ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿ ವೇಗದ ಚಾಲನೆ; ಪೊಲೀಸರ ಜೊತೆ ವಾಗ್ವಾದ: ಲಿಂಬಾವಳಿ ಪುತ್ರಿಗೆ ₹ 10 ಸಾವಿರ ದಂಡ

Last Updated 9 ಜೂನ್ 2022, 20:19 IST
ಅಕ್ಷರ ಗಾತ್ರ

ಬೆಂಗಳೂರು: ಅತಿ ವೇಗವಾಗಿ ಕಾರು ಚಲಾಯಿಸಿದ್ದನ್ನು ಪ್ರಶ್ನಿಸಿದ ಪೊಲೀಸರ ಜೊತೆಗೇ ಶಾಸಕ ಅರವಿಂದ ಲಿಂಬಾವಳಿ ಅವರ ಪುತ್ರಿ ವಾಗ್ವಾದಕ್ಕೆ ಇಳಿದಿದ್ದು, ನಿಯಮ ಉಲ್ಲಂಘಿಸಿದ್ದಕ್ಕಾಗಿ ಅವರಿಂದ ₹ 10 ಸಾವಿರ ದಂಡ ವಸೂಲಿ ಮಾಡಲಾಗಿದೆ.

‘ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣದ ಕಡೆಯಿಂದ ರಾಜಭವನ ಕಡೆಗೆ ಗುರುವಾರ ಕಾರಿನಲ್ಲಿ ಹೊರಟಿದ್ದ ಲಿಂಬಾವಳಿ ಪುತ್ರಿ, ಪೊಲೀಸರ ಜೊತೆ ವಾಗ್ವಾದ ನಡೆಸಿದ್ದರು. ಅತಿ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆಗೆ ₹ 1,000 ದಂಡ ಹಾಗೂ ಹಳೇ ಪ್ರಕರಣಗಳಿಗೆ ₹ 9,000 ದಂಡ ಕಟ್ಟಿಸಿಕೊಳ್ಳಲಾಗಿದೆ’ ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಅತಿ ವೇಗದ ಚಾಲನೆಯಿಂದಾಗಿ ಅನುಮಾನ: ‘ಅತಿ ವೇಗವಾಗಿ ಹೊರಟಿದ್ದ ಕಾರನ್ನು ನೋಡಿದ್ದ ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ, ಅನುಮಾನ ವ್ಯಕ್ತಪಡಿಸಿ ವೈರ್‌ಲೆಸ್‌ನಲ್ಲಿ ಸಂದೇಶ ರವಾನಿಸಿದ್ದರು. ಕಾರು ತಡೆಯುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದರು. ಕ್ಯಾಪಿಟಲ್ ಹೋಟೆಲ್ ಬಳಿ ಕಾರು ಅಡ್ಡಗಟ್ಟಿದ ಕಾನೂನು ಮತ್ತು ಸುವ್ಯವಸ್ಥೆ ಸಿಬ್ಬಂದಿ, ಲಿಂಬಾವಳಿ ಪುತ್ರಿಯನ್ನು ಕಾರಿನಿಂದ ಕೆಳಗೆ ಇಳಿಸಿ ವಿಚಾರಿಸಿದರು.’

‘ಪೊಲೀಸರ ಜೊತೆ ಮಾತಿನ ಚಕಮಕಿ ನಡೆಸಿದ ಪುತ್ರಿ, ‘ನಾನು ಯಾರು ಗೊತ್ತಾ? ಶಾಸಕ ಅರವಿಂದ ಲಿಂಬಾವಳಿ ಪುತ್ರಿ. ನನ್ನ ಬಳಿ ಚಾಲನಾ ಪರವಾನಗಿ ಪತ್ರ ಸೇರಿದಂತೆ ಎಲ್ಲ ದಾಖಲೆಗಳಿವೆ. ನನ್ನನ್ನು ತಡೆದರೆ ಪರಿಣಾಮ ನೆಟ್ಟಗಿರೊಲ್ಲ’ ಎಂದಿದ್ದರು. ಅತಿ ವೇಗವಾಗಿ ಕಾರು ಚಲಾಯಿಸಿದ್ದು ಯಾಕೆಂದು ಪೊಲೀಸರು ಪ್ರಶ್ನಿಸಿದ್ದರು. ಅದಕ್ಕೂ ಲಿಂಬಾವಳಿ ಪುತ್ರಿ ಉತ್ತರಿಸಲಿಲ್ಲ’ ಎಂದು ತಿಳಿಸಿದರು.

ದಂಡ ಪಾವತಿಸಿದ ಸ್ನೇಹಿತ: ‘ಕಬ್ಬನ್‌ ಪಾರ್ಕ್‌ ಸಂಚಾರ ಪೊಲೀಸ್ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ಸಹ ಸ್ಥಳಕ್ಕೆ ಹೋಗಿದ್ದರು. ಅವರ ಜೊತೆಗೂ ಯುವತಿ ವಾಗ್ವಾದ ನಡೆಸಿದ್ದರು. ಸಮಾಧಾನಪಡಿಸಿದ್ದ ಇನ್‌ಸ್ಪೆಕ್ಟರ್, ಕಾರಿನ ನೋಂದಣಿ ಸಂಖ್ಯೆ ಆಧರಿಸಿ ಹಳೇ ಪ್ರಕರಣಗಳನ್ನು ಪರಿಶೀಲಿಸಿದ್ದರು’ ಎಂದು ಅಧಿಕಾರಿ ಹೇಳಿದರು.

‘₹ 9,000 ದಂಡ ಬಾಕಿ ಇರುವುದು ಗೊತ್ತಾಗಿತ್ತು. ಜೊತೆಗೆ, ಹೊಸ ₹ 1,000 ದಂಡ ಸೇರಿಸಿ ರಶೀದಿಯನ್ನು ಯುವತಿಗೆ ನೀಡಿದ್ದರು. ದಂಡ ಪಾವತಿಸಲು ಒಪ್ಪದೆ ಮತ್ತೆ ವಾಗ್ವಾದ ಮಾಡಿದರು. ಲಿಂಬಾವಳಿ ಪುತ್ರಿ ಜೊತೆಗಿದ್ದ ಯುವಕ ಮಧ್ಯ ಪ್ರವೇಶಿಸಿ, ದಂಡ ಪಾವತಿಸಿದ. ನಂತರವೇ ಯುವತಿಯ ಕಾರನ್ನು ಪೊಲೀಸರು ಬಿಟ್ಟು ಕಳುಹಿಸಿದರು’ ಎಂದು ತಿಳಿಸಿದರು.

ಪುತ್ರಿ ವಿರುದ್ಧದ ಆರೋಪದ ಬಗ್ಗೆ ಪ್ರತಿಕ್ರಿಯೆ ಪಡೆಯಲು ಅರವಿಂದ ಲಿಂಬಾವಳಿ ಲಭ್ಯರಾಗಲಿಲ್ಲ.

ಚಿತ್ರೀಕರಣಕ್ಕೂ ಅಡ್ಡಿ
‘ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಪುತ್ರಿ ವರ್ತನೆಯನ್ನು ಸ್ಥಳೀಯರು ಹಾಗೂ ಮಾಧ್ಯಮದವರು ಚಿತ್ರೀಕರಣ ಮಾಡುತ್ತಿದ್ದರು. ಅವರ ವಿರುದ್ಧವೂ ಹರಿಹಾಯ್ದ ಪುತ್ರಿ, ‘ನನ್ನ ಚಿತ್ರೀಕರಣ ಏಕೆ ಮಾಡುತ್ತಿದ್ದೀರಿ? ಪರಿಣಾಮ ನೆಟ್ಟಗಿರಲ್ಲ’ ಎಂದು ಕ್ಯಾಮೆರಾ ಕಿತ್ತುಕೊಳ್ಳಲು ಯತ್ನಿಸಿದ್ದರು. ಪೊಲೀಸರೇ ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT