ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆತ್ತಲೆ ವಿಡಿಯೊ ಸಂಗ್ರಹಿಸಿ ಬ್ಲ್ಯಾಕ್‌ಮೇಲ್: ಬಂಧನ

ಸಿಮ್ ಕಾರ್ಡ್ ವರ್ತಕನೇ ರೂವಾರಿ: ಹರಿಯಾಣದಲ್ಲಿ ಮೂವರನ್ನು ಬಂಧಿಸಿದ ಸೈಬರ್ ಕ್ರೈಂ ಪೊಲೀಸರು
Last Updated 18 ಸೆಪ್ಟೆಂಬರ್ 2021, 19:23 IST
ಅಕ್ಷರ ಗಾತ್ರ

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಸಾರ್ವಜನಿಕರನ್ನು ಪರಿಚಯಿಸಿಕೊಂಡು ಬೆತ್ತಲೆಗೊಳಿಸಿ ವಿಡಿಯೊ ಚಿತ್ರೀಕರಿಸಿಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಜಾಲವನ್ನು ಸಿಐಡಿ ಸೈಬರ್ ಕ್ರೈಂ ಪೊಲೀಸರು ಭೇದಿಸಿದ್ದು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

‘ಹರಿಯಾಣದ ಇಕ್ಬಾಲ್, ಮುಜಾಹೀದ್ ಹಾಗೂ ಆಸೀಫ್ ಬಂಧಿತರು. ರಾಜ್ಯದಲ್ಲಿ ಹೆಚ್ಚಾಗುತ್ತಿದ್ದ ವಂಚನೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದ್ದ ಸೈಬರ್ ಕ್ರೈಂ ವಿಭಾಗದ ತಂಡ, ಹರಿಯಾಣಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿ ನಗರಕ್ಕೆ ಕರೆತಂದಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರ ಹೆಸರಲ್ಲಿ ನಕಲಿ ಖಾತೆ ತೆರೆಯುತ್ತಿದ್ದ ಆರೋಪಿಗಳು, ಸಾರ್ವಜನಿಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ಯುವತಿಯರ ಹೆಸರಿನಲ್ಲಿ ಸಂದೇಶ ಕಳುಹಿಸುತ್ತಿದ್ದರು. ಅದರಿಂದ ಪ್ರಚೋದನೆಗೆ ಒಳಗಾದ ಜನ, ಮೈ ಮೇಲಿನ ಬಟ್ಟೆ ತೆಗೆದು ನಿಲ್ಲುತ್ತಿದ್ದರು. ಅದೇ ದೃಶ್ಯವನ್ನು ಚಿತ್ರೀಕರಿಸಿಕೊಳ್ಳುತ್ತಿದ್ದ ಆರೋಪಿಗಳು, ಸಾರ್ವಜನಿಕರಿಗೆ ಕಳುಹಿಸಿ ಹಣಕ್ಕೆ ಬೇಡಿಕೆ ಇರಿಸುತ್ತಿದ್ದರು. ಹಣ ನೀಡದಿದ್ದರೆ ಯೂಟ್ಯೂಬ್, ಫೇಸ್‌ಬುಕ್‌ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿಬಿಡುವುದಾಗಿ ಬೆದರಿಸುತ್ತಿದ್ದರು’ ಎಂದೂ ತಿಳಿಸಿವೆ.

ಸಿಮ್‌ ಕಾರ್ಡ್ ಮಾರುತ್ತಿದ್ದ ಆರೋಪಿ: ‘ಆರೋಪಿ ಮುಜಾಹಿದ್, ಸಾರ್ವಜನಿಕರಿಗೆ ಸಿಮ್ ಕಾರ್ಡ್‌ ವಿತರಿಸುವ ಏಜೆನ್ಸಿ ಪಡೆದಿದ್ದ. ತನ್ನ ಬಳಿ ಸಿಮ್ ಖರೀದಿಸುತ್ತಿದ್ದ ಗ್ರಾಹಕರ ದಾಖಲೆಗಳನ್ನು ನಕಲು ಮಾಡಿ, ಅವರ ಹೆಸರಿನಲ್ಲೇ ಮತ್ತೊಂದು ಸಿಮ್ ಕಾರ್ಡ್ ಖರೀದಿಸಿ ವಂಚನೆಗೆ ಬಳಸುತ್ತಿದ್ದ. ಇದಕ್ಕೆ ಆಸೀಫ್ ಸಹಕರಿಸುತ್ತಿದ್ದ’ ಎಂದು ಮೂಲಗಳು ಹೇಳಿವೆ.

‘ಇನ್ನೊಬ್ಬ ಆರೋಪಿ ಇಕ್ಬಾಲ್, ಜೆರಾಕ್ಸ್ ಅಂಗಡಿ ಇಟ್ಟುಕೊಂಡಿದ್ದ. ನಕಲಿ ದಾಖಲೆಗಳನ್ನು ಸಿದ್ಧಪಡಿಸಲು ಮುಜಾಹಿದ್ ಹಾಗೂ ಆಸೀಫ್‌ಗೆ ಸಹಾಯ ಮಾಡುತ್ತಿದ್ದ. ಮೂವರು ಸೇರಿ ಇದುವರೆಗೂ 3,900 ಮಂದಿಗೆ ವಂಚಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಕರ್ನಾಟಕ ಹಾಗೂ ನೆರೆಯ ರಾಜ್ಯಗಳಲ್ಲೂ ಆರೋಪಿಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ’ ಎಂದೂ ತಿಳಿಸಿವೆ.

ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ‘ಆರೋಪಿಗಳನ್ನು ಬಂಧಿಸಲು ಹೋದ ಸೈಬರ್ ಕ್ರೈಂ ಪೊಲೀಸರ ತಂಡದ ಮೇಲೆಯೇ ಸ್ಥಳೀಯರು ಹಲ್ಲೆಗೆ ಯತ್ನಿಸಿದ್ದರು. ಸ್ಥಳೀಯ ಪೊಲೀಸರ ನೆರವಿನಿಂದಾಗಿ ಆರೋಪಿಗಳನ್ನು ವಶಕ್ಕೆ ಪಡೆದು ರಾಜ್ಯಕ್ಕೆ
ಕರೆತರುವಲ್ಲಿ ಸಿಐಡಿ ತಂಡ ಯಶಸ್ವಿಯಾಗಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT