ಸೋಮವಾರ, ಜೂನ್ 14, 2021
23 °C
ಸಿ.ಟಿ. ರವಿಗೆ ಕಾಂಗ್ರೆಸ್‌ ಮುಖಂಡ ಬಿ.ಕೆ. ಚಂದ್ರಶೇಖರ್ ಪ್ರಶ್ನೆ

ಅಯೋಧ್ಯೆ ತೀರ್ಪು ಕೊಟ್ಟ ನ್ಯಾಯಮೂರ್ತಿಗಳು ಸರ್ವಜ್ಞರಾಗಿರಲಿಲ್ಲವೇ?: ಬಿಕೆಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಅಯೋಧ್ಯೆ–ಬಾಬರಿ ಮಸೀದಿ ವಿವಾದದ ತೀರ್ಪು ಕೊಟ್ಟ ನ್ಯಾಯಮೂರ್ತಿಗಳು ಸರ್ವಜ್ಞರಾಗಿರಲಿಲ್ಲವೇ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ.ಕೆ. ಚಂದ್ರಶೇಖರ್‌ ಅವರು ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ. ರವಿ ಅವರನ್ನು ಪ್ರಶ್ನಿಸಿದ್ದಾರೆ.

‘ನ್ಯಾಯಾಧೀಶರೇನು ಸರ್ವಜ್ಞರೇ’ ಎಂಬ ರವಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರು, ‘₹20,000 ಕೋಟಿ ವೆಚ್ಚದಲ್ಲಿ ಭವ್ಯವಾದ ಬಂಗಲೆಗಳನ್ನೊಳಗೊಂಡ ‘ಸೆಂಟ್ರಲ್ ವಿಸ್ಟಾ’ ಯೋಜನೆಗೆ ತಡೆಯಾಜ್ಞೆ ನಿರಾಕರಿಸಿದ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಸರ್ವಜ್ಞರಲ್ಲವೇ’ ಎಂದೂ ಅವರು ಕೇಳಿದ್ದಾರೆ. 

‘ವಿಶೇಷವಾಗಿ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಶಾಹಿನ್‌ಬಾಗ್‌ ಪ್ರತಿಭಟನೆಯನ್ನು ತೆರವುಗೊಳಿಸಿದ ನ್ಯಾಯಾಧೀಶರು, ಬ್ರಿಟಿಷರ ಕಾಲದ ‘ದೇಶದ್ರೋಹ’ ಮತ್ತಿತರ ಕ್ರಿಮಿನಲ್ ಕಾಯ್ದೆಯಡಿ ನಾನಾ ಆಪಾದನೆಗಳನ್ನು ಹೇರಿ ಜೈಲಿಗೆ ಅಟ್ಟಿದ್ದ, ಈಗಲೂ ಅಲ್ಲೇ ಇರುವ ಸಾಮಾಜಿಕ ಕಾರ್ಯಕರ್ತರಿಗೆ ಜಾಮೀನು ನಿರಾಕರಿಸಿದ ನ್ಯಾಯಾಧೀಶರುಗಳು ರವಿಯವರ ದೃಷ್ಟಿಯಲ್ಲಿ ಸರ್ವಜ್ಞರೇನೋ’ ಎಂದೂ ಅವರು ವ್ಯಂಗ್ಯವಾಡಿದ್ದಾರೆ.

‘ನಾಲ್ಕು ತಿಂಗಳ  ಹಿಂದೆಯೆ ಭಾರತದ ವಿಜ್ಞಾನಿಗಳು, ವೈರಾಣು ತಜ್ಞರು, ವೈದ್ಯರು ಕೋವಿಡ್ ಎರಡನೆಯ ಅಲೆಯ ಬಗ್ಗೆ ಸಾಕಷ್ಟು ಎಚ್ಚರಿಕೆ ಕೊಟ್ಟಿದ್ದನ್ನು ವಿಜ್ಞಾನಿಗಳೇ ಬಹಿರಂಗ ಪಡಿಸಿದ್ದರು. ಕಾರ್ಯಾಂಗ ಇತ್ತೀಚೆಗೆ 15 ದಿನಗಳಿಂದ ತೆಗೆದುಕೊಂಡ ಕ್ರಮಗಳನ್ನು 3 ತಿಂಗಳ ಹಿಂದೆ ಜಾರಿಗೆ ತರಲು ಯಾವುದೇ ಅಡಚಣೆ ಇರಲಿಲ್ಲ’ ಎಂದೂ ಅವರು ಹೇಳಿದ್ದಾರೆ. 

‘ಲಕ್ಷಾಂತರ ಜನರ ಸಾವಿಗೆ ಕಾರಣವಾದ ಗಂಭೀರ ಪರಿಸ್ಥಿತಿಯನ್ನು ಹಗುರವಾಗಿ ಪರಿಗಣಿಸಿ ಅಸಂಖ್ಯಾತ ಚುನಾವಣಾ ಪ್ರಚಾರ ಸಭೆಗಳು, ಕುಂಭಮೇಳದಂತಹ ‘ಸೂಪರ್ ಸ್ಪ್ರೆಡರ್’ ಕಾರ್ಯಕ್ರಮಗಳಲ್ಲಿ ಭಾಗಿಯಾದ ಕೇಂದ್ರದ ಪ್ರಮುಖ ನಾಯಕರನ್ನು ಉದ್ದೇಶಿಸಿ ಆದೇಶಗಳನ್ನು ಕೊಡುತ್ತಿರುವ, ಜನಪರ ಕಾಳಜಿಯುಳ್ಳ, ದೇಶದ ಪ್ರಜೆಗಳ ಜೀವಿಸುವ ಹಕ್ಕನ್ನು ಎತ್ತಿ ಹಿಡಿದ ಸುಪ್ರೀಂ ಕೋರ್ಟ್‌ ಹಾಗೂ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳು ‘ಅಜ್ಞಾನಿ’ಗಳೇನು’ ಎಂದೂ ಚಂದ್ರಶೇಖರ್‌ ಪ್ರಶ್ನಿಸಿದ್ದಾರೆ.  

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು