ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕಮಾಂಡ್‌ಗೆ ಕಪ್ಪ ಕಾಣಿಕೆಯಸಂಸ್ಕೃತಿ ಬಿಜೆಪಿಯಲ್ಲಿಲ್ಲ: ಸಿ.ಎಂ

ರಾಜ್ಯದಲ್ಲಿ ಹಿಂದಿನ ಕಾಂಗ್ರೆಸ್‌ ಸರ್ಕಾರ ಹೈಕಮಾಂಡ್‌ಗೆ ಎಟಿಎಂ ಆಗಿತ್ತು–ಬೊಮ್ಮಾಯಿ
Last Updated 13 ಅಕ್ಟೋಬರ್ 2022, 19:03 IST
ಅಕ್ಷರ ಗಾತ್ರ

ಹೂವಿನಹಡಗಲಿ/ಹೊಸಪೇಟೆ (ವಿಜಯನಗರ): ‘ಹೈಕಮಾಂಡ್‌ಗೆ ಕಪ್ಪ ಕಾಣಿಕೆ ಕೊಡುವ ಸಂಸ್ಕೃತಿ, ಸಂಪ್ರದಾಯ ಬಿಜೆಪಿಯಲ್ಲಿಲ್ಲ. ಆ ಸಂಸ್ಕೃತಿ, ಸಂಪ್ರದಾಯ ಕಾಂಗ್ರೆಸ್‌ ಪಕ್ಷದಲ್ಲಿದೆ. ರಾಜ್ಯದಲ್ಲಿ ಹಿಂದೆಯಿದ್ದ ಕಾಂಗ್ರೆಸ್‌ ಸರ್ಕಾರ ಆ ಪಕ್ಷದ ಹೈಕಮಾಂಡ್‌ಗೆ ‘ಎಟಿಎಂ’ (ಎನಿ ಟೈಮ್‌ ಮನಿ) ಆಗಿತ್ತು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರೋಪ ಮಾಡಿದರು.

ಇಲ್ಲಿನ ಜಿ.ಬಿ.ಆರ್‌. ಕಾಲೇಜು ಕ್ರೀಡಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಬಿಜೆಪಿ ಜನಸಂಕಲ್ಪ ಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಕರ್ನಾಟಕದಲ್ಲಿ ಲೂಟಿ ಮಾಡಿದ ಹಣವನ್ನು ಸೂಟ್‌ಕೇಸ್‌ಗಳಲ್ಲಿ ತುಂಬಿ ಕಾಂಗ್ರೆಸ್‌ ಹೈಕಮಾಂಡ್‌ಗೆ ಕಪ್ಪ ಕಾಣಿಕೆ ರೂಪದಲ್ಲಿ ಕೊಡುತ್ತಿತ್ತು. ಇದೇ ಕಾರಣದಿಂದಲೇ ಕೆಪಿಸಿಸಿ ಅಧ್ಯಕ್ಷರು ಇಡಿ, ಐಟಿ ವಿಚಾರಣೆಗೆ ಒಳಪಟ್ಟಿದ್ದಾರೆ. ಕಾಂಗ್ರೆಸ್‌ ಪಕ್ಷದ ಹೈಕಮಾಂಡ್‌ ತಪ್ಪಿನಿಂದ ಅವರು ವಿಚಾರಣೆ
ಎದುರಿಸುತ್ತಿದ್ದಾರೆ ಎಂದರು.

ಹೈಕಮಾಂಡ್‌ಗೆ ಕಪ್ಪ ಕಾಣಿಕೆ ಕೊಡುವ ಸಂಸ್ಕೃತಿ ಆರಂಭಿಸಿದ ಕಾಂಗ್ರೆಸ್‌ನವರು ಈಗ ನಮ್ಮ ಪಕ್ಷದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಜನ ಜಾಗೃತರಾಗಿದ್ದಾರೆ. ಹಳೆಯ ನಾಟಕ, ಮೋಸದ ವಿಚಾರ ರಾಜ್ಯದಲ್ಲಿ ನಡೆಯುವುದಿಲ್ಲ. ನುಡಿದಂತೆ ನಡೆಯುವವರಿಗೆ ಕಾಲವಿದು. ಅನ್ನಭಾಗ್ಯದಲ್ಲಿ ಕನ್ನ ಹಾಕಿದವರು, ಬೋರ್‌ವೆಲ್‌ಗಳು, ನೀರಾವರಿ ಯೋಜನೆ, ಹಾಸ್ಟೆಲ್‌ಗಳ ದಿಂಬು ಹಾಸಿಗೆಯಲ್ಲಿ ಹಣ ಹೊಡೆದಿದ್ದಾರೆ. ರಾಜ್ಯದ ಅಭಿವೃದ್ಧಿಗೆ ಹಿನ್ನಡೆಯಾಗಿದ್ದರೆ ಅದು ಕಾಂಗ್ರೆಸ್‌ ಭ್ರಷ್ಟಾಚಾರದಿಂದ ಎಂದು ಆರೋಪಿಸಿದರು.

ಯಾವ ಮುಖದಿಂದ ರಾಹುಲ್‌ ಬರುತ್ತಿದ್ದಾರೆ?: ಬಳ್ಳಾರಿಗೆ ‘ಭಾರತ್ ಜೋಡೊ’ ಯಾತ್ರೆ ಬರುತ್ತಿದೆ. ಸೋನಿಯಾ ಗಾಂಧಿ ಅವರನ್ನು ಲೋಕಸಭೆಗೆ ಆಯ್ಕೆ ಮಾಡಿ ಜಿಲ್ಲೆಯ ಜನ ಅವರಿಗೆ ಬೆಂಬಲ, ಆಶ್ರಯ ನೀಡಿದ್ದರು. ಆದರೆ, ಅವರು ಬಳ್ಳಾರಿ ಸಂಸದ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಉತ್ತರ ಪ್ರದೇಶಕ್ಕೆ ಹಾರಿ ಹೋದರು. ಬಳ್ಳಾರಿ ತವರು ಮನೆಯೆಂದು ಹೇಳಿದ್ದ ಸೋನಿಯಾ ಅವರಿಂದ ಜನ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಬಳ್ಳಾರಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ₹3 ಸಾವಿರ ಕೋಟಿ ಪ್ಯಾಕೇಜ್‌ ಭರವಸೆ ಕೊಟ್ಟಿದ್ದರು. ಆದರೆ, ಉಷ್ಣ ವಿದ್ಯುತ್‌ ಸ್ಥಾವರ ಮಾಡಿರುವುದು ಬಿಟ್ಟರೆ ಬೇರೇನೂ ಕೆಲಸ ಮಾಡಲಿಲ್ಲ ಎಂದರು.

ಈಗ ಸುಳ್ಳು ಭರವಸೆ ಕೊಡುತ್ತ ರಾಹುಲ್‌ ಗಾಂಧಿ ಬಳ್ಳಾರಿಗೆ ಬರುತ್ತಿದ್ದಾರೆ. ನಿಮ್ಮ ತಾಯಿ ಅವರನ್ನು ಇಲ್ಲಿನ ಜನ ಆರಿಸಿ ಕಳಿಸಿದಾಗ ಏನೂ ಮಾಡಲಿಲ್ಲ. ಈಗ ಜನ ಜಾಗೃತರಾಗಿದ್ದಾರೆ. ನಿಮ್ಮ ಸುಳ್ಳು, ಮೋಸದ ಮಾತುಗಳನ್ನು ನಂಬುವುದಿಲ್ಲ ಎಂಬ ಸಂದೇಶವನ್ನು ಜಿಲ್ಲೆಯ ಜನ ಅವರಿಗೆ ಕೊಡಬೇಕು ಎಂದು ಹೇಳಿದರು.

ಯಾವ ಮುಖದಿಂದ ರಾಹುಲ್‌ ಗಾಂಧಿ ಅವರು ಬಳ್ಳಾರಿಗೆ ಬರುತ್ತಿದ್ದಾರೆ. ಯಾವಾಗ, ಏನೂ ಬೇಕಾದರೂ ಮಾತಾಡಿ ಮರಳು ಮಾಡಬಹುದು ಅಂದುಕೊಂಡಿದ್ದಾರಾ? ದುರ್ಗಾದೇವಿ, ವಿಜಯನಗರ ಸಾಮ್ರಾಜ್ಯ, ವಿದ್ಯಾರಣ್ಯರ ಶಕ್ತಿ ಬಳ್ಳಾರಿಯ ನೆಲದಲ್ಲಿದೆ. 2023ರ ಚುನಾವಣೆಯಲ್ಲಿ ಈ ಭಾಗದ ಶಕ್ತಿ ಏನೆಂಬುದು ಜನ ನಿಮಗೆ ತೋರಿಸಿಕೊಡುತ್ತಾರೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT