ಶನಿವಾರ, ಜೂನ್ 19, 2021
24 °C
ಹಾಸಿಗೆ ಮಾರಾಟ ದಂಧೆಯ ತನಿಖೆ ಹಳ್ಳಹಿಡಿಸಲು ಕಾಂಗ್ರೆಸ್‌ ಯತ್ನ– ಆರೋಪ

ಯಾವುದೇ ಕೋಮಿನ ಸಿಬ್ಬಂದಿಯನ್ನು ಗುರಿಯಾಗಿಸಿಲ್ಲ: ಸಂಸದ ತೇಜಸ್ವಿ ಸೂರ್ಯ ಸ್ಪಷ್ಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬಿಬಿಎಂಪಿ ದಕ್ಷಿಣ ವಲಯದ ವಾರ್‌ ರೂಮಿಗೆ ಭೇಟಿ ನೀಡಿದಾಗ ನಿರ್ದಿಷ್ಟ ಕೋಮಿನ ಸಿಬ್ಬಂದಿಯನ್ನು ಗುರಿಯಾಗಿಸಿ ಆರೋಪ ಹೊರಿಸಿಲ್ಲ. ಆ ಸಮುದಾಯದ ಹೆಸರನ್ನೂ ನಾನು ಹೇಳಿಲ್ಲ. ಅಂದು 16 ಮಂದಿಯನ್ನು ನಾನು ಕೆಲಸದಿಂದ ತೆಗೆಸಿಲ್ಲ’ ಎಂದು ಸಂಸದ ತೇಜಸ್ವಿ ಸೂರ್ಯ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘16 ಸಿಬ್ಬಂದಿಯ ಹೆಸರನ್ನು ಒಬ್ಬರು ಅಧಿಕಾರಿಯೇ ನನಗೆ ನೀಡಿದ್ದರು. ಇವರನ್ನು ಯಾವ ಆಧಾರದಲ್ಲಿ ನೇಮಿಸಿಕೊಂಡಿರಿ ಎಂದು ಸ್ಪಷ್ಟೀಕರಣ ಕೇಳಿದ್ದೆ. ಆ 16 ಮಂದಿ ಜೊತೆ ಅದೇ ಸಮುದಾಯದ ಇತರ ಸಿಬ್ಬಂದಿಯೂ ಅಲ್ಲಿದ್ದರು. ಅವರ ಹೆಸರನ್ನು ನಾನು ಪ್ರಸ್ತಾಪಿಸಿಲ್ಲ. ಚುನಾಯಿತ ಪ್ರತಿನಿಧಿಯಾಗಿ ಅವ್ಯವಹಾರದ ಬಗ್ಗೆ ಪ್ರಶ್ನೆ ಮಾಡಿದ್ದು ತಪ್ಪೇ’ ಎಂದು ಪ್ರಶ್ನಿಸಿದರು.

‘ನಾವು ವಾರ್‌ ರೂಂಗೆ ಭೇಟಿ ನೀಡುವ ಎರಡು ದಿನ ಮೊದಲೇ 16 ಸಿಬ್ಬಂದಿಯನ್ನು ಕೆಲಸದಿಂದ ತೆಗೆಯಲಾಗಿದೆ. ಅವರು ತಾತ್ಕಾಲಿಕ ನೆಲೆಯಲ್ಲಿ ನೇಮಕಗೊಂಡವರು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತ ಸ್ಪಷ್ಟಪಡಿಸಿದ್ದಾರೆ. 16 ಮಂದಿಯನ್ನು ಕೆಲಸದಿಂದ ಏಕೆ ತೆಗೆದರು. ಮತ್ತೆ ನೇಮಿಸಿಕೊಂಡಿದ್ದೇಕೆ ಎಂದು ಬಿಬಿಎಂಪಿಯೇ ಸ್ಪಷ್ಟಪಡಿಸಬೇಕು. ನನಗೂ ಅದಕ್ಕೂ ಸಂಬಂಧ ಇಲ್ಲ’ ಎಂದರು.

‘ಹಾಸಿಗೆ ಮಾರಾಟ ದಂಧೆಯ ಗಂಭೀರ ವಿಚಾರದ ತನಿಖೆಯ ದಾರಿ ತಪ್ಪಿಸಲು ಕಾಂಗ್ರೆಸ್‌ನವರು ಈ ಪ್ರಕರಣದ ಹಿಂದೆ ‘ಕೋಮುವಾದ’ ಅಡಗಿದೆ ಎಂದು ಸುಳ್ಳು ಆರೋಪ ಮಾಡಿದರು. ವ್ಯವಸ್ಥೆಯ ಬದಲಾವಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ನಿರ್ದಿಷ್ಟ ಸಮುದಾಯವನ್ನು ಗುರಿ ಪಡಿಸುವುದಾದರೆ ನೇತ್ರಾವತಿ ಹಾಗೂ ರೋಹಿತ್‌ ಅವರ ಬಂಧನ ಮಾಡಿಸುತ್ತಿದ್ದೆವಾ’ ಎಂದು ಪ್ರಶ್ನಿಸಿದರು.

ದಾಳಿ ಸಂದರ್ಭದಲ್ಲಿ ‘ನೀವು ಮದರಸಾ ನಡೆಸುತ್ತಿದ್ದೀರಾ, ಕಾರ್ಪೊರೇಷನ್‌ ನಡೆಸುತ್ತಿದ್ದೀರಾ’ ಎಂದು ಪ್ರಶ್ನೆ ಮಾಡಿದ್ದು ಸರಿಯೇ ಎಂಬ ಪ್ರಶ್ನೆಗೆ, ‘ನಾನು ಆ ಪದ ಬಳಸಿಲ್ಲ. ಅದಕ್ಕೆ ನಾನು ಹೊಣೆ ಅಲ್ಲ. ಈ ಪ್ರಕರಣದಲ್ಲಿ ಧರ್ಮವನ್ನು ತಂದಿದ್ದು ನಾನಲ್ಲ. ಇದನ್ನು ನಂಬುವವರು ನಂಬಬಹುದು, ಬಿಡುವವರು ಬಿಡಬಹುದು’ ಎಂದರು.

ಯಾರೋ ಅಧಿಕಾರಿ ನೀಡಿದ ಪಟ್ಟಿಯನ್ನು ನೀವೇಕೆ ಓದಬೇಕಿತ್ತು. ಇದರಿಂದ ತಪ್ಪು ಸಂದೇಶ ರವಾನೆ ಆಗುವುದಿಲ್ಲವೇ ಎಂಬ ಪ್ರಶ್ನೆಗೆ, ಉತ್ತರಿಸಲಿಲ್ಲ. ‘ಜನ ನನ್ನನ್ನು ಗೆಲ್ಲಿಸಿದ್ದಾರೆ. ನನ್ನ ಬದ್ಧತೆ ಏನಿದ್ದರೂ ನನ್ನ ಜನಕ್ಕೆ’ ಎಂದರು. 

‘ಶಾಸಕ ಸತೀಶ ರೆಡ್ಡಿ ಅವರು ತಮ್ಮ ಕ್ಷೇತ್ರದ ಆಸ್ಪತ್ರೆಗಳಲ್ಲಿ ಸ್ಥಳೀಯ ರೋಗಿಗಳಿಗೆ ಆದ್ಯತೆ ಮೇರೆಗೆ ಹಾಸಿಗೆ ಕೊಡಿಸುವಂತೆ ಕೇಳಿದ್ದು ತಪ್ಪಲ್ಲ’ ಎಂದು ಅಭಿಪ್ರಾಯಪಟ್ಟರು.  

‘ಕ್ಷಮೆ ಕೇಳಿದ್ದು 16 ಮಂದಿಯ ಹೆಸರು ಹೇಳಿದ್ದಕ್ಕಲ್ಲ’

‘ಅವ್ಯವಹಾರ ಬೆಳಕಿಗೆ ತಂದ ಬಳಿಕ ವಾರ್‌ ರೂಂಗೆ ಭೇಟಿ ನೀಡಿ ಲ್ಲಿನ ಸಿಬ್ಬಂದಿ ಜೊತೆ ಮಾತನಾಡಿದ್ದು ನಿಜ. ಅಲ್ಲಿನ ಸಿಬ್ಬಂದಿಯ ಹೆಸರು ಮತ್ತು ಮೊಬೈಲ್‌ ಸಂಖ್ಯೆಗಳಿದ್ದ ಪಟ್ಟಿಯನ್ನು ಯಾರೋ ಬಹಿರಂಗ ಪಡಿಸಿದ್ದರಿಂದ ಕೆಲವು ಮಹಿಳಾ ಸಿಬ್ಬಂದಿಗೆ ಸಮಸ್ಯೆಯಾಗಿದೆ. ಇದಕ್ಕಾಗಿ ಕ್ಷಮಿಸುವಂತೆ ಹೇಳಿದ್ದೇನೆ. ನಾನು ಕೋಮ ಆಧಾರದ ಹೇಳಿಕೆ ನೀಡಿಯೇ ಇಲ್ಲ. ಹಾಗಾಗಿ ಈ ಬಗ್ಗೆ ನಾನೇಕೆ ಕ್ಷಮೆ ಕೇಳಬೇಕು’ ಎಂದು ತೇಜಸ್ವಿ ಸೂರ್ಯ ಪ್ರಶ್ನಿಸಿದರು.

‘ವಾರ್‌ ರೂಂ ಸಿಬ್ಬಂದಿಯ ಪಟ್ಟಿಯನ್ನು ಬಹಿರಂಗ ಪಡಿಸಿದವರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಹಾಗೂ ಅಲ್ಲಿನ ಸಿಬ್ಬಂದಿಗೆ ಹೊಸ ಸಿಮ್‌ ಕಾರ್ಡ್‌ ಕೊಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದರು.

‘ಕಸಬ್‌ಗಿಂತಲೂ ಕೆಟ್ಟ ಉಗ್ರ ಎಂದು ಬಿಂಬಿಸಿದರು’

‘ವ್ಯವಸ್ಥೆ ಬದಲಾಯಿಸಲು ಹಾಗೂ ಜನರಿಗೆ ನ್ಯಾಯ ಕೊಡಿಸಲು ಪ್ರಯತ್ನಿಸಿದ್ದಕ್ಕೆ ನನ್ನನ್ನು ಅಜ್ಮಲ್‌ ಕಸಬ್‌ಗಿಂತಲೂ ಕೆಟ್ಟ ಉಗ್ರ ಎಂದು ಬಿಂಬಿಸಿದರು. ಕೆಲವು ಪತ್ರಿಕೆಗಳು ನನ್ನ ವಿರುದ್ಧ ಸಂಪಾದಕೀಯ ಬರೆದು ದಾಳಿ ನಡೆಸಿದವು. ಆದರೂ, ಇಂದಿನವರೆಗೆ ಯಾರಿಗೂ ಉತ್ತರ ನೀಡಿರಲಿಲ್ಲ. 100 ಗಂಟೆಗಳಲ್ಲಿ ವ್ಯವಸ್ಥೆಯಲ್ಲಿ ಬದಲಾವಣೆ ತಂದು ನಂತರ ಜನರ ಮುಂದೆ ಬರುವ ಸಂಕಲ್ಪ ಮಾಡಿದ್ದೆ. ಎಲ್ಲದಕ್ಕೂ ಸ್ಪಷ್ಟತೆಯನ್ನು ಹಾಗೂ ಉತ್ತರವನ್ನು ಕೊಟ್ಟಿದ್ದೇನೆ’ ಎಂದು ತೇಜಸ್ವಿ ಸೂರ್ಯ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು