ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಂಗ್ರೆಸ್‌ ಅಧ್ಯಯನದಲ್ಲಿ ತಪ್ಪು ಮಾಹಿತಿ’

Last Updated 14 ಅಕ್ಟೋಬರ್ 2019, 19:46 IST
ಅಕ್ಷರ ಗಾತ್ರ

ಬೆಂಗಳೂರು: ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷ ಬಿಡುಗಡೆ ಮಾಡಿರುವ ಅಧ್ಯಯನ ವರದಿಯು ತಪ್ಪು ಮಾಹಿತಿಗಳಿಂದ ಕೂಡಿದ್ದು, ಕಾಟಾಚಾರದ್ದಾಗಿದೆ ಎಂದು ಬಿಜೆಪಿ ಟೀಕಿಸಿದೆ.

ಮುಳುಗಡೆ ಗ್ರಾಮಗಳು, ಬೆಳೆ ಹಾನಿಯಾದ ಕೃಷಿ ಪ್ರದೇಶಗಳ ಮಾಹಿತಿ ಸಂಪೂರ್ಣ ಉತ್ಪ್ರೇಕ್ಷಿತವಾಗಿದೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಮಾಧ್ಯಮಗೋಷ್ಠಿಯಲ್ಲಿ ಟೀಕಿಸಿದರು.

ರಾಜ್ಯದಲ್ಲಿ 1,000 ಹಳ್ಳಿಗಳು ಮುಳುಗಡೆಯಾಗಿವೆ, 35,000 ಕಿ.ಮೀ ರಸ್ತೆಗಳು ಹಾಳಾಗಿವೆ, 57,000 ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ ಎಂದು ಕಾಂಗ್ರೆಸ್‌ ಅಧ್ಯಯನ ವರದಿ ತಿಳಿಸಿದೆ. ಆದರೆ, ಇವರು ಎಲ್ಲಿ ಸಮೀಕ್ಷೆ ನಡೆಸಿರುವುದು, ಈ ಸಂಖ್ಯೆ ಎಲ್ಲಿಂದ ಸಿಕ್ಕಿದೆ ಎಂಬ ವೈಜ್ಞಾನಿಕ ವಿವರ ಇಲ್ಲ. ವರದಿಯಲ್ಲಿ ಅರ್ಧದಷ್ಟು ಭಾಗ ಆರ್‌.ವಿ.ದೇಶಪಾಂಡೆಯವರ ಉತ್ತರ ಕನ್ನಡ ಜಿಲ್ಲೆಯ ಛಾಯಾಚಿತ್ರಗಳು ಮತ್ತು ಪತ್ರಿಕಾ ವರದಿಗಳ ಕಟಿಂಗುಗಳೇ ತುಂಬಿಕೊಂಡಿವೆ ಎಂದು ಹೇಳಿದರು.

ರಾಜ್ಯ ಸರ್ಕಾರ ನೆರೆ ಸಂತ್ರಸ್ತರಿಗೆ ಎನ್‌ಡಿಆರ್‌ಎಫ್‌ ನಿಯಮಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ನೀಡಿದೆ. ಈ ನಿಯಮದ ಪ್ರಕಾರ ಮನೆ ಕಟ್ಟಿಸಿಕೊಳ್ಳಲು ₹95,200 ನೀಡಬೇಕು. ಆದರೆ, ರಾಜ್ಯ ಸರ್ಕಾರ ₹5 ಲಕ್ಷ ನೀಡಿದೆ. ಕೃಷಿ ಭೂಮಿಗೆ 1 ಎಕರೆಗೆ ₹6,500 ಪರಿಹಾರವನ್ನುಎನ್‌ಡಿಆರ್‌ಎಫ್‌ ಸೂಚಿಸಿದ್ದರೆ, ರಾಜ್ಯ ಸರ್ಕಾರ ₹16,500 ನೀಡಿದೆ ಎಂದರು.

ಕಾಂಗ್ರೆಸ್‌ ನೀಡಿರುವ ಸಲಹೆಗಳೂ ಅವೈಜ್ಞಾನಿಕವಾಗಿದೆ. ರೈತರಿಗೆ ಮನೆ ಕಟ್ಟಿಸಲು ಅರ್ಧ ಎಕರೆ ಜಮೀನು ಮತ್ತು ₹10 ಲಕ್ಷ ನೀಡಬೇಕು ಎಂದು ಹೇಳಿದೆ. ಕಾಂಗ್ರೆಸ್‌ ಆಡಳಿತವಿರುವ ರಾಜ್ಯಗಳಲ್ಲಿ ಇಷ್ಟು ಪ್ರಮಾಣದಲ್ಲಿ ಪರಿಹಾರ ನೀಡಿದ್ದರೆ ಸಾಕ್ಷ್ಯ ಸಮೇತ ತಿಳಿಸಲಿ ಎಂದು ಸವಾಲು ಹಾಕಿದ್ದಾರೆ. ರಾಜ್ಯ ಸರ್ಕಾರ ಈಗ ನೀಡಿರುವ ಪರಿಹಾರದ ಪ್ರಮಾಣ ದೇಶದಲ್ಲೇ ಅತಿ ಹೆಚ್ಚು ಮತ್ತು ನ್ಯಾಯೋಚಿತ ಎಂದು ರವಿಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT