ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಾನವ ಹಕ್ಕು ಆಯೋಗದ ಹೆಸರಲ್ಲಿ ಪೊಲೀಸರಿಗೆ ಬ್ಲ್ಯಾಕ್ ಮೇಲ್: ಆರೋಪಿ ಬಂಧನ

Published 6 ಆಗಸ್ಟ್ 2024, 16:11 IST
Last Updated 6 ಆಗಸ್ಟ್ 2024, 16:11 IST
ಅಕ್ಷರ ಗಾತ್ರ

ಬೆಂಗಳೂರು: ಠಾಣೆಯಲ್ಲಿರುವ ಆರೋಪಿಗಳ ಪರ ಮಾನವ ಹಕ್ಕುಗಳ ಆಯೋಗಕ್ಕೆ ನೀಡಿರುವ ದೂರು ವಾಪಸ್‌ ಪಡೆಯಲು ಹಣಕ್ಕಾಗಿ ಪೊಲೀಸರಿಗೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಆರೋಪಿ ಸೈಯದ್ ಸರ್ಫರಾಜ್ ಅಹಮದ್‌ (34) ಎಂಬಾತನನ್ನು ಶಿವಾಜಿ ನಗರ ಪೊಲೀಸರು ಬಂಧಿಸಿದ್ದಾರೆ.

‘ಖಾಸಗಿ ಕಂಪನಿಯಲ್ಲಿ ವಾಹನ ಜಪ್ತಿ ವಿಭಾಗದಲ್ಲಿ ಕೆಲಸ ಮಾಡಿಕೊಂಡಿದ್ದ ಭಾರತಿ ನಗರ ನಿವಾಸಿ ಸೈಯದ್‌ಗೆ ಪೊಲೀಸರ ಪರಿಚಯವಿತ್ತು. ಇದೇ ನೆಪದಲ್ಲಿ ಠಾಣೆಗೆ ಭೇಟಿ ನೀಡಿ, ಲಾಕ್‌ಅಪ್‌ನಲ್ಲಿದ್ದ ಆರೋಪಿಗಳನ್ನು ಮಾತನಾಡಿಸಿ ಪರಿಚಯ ಮಾಡಿಕೊಂಡು, ಅವರ ಪ್ರಕರಣದ ಬಗ್ಗೆ ತಿಳಿದು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ಕೊಡುತ್ತಿದ್ದ. ಬಳಿಕ ದೂರು ವಾಪಸ್‌ ಪಡೆಯಲು ಪೊಲೀಸರಿಂದ ಹಣ ವಸೂಲು ಮಾಡುತ್ತಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಕೆಲ ದಿನಗಳ ಹಿಂದೆ ಠಾಣಾ ವ್ಯಾಪ್ತಿಯ ಹೋಟೆಲ್‌ವೊಂದರಲ್ಲಿ ಟೀ ಕುಡಿದು ಹಣ ಪಾವತಿಸದೆ ದಾಂಧಲೆ ಮಾಡಿದ್ದ ವ್ಯಕ್ತಿಯನ್ನು ರಾತ್ರಿ 2.30ಕ್ಕೆ ಠಾಣೆಗೆ ಕರೆತರಲಾಯಿತು. ಈ ವಿಚಾರ ತಿಳಿದ ಸೈಯದ್‌, ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದಾನೆ. ಅದೇ ದಿನ ಆಯೋಗದ ಸದಸ್ಯರು ಠಾಣೆಗೆ ದಿಢೀರ್‌ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸದಿರುವುದಕ್ಕೆ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆರೋಪಿಯನ್ನು ಠಾಣೆಗೆ ಕರೆತಂದ ಸಮಯ ಹಾಗೂ ಸಿಸಿಟಿವಿ ಕ್ಯಾಮೆರಾದ ದೃಶ್ಯಗಳನ್ನು ಆಯೋಗಕ್ಕೆ ನೀಡಲಾಯಿತು’ ಎಂದು ಅವರು ಹೇಳಿದ್ದಾರೆ.

‘ಹಣ ನೀಡಿದರೆ ಆಯೋಗಕ್ಕೆ ನೀಡಿರುವ ದೂರು ವಾಪಸ್ ಪಡೆಯುವುದಾಗಿ ಆರೋಪಿ ಬ್ಲ್ಯಾಕ್ ಮೇಲ್ ಮಾಡತೊಡಗಿದ.  ₹ 50 ಸಾವಿರಕ್ಕೆ ಬೇಡಿಕೆ ಇರಿಸಿದ. ಜುಲೈ 29ರಂದು  ₹ 25 ಸಾವಿರ ಪಡೆಯುವ ವೇಳೆ ಆತನನ್ನು ಬಂಧಿಸಲು ಮುಂದಾದ ವೇಳೆ ಪರಾರಿಯಾಗಿದ್ದ. ಬಳಿಕ ಆತನನ್ನು ಪತ್ತೆಹಚ್ಚಿ ಬಂಧಿಸಲಾಯಿತು. ಇದೆಲ್ಲಾ ವಿಡಿಯೊ ಚಿತ್ರೀಕರಣ ಮಾಡಿಕೊಳ್ಳಲಾಗಿದೆ. ಆರೋಪಿ ಇದೇ ರೀತಿ  ಆರ್‌.ಟಿ. ನಗರ ಹಾಗೂ ಭಾರತಿ ನಗರದಲ್ಲೂ ಪೊಲೀಸರಿಗೆ ಬ್ಲ್ಯಾಕ್ ಮೇಲ್ ಮಾಡಿದ್ದ’ ಎಂದು ಮಾಹಿತಿ ನೀಡಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT