ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುನಿರತ್ನ ಸೀರೆ ಹಂಚಿದ್ದನ್ನು ಕಂಡವರಿದ್ದಾರೆ: ಹೈಕೋರ್ಟ್‌ನಲ್ಲಿ ಮುನಿರಾಜು ಗೌಡ

Last Updated 5 ಏಪ್ರಿಲ್ 2022, 20:19 IST
ಅಕ್ಷರ ಗಾತ್ರ

ಬೆಂಗಳೂರು: ಮುನಿರತ್ನ (ಮುನಿರತ್ನಂ ಸುಬ್ರಮಣ್ಯ ನಾಯ್ಡು) ಅವರು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮಹಿಳಾ ಮತದಾರರಿಗೆ ಸೀರೆಗಳನ್ನು ಹಂಚಿ ಅವರ ಅಸಲಿ ವೋಟರ್‌ ಕಾರ್ಡುಗಳನ್ನು ಸಂಗ್ರಹಿಸಿ ಇಟ್ಟುಕೊಂಡ ಘಟನೆಯನ್ನು ಪ್ರತ್ಯಕ್ಷವಾಗಿ ಕಂಡವರು ನನಗೆ ತಿಳಿಸಿರುತ್ತಾರೆ...

ಈಗಿನ ಬಿಜೆ‍ಪಿ ಸರ್ಕಾರದಲ್ಲಿ ಸಚಿವರಾಗಿರುವ ಮುನಿರತ್ನ ಅವರು 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪ‍ರ್ಧಿಸಿದ್ದರು. ಅಂದು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಜಯಗೊಂಡಿದ್ದ ಪಿ.ಎಂ. ಮುನಿರಾಜು ಗೌಡ, ಹೈಕೋರ್ಟ್‌ನ ಸಾಕ್ಷಿ ಕಟಕಟೆಯಲ್ಲಿ ನಿಂತುಮುಖ್ಯ ವಿಚಾರಣೆಯ ಪ್ರಶ್ನೆಗೆ ಉತ್ತರಿಸಿದ್ದು ಹೀಗೆ.

‘ಮುನಿರತ್ನ ಅವರು 15ನೇ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಗೆಲುವು ಸಾಧಿಸುವಲ್ಲಿ ಹಲವಾರು ಚುನಾವಣಾ ಅಕ್ರಮಗಳನ್ನು ಎಸಗಿರುವ ಕಾರಣ ಅವರ ಅಂದಿನ ಆಯ್ಕೆಯನ್ನು ಜನತಾ ಪ್ರತಿನಿಧಿ ಕಾಯ್ದೆ–1951ರ ಕಲಂ 123ರ ಅನುಸಾರ ಅನೂರ್ಜಿತ ಎಂದು ಸಾರಬೇಕು’ ಎಂದು ಕೋರಿ ವಿಧಾನಪರಿಷತ್‌ನ ಬಿಜೆಪಿ ಸದಸ್ಯರೂ ಆಗಿರುವ ಪಿ.ಎಂ.ಮುನಿರಾಜು ಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯ ಎರಡನೇ ದಿನದ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ಮುಂದುವರೆಸಿತು.

ಮುಖ್ಯ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ.ಶಿವಪ್ರಕಾಶ್‌ ಅವರ ಪ್ರಶ್ನೆಗಳಿಗೆ ಉತ್ತರಿಸಿದ ಮುನಿರಾಜು ಗೌಡ, ‘ಮುನಿರತ್ನ ಸೀರೆ ಹಂಚುತ್ತಿರುವ ಭಾವಚಿತ್ರಗಳನ್ನು ಅವರದೇ ಫೇಸ್‌ಬುಕ್‌ನಲ್ಲಿ ಹಾಕಿಕೊಂಡಿರುವುದನ್ನು ನಾನಿಲ್ಲಿ ಹಾಜರುಪಡಿಸುತ್ತಿದ್ದೇನೆ‘ ಎಂದು ದೃಢೀಕೃತ ದಾಖಲೆಗಳನ್ನು ಸಲ್ಲಿಸಿದರು.

‘ಮುನಿರತ್ನ ಅವರು 2018ರ ಫೆಬ್ರುವರಿ ಮೊದಲ ವಾರದಂದು ಒಂದು ಕರಪತ್ರವನ್ನು ಮುದ್ರಿಸಿ ಆರ್‌ಆರ್‌ನಗರ ವಿಧಾನಸಭಾ ಕ್ಷೇತ್ರದ ಎಲ್ಲ ಮತದಾರರಿಗೆ ಹಂಚಿದರು. ಈ ಕರಪತ್ರದಲ್ಲಿ 11.02.2018ರಂದು ಮಹಾಶಿವರಾತ್ರಿ ಹಬ್ಬವಿದ್ದು ಅದರ ಪ್ರಯುಕ್ತ ಮಹಿಳಾ ಮತದಾರರಿಗೆ ಸೀರೆಗಳನ್ನು ಕೊಡುವುದಾಗಿ ಭರವಸೆ ನೀಡಲಾಗಿತ್ತು. ಅದರಂತೆ, 11ರಂದು ಮುನಿರತ್ನ, ಲಗ್ಗೆರೆಯ ನಾಮನಿರ್ದೇಶಿತ ಸದಸ್ಯ ಎಚ್‌.ಎಸ್.ಸಿದ್ದೇಗೌಡ, ಯಶವಂತಪುರದ ಬಿಬಿಎಂಪಿ ಸದಸ್ಯ ಜಿ.ಕೆ.ವೆಂಕಟೇಶ್‌, ಜೆ.ಪಿ.ಪಾರ್ಕ್‌ ವಾರ್ಡ್‌ನ ಪರಾಜಿತ ಅಭ್ಯರ್ಥಿ ಶ್ರೀಮತಿ ಸುನಂದಮ್ಮ, ಲಕ್ಷ್ಮಿದೇವಿನಗರದ ಶ್ರೀವೇಲು ನಾಯ್ಕರ್‌, ಜಾಲಹಳ್ಳಿ ವಾರ್ಡ್‌ನ ಶ್ರೀನಿವಾಸಮೂರ್ತಿ ಮತ್ತು ಇತರರು ನೇರವಾಗಿ ಭಾಗಿಯಾಗಿ ಮಹಿಳಾ ಮತದಾರರಿಗೆ ಸೀರೆಯನ್ನು ಹಂಚಿದರು’ ಎಂದು ಮುನಿರಾಜುಗೌಡ ವಿವರಿಸಿದರು.

‘ಈ ಘಟನೆಗೆ ಸಾಕ್ಷಿಯಾಗಿ ಪಿ.ಪುರುಷೋತ್ತಮ್‌, ಆನಂದಕುಮಾರ್, ಜಿ.ಸಂತೋಷ್‌ಕುಮಾರ್ ಮತ್ತು ಮಂಜುನಾಥ್‌ ಪ್ರತ್ಯಕ್ಷವಾಗಿ ಕಂಡಿರುತ್ತಾರೆ ಹಾಗೂ ಈ ಸಂಗತಿಯನ್ನು ಅವರು ನನಗೆ ತಿಳಿಸಿರುತ್ತಾರೆ’ ಎಂದು ಮುನಿರಾಜುಗೌಡ ತಿಳಿಸಿದರು. ಕಲಾಪದ ಅವಧಿ ಪೂರ್ಣಗೊಂಡ ಕಾರಣ ವಿಚಾರಣೆಯನ್ನು ಇದೇ 11ಕ್ಕೆ ಮುಂದೂಡಲಾಗಿದೆ.

ವಾಟರ್‌ ಕ್ಯಾನ್‌, ಕುಕ್ಕರ್‌,ಕಿಚನ್‌ ತವಾ ಭರವಸೆ...!

‘ಮುನಿರತ್ನ ಅವರು ಜೆ.ಪಿ.ಪಾರ್ಕ್‌ ಗ್ರೌಂಡ್‌, ಕೊಟ್ಟಿಗೆಪಾಳ್ಯ ದೇವಸ್ಥಾನ, ಜಾಲಹಳ್ಳಿ ಸರ್ಕಾರಿ ಶಾಲೆ ಮೈದಾನ, ಲಗ್ಗೆರೆ ಸ್ಕೂಲ್‌ ಗ್ರೌಂಡ್‌ ಮತ್ತು ಮಂಜುಶ್ರೀ ಕಲ್ಯಾಣ ಮಂಟಪದಲ್ಲಿ ಮಹಿಳಾ ಮತದಾರರಿಗೆ ಸೀರೆಗಳನ್ನು ಹಂಚಿದರು. ಸೀರೆಗಳನ್ನು ಹಂಚುವಾಗ ಮುನಿರತ್ನ ಮತ್ತು ಅವರ ಸಹಚರರು ಮತದಾರರಿಂದ ಒರಿಜನಲ್‌ ವೋಟರ್‌ ಐಡಿ ಕಾರ್ಡುಗಳನ್ನು ಪಡೆದುಕೊಂಡರು. ಇದನ್ನು ಪಡೆದುಕೊಳ್ಳುವಾಗ ಆದಷ್ಟು ಬೇಗ ವಾಟರ್‌ ಕ್ಯಾನ್‌, ಕುಕ್ಕರ್‌ ಮತ್ತು ಕಿಚನ್‌ ತವಾಗಳನ್ನು ನೀಡುವುದಾಗಿ ಭರವಸೆ ನೀಡಿದರು. ಈ ಕಾರಣಕ್ಕಾಗಿ ವೋಟರ್‌ ಐಡಿ ಕಾರ್ಡುಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳುತ್ತಿರುವುದಾಗಿಯೂ ಮಹಿಳಾ ಮತದಾರರಿಗೆ ತಿಳಿಸಿದರು’ ಎಂದು ಮುನಿರಾಜು ಗೌಡ ಸಾಕ್ಷಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT