು. ಹಿಂಬದಿಯಲ್ಲಿ ಅಮಿತ್ ಸಿಂಗ್ ಹಾಗೂ ಅಮೋಲ್ ಪ್ರಮೋದ್ ಆಮ್ಟೆ ಕುಳಿತಿದ್ದರು’ ಎಂದು ಹೇಳಿದರು.

ಸಿಮೆಂಟ್‌ ಬ್ಲಾಕ್‌ಗೆ ತಾಗಿದ್ದ ಸೈಡ್ ಸ್ಟ್ಯಾಂಡ್: ‘ಬೈಕ್‌ನ ಸೈಡ್‌ ಸ್ಟ್ಯಾಂಡ್‌ ತೆರೆದುಕೊಂಡಿದ್ದ ಸ್ಥಿತಿಯಲ್ಲಿತ್ತು. ಅದನ್ನು ಸವಾರರು ಗಮನಿಸಿರಲಿಲ್ಲ. ಸೌರವ್, ಅತಿ ವೇಗವಾಗಿ ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿದ್ದರು. ಯಲಹಂಕದ ರೈತರ ಸಂತೆ ಮೇಲ್ಸೇತುವೆಯಲ್ಲಿ ಸಿಮೆಂಟ್ ಬ್ಲಾಕ್‌ಗೆ ಸೈಡ್ ಸ್ಟ್ಯಾಂಡ್ ತಾಗಿದ್ದರಿಂದ, ಬೈಕ್ ಉರುಳಿಬಿದ್ದಿತ್ತು’ ಎಂದು ಪೊಲೀಸರು ತಿಳಿಸಿದರು.

‘ಅಪಘಾತದಿಂದಾಗಿ ಅಮಿತ್ ಸಿಂಗ್ ಹಾಗೂ ಅಮೋಲ್ ಪ್ರವೋದ್ ಆಮ್ಟೆ ಮೇಲ್ಸೇತುವೆಯಿಂದ ಹಾರಿ ಕೆಳರಸ್ತೆಗೆ ಬಿದ್ದಿದ್ದರು. ತಲೆ ಹಾಗೂ ದೇಹದ ಹಲವು ಭಾಗಗಳಿಗೆ ತೀವ್ರ ಪೆಟ್ಟು ಬಿದ್ದಿದ್ದರಿಂದ ಅವರಿಬ್ಬರು ಮೃತಪಟ್ಟಿದ್ದಾರೆ’ ಎಂದರು.

ಹೆಲ್ಮೆಟ್‌ನಿಂದ ತಲೆಗೆ ರಕ್ಷಣೆ: ‘ಸವಾರ ಸೌರವ್, ಹೆಲ್ಮೆಟ್ ಧರಿಸಿದ್ದರು. ಅಪಘಾತದ ವೇಳೆ ಮೇಲ್ಸೇತುವೆ ರಸ್ತೆಯಲ್ಲಿ ಬೈಕ್ ಸಮೇತ ಬಿದ್ದಿದ್ದ ಅವರ ತಲೆಗೆ ಯಾವುದೇ ಪೆಟ್ಟು ಬಿದ್ದಿಲ್ಲ. ಕೈ ಹಾಗೂ ಕಾಲಿಗೆ ಮಾತ್ರ ಗಾಯವಾಗಿದೆ’ ಎಂದು ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT