7
ವೇತನ ಸಿಗದೆ ಪೌರ ಕಾರ್ಮಿಕ ಆತ್ಮಹತ್ಯೆ ಪ್ರಕರಣ

ಪೌರಕಾರ್ಮಿಕ ಆತ್ಮಹತ್ಯೆ ಖಂಡಿಸಿ ಪ್ರತಿಭಟನೆ

Published:
Updated:

ಬೆಂಗಳೂರು:  ವೇತನ ಸಿಗದ ಕಾರಣಕ್ಕೆ ಪೌರಕಾರ್ಮಿಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಬಿಎಂಪಿ ಪಶ್ಚಿಮ ವಲಯ ಕಚೇರಿ ಮುಂದೆ ಬಿಜೆಪಿ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಯಿತು. 

‘ಪಾಲಿಕೆ ಆಡಳಿತ ಕೊಟ್ಟ ಮಾತಿಗೆ ತಪ್ಪಿದೆ. ಬಯೋಮೆಟ್ರಿಕ್‌ ವ್ಯವಸ್ಥೆ ಅಳವಡಿಸಿ ವೇತನ ಪಾವತಿಸುವುದಾಗಿ ಹೇಳಿದ ಪಾಲಿಕೆ ಅಧಿಕಾರಿಗಳು ಆ ವ್ಯವಸ್ಥೆ ಬಂದರೂ ವೇತನ ಪಾವತಿಸುವಲ್ಲಿ ವಿಳಂಬ ಮಾಡಿದ್ದಾರೆ. ಅಮಾಯಕ ಕಾರ್ಮಿಕ ಬಲಿಯಾಗಿದ್ದಾನೆ. ಘಟನೆಯ ನೈತಿಕ ಹೊಣೆ ಹೊತ್ತು ಮೇಯರ್‌ ಆರ್‌.ಸಂಪತ್‌ರಾಜ್‌ ರಾಜೀನಾಮೆ ಕೊಡಬೇಕು’ ಎಂದು ಪ್ರತಿಭಟನಕಾರರು ಒತ್ತಾಯಿಸಿದರು.

ಸ್ಥಳದಲ್ಲಿದ್ದ ಹಲವು ಪೌರ ಕಾರ್ಮಿಕರು ಪ್ರತಿಭಟನಕಾರರ ಜತೆ ದನಿಗೂಡಿಸಿದರು. ‘ಇದುವರೆಗೆ ವೇತನ ಬಿಡುಗಡೆ ಮಾಡಿಲ್ಲ. ನಮ್ಮ ನೋವು ನಿಮಗೆ (ಪಾಲಿಕೆ ಆಡಳಿತಕ್ಕೆ) ಶಾಪವಾಗಿ ತಟ್ಟಲಿದೆ’ ಎಂದು ಕಿಡಿ ಕಾರಿದರು.  

ಸಂಸದ ಪಿ.ಸಿ.ಮೋಹನ್, ಪಾಲಿಕೆ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಮಾಜಿ ಮೇಯರ್‌ ಕಟ್ಟೆ ಸತ್ಯನಾರಾಯಣ ಸೇರಿದಂತೆ ಪಾಲಿಕೆ ಬಿಜೆಪಿ ಸದಸ್ಯರು, ಕಾರ್ಯಕರ್ತರು ಪಾಲ್ಗೊಂಡಿದ್ದರು.

ಜಂಟಿ ಆಯುಕ್ತ ಬಸವರಾಜು ಮಾತನಾಡಿ, ‘ಬಯೋಮೆಟ್ರಿಕ್‍ನಲ್ಲಿ ಹೆಸರು ನೋಂದಾಯಿಸಿರುವವರಿಗೆ ಸಂಜೆ ವೇಳೆಗೆ ವೇತನ ನೀಡುವುದಾಗಿ ಭರವಸೆ ನೀಡಿದರು. ಯಾವುದೇ ಕಾರಣಕ್ಕೂ ಪೌರಕಾರ್ಮಿಕರು ಆತಂಕಕ್ಕೊಳಗಾಗಬಾರದು’ ಎಂದು ಸಮಾಧಾನಪಡಿಸಲು ಯತ್ನಿಸಿದರು. 

ಕಸ ವಿಲೇವಾರಿ ವಾಹನ ಗುತ್ತಿಗೆದಾರರ ಸಂಘದ ಪ್ರಧಾನ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಮಾತನಾಡಿ, ‘ಬಿಬಿಎಂಪಿ ಆಡಳಿತದಲ್ಲಿ ಪೌರಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲ. ಪ್ರಾಣ ಹೋದ ಮೇಲೆ ₹ 10 ಲಕ್ಷ ಪರಿಹಾರ ನೀಡುವುದು, ಉದ್ಯೋಗ ನೀಡುವುದು ಯಾವ ಪುರುಷಾರ್ಥಕ್ಕೆ?’ ಎಂದು ಪ್ರಶ್ನಿಸಿದರು.

ಮೇಯರ್‌ ಸಂಪತ್‌ರಾಜ್‌ ಮಾತನಾಡಿ, ‘ಕಾರ್ಮಿಕರ ಹಿತ ಕಾಪಾಡಲು ಆಡಳಿತ ಬದ್ಧವಾಗಿದೆ. ಜುಲೈ 20ರ ಒಳಗೆ ಸಮಸ್ಯೆ ಬಗೆಹರಿಯಲಿದೆ’ ಎಂದರು.

ಸಂಜೆ ವೇಳೆ ಪಾಲಿಕೆ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆ ನಡೆದಿದೆ. 

ಸಂಪತ್‌ರಾಜ್‌ ಪ್ರತಿಕ್ರಿಯೆ

ವೇತನ ಪಾವತಿ ಕುರಿತು ಕಳೆದ ಶುಕ್ರವಾರವೇ ಸಭೆ ಕರೆದಿದ್ದೆವು. ಹಾಜರಿಪಟ್ಟಿಯಲ್ಲಿರುವ ಎಲ್ಲರಿಗೂ ವೇತನ ಕೊಡಲಾಗುತ್ತಿದೆ. 1,800 ಜನರ ವೇತನ ಪಾವತಿ ಬಾಕಿ ಆಗಿತ್ತು. ಅದನ್ನೂ ವಿತರಿಸಲು ಕ್ರಮ ಕೈಗೊಳ್ಳುತ್ತೇವೆ ಎಂದು ಸಂಪತ್‌ರಾಜ್‌ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !