ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌಲ್ಯಾಧಾರಿತ ರಾಜಕೀಯದಲ್ಲಿ ನಂಬಿಕೆ: ಡಾ.ಕೆ.ಲಕ್ಷ್ಮಣ್‌

Last Updated 16 ಜೂನ್ 2022, 20:30 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿಯದು ಮೌಲ್ಯಾಧಾರಿತ ರಾಜಕೀಯ. ಅಧಿಕಾರ ಪಡೆಯಲು ಮತ್ತು ಉಳಿಸಿಕೊಳ್ಳಲು ಬದಲಿ ಮಾರ್ಗವನ್ನು ಬಳಸುವುದಿಲ್ಲ’ ಎಂದು ಬಿಜೆಪಿಯ ಒಬಿಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಡಾ.ಕೆ.ಲಕ್ಷ್ಮಣ್‌ ಹೇಳಿದರು.

ಯಲಹಂಕದ ಹೋಟೆಲ್‌ ರಮಡಾ ದಲ್ಲಿ ಗುರುವಾರ ಆರಂಭಗೊಂಡ ಬಿಜೆಪಿ ಒಬಿಸಿ ಮೋರ್ಚಾದ ಮೂರು ದಿನಗಳ ರಾಷ್ಟ್ರೀಯ ಪ್ರಶಿಕ್ಷಣ ವರ್ಗದಲ್ಲಿ ಮಾತನಾಡಿದರು.

ಒಂದು ಮತದಿಂದ ಸರ್ಕಾರ ಪತನವಾಗುವುದೆಂದು ಆಗಿನ ಪ್ರಧಾನಿ ವಾಜಪೇಯಿ ಅವರಿಗೆ ಗೊತ್ತಿದ್ದರೂ ಅವರು ಮೌಲ್ಯಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳದೇ, ತಮ್ಮ ಪದವಿಯಿಂದ ಕೆಳಕ್ಕಿಳಿದರು ಎಂದು ತಿಳಿಸಿದರು.

ಆರು ದಶಕಗಳಿಗೂ ಹೆಚ್ಚು ಕಾಲ ದೇಶವನ್ನಾಳಿದ ಕಾಂಗ್ರೆಸ್‌ ಪಕ್ಷವು ವಂಶವಾದ ಹಾಗೂ ಭ್ರಷ್ಟಾಚಾರಕ್ಕೆ ಅಂಟಿಕೊಂಡಿತ್ತು. ಆದರೆ, ನರೇಂದ್ರ ಮೋದಿಯವರ ನೇತೃತ್ವದ ಸರ್ಕಾರ 8 ವರ್ಷಗಳಲ್ಲಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದೆ. ಮೋದಿಯವರ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸುವ ಕಾರ್ಯವನ್ನು ನಾವು ಮಾಡಬೇಕಾಗಿದೆ ಎಂದರು.

ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಒಬಿಸಿ ಮೋರ್ಚಾ ಶ್ರಮಿಸುತ್ತಿದೆ. ಅಹಂ ತೊರೆಯುವ ಮೂಲಕ ವ್ಯಕ್ತಿ ಪರಿವರ್ತನೆ ಆಗಬೇಕು. ಇದು ಸಾಮಾಜಿಕ ಪರಿವರ್ತನೆಗೆ ಪೂರಕ. ಪರಿವರ್ತನೆಯ ಹಾದಿ ಸುಗಮವಾಗಿರಲು ಪ್ರಶಿಕ್ಷಣ ವರ್ಗ ಮಹತ್ವದ ಪಾತ್ರವಹಿಸುತ್ತದೆ ಎಂದರು.

ಕೇಂದ್ರದ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವ ಹಾಗೂ ಒಬಿಸಿ ಮೋರ್ಚಾದ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಲ್‌.ವರ್ಮ ಮಾತನಾಡಿ, ನರೇಂದ್ರ ಮೋದಿ ಪ್ರಧಾನಿ ಆಗುವುದಕ್ಕೂ ಮೊದಲು ದೇಶದಲ್ಲಿ ನಿರಾಶದಾಯಕ ಸ್ಥಿತಿ ಇತ್ತು. ಕಾಂಗ್ರೆಸ್‌ ಮತ್ತು ಯುಪಿಎ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಭ್ರಷ್ಟಾಚಾರದ ಹಗರಣಗಳು ನಿರಂತರ ಎಂಬಂತೆ ನಡೆದವು. ಆದರೆ, ಮೋದಿ ನೇತೃತ್ವದ ಸರ್ಕಾರವು ವರ್ಗ, ಜಾತಿ ಭೇದವಿಲ್ಲದೇ, ಭ್ರಷ್ಟಾಚಾರ ದೂರವಿಟ್ಟು ಬಡವರ ಅಭಿವೃದ್ಧಿಗೆ ಶ್ರಮಿಸಿತು. ಭ್ರಷ್ಟಾಚಾರವಿಲ್ಲದ ಯೋಜನೆಗೆ ಜನಧನ್‌ ಸ್ಪಷ್ಟ ಉದಾಹರಣೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT