ಗುರುವಾರ , ಫೆಬ್ರವರಿ 25, 2021
29 °C
‘ಕಾನ್‌ಸ್ಟೆಬಲ್’ ಎಂದು ಹೇಳಿ ವಂಚಿಸುತ್ತಿದ್ದ: ವಿಚಾರಣೆ ನಡೆಸಿ ಕ್ರಮಕೈಗೊಳ್ಳುವುದಾಗಿ ಡಿಸಿಪಿ ಹೇಳಿಕೆ

ಠಾಣೆಯಲ್ಲೇ ಆರೋಪಿ ಹುಟ್ಟುಹಬ್ಬ ಆಚರಣೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಪೊಲೀಸ್ ಕಾನ್‌ಸ್ಟೆಬಲ್‌’ ಎಂದು ನಕಲಿ ಗುರುತಿನ ಚೀಟಿ ಸೃಷ್ಟಿಸಿಕೊಂಡು ಜನರನ್ನು ವಂಚಿಸುತ್ತಿದ್ದ ಆರೋಪದಡಿ ಬಂಧಿಸಲಾಗಿದ್ದ ಅಭಿಷೇಕ್ ಎಂಬಾತನ ಹುಟ್ಟುಹಬ್ಬವನ್ನು ಠಾಣೆಯಲ್ಲೇ ಆಚರಿಸಲಾಗಿದೆ. ಈ ಬೆಳವಣಿಗೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. 

‘ಪೊಲೀಸರ ಹೆಸರಿನಲ್ಲಿ ಕಾರು ಬಾಡಿಗೆ ಪಡೆದು ಜಖಂಗೊಳಿಸಿರುವ ಅಭಿಷೇಕ್, ದುರಸ್ತಿಗೆ ಹಣ ಕೇಳಿದರೆ ಪ್ರಕರಣ ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾನೆ’ ಎಂದು ಟಿ.ದಾಸರಹಳ್ಳಿ ನಿವಾಸಿ ಕಾರ್ತಿಕ್ ಎಂಬವರು ವಿದ್ಯಾರಣ್ಯಪುರ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

ಈಗ ಬಂಧಿತ ಆರೋಪಿಯ ಜನ್ಮದಿನವನ್ನು ಠಾಣೆಯಲ್ಲಿ ಸಿಬ್ಬಂದಿ ಆಚರಿಸಿದ್ದು, ಅದರ ವಿಡಿಯೊ ಎಲ್ಲೆಡೆ ಹರಿದಾಡುತ್ತಿದೆ. ಪಿಎಸ್‌ಐ, ಸಿಬ್ಬಂದಿ ಆರೋಪಿಗೆ ಕೇಕ್ ತಿನ್ನಿಸುತ್ತಿರುವುದು ದೃಶ್ಯ ವಿಡಿಯೊದಲ್ಲಿದೆ.

ವಿಡಿಯೊ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಈಶಾನ್ಯ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್, ‘ಇದು ವರ್ಷದ ಹಿಂದಿನ ವಿಡಿಯೊ ಎಂಬುದು ಗೊತ್ತಾಗಿದೆ. ಇಲಾಖಾ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.

‘ಭಾತ್ಮಿದಾರನಾಗಿದ್ದ ಅಭಿಷೇಕ್, ಸಿಬ್ಬಂದಿ ಜೊತೆ ಒಡನಾಟ ಹೊಂದಿದ್ದ. ವರ್ಷದ ಹಿಂದೆ ಠಾಣೆಯಲ್ಲೇ  ಹುಟ್ಟುಹಬ್ಬ ಆಚರಿಸಿಕೊಂಡಿದ್ದ. ಇದು, ಅದೇ ವಿಡಿಯೊ. ವಿಡಿಯೊದಲ್ಲಿರುವ ಪಿಎಸ್‌ಐ ಹಾಗೂ ಸಿಬ್ಬಂದಿ, ನಾಲ್ಕು ತಿಂಗಳ ಹಿಂದೆಯೇ ಬೇರೆಡೆ ವರ್ಗಾವಣೆಗೊಂಡಿದ್ದಾರೆ’ ಎಂದು ತಿಳಿಸಿದರು.

‘ಎನ್‌ಕೌಂಟರ್’ ಎಂದು ಕಾರು ಪಡೆದಿದ್ದ: ‘ಎನ್‌ಕೌಂಟರ್‌ ಮಾಡಲು ಗೋವಾಗೆ ಹೋಗಬೇಕಿದೆ’ ಎಂದು ಹೇಳಿದ್ದ ಆರೋಪಿ, ಕಾರ್ತಿಕ್ ಅವರ ಕಾರು ಪಡದಿದ್ದ. ಆ ಕಾರು, ಗೋವಾದಲ್ಲಿ ಅಪಘಾತವಾಗಿತ್ತು. ಜಖಂಗೊಂಡ ಕಾರನ್ನು ಕಾರ್ತಿಕ್‌ಗೆ ಕೊಟ್ಟಿದ್ದ’ ಎಂದು ಮೂಲಗಳು ಹೇಳಿವೆ.

‘ದುರಸ್ತಿಗೆ ದುಡ್ಡು ಕೊಡುವಂತೆ ಕೇಳಿದ್ದಕ್ಕೆ ಕಾರ್ತಿಕ್‌ ಅವರನ್ನೇ ಬೆದರಿಸಿದ್ದ ಆರೋಪಿ, ಕಾರಿನಲ್ಲಿ ಗಾಂಜಾ ಇತ್ತು ಎಂದು ಹೇಳಿ ಪ್ರಕರಣ ದಾಖಲಿಸಿ ನಿನ್ನನ್ನು ಜೈಲಿಗೆ ಕಳುಹಿಸುತ್ತೇನೆ’ ಎಂದಿದ್ದ.

₹ 10 ಸಾವಿರ ಸಹ ಪಡೆದುಕೊಂಡಿದ್ದು, ಹೆಚ್ಚುವರಿ ₹ 40 ಸಾವಿರಕ್ಕೆ ಬೇಡಿಕೆ ಇಟ್ಟಿದ್ದ. ಇದರಿಂದ ಬೇಸತ್ತ ಕಾರ್ತಿಕ್, ಹಣ ನೀಡುವುದಾಗಿ ಆರೋಪಿಯನ್ನು ಕರೆಸಿ ತರಾಟೆಗೆ ತೆಗೆದುಕೊಂಡಿದ್ದರು. ಅವಾಗಲೇ ಆತ ನಕಲಿ ಪೊಲೀಸ್ ಎಂಬುದು ತಿಳಿಯಿತು’ ಎಂದು ಮೂಲಗಳು ತಿಳಿಸಿವೆ.

ಕಾನ್‌ಸ್ಟೆಬಲ್‌ ಗುರುತಿನ ಚೀಟಿ ಕದ್ದಿದ್ದ
‘ಎಂ.ಎಸ್‌.ಪಾಳ್ಯ ನಿವಾಸಿಯಾದ ಅಭಿಷೇಕ್‌ (25), ಸ್ನಾತಕೋತ್ತರ ಪದವೀಧರ. ಬಾಡಿಗೆಗೆ ಕಾರು ಕೊಡಿಸಿ ಕಮಿಷನ್ ಪಡೆಯುವ ಕೆಲಸ ಮಾಡುತ್ತಿದ್ದ’ ಎಂದು ಮೂಲಗಳು ತಿಳಿಸಿವೆ.

‘ಆತ ವಾಸವಿದ್ದ ಕಟ್ಟಡದಲ್ಲೇ ಕಾನ್‌ಸ್ಟೆಬಲ್‌ ಒಬ್ಬರು ನೆಲೆಸಿದ್ದರು. ಅವರ ಮನೆಗೆ ಹೋಗಿದ್ದಾಗ ಪೊಲೀಸ್ ಇಲಾಖೆಯ ಗುರುತಿನ ಚೀಟಿ ನೋಡಿದ್ದ. ಅದನ್ನು ಕದ್ದು ಸ್ಕ್ಯಾನಿಂಗ್‌ ಮಾಡಿಸಿಕೊಂಡಿದ್ದು, ವಾಪಸ್ ತಂದಿಟ್ಟಿದ್ದ’ ಎಂದು ಹೇಳಿವೆ.

‘ಅಸಲಿ ಚೀಟಿಯಲ್ಲಿದ್ದ ಕಾನ್‌ಸ್ಟೆಬಲ್ ಭಾವಚಿತ್ರವನ್ನು ಕಿತ್ತು, ತನ್ನ ಭಾವಚಿತ್ರವನ್ನು ಅಂಟಿಸಿದ್ದ. ಅದನ್ನೇ ಜನರಿಗೆ ತೋರಿಸಿ, ‘ನಾನು ಅಪರಾಧ ವಿಭಾಗದ ಪೊಲೀಸ್ ಕಾನ್‌ಸ್ಟೆಬಲ್’ ಎಂದು ಹೇಳಿ ಸುಲಿಗೆ ಮಾಡುತ್ತಿದ್ದ. ಯಾರಾದರೂ ಪ್ರಶ್ನಿಸಿದರೆ, ಪ್ರಕರಣ ದಾಖಲಿಸುವುದಾಗಿಯೂ ಬೆದರಿಸುತ್ತಿದ್ದ’ ಎಂದು ಮೂಲಗಳು ತಿಳಿಸಿವೆ. 
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು