ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಗಳಿಕೆ, ಟೀಕೆ... ತಪ್ಪು ಗ್ರಹಿಕೆ- ನಟೇಶ್ ಹೆಗ್ಡೆ ಬೊಟ್ಟು

ಸಿನಿಮಾ ಸತ್ವ ಅರ್ಥೈಸಿಕೊಳ್ಳುವಲ್ಲಿನ ಯಡವಟ್ಟುಗಳತ್ತ ನಟೇಶ್ ಹೆಗ್ಡೆ ಬೊಟ್ಟು
Last Updated 4 ಡಿಸೆಂಬರ್ 2022, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ನನ್ನದೂ ಸೇರಿದಂತೆ ಎಷ್ಟೋ ಸಿನಿಮಾಗಳನ್ನು ತಪ್ಪು ಕಾರಣ
ಗಳಿಂದಾಗಿ ಹೊಗಳುವುದು ಅಥವಾ ಟೀಕಿಸುವುದು ನಡೆಯುತ್ತಿದೆ’ ಎಂದು ‘ಪೆದ್ರೊ’ ಕನ್ನಡ ಸಿನಿಮಾ ನಿರ್ದೇಶಕ ನಟೇಶ್‌ ಹೆಗ್ಡೆ ವಿಷಾದಿಸಿದರು.

ಬೆಂಗಳೂರು ಸಾಹಿತ್ಯ ಉತ್ಸವದ‘ಬಾಲಿ–ಮಾಲಿ–ಟಾಲಿ–ಸ್ಯಾಂಡಲ್‌ವುಡ್‌’ ಗೋಷ್ಠಿಯಲ್ಲಿ ಭಾನುವಾರ ಅವರು ಮಾತನಾಡಿದರು. ‘ಕಾಂತಾರ’ ಸಿನಿಮಾದಲ್ಲಿ ಮೇಲುಜಾತಿಯವನ ಮನೆಯೊಳಗೆ ದಲಿತ ಪ್ರವೇಶಿಸಿ, ಊಟದ ಮೇಜಿನ ಎದುರು ಕೂರುವ ದೃಶ್ಯವಿದೆ. ಅದರ ಕುರಿತು ಮಾತನಾಡುವವರನ್ನು ಹುಡುಕಬೇಕು. ಅದೇ ಆ ಸಿನಿಮಾದ ಕೇಂದ್ರಪಾತ್ರ ಕಿರುಚುವುದನ್ನು ಕಂಡು ಪ್ರೇಕ್ಷಕರು ರೋಮಾಂಚನಗೊಳ್ಳುತ್ತಾರೆ.
‘ಆರ್‌ಆರ್‌ಆರ್‌’ ತೆಲುಗು ಚಿತ್ರದಲ್ಲಿ ಪ್ರಾಣಿಗಳನ್ನು ಒಳಗೊಂಡ ಅನೇಕ ಬಾಲಿಶ ದೃಶ್ಯಗಳನ್ನು ಕಂಡೂ ಪ್ರೇಕ್ಷಕರು ನವಿರೇಳುವುದು ಕೂಡ ಇದೇ ಮನಃಸ್ಥಿತಿಯಿಂದ ಎಂದು ಅವರು
ಅಭಿಪ್ರಾಯಪಟ್ಟರು.

ತಾವು ಮಾಡಿದ್ದ ಕಿರುಚಿತ್ರವನ್ನು ಗಮನಿಸಿದ ರಾಜ್‌ ಬಿ. ಶೆಟ್ಟಿ ತಾವಾಗಿಯೇ ಸಂಪರ್ಕಿಸಿದ್ದರಿಂದ ‘ಪೆದ್ರೊ’ ಸಿನಿಮಾ ಸಾಕಾರಗೊಂಡಿತು ಎಂದು ಅನುಭವ ಹಂಚಿಕೊಂಡ ಅವರು, ತಮ್ಮ ಎರಡನೇ ಸಿನಿಮಾ ಕಥೆ ಕೇಳಿಯೂ ಇದೇ ರೀತಿ ನಿರ್ಮಾಣಕ್ಕೆ ಹಸಿರು ನಿಶಾನೆ ಸಿಕ್ಕಿದ್ದಾಗಿ ತಿಳಿಸಿದರು. ಸಿನಿಮಾಗಳನ್ನು ‘ಆ ವುಡ್‌... ಈ ವುಡ್‌’ ಎಂದು ವರ್ಗೀಕರಿ
ಸುವುದೇ ಅರ್ಥವಿಲ್ಲದ್ದು ಎಂದೂ ಹೇಳಿದರು.

ಬಾಲಿವುಡ್‌ಗೆ ತನ್ನ ಇತಿಹಾಸವೇ ಮುಳ್ಳು: ‘1990ರ ದಶಕದಲ್ಲಿ ಬಾಲಿವುಡ್‌ ಜಾಗತಿಕ ಆರ್ಥಿಕತೆಯಿಂದಾಗಿ ಬದಲಾಯಿತು. ಮದುವೆ ಸಂಪ್ರದಾಯವೆಲ್ಲ ಸಿನಿಮಾದ ವಸ್ತುವಾಗತೊಡಗಿತು. ಹಿಂದೂ ಆಚರಣೆಗಳನ್ನೇ ತೋರುತ್ತಾ ಕ್ರಮೇಣ ಅದು ಪುರುಷ ಪ್ರಧಾನ ಧೋರಣೆಯ ರಾಷ್ಟ್ರೀಯತೆಯ ಪ್ರಚಾರಸೂತ್ರವಾಗಿ ಬದಲಾಗಿಹೋಯಿತು. ಈಗೀಗ ರಾಷ್ಟ್ರೀಯತೆಯ ಆ ಬಿಂಬಕ್ಕೆ ಪ್ರತಿದರ್ಶನ ಎನ್ನುವಂಥ ಪ್ರಾದೇಶಿಕ ಸಿನಿಮಾಗಳು ಗೆಲ್ಲತೊಡಗಿದವು. ತೆಲುಗಿನಲ್ಲಿ ತನ್ನದೇ ಆದ ಫ್ಯಾಂಟಸಿ ಆಧರಿತ ಚಿತ್ರಗಳು ಬಂದವು’ ಎಂದು ಮಲಯಾಳಂ ನಿರ್ದೇಶಕ ಕಮಲ್ ಕೆ.ಎಂ. ವಿಶ್ಲೇಷಿಸಿದರು.

ಬಂಡವಾಳ ಹೂಡುವವರಿಗೆ ಸಿನಿಮಾ ನಿರ್ದೇಶಕರ ತಲೆಯಲ್ಲಿ ಇರುವ ಚಿತ್ರಕಥೆ ರುಚಿಸುವುದು ಕಷ್ಟ. ಅಂತಹ ಮನಃಸ್ಥಿತಿ ಇರುವ ನಿರ್ಮಾಪಕರನ್ನು ಹುಡುಕುವುದೂ ಸವಾಲು. ಚಿತ್ರದಿಂದ ಚಿತ್ರಕ್ಕೆ ಈ ಕಲೆ ತಮ್ಮಂಥವರಿಗೆ ಒಲಿಯುತ್ತಿದೆ ಎಂದು ಹಿಂದಿ ಸಿನಿಮಾಗಳ ನಿರ್ದೇಶಕಿ
ಅಲಂಕೃತಾ ಶ್ರೀವಾಸ್ತವ ಅನುಭವ ಹಂಚಿಕೊಂಡರು.

‘ಬಾಹುಬಲಿ’ ಸರಣಿ ಚಿತ್ರಗಳನ್ನು ನಿರ್ಮಿಸಿದ ಅರ್ಕಾ ನಿರ್ಮಾಣ ಸಂಸ್ಥೆಯ ಸಿಇಒ ಶೋಬು ಯರ್ಲಗಡ್ಡ, ‘ಅಮರ ಚಿತ್ರಕಥಾದಂತಹ ವಸ್ತುವಿನ ದೃಶ್ಯ ವೈಭವವೇ ಬಾಹುಬಲಿ. ಕೆಜಿಎಫ್, ಕಾಂತಾರ ಕೂಡ ತಮ್ಮ ನೆಲದ ಕಥನಗಳಿಂದಲೇ ದೊಡ್ಡ ಮಟ್ಟದಲ್ಲಿ ವಿವಿಧೆಡೆ ಗೆದ್ದಿವೆ. ಇಂತಹ ಗೆಲುವುಗಳು ಹೆಚ್ಚಾಗಬೇಕು’ ಎಂದು ಆಶಿಸಿದರು. ಪತ್ರಕರ್ತೆ ಕಾವೇರಿ ಬಾಜ್ಮಿ ಗೋಷ್ಠಿಯನ್ನು ನಿರ್ವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT