ಗುರುವಾರ , ನವೆಂಬರ್ 21, 2019
26 °C
ಒಪ್ಪಿಕೊಳ್ಳದ ನಿಗಮ– ಮಂಡಳಿ ಅಧಿಕಾರ

ಬಿಜೆಪಿಗೆ ಸಂಕಷ್ಟ ಹೆಚ್ಚಿಸಿದ ಪರಾಜಿತ ಅಭ್ಯರ್ಥಿಗಳು

Published:
Updated:

ಬೆಂಗಳೂರು: ನಿಗಮ ಮತ್ತು ಮಂಡಳಿ ಅಧ್ಯಕ್ಷ ಸ್ಥಾನಗಳನ್ನು ಬಹುತೇಕ ಪರಾಜಿತ ಅಭ್ಯರ್ಥಿಗಳು ನಿರಾಕರಿಸಿರುವುದು ಮತ್ತು ಟಿಕೆಟ್‌ಗಾಗಿ ಪಟ್ಟು ಹಿಡಿದಿರುವುದು ಬಿಜೆಪಿಗೆ ಸಂಕಷ್ಟ ಹೆಚ್ಚಿಸಿದೆ. ಅಧಿಕ ಸ್ಥಾನಗಳನ್ನು ಗೆಲ್ಲಬೇಕೆಂಬ ಧಾವಂತಕ್ಕೂ ಅಂಕುಶ ಬಿದ್ದಿದೆ.

ಎಂಟು ಪರಾಜಿತರ ಅಭ್ಯರ್ಥಿಗಳ ಪೈಕಿ ವಿ.ಎಸ್‌.ಪಾಟೀಲ ಅವರು ಮಾತ್ರ ವಾಯುವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಉಳಿದ ಯಾರೂ ಅಧಿಕಾರ ಸ್ವೀಕರಿಸಿಲ್ಲ. ಹೊಸಕೋಟೆಯ ಶರತ್‌ ಬಚ್ಚೇಗೌಡ ಮತ್ತು ಕಾಗವಾಡ ಭರಮಗೌಡ (ರಾಜು) ಕಾಗೆ ಅವರು ಟಿಕೆಟ್‌ ನೀಡದಿದ್ದರೆ ಕಾಂಗ್ರೆಸ್‌ನಿಂದ ಸ್ಪರ್ಧಿಸುವುದಾಗಿ ಪಕ್ಷದ ವರಿಷ್ಠರನ್ನು ಎಚ್ಚರಿಸಿದ್ದಾರೆ.

ಆರಂಭದಲ್ಲಿ ಕಠಿಣ ನಿಲುವು ತಾಳಿದ್ದ ಹಿರೇಕೆರೂರಿನ ಪರಾಜಿತ ಅಭ್ಯರ್ಥಿ ಯು.ಬಿ.ಬಣಕಾರ ಅವರು ಈಗ ತಮ್ಮ ನಿಲುವು ಬದಲಿಸಿದ್ದಾರೆ. ಕರ್ನಾಟಕ ರಾಜ್ಯ ಕೃಷಿ ಉತ್ಪನ್ನ ಮತ್ತು ಸಂಸ್ಕರಣ ನಿಗಮದ ಅಧ್ಯಕ್ಷ ಸ್ಥಾನ ಒಪ್ಪಿಕೊಳ್ಳುವ ಮನಸ್ಸು ಮಾಡಿದ್ದಾರೆ.

‘ಪಕ್ಷದ ಸರ್ಕಾರ ರಚನೆ ಆಗಲು ಕಾರಣರಾದ ಅನರ್ಹ ಶಾಸಕರ ಗೆಲುವಿಗೆ ಶ್ರಮಿಸಬೇಕು ಎಂದು ಪಕ್ಷ ಹೇಳಿದೆ. ಅದಕ್ಕೆ ನಾನು ಬದ್ಧ. ಅವರ ತ್ಯಾಗದಿಂದಲೇ ಸರ್ಕಾರ ರಚನೆ ಆಗಿದೆ. ಈ ಹಂತದಲ್ಲಿ ನಾನು ಟಿಕೆಟ್‌ ಕೇಳುವುದಿಲ್ಲ’ ಎಂದು ಬಣಕಾರ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದ್ದಾರೆ. 

ಕಾಂಗ್ರೆಸ್‌ನಿಂದ ಆಹ್ವಾನವಿದೆ: ‘ಕಾಡಾ ಅಧ್ಯಕ್ಷ ಸ್ಥಾನ ತಿರಸ್ಕರಿಸಿದ್ದೇನೆ. ಅನರ್ಹ ಶಾಸಕರ ಕುರಿತು ಸುಪ್ರೀಂಕೋರ್ಟ್‌ ಏನು ಹೇಳುತ್ತದೆ ಎನ್ನುವುದನ್ನು ಕಾದು ನೋಡುತ್ತೇನೆ. ಕಾಂಗ್ರೆಸ್‌ನಿಂದಲೂ ಆಹ್ವಾನವಿದೆ. ಆದರೆ, ಏನನ್ನೂ ನಿರ್ಧರಿಸಿಲ್ಲ.  ಒಂದು ಮನೆ ಬಾಗಿಲು ಬಂದಾದರೆ ಇನ್ನೊಂದು ಮನೆಗೆ ಹೋಗಲೇಬೇಕಾಗುತ್ತದೆಯಲ್ಲವೆ?’ ಎಂದು ಭರಮಗೌಡ (ರಾಜು) ಕಾಗೆ ಎಚ್ಚರಿಕೆ ನೀಡಿದ್ದಾರೆ.

ಗೋಕಾಕದ ಪರಾಜಿತ ಅಭ್ಯರ್ಥಿ ಅಶೋಕ ಪೂಜಾರಿ ಇನ್ನೂ ತಮ್ಮ ನಿಲುವಿಗೇ ಅಂಟಿಕೊಂಡಿದ್ದಾರೆ. ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದ್ದಕ್ಕೆ ಮುಖ್ಯಮಂತ್ರಿಯವರನ್ನು ಅಭಿನಂದಿಸಿರುವ ಅವರು, ಕಾರ್ಯಕರ್ತರ ಜತೆ ಚರ್ಚಿಸಿಯೇ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. 

ಮಸ್ಕಿಯ ಪರಾಜಿತ ಅಭ್ಯರ್ಥಿ ಬಸನಗೌಡ ತುರವಿಹಾಳ ಅವರ ಮನವೊಲಿಸುವ ಪ್ರಯತ್ನವನ್ನು ಸಂಸದ ಕರಡಿ ಸಂಗಣ್ಣ ನಡೆಸಿದ್ದಾರೆ. ಹೊಸಪೇಟೆ ವಿಜಯನಗರ ಕ್ಷೇತ್ರದ ಎಚ್‌.ಆರ್‌.ಗವಿಯಪ್ಪ ಮತ್ತು ಬೆಂಗಳೂರು ಕೆ.ಆರ್‌.ಪುರ ಕ್ಷೇತ್ರದ ಪರಾಜಿತ ಅಭ್ಯರ್ಥಿ ನಂದೀಶ್‌ ರೆಡ್ಡಿ ಕೂಡಾ ತಮ್ಮ ಪಟ್ಟನ್ನು ಸಡಿಲಿಸಿಲ್ಲ. ಅನರ್ಹ ಶಾಸಕರಿಗೆ ಸಂಬಂಧಿಸಿದಂತೆ ಇದೇ 22 ರಂದು ಸುಪ್ರೀಂಕೋರ್ಟ್‌ ನೀಡುವ ತೀರ್ಪಿಗಾಗಿ ಬಹುತೇಕ ಪರಾಜಿತ ಅಭ್ಯರ್ಥಿಗಳು ಕಾಯುತ್ತಿದ್ದಾರೆ. ಆ ಬಳಿಕ ತಮ್ಮ ತೀರ್ಮಾನ ಪ್ರಕಟಿಸಲಿದ್ದಾರೆ.

ಪ್ರತಿಕ್ರಿಯಿಸಿ (+)