ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜರಾಜೇಶ್ವರಿ ನಗರ: ‘ಕುರುಕ್ಷೇತ್ರ’ ಗೆದ್ದ ಮುನಿರತ್ನ

ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಗೆಲುವು l ಫಲಿಸದ ಡಿ.ಕೆ. ಸಹೋದರ ತಂತ್ರ
Last Updated 11 ನವೆಂಬರ್ 2020, 0:26 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಅಬ್ಬರದ ಪ್ರಚಾರ, ಆರೋಪ–ಪ್ರತ್ಯಾರೋಪ, ವೈಯಕ್ತಿಕ ಟೀಕೆ, ನಿಂದನೆ, ಜಾತಿ ರಾಜಕೀಯ, ಕಣ್ಣೀರಧಾರೆ... ಹೀಗೆ ಎಲ್ಲವನ್ನೂ ಉಪ ಚುನಾವಣೆಯಲ್ಲಿ ಕಂಡ ಆರ್‌.ಆರ್‌. ನಗರ ಕ್ಷೇತ್ರದ ಮತದಾರರು, ಮತ್ತೊಮ್ಮೆ ಮುನಿರತ್ನ ಅವರ ಕೈ
ಹಿಡಿದಿದ್ದಾರೆ. ಎರಡು ಬಾರಿ ಕಾಂಗ್ರೆಸ್‌ನಿಂದ ಚುನಾಯಿತರಾಗಿದ್ದ ಅವರು, ಈ ಬಾರಿ ಬಿಜೆಪಿಯಿಂದ ಕಣಕ್ಕಿಳಿದು ಭಾರಿ ಅಂತರದಲ್ಲಿ ಜಯಭೇರಿ ಬಾರಿಸುವ ಮೂಲಕ ಹ್ಯಾಟ್ರಿಕ್‌ ಸಾಧಿಸಿದ್ದಾರೆ.

ರಾಜಕೀಯದ ಎಲ್ಲ ಲೆಕ್ಕಾಚಾರಗಳನ್ನು ಮೀರಿ 58,113 ಮತಗಳ ಅಂತರದಿಂದ ಮುನಿರತ್ನ ಗೆಲುವು ಕಂಡಿದ್ದಾರೆ. ಒಟ್ಟು ಮತದಾರರ (4,62,236) ಪೈಕಿ, ಚಲಾವಣೆಯಾಗಿದ್ದ 2,06,991 (359 ಅಂಚೆ ಮತಗಳು) ಮತಗಳಲ್ಲಿ 1,25,990 ಮತಗಳನ್ನು (ಶೇ 60.14) ಪಡೆದು ಚುನಾಯಿತರಾಗಿದ್ದಾರೆ. 2,497 (ಶೇ 1.19) ಮತದಾರರು ನೋಟಾ ಚಲಾಯಿಸಿದ್ದಾರೆ. 57 ಮತಗಳು ತಿರಸ್ಕೃತಗೊಂಡಿವೆ.

‘ತೀರ್ಪನ್ನು ತಲೆಬಾಗಿ ಸ್ವೀಕರಿಸುತ್ತೇನೆ’: ಗೆಲುವಿನ ಆತ್ಮವಿಶ್ವಾಸದಲ್ಲಿದ್ದ ಕುಸುಮಾ ಅವರಿಗೆ ಭಾರಿ ಅಂತರದ ಸೋಲು ನೋವು ತಂದಿದೆ. ಸಾಮಾಜಿಕ ಜಾಲತಾಣದಲ್ಲಿ ಮತದಾರರಿಗೆ ಭಾವನಾತ್ಮಕ ಪತ್ರ ಬರೆದಿರುವ ವರು, ‘ನೀವು ಕೊಟ್ಟಿರುವ ತೀರ್ಪನ್ನು ತಲೆಬಾಗಿ ಸ್ವೀಕರಿಸುತ್ತೇನೆ’ ಎಂದಿದ್ದಾರೆ.

‘ಮತಯಾಚನೆಗಾಗಿ ಮನೆಬಾಗಿಲಿಗೆ ಬಂದಾಗ ಮನೆ ಮಗಳಂತೆ ಬರಮಾಡಿಕೊಂಡು, ಕುಂಕುಮ ಇಟ್ಟು, ಹೂ ಮುಡಿಸಿ, ಉಡಿ ತುಂಬಿ ನೀವು ತೋರಿದ ಪ್ರೀತಿಗೆ ನಾನು ಚಿರಋಣಿ. ನಮ್ಮ ರಾಜರಾಜೇಶ್ವರಿ ನಗರ ಕ್ಷೇತ್ರ ಎಂದೆಂದಿಗೂ ನನ್ನ ಕರ್ಮ ಭೂಮಿ. ಎಂದಿನಂತೆ ನಿಮ್ಮೊಂದಿಗಿದ್ದು ನನ್ನ ಸಮಾಜ ಸೇವಾ ಕಾರ್ಯಗಳನ್ನು ಮುಂದುವರಿಸುವ ಮೂಲಕ ನೊಂದವರ ಧ್ವನಿಯಾಗುತ್ತೇನೆ’ ಎಂದೂ ಅವರು ಹೇಳಿದ್ದಾರೆ.

ಕಾಂಗ್ರೆಸ್‌ನ ಕುಸುಮಾ 67,877 (ಶೇ 32.4) ಮತಗಳನ್ನು ಪಡೆದರೆ ಜೆಡಿಎಸ್‌ನ ವಿ. ಕೃಷ್ಣಮೂರ್ತಿ ಕೇವಲ 10,269 (ಶೇ 4.9) ಮತಗಳನ್ನು ಪಡೆದಿದ್ದಾರೆ. ಕೃಷ್ಣಮೂರ್ತಿ ಸೇರಿ ಕಣದಲ್ಲಿದ್ದ ಇತರ 13 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ.

ಒಟ್ಟು 25 ಸುತ್ತುಗಳಲ್ಲಿ ಯಾವ ಸುತ್ತಿನಲ್ಲೂ ಮುನಿರತ್ನ ಮುನ್ನಡೆ ಬಿಟ್ಟು ಕೊಡಲಿಲ್ಲ. ಅಂಚೆ ಮತಗಳ ಎಣಿಕೆಯಿಂದ ಆರಂಭಗೊಂಡ ಅವರ ಮುನ್ನಡೆ, ಮತಯಂತ್ರಗಳ ಮತ ಎಣಿಕೆ ಮುಂದುವರಿದಂತೆ ಹೆಚ್ಚುತ್ತಲೇ ಹೋಯಿತು. 15ನೇ ಸುತ್ತಿನ ‌ಅಂತ್ಯಕ್ಕೆ 35,526 ಮತಗಳಿಂದ ಮುನ್ನಡೆ ಸಾಧಿಸಿದ್ದ ಅವರು, ಆಗಲೇ ಹ್ಯಾಟ್ರಿಕ್‌ ಗೆಲುವಿನ ಕಡೆಗೆ ಸ್ಪಷ್ಟ ಹೆಜ್ಜೆ ಇಟ್ಟಿದ್ದರು. ಮುನಿರತ್ನ ಅವರು ಮುನ್ನಡೆ ಪಡೆಯುತ್ತಿದ್ದಂತೆ ಎಣಿಕಾ ಕೇಂದ್ರದ ಹೊರಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಮತ್ತು ಅವರ ಬೆಂಬಲಿಗರು ಸಂಭ್ರಮಾಚರಣೆಯಲ್ಲಿ ತೊಡಗಿದರು.

ಪ್ರಚಾರದ ಅಬ್ಬರದ ವೇಳೆ ಮುನಿರತ್ನ ಮತ್ತು ಕುಸುಮಾ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ನಡೆಯಬಹುದು ಎಂದೇ ನಿರೀಕ್ಷಿಸಲಾಗಿತ್ತು. ಯಾರೇ ಗೆದ್ದರೂ ಕಡಿಮೆ ಅಂತರ ಇರಬಹುದು ಎಂದೂ ವಿಶ್ಲೇಷಿಸಲಾಗಿತ್ತು.

‘ನನ್ನ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ ಮಾಡುತ್ತೇನೆ’: ‘ನನ್ನ ಕ್ಷೇತ್ರವನ್ನು ಇನ್ನಷ್ಟು ಅಭಿವೃದ್ಧಿ ಮಾಡುತ್ತೇನೆ’ ಎಂದು ಮುನಿರತ್ನ ಹೇಳಿದರು.

‘ಮೊದಲ ಬಾರಿ 17 ಸಾವಿರ ಮತಗಳಿಂದ, ಎರಡನೇ ಚುನಾವಣೆಯಲ್ಲಿ 26 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದೆ. ಈ ಬಾರಿ 57 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದೇನೆ. ನನ್ನ ಗೆಲುವಿಗೆ ಎಲ್ಲರೂ ಕಾರಣ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಸಚಿವರು, ಶಾಸಕರಿಗೆ ನನ್ನ ಗೆಲುವನ್ನು ಅರ್ಪಿಸುತ್ತೇನೆ’ ಎಂದರು.

‘ನನ್ನ ವಿರೋಧಿ ಅಭ್ಯರ್ಥಿ (ಕುಸುಮಾ) ನಿಜ ಮಾತನಾಡಬೇಕು. ನಾನು ಆಡದ ಮಾತನ್ನು ಆಡಿದ್ದೇನೆ ಎಂದು ಹೇಳಿ ಕೊನೆಕ್ಷಣದಲ್ಲಿ ಅಪಪ್ರಚಾರ ಮಾಡಿದರು. ಆದರೆ, ನಾನು ಎಂದೂ ಹೆಣ್ಣು ಮಕ್ಕಳ ವಿರುದ್ಧ ಮಾತನಾಡಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT